ಗುರುವೇ ಗುಲಾಮನಾಗುವ ಪರಿ
ಗುರು ಪೂರ್ಣಿಮೆಯ ದಿನ ದೇಶದಾದ್ಯಂತ ಮಹರ್ಷಿ ವ್ಯಾಸರನ್ನು, ಗುರುಗಳನ್ನು ನೆನೆದು ಪೂಜಿಸಲಾಯಿತು. ವ್ಯಾಸರು ಗುರುಗಳಷ್ಟೇ ಅಲ್ಲ, ಸಂಶೋಧಕರು, ಸಂಪಾದಕರೂ ಹೌದು. ಅವರ ಮೇಲಿದ್ದ ಗೌರವ, ಶ್ರದ್ಧೆ ಬೇರಾವ ಗುರುಗಳ ಮೇಲೂ ಇಲ್ಲ. ಹಾಗೇ ವ್ಯಾಸರನ್ನು ನೆನೆಸಿಕೊಳ್ಳುತ್ತಿರುವಾಗ ಮನಸ್ಸು ಈಗಿನ ಭಾರತದ ಶಿಕ್ಷಣ ಕ್ಷೇತ್ರದಲ್ಲಿನ ಗುರುಗಳ ಬಗ್ಗೆ ಓಡತೊಡಗಿತು.
ಬಹುಶಃ ಮೂವತ್ತು, ನಲವತ್ತು ವರ್ಷಗಳ ಮುಂಚೆ ಜನರು, ವಿದ್ಯಾರ್ಥಿಗಳು ಗುರುಗಳಿಗೆ ಕೊಡುತ್ತಿದ್ದ ಗೌರವಕ್ಕೂ, ಗೂಗಲ್-ಚಾಟ್ ಜಿಪಿಟಿ ಕಾಲದ ಗುರುಗಳ ಮೇಲಿರುವ ಗೌರವ-ಶ್ರದ್ಧೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಕೆಲವು ತಿಂಗಳುಗಳ ಹಿಂದೆ, ನನ್ನ ಪರಿಚಯದರೊಬ್ಬರ ಮಗ ಬಂದು, ಅಂಕಲ್, ನಮ್ಮ ಶಾಲೆಯಲ್ಲಿ ಹತ್ತನೇ ತರಗತಿಯವರಿಗಾಗಿ ಒಂದು ಸಮಾರಂಭವಿದೆ. ಅದರಲ್ಲಿ ನಾವು ನಮ್ಮ ಸ್ನೇಹಿತರನ್ನು ಕುರಿತು ಎರಡು ಮಾತನಾಡಬೇಕು. ನಾನು ಮಾತನಾಡಬೇಕಿರುವುದನ್ನು ಬರೆದುಕೊಂಡು ಬಂದಿದ್ದೇನೆ. ದಯವಿಟ್ಟು ಹೇಗಿದೆ ಎಂದು ಹೇಳಿ'' ಅಂದಿದ್ದ. ಅವನ ಸ್ನೇಹಿತನ ಕುರಿತು, ಅವರೀರ್ವರ ಸ್ನೇಹದ ಕುರಿತು ತುಂಬಾ ಕಾವ್ಯಮಯವಾಗಿ ಬರೆದಿದ್ದ. ಹತ್ತನೇ ತರಗತಿಯ ಹುಡುಗರು ಇಷ್ಟು ಚೆನ್ನಾಗಿ ಬರೆಯುತ್ತಾರಾ ಅಂತ ಅಚ್ಚರಿಯಾಯಿತಾದರೂ ಅದನ್ನು ತೋರ್ಪಡಿಸಿಕೊಳ್ಳದೇ,
ಇಲ್ಲಪ್ಪ, ಎಲ್ಲೂ ತಪ್ಪಿಲ್ಲ, ತುಂಬಾ ಚೆನ್ನಾಗಿ ಬರೆದಿದ್ದೀಯ, ಹಾಗೆ ಮುಂದುವರೆಸಿಕೊಂಡು ಹೋಗು'' `ಅಂಕಲ್, ಇದನ್ನು ನಾನು ಬರೆದಿಲ್ಲ, ಚಾಟ್ ಜಿಪಿಟಿ ಬರೆದಿದ್ದು'' ಅಂದ! ನಾವು ಪ್ರೌಢಶಾಲೆಯಲ್ಲಿ ಓದುವಾಗ ಶಾಲೆಯಲ್ಲಿನ ಸಮಾರಂಭಗಳಿಗೆ ಅಥವಾ ಒಬ್ಬ ವ್ಯಕ್ತಿಯ ಕುರಿತು ಏನಾದರು ಮಾತನಾಡಬೇಕೆಂದಾಗ ಗ್ರಂಥಾಲಯಕ್ಕೋ ಅಥವಾ ನಮಗೆ ಹತ್ತಿರವೆನಿಸುವ ಶಿಕ್ಷಕರ ಬಳಿ ಕುಳಿತು ಮಾಹಿತಿ ಪಡೆದು, ಮನೆಗೆ ಬಂದು ಅದನ್ನು ತಿದ್ದಿ, ಅದಕ್ಕೆ ಹಿಂದೆ-ಮುಂದೆ ಸೇರಿಸಿ ನಂತರ ಭಾಷಣ ಮಾಡಬೇಕಾಗಿತ್ತು. ಶಿಕ್ಷಕರು ಸಿಗದಿದ್ದರೆ, ಅಷ್ಟೇ, ನಮ್ಮ ಭಾಷಣ ಕೇವಲ,
ವೇದಿಕೆಯ ಮೇಲೆ ಉಪಸ್ಥಿತರಿರುವ ಮಹನೀಯರೇ ಮತ್ತು ಮಹಿಳೆಯರಿಗೆ' ಸೀಮಿತವಾಗಿ, ಆಮೇಲಿನದ್ದು ಕೇವಲ ನಮಗೇ ಕೇಳಿಸುವಷ್ಟು ಸಣ್ಣದಾಗಿ ಹೇಳಿಕೊಳ್ಳುವುದಾಗಿತ್ತು. ಈಗ ಗ್ರಂಥಾಲಯದ ಕಡೆ ಮುಖ ಹಾಕುವುದೇ ಬೇಡ, ಎಲ್ಲವೂ ಗೂಗಲ್‌ನಲ್ಲಿ ಲಭ್ಯ, ಶಿಕ್ಷಕರ ಪಾತ್ರ ಕೇವಲ ಪಾಠ ಮಾಡಲು, ಕಾರ್ಯಕ್ರಮಗಳ ರೂಪಿಸಲು, ಪರೀಕ್ಷೆಯಲ್ಲಿ ಬರೆದ ಉತ್ತರಗಳಿಗೆ ಮೌಲ್ಯಮಾಪನ ಮಾಡಲು ಸೀಮಿತವಾಗಿದೆ.
ನಾನು ಆಪ್ತ-ಸಮಾಲೋಚನೆ ಮಾಡುವ ಎಷ್ಟೋ ವಿದ್ಯಾರ್ಥಿಗಳು ಅವರಾಗೇ ಹೇಳುತ್ತಾರೆ: ಸರ್, ನಮಗೆ ಬಹಳಷ್ಟು ಶಿಕ್ಷಕರ ಪಾಠ ಅರ್ಥವಾಗುವುದಿಲ್ಲ, ಅವರ ಪಾಠಕ್ಕಿಂತ ಆನ್‌ಲೈನ್‌ನಲ್ಲಿ ಹೇಳಿಕೊಡುವವರೇ ಚೆನ್ನಾಗಿ ಹೇಳಿಕೊಡುತ್ತಾರೆ, ನಮಗೆ ಗೊತ್ತಾಗದಿರುವುದನ್ನು ಇನ್ನೊಮ್ಮೆ, ಮತ್ತೊಮ್ಮೆ ಕೇಳಬಹುದು. ಆದರೆ ಶಾಲೆಯ ಶಿಕ್ಷಕರು ಒಮ್ಮೆ ಹೇಳಿದ್ದನ್ನು ಮತ್ತೊಮ್ಮೆ ಹೇಳಲು ಕೇಳಿದರೆ ದೊಡ್ಡದಾಗಿ ಕಣ್ಣು ಬಿಡುತ್ತಾರೆ. ಹಾಗಂತ ಎಲ್ಲರ ಅನಿಸಿಕೆಗಳೂ ಸತ್ಯವಲ್ಲ, ಕೆಲವು ವಿದ್ಯಾರ್ಥಿಗಳು ಹದಿಹರೆಯದಲ್ಲಿ ಹೆಚ್ಚು ಸಂಕೋಚಪಟ್ಟುಕೊಳ್ಳುತ್ತಾರೆ. ಅವರಿಗೆ ಬೇರೆಯವರು ಏನೆಂದುಕೊಳ್ಳುತ್ತಾರೋ ಎನ್ನುವ ಅಂಜಿಕೆ, ಆತಂಕ. ಆ ಕಾರಣಕ್ಕಾಗಿ ಅವರು ಶಿಕ್ಷಕರ ಬಳಿ ಗೊಂದಲ ನಿವಾರಿಸಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ.
ಇಂದಿನ ಅನೇಕ ನಗರ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಕರ ಮಾತು ಕೇಳುವುದಿಲ್ಲ, ಎಲ್ಲದಕ್ಕೂ ವಾದ, ಎದುರುತ್ತರ ಎನ್ನುತ್ತಾರೆ ನನಗೆ ಗೊತ್ತಿರುವ ಶಿಕ್ಷಕ ಗೆಳೆಯರು. ಇತ್ತೀಚಿನ ಒಂದು ಶಿಕ್ಷಕರಿಗಿರುವ ಅಭಿಶಿಕ್ಷಣ ಕಾರ್ಯಕ್ರಮದಲ್ಲಿ ಅನೇಕ ಶಿಕ್ಷಕರು ತಮ್ಮ ದುಗುಡವನ್ನು ತೋಡಿಕೊಂಡರು. ಕೆಲವು ವಿದ್ಯಾರ್ಥಿಗಳು ಮಾತು ಕೇಳುವುದಿಲ್ಲ, ಸ್ವಲ್ಪ ಗಟ್ಟಿಯಾಗಿ ಏನನ್ನಾದರೂ ಹೇಳಿದರೆ, ಅವರ ಜೀವಕ್ಕೆ ತೊಂದರೆಯನ್ನೋ ಅಥವಾ ಹೇಳಿದವರಿಗೆ ತೊಂದರೆಯನ್ನೋ ಕೊಡುತ್ತಾರೆ. ಇಂತಹವರನ್ನು ದಾರಿಗೆ ತರುವ ಬಗೆ ಹೇಗೆ ಎಂದು ಕೇಳಿದ್ದರು. ಅದಕ್ಕೆ ಭಾಷಣಕಾರರು, ನೀವು ಮಾಡಬೇಕಾಗಿದ್ದ ಕೆಲಸವನ್ನು ನಿಷ್ಠೆಯಿಂದ ಮಾಡಿ, ನಿಮ್ಮ ನೈತಿಕತೆಯ ಬಗ್ಗೆ ನಿಮಗೆ ನಂಬಿಕೆಯಿರಲಿ ಎಂದಿದ್ದರು. ಬಹುಶಃ ನಾನಾಗಿದ್ದಿದ್ದರೆ, ತಪ್ಪನ್ನು ತಪ್ಪು ಅಂತ ಹೇಳುವುದರಲ್ಲಿ ಯಾವ ಅನುಮಾನವೂ ಬೇಡ, ಆದರೆ ತಪ್ಪು ಮಾಡಿದವನನ್ನು ಒಬ್ಬನನ್ನೇ ಕರೆದು ಅವನ ತಪ್ಪು ವರ್ತನೆಯ ಬಗ್ಗೆ ಹೇಳಿ, ಯಾವ ಕಾರಣಕ್ಕೂ ಅವನನ್ನು, ಅವನ ಸ್ವಾಭಿಮಾನವು ಕಲಕುವಂತಹ ಮಾತುಗಳು ದೂರವಿರಲಿ. ಅವನ ಉದ್ದೇಶವು ಒಳ್ಳೆಯದಾಗಿರುವುದಾಗಿಯೂ, ಆದರೆ ಅವನ ವರ್ತನೆಯಲ್ಲಿ ಬದಲಾವಣೆಯನ್ನು ನಾವು ಬಯಸುತ್ತೇವೆ ಎಂದು ಹೇಳಿದರೆ, ಬಹುಶಃ ಅವನು ತನ್ನ ತಪ್ಪನ್ನು ತಿದ್ದಿಕೊಳ್ಳುವ ಸಾಧ್ಯತೆಗಳು ಜಾಸ್ತಿಯಿರುತ್ತವೆ. ಶಿಕ್ಷಕರ ಕೆಲಸವೂ ನಿರಾಳವಲ್ಲ, ಅದು ತುಂಬಾ ಒತ್ತಡದ ಕೆಲಸ. ಉತ್ತಮ ಫಲಿತಾಂಶದ ಆಸೆಗಾಗಿ ಶಾಲೆಗಳು ಪ್ರತಿ ವಾರವೂ ಪರೀಕ್ಷೆಗಳನ್ನು ನಡೆಸುತ್ತವೆ. ಇದು ವಿದ್ಯಾರ್ಥಿಗಳಿಗೆ ಅಗತ್ಯವಿರುವುದಾದರೂ ಶಿಕ್ಷಕರಿಗೆ ಒತ್ತಡದ, ಹೊರೆಯಾಗುವ ಸಾಧ್ಯತೆಗಳು ಹೆಚ್ಚು. ಈ ನಿಟ್ಟಿನಲ್ಲಿ ನನ್ನ ವೀಕ್ಷಣೆಯ ಅನುಭವವನ್ನು ಹೇಳುತ್ತೇನೆ.
