ಗುಜರಾತ್‌ನಲ್ಲಿ ಬಿಜೆಪಿಯ ಹ್ಯಾಟ್ರಿಕ್‌ಗೆ ಗೆನಿಬೆನ್ ಅಡ್ಡಿ
ಇತ್ತೀಚಿನ ದಿನಗಳಲ್ಲಿ ಪಕ್ಷ ಪಕ್ಷಗಳ ನಡುವೆ ನಂಜಿನ ರಾಜಕೀಯ ಎಲ್ಲೆ ಮೀರಿದಂತೆ ಕಾಣುತ್ತಿದೆ. ಈ ಹಿಂದೆಯೂ ಪಕ್ಷ ಪಕ್ಷಗಳ ನಡುವೆ ಹಗ್ಗ ಜಗ್ಗಾಟ, ವಾದ ಪ್ರತಿವಾದಗಳು, ಆರೋಪ ಪ್ರತ್ಯಾರೋಪ ಇದ್ದೇ ಇದ್ದವು. ಪ್ರತಿಪಾದಿಸುವ ಸಿದ್ಧಾಂತಗಳು ಎಷ್ಟೇ ಭಿನ್ನವಾಗಿರಲಿ ಪರಸ್ಪರರ ಮೇಲೆ ವೈಯಕ್ತಿಕ ಗೌರವಾದರಗಳು ಕಡಿಮೆ ಆಗುತ್ತಿರಲಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಎದುರಾಳಿಗಳಲ್ಲಿ ತೀವ್ರ ತರದ ದ್ವೇಷ ಮನೋಭಾವ ಕಾಣಸಿಗುತ್ತಿದೆ. ಬಳಸುವ ಭಾಷೆಗಳಂತೂ ಬಿಡಿ ಏಕವಚನಕ್ಕೆ ತಿರುಗಿ ಅದೆಷ್ಟೋ ವರುಷಗಳಾಗಿವೆ, ಅಲ್ಲಿಗೆ ನಿಲ್ಲದೆ ನಾಗರಿಕ ಸಮಾಜದ ಚೌಕಟ್ಟನ್ನು ಮೀರಿ ಪರಸ್ಪರ ಬೈಗುಳವರೆಗೂ ತಿರುಗಿದೆ, ಈಗ ಮತ್ತೊಂದು ಹಂತ ತಲುಪಿ ಒಬ್ಬರಿಗೊಬ್ಬರು ಕಟಕಟೆಯಲ್ಲಿ ಮುಖಾಮುಖಿಯಾಗುವಷ್ಟರಮಟ್ಟಿಗೆ ದ್ವೇಷ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಕಳೆದ ವಾರವಂತೂ ನಾನು ಅವನದನ್ನೆಲ್ಲಾ ಬಿಚ್ಚಿ ಇಡ್ತೀನಿ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು. ಅದು ಆಗಾಗ ಮಾಧ್ಯಮಗಳಲ್ಲಿ ಕಾಮಿಡಿ ಟೈಮ್ಸ್ನಂತೆ ಬಿತ್ತರವು ಆಯಿತು. ವೀಕ್ಷಕರು ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದು ಅವರು ಇವರ ಹಾಗೂ ಇವರು ಅವರ ಹಗರಣಗಳನ್ನು ಬಿಚ್ಚಿಡಲಿ ಎಂದು ಕಾಯುತ್ತ ಕುಳಿತಿದ್ದೆ ಬಂತು, ಯಾರು ಯಾರ ಹಗರಣವನ್ನು ಬಿಚ್ಚಿಡಲಿಲ್ಲ. ಅದೇನೇ ಇರಲಿ ರಾಜಕೀಯದಲ್ಲಿ ಇರಬೇಕಾದ್ದು ಕ್ಷಮಾ ಮನೋಭಾವ ಹಾಗೂ ಹೃದಯ ವೈಶಾಲ್ಯತೆ. ಆದರೆ ಇಂದು ಅದು ಕೇವಲ ನೆನಪು ಮಾತ್ರ ಎಂಬಂತಾಗಿದೆ. ಹೀಗಿರುವಾಗ ಕೆಲ ತಿಂಗಳುಗಳ ಹಿಂದೆ ನಡೆದ ಗುಜರಾತ್‌ನ ಬನಾಸಕಾಟ ಕ್ಷೇತ್ರದ ಲೋಕಸಭಾ ಚುನಾವಣೆ ಕೆಲವು ಕಾರಣಗಳಿಗೆ ಗಮನಸೆಳೆಯಿತು.
ಗೆನಿಬೆನ್ ನಾಗಾಜಿ ಠಾಕೂರ್ ಗುಜರಾತ್‌ನಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಯ ಹ್ಯಾಟ್ರಿಕ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಅದರಲ್ಲೇನು ಮಹಾ ಎಂದು ನೀವು ಕೇಳಬಹುದು. ಆದರೆ ಗೆನಿಬೆನ್ ಚುನಾವಣೆಗೆ ನಿಂತಾಗ ಆಕೆಯ ಬಳಿ ಹಣವಿರಲಿಲ್ಲ ಹಾಗೂ ಈ ಕಾರಣಕ್ಕಾಗಿಯೇ ಆಕೆ ಅಮಿತ್ ಶಾ ಅವರಿಗೆ ಫೋನ್ ಮಾಡಿದ್ದರಂತೆ. ಅಮಿತ್ ಭಾಯಿ ಮನೋ ಪೈಸೆ ನೇ ಜರೂರತ್ ಛೆ ಅಂದರಂತೆ. ಅಂದರೆ ಅಮಿತಾ ಭಾಯಿ ನನಗೆ ಚುನಾವಣೆ ನಿಲ್ಲಲು ದುಡ್ಡು ಬೇಕು ಎಂದು ಅಮಿತ್ ಶಾ ಬಳಿ ಕಾಂಗ್ರೆಸ್ ಅಭ್ಯರ್ಥಿ ಕೇಳಿಕೊಂಡಿದ್ದರಂತೆ. ಅಮಿತ್ ಶಾ ಹಾಗೂ ಗೆನಿಬೆನ್ ಒಟ್ಟಿಗೆ ಸಹಪಾಠಿಗಳಾಗಿದ್ದರಂತೆ, ಅಂದರೆ ಇಲ್ಲಿಯ ತಾತ್ಪರ್ಯ ಪರಸ್ಪರ ಸ್ಪರ್ಧೆ ಇದ್ದರಿರಲಿ, ಅದು ವೈಯಕ್ತಿಕ ನೆಲೆಗಟ್ಟಿನಲ್ಲಿ ಸಹಾಯ ಬೇಡಲು ಹಾಗೂ ನೀಡಲು ಅಡ್ಡಿಯಾಗದಿರಲಿ ಎಂಬುದು ಹಾಗೂ ಮತದಾರನ ಇಚ್ಛೆಗೆ ವಿರುದ್ಧವಾಗಿರದಿದ್ದರೆ ಆಯಿತು. ಇಲ್ಲಿ ಗಮನಿಸಬೇಕಾದ್ದು ತನ್ನ ಬಳಿ ಹಣವಿಲ್ಲವೆಂದು ಮಿತ್ರತ್ವದ ತಳಹದಿಯಲ್ಲಿ ಗೆನಿಬೆನ್‌ಗೆ ಅಮಿತ್ ಶಾ ಬಳಿ ಹಣ ಕೇಳಬೇಕೆಂದು ಅನಿಸಿದ್ದು ಹಾಗೂ ಹಾಗೆ ಕೇಳುವಾಗ ಗೆನಿಬೆನ್ ಕಣ್ಣಿಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ಪೈಪೋಟಿ ಎಂದರೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸೋಲು ಗೆಲುವಿನ ಹೋರಾಟವಿದ್ದಂತೆ ಎಂದು ಅನಿಸದೇ ಇದ್ದದ್ದು ಹಾಗೂ ಆ ಬಗೆಯ ಮನೋಭಾವನೆಗೆ ಹೆಚ್ಚು ಮಹತ್ವ.
ಅಮಿತ್ ಶಾ ಹಣ ಕೊಟ್ಟರೋ ಬಿಟ್ಟರೋ ಎಂಬುದು ಎಲ್ಲೂ ಸುದ್ದಿ ಆಗಲಿಲ್ಲ, ಆದರೆ ಗೆನಿಬೆನ್ ಕ್ರೌಡ್ ಫಂಡಿಂಗ್ ಮೂಲಕ ಚುನಾವಣೆಗೆ ಹಣವನ್ನು ಒಟ್ಟುಗೂಡಿಸಿ ಚುನಾವಣೆ ಗೆದ್ದು ಇತಿಹಾಸ ನಿರ್ಮಿಸಿದರು. ಗೆನಿಬೆನ್ ಪ್ರತಿಯೊಬ್ಬರ ಬಳಿ ಚುನಾವಣೆಗೆ ಕೇಳಿದ್ದು ಕೇವಲ ೧೧೧ ರೂಪಾಯಿಗಳು, ಆಕೆಯ ಈ ಕಲ್ಪನೆಯನ್ನು ನಿಜವಾಗಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕ್ಯೂ ಆರ್ ಕೋಡ್‌ಗಳು. ಹಾಗೆಂದು ಗೆನಿಬೆನ್‌ಗೆ ರಾಜಕೀಯ ಹೊಸದಾಗಿರಲಿಲ್ಲ. ಲೋಕಸಭಾ ಚುನಾವಣೆಯನ್ನು ಎದುರಿಸಿದ್ದು ಹಾಲಿ ಶಾಸಕಿಯಾಗಿಯೇ. ೨೦೧೭ರಲ್ಲಿ ಎರಡು ಬಾರಿ ಬಿಜೆಪಿ ಶಾಸಕರಾಗಿ ಸ್ಪೀಕರ್ ಆಗಿದ್ದ ಠಾಕೋರ್ ಅವರನ್ನು ಸೋಲಿಸಿ, ಗೆನಿಬೆನ್ ಆಗಲೇ ಜಯಂಟ್ ಕಿಲ್ಲರ್ ಎಂದು ಕರೆಸಿಕೊಂಡಿದ್ದರು. ನಂತರ ೨೦೨೨ರಲ್ಲಿಯೂ ಶಾಸಕಿ ಆಗಿ ಆಯ್ಕೆ ಆಗಿದ್ದರು ಕೂಡ ಸಂಪನ್ಮೂಲದ ಕೊರತೆ ಎದುರಿಸಿದ್ದು ಆಶ್ಚರ್ಯವೇ ಸರಿ.
ಆದರೆ ಇದೇ ವಾಸ್ತವ ಎಂದು ಕ್ಷೇತ್ರದ ಜನತೆ ಯಾವುದೇ ಮುಚ್ಚುಮರೆ ಇಲ್ಲದೆ ಹೇಳುತ್ತಿದ್ದರು. ಹಾಲಿ ಶಾಸಕಿಯಾಗಿದ್ದರೂ ಕೂಡ ಚುನಾವಣೆಯಲ್ಲಿ ಸಂಪನ್ಮೂಲದ ಕೊರತೆ ಕಂಡು ಬಂದಿದ್ದು ನಿಜ, ಅದೇ ಕಾರಣಕ್ಕಾಗಿ ಅಲ್ಲಿನ ಜನರೆದರು ಕ್ರೌಡ್ ಫಂಡಿಂಗ್ ಮೊರೆ ಹೋಗಿದ್ದು ನಿಜ, ಎಂದು ಅಲ್ಲಿನ ಜನರೇ ಅವರ ಪರ ವಕಾಲತ್ತು ವಹಿಸಿ ಮಾತನಾಡಿದ್ದು ಕೂಡ ಅಷ್ಟೇ ಸತ್ಯ.
ಅಷ್ಟಲ್ಲದೇ ಈ ಹಿಂದೆ, ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಬೇಕೆಂದು ಹಾಗೂ ಅಂತರ್ಜಾತಿ ವಿವಾಹಗಳನ್ನು ನಿಷೇಧಿಸಬೇಕೆಂದು ಹೇಳಿ ಹಲವರ ಕೆಂಗಣ್ಣಿಗೆ ಗೆನಿಬೆನ್ ಗುರಿಯಾಗಿದ್ದರು. ವಿವಾಹ ನೋಂದಣಿಗೆ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಲೇಬೇಕೆಂದು ಹೇಳಿಕೆ ಕೊಟ್ಟಿದ್ದರು. ಈ ರೀತಿಯ ವಿವಾದಾತ್ಮಕ ನಿಲುವನ್ನು ವ್ಯಕ್ತಪಡಿಸಿ ಹಲವು ಟೀಕೆಗಳನ್ನು ಎದುರಿಸಬೇಕಾಗಿತ್ತು. ಆದಾಗ್ಯೂ, ಮತದಾರ ಅವರನ್ನು ಬೆಂಬಲಿಸಿದ್ದೆ ಅಲ್ಲದೆ, ಚುನಾವಣೆಗೆ ದುಡ್ಡು ಕೊಟ್ಟಿದ್ದು ಮತ್ತೊಂದು ಅಚ್ಚರಿಯೇ ಸರಿ. ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದೀರಲ್ಲ ಎಂದು ಯಾರಾದರೂ ಕೇಳಿದರೆ ಯುವಕರು ಹಾಗೂ ಯುವತಿಯರು ಬಾಲ್ಯ ವಿವಾಹದಲ್ಲಿ ಸಿಕ್ಕಿಹಾಕಿಕೊಳ್ಳುವ ಬದಲು ಶಿಕ್ಷಣ ಮತ್ತು ಉದ್ಯೋಗಗಳ ಮೇಲೆ ತಮ್ಮ ಶಕ್ತಿಯನ್ನು ಕೇಂದ್ರೀಕರಿಸಬೇಕೆಂದು ಆ ರೀತಿಯ ಹೇಳಿಕೆ ಕೊಟ್ಟಿದ್ದಾಗಿ ಸುಲಭವಾಗಿ ಜಾರಿಕೊಂಡಿದ್ದರು. ಅದೇನೇ ಇರಲಿ ಸದ್ಯಕ್ಕೆ, ಗೆನಿಬೆನ್ ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವನ್ನು ಸಾಧ್ಯವಾಗಿಸಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪ್ರಾತ್ರರಾಗಿದ್ದಾರೆ.
ಸರಿಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲ ಗುಜರಾತಿನಲ್ಲಿ ಗೆಲುವೆಂದರೇನು ಎಂದೇ ಮರೆತಿದ್ದ ಕಾಂಗ್ರೆಸ್‌ಗೆ ೨೦೨೭ರ ವಿಧಾನಸಭಾ ಚುನಾವಣೆಯಲ್ಲಿ
ಬಿಜೆಪಿಯನ್ನು ಸೋಲಿಸಬಹುದು ಎಂಬ ಭರವಸೆಯನ್ನು ಮೂಡಿಸಿದ್ದಾರಂತೆ. ಹಾಗಾಗುವುದೇ? ಗೊತ್ತಿಲ್ಲ, ಆದರೆ ರಾಹುಲ್ ಗಾಂಧಿ ಮಾತ್ರ ಲೋಕಸಭೆಯಲ್ಲಿ ಬರೆದಿಟ್ಟುಕೊಳ್ಳಿ ನಾವು ನಿಮ್ಮನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದಾರೆ.