ಗಾಯತ್ರಿ ಜಪದ ಮಹಿಮೆ
ಗಾಯತ್ರಿ ಮಂತ್ರದಲ್ಲಿ ತತ್ಸವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ., ಧಿಯೋ ಯೋ ನಃ ಪ್ರಚೋದಯಾತ್ ಎಂಬ ಮೂರು ಪಾದಗಳಿವೆ. ಈ ಮೂರು ಪಾದಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ ಹೇಳಬೇಕು. ಹಾಗೆ ಮಾಡಿದರೆ ಬ್ರಹ್ಮಹತ್ಯಾ ದೋಷವು ಹೋಗುತ್ತದೆ. ಹಾಗೆ ಮಾಡದೆ ಮೂರು ಪಾದಗಳನ್ನೂ ಒಟ್ಟಿಗೆ ಹೇಳಿದರೆ ಬ್ರಹ್ಮಹತ್ಯಾ ದೋಷವು ಬರುತ್ತದೆ.
ಸಮಗ್ರ ವೇದಗಳ ತಾಯಿ ಎಂದರೆ ಅದು ಗಾಯತ್ರಿ. ಈ ಗಾಯತ್ರಿ ಮಂತ್ರ ಜಪವನ್ನು ಮಾಡುವ ಮೊದಲು ತತ್ತ್ಯನ್ಯಾಸ, ಮಾತೃಕಾನ್ಯಾಸ, ಅಂಗನ್ಯಾಸ, ಕರನ್ಯಾಸ, ಲೋಕನ್ಯಾಸಾದಿಗಳನ್ನು ಮಾಡಬೇಕು.
ಹೀಗೆ ಮಾಡುವುದರಿಂದ ಬ್ರಹ್ಮಲೋಕವನ್ನು ಹೊಂದುತ್ತಾನೆ. ಯಾರು ಗಾಯತ್ರಿಯ ಅರ್ಥವನ್ನು ತಿಳಿದು ಶಾಸ್ತ್ರದಲ್ಲಿ ಹೇಳಿದ ಪ್ರಕಾರ ಜಪ ಮಾಡುತ್ತಾನೋ, ಅಂತಹವನು ರತ್ನಗಳಿಂದ ತುಂಬಿದ ಸಮಗ್ರ ಭೂಮಂಡಲವನ್ನು ದಾನ ತೆಗೆದುಕೊಂಡರೂ ಪಾಪ ಬರುವುದಿಲ್ಲ ಮತ್ತು ಸಕಲ ಇಷ್ಟಾರ್ಥಗಳನ್ನು ಪಡೆದುಕೊಳ್ಳುತ್ತಾನೆ.
ಹತ್ತು ಬಾರಿ ಗಾಯತ್ರಿ ಜಪ ಮಾಡಿದ್ದರಿಂದ ಮೂರು ವರ್ಷದಲ್ಲಿ ಮಾಡಿದ ಸಣ್ಣ ಪಾಪಗಳು ಪರಿಹಾರವಾಗುತ್ತವೆ. ನೂರು ಬಾರಿ ಗಾಯತ್ರಿಮಂತ್ರ ಜಪ ಮಾಡಿದರೆ ಎಲ್ಲ ಪಾಪಗಳಿಂದ ವಿಮುಕ್ತನಾಗುತ್ತಾನೆ. ಸಾವಿರ ಜಪದಿಂದ ಉಪಪಾತಕ ದೋಷಗಳು ಪರಿಹಾರವಾಗುತ್ತವೆ. ಲಕ್ಷ ಜಪದಿಂದ ಮಹಾಪಾತಕ ದೋಷವು ಪರಿಹಾರವಾಗುತ್ತವೆ. ಕೋಟಿ ಜಪದಿಂದ ಎಲ್ಲಾ ವಾಂಚಿತಾರ್ಥಗಳನ್ನು ಪಡೆದುಕೊಳ್ಳುತ್ತಾನೆ.
ಗಾಯತ್ರಿಗಿಂತ ಹಿರಿದಾದ ಜಪ ಮತ್ತೊಂದಿಲ್ಲ. ಇದಕ್ಕಿಂತ ದೊಡ್ಡ ತಪಸ್ಸು ಮತ್ತೊಂದಿಲ್ಲ. ಇದಕ್ಕಿಂತ ದೊಡ್ಡ ಧ್ಯಾನ ಮತ್ತೊಂದಿಲ್ಲ. ಆದ್ದರಿಂದ ಗಾಯತ್ರಿಯೇ ಸರ್ವಶ್ರೇಷ್ಠವಾಗಿದೆ.