ಕೆಲವು ವರ್ಷಗಳ ಮುಂಚೆ ನನ್ನ ತಂಗಿಯೊಬ್ಬಳು ಖಾಸಗಿ ಪದವಿ ಪೂರ್ವ ಕಾಲೇಜು ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅವಳ ಮನೆಗೆ ನಾನು ಭಾನುವಾರ ಹೋಗುವುದು ಅಭ್ಯಾಸ. ಅವಳು ಯಾವ ಭಾನುವಾರವೂ ಖುಷಿಯಿಂದ ಇರುತ್ತಿರಲಿಲ್ಲ, ಸದಾ ಮೌಲ್ಯಮಾಪನ ಮಾಡುವುದರಲ್ಲೇ ಅವಳ ಭಾನುವಾರವು ಕಳೆದುಹೋಗುತ್ತಿತ್ತು. ಅವಳೇ ಹೇಳುವ ಹಾಗೆ ಪಾಠ ಮಾಡುವುದಕ್ಕಿಂತಲೂ ಮಾಡಿದ ಮೌಲ್ಯಮಾಪನವನ್ನು ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಹೇಗೆ ತಿಳಿಸಿ ಹೇಳುವುದು ಎನ್ನುವುದಾಗಿತ್ತು! ಏಕೆಂದರೆ ಪ್ರತಿಯೊಬ್ಬ ಪೋಷಕರು ಬಯಸುವುದೂ ತನ್ನ ಮಗ/ಮಗಳು ವೈದ್ಯಕೀಯ, ಇಂಜಿನಿಯರಿಂಗ್ ಓದಲಿ ಅಂತ. ಆದರೆ ಅವರ ಮಕ್ಕಳು ತೆಗೆದಿರುವ ಅಂಕಗಳನ್ನು ವಿಶ್ಲೇಷಿಸಿದರೆ ಅದು ಅವರ ವೃತ್ತಿಪರ ವಿಷಯಗಳ ಪ್ರವೇಶಕ್ಕೆ ಖಂಡಿತವಾಗಿಯೂ ಅನರ್ಹರಾಗಿರುತ್ತಾರೆ ಎನ್ನುವುದು ಇವಳ ವಾದ! ಆದರೆ ಅದನ್ನು ಹೇಳುವ ಹಾಗಿಲ್ಲ, ಏಕೆಂದರೆ ಸಂಸ್ಥೆಯ ಉದ್ದೇಶ ಅವರನ್ನು ವೃತ್ತಿಪರ ಕೋರ್ಸ್‌ಗಳಿಗೆ ಸೇರಿಸುವುದು, ಪೋಷಕರ ಆಸೆಯೂ ಅದೇ ಆಗಿರುವ ಕಾರಣ ಶಿಕ್ಷಕರ ಅಭಿಪ್ರಾಯ, ವಿಶ್ಲೇಷಣೆಗೆ ಬೆಲೆಯಿರುವುದಿಲ್ಲ ಅವಳಿಗೆ ನಾನು ಆಗಾಗ್ಗೆ ಹೇಳುತ್ತಿದ್ದುದು `ನಿಮ್ಮದು ