For the best experience, open
https://m.samyuktakarnataka.in
on your mobile browser.

ಗುರುವಿನಿಂದಲೇ ಅರಿವು

04:00 AM Jul 25, 2024 IST | Samyukta Karnataka
ಗುರುವಿನಿಂದಲೇ ಅರಿವು

ವೇದವ್ಯಾಸ ಜಯಂತಿಯಂದು ಗುರುಪೂರ್ಣಿಮಾ ಆಚರಿಸುತ್ತೇವೆ. ವೇದವ್ಯಾಸದೇವರು ನಾಲ್ಕು ವೇದಗಳು, ೧೮ ಪುರಾಣಗಳು, ಉಪನಿಷತ್‌ಗಳನ್ನೂ ಸಾರಸ್ವತ ಲೋಕಕ್ಕೆ ಕೊಟ್ಟು ಜ್ಞಾನ ಪರಂಪರೆಗೆ ನಾಂದಿ ಹಾಕಿ, ಸರ್ವರೂ ವೇದತುಲ್ಯವಾದ ಸುಜ್ಞಾನ ಪಡೆಯಬೇಕೆಂದು ತಿಳಿಸಿದ್ದಾರೆ. ಶ್ರೀಮನ್ಮಧ್ವಾಚಾರ್ಯರು ಗೀತಾಭಾಷ್ಯವನ್ನು ರಚನೆ ಮಾಡಿ ಬದರಿಕಾಶ್ರಮ ನಿವಾಸಿ ವೇದವ್ಯಾಸದೇವರಲ್ಲಿ ಸಮರ್ಪಿಸಿ ಬಂದಿದ್ದಾರೆ ಎಂದು ನಮ್ಮ ಇತಿಹಾಸ ತಿಳಿಸುತ್ತದೆ. ಅಂದರೆ ತ್ರಿಮತಾಚಾರ್ಯರಿಗೂ ಸರ್ವರಿಗೂ ಗುರು ಶ್ರೀವೇದವ್ಯಾಸದೇವರು.
ಹುಟ್ಟಿನಿಂದ ತೊದಲು ನುಡಿ ಹೇಳಿಕೊಟ್ಟ ತಾಯಿ ಮೊದಲ ಗುರುವಾದರೆ, ಅಕ್ಷರಾಭ್ಯಾಸ ಮಾಡಿಸಿ, ಉತ್ತಮ ಗುರುಗಳ ಹುಡುಕಿ ಅವರ ಬಳಿಗೆ ಕರೆದುಕೊಂಡು ಹೋಗುವ ತಂದೆ ನಂತರದ ಗುರುವಾಗುತ್ತಾನೆ. ಹಿಂದೆ ಗುರುಕುಲಪದ್ಧತಿಯಲ್ಲಿ ಗುರು ತನ್ನ ಶಿಷ್ಯನಿಗೆ ತನ್ನಲ್ಲಿರುವ ಎಲ್ಲಾ ವಿದ್ಯೆಯನ್ನು ಧಾರೆ ಎರೆದು, ಶಿಷ್ಯನ ಸರ್ವತೋಮುಖ ಬೆಳವಣಿಗೆಗೆ ಕಾರಣನಾಗುತ್ತಿದ್ದರು. ಗುರು ಕೊಡುವ ಅರಿವು ಅದು ಕೇವಲ ಇಹಕ್ಕೆ ಮಾತ್ರ ಮೀಸಲಾಗಿಲ್ಲ, ಗುರುವು ಕೊಟ್ಟ ಸುಜ್ಞಾನ ಇಹಪರದಲ್ಲೂ ಸಾಧನೆಯ ಹಾದಿಯಲ್ಲಿ ದಾರಿ ದೀಪವಾಗಿ ನಮ್ಮನ್ನು ರಕ್ಷಿಸುತ್ತದೆ. ಗುರುಶಿಷ್ಯ ಪರಂಪರೆಯಲ್ಲಿ ಹರಿದು ಬಂದ ವಿದ್ಯೆಯೇ ಇಂದಿಗೂ ಶ್ರೇಷ್ಠವಿದ್ಯೆ.
ಇಂದಿನ ಪರಿಸ್ಥಿತಿಯಲ್ಲಿ, ಸಾಧನೆಯ ಹಾದಿಯಲ್ಲಿ ಸರಿ ಮಾರ್ಗ ತೋರಿಸುವನೇ ಗುರು. ಗುರುವಿನಿಂದಲೇ ಜ್ಞಾನ ಸಿದ್ಧಿ. ಪಡೆದ ಜ್ಞಾನಕ್ಕೆ ಗುರುವಿನ ಮುದ್ರೆ ಬೀಳಬೇಕು. ಗುರು ಇಲ್ಲದವನಿಗೆ ಜೀವನದ ಗುರಿ ಸಿಗದು. ಗುರಿ ಕೂಡ ಮಹತ್ವದ್ದು. ಮರಣದ ಆಚೆಗಿರುವ ಸತ್ಯವ ಅರಿವುದೇ ಗುರಿ ಆಗಬೇಕು. ಪ್ರಪಂಚದ ಪ್ರಲೋಭನೆ ಮಧ್ಯದಲ್ಲಿ ಕಣ್ಣಿಗೆ ಕಾಣದ ಆ ಭಗವಂತನ್ನು ಗಟ್ಟಿಯಾಗಿ ಹಿಡಿದು, ಆ ಸತ್ಯದ ಕಡೆಗೆ, ಮುಕ್ತಿಯಡೆಗೆ ತೆರಳಬೇಕು. ಈ ದಾರಿಯಲ್ಲಿ ಸಾಗುವಾಗ ಮುಂದೆ ಸಾಗಿದವರ ಹೆಜ್ಜೆ ಗುರುತು, ಅವರ ಅನುಭವ ಮಾರ್ಗದರ್ಶನ ಅಗತ್ಯವಾಗಿದೆ. ಆ ಮಾರ್ಗದರ್ಶನ ಮಾಡಿಸುವವನೇ ಗುರು. ಇನ್ನು ಅರಿವೇ ಗುರು ಎಂದು ಹೇಳುವದುಂಟು. ನಿಜ. ಆದರೆ ಮನುಷ್ಯನಿಗೆ ಅರಿವನ್ನು ಮೂಡಿಸುವವನೊಬ್ಬನ ಅಗತ್ಯವಿರುತ್ತದೆ. ಸರಿ ತಪ್ಪುಗಳ ಧರ್ಮ ಸಾಮಾಜಿಕ ವಿನ್ಯಾಸಗಳ ಕುರಿತಂತೆ ಅರಿವು ಇದೆ ಎಂಬುದಾದರೂ ಬೇಕಾಗುತ್ತದೆ. ಅದಕ್ಕೂ ಮುನ್ನ ಗುರು ಮುಖೇನ ಅರಿವು ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಪುರಂದರ ದಾಸರು `ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ…' ಎಂದು ತಿಳಿಸಿ ದಾಸರು ಗುರುವಿನ ಮಹತ್ವವನ್ನು ನಮಗೆ ಸಾರಿದ್ದಾರೆ. ಇಲ್ಲಿ ಗುರುವಿಗೆ ಗುಲಾಮನಾಗುವುದು ಎಂದರೆ ಗುರುವಿನ ಸೇವೆ ಮಾಡಿ ಗುರಿವಿನಿಂದ, ಗುರುವಿನಲ್ಲಿರುವ ಸಂಪೂರ್ಣ ಜ್ಞಾನ ಸಂಪಾದನೆ ಮಾಡಿದರೆ ಮುಕುತಿಗೆ ಸೋಪಾನ ಎಂಬುದನ್ನು ಅರಿಯಬೇಕು. ಕಲಿಯುಗದಲ್ಲಿ ರಾಘವೇಂದ್ರ ಸ್ವಾಮಿಗಳು ನಮ್ಮನ್ನು ಕಾಪಾಡುವ ಗುರುಗಳು. ತಾವು ಸಾಧನೆ ಮಾಡಿ, ತಮ್ಮ ಅಘಾಧ ಅನುಭವನ್ನು ಪರಿಮಳಾದಿ ಗ್ರಂಥರೂಪದಲ್ಲಿ ನಮಗೆ ಕೊಟ್ಟಿದ್ದಾರೆ. ರಾಯರ, ವ್ಯಾಸರಾಜರ, ಜಯತೀರ್ಥರ ಗ್ರಂಥಗಳ ಅಧ್ಯಯನ ಅದ್ಯಾಪನ ಮಾಡಿದರೆ, ಇಹ ಪರ ಸಾಧನೆಗೆ ದಾರಿದೀಪ. ಅದರ ಜೊತೆಗೆ ರಾಯರು, ಇಂದಿಗೂ ಸಶರೀರರಾಗಿ ಬೃಂದಾವನದಲ್ಲಿ ಕುಳಿತು ಬಂದ ಭಕುತರಿಗೆ ಬೇಡಿದ್ದನ್ನು ಕೊಟ್ಟು ನಮ್ಮನ್ನು ನಿತ್ಯವೂ ಅನುಗ್ರಹಿಸುತ್ತಾರೆ.
ಅಂಥಾ ಗುರುಗಳಲ್ಲಿ ಜ್ಞಾನದ ಅರಿವನ್ನು ಬೇಡಿ, ಸೇವೆ ಮಾಡಿ ಪ್ರತಿಯೊಬ್ಬರೂ ಇಹ ಪರ ಸಾಧನೆ ಮಾಡುತ್ತಾ ಸಾತ್ವಿಕ ಜೀವನ ನೆಡೆಸಿ ಗುರುವಿನ ಆರಾಧನೆ ಮಾಡಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ.