For the best experience, open
https://m.samyuktakarnataka.in
on your mobile browser.

ಗುಂಡು ಹಾರಿದ ಪ್ರಕರಣ: ನಿಷೇಧಿತ ಪಿಎಫ್‌ಐ ಸಂಘಟನೆಯ ಇಬ್ಬರ ಸೆರೆ

09:01 PM Jan 09, 2025 IST | Samyukta Karnataka
ಗುಂಡು ಹಾರಿದ ಪ್ರಕರಣ  ನಿಷೇಧಿತ ಪಿಎಫ್‌ಐ ಸಂಘಟನೆಯ ಇಬ್ಬರ ಸೆರೆ

ಮಂಗಳೂರು: ಆಕಸ್ಮಿಕವಾಗಿ ಹಾರಿದ ಗುಂಡು ವ್ಯಕ್ತಿಗೆ ತಗಲಿ ಗಂಭೀರ ಗಾಯಗೊಂಡ ಪ್ರಕರಣ ತಿರುವು ಪಡೆದಿದ್ದು, ಇಬ್ಬರು ನಟೋರಿಯಸ್ ರೌಡಿಗಳಾದ ನಿಷೇಧಿತ ಪಿಎಫ್‌ಐ ಸಂಘಟನೆಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬದ್ರುದ್ದೀನ್ ಮತ್ತು ಇಬ್ರಾನ್ ಎಂದು ಗುರುತಿಸಲಾಗಿದೆ. ಬದ್ರುದ್ದೀನ್ ಹೊಂದಿದ್ದ ಅಕ್ರಮ ಪಿಸ್ತೂಲ್‌ನಿಂದ ಹಾರಿದ ಗುಂಡು ಸಫ್ವಾನ್(೨೫) ಎಂಬಾತನ ಹೊಟ್ಟೆಗೆ ತಗುಲಿ ಗಂಭೀರ ಗಾಯವಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸಫ್ವಾನ್ ತನಿಖೆ ಸಂದರ್ಭ ತನ್ನ ಕೈಯಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು ಎಂದು ಪೊಲೀಸರಿಗೆ ಹೇಳಿಕೆ ನೀಡಿ ಪ್ರಕರಣ ತಿರುಚಲು ಯತ್ನಿಸಿದ್ದ.
ಮಂಗಳೂರಿಗೆ ಹೊರವಲಯದ ಮೂಡುಶೆಡ್ಡೆ ಎಂಬಲ್ಲಿ ಬದ್ರುದ್ದೀನ್‌ಗೆ ಸೇರಿದ ಸೆಕೆಂಡ್ ಹ್ಯಾಂಡ್ ಸೇಲ್ ಅಂಗಡಿಯಲ್ಲಿ ಜ. ೬ರಂದು ಘಟನೆ ನಡೆದಿತ್ತು.
ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಫ್‌ಎಸ್‌ಎಲ್ ಅಧಿಕಾರಿಗಳು ಪ್ರದೇಶದ ಸಿಸಿಟಿವಿ ಕ್ಯಾಮೆರಾ ವಿಡಿಯೋ ಪರಿಶೀಲನೆ ನಡೆಸಿ ಬದ್ರುದ್ದೀನ್ ಹಾಗೂ ಬದ್ರುದ್ದೀನ್‌ಗೆ ಪಿಸ್ತೂಲ್ ನೀಡಿದ ಇಮ್ರಾನ್‌ನನ್ನು ಬಂಧಿಸಿದ್ದಾರೆ. ಗಾಯಾಳು ಸಫ್ವಾನ್ ಕೂಡಾ ಪಿಎಫ್‌ಐ ಸದಸ್ಯ.
ಪಿಎಫ್‌ಐನ ಮುಖಂಡರ ಕೈಗೆ ಪಿಸ್ತೂಲ್ ಹೇಗೆ ಬಂತು, ಇವರ ಅಸಲಿ ಗುರಿ ಯಾರು ಎಂಬುದರ ಕುರಿತು ತನಿಖೆ ಆರಂಭಿಸಿರುವ ಪೊಲೀಸರು ಇಮ್ರಾನ್‌ಗೆ ಪಿಸ್ತೂಲ್ ಸರಬರಾಜು ಮಾಡಿದ ಕೇರಳದ ಮೂಲದ ಲತೀಫ್‌ಗಾಗಿ ಶೋಧ ನಡೆಸಿದ್ದಾರೆ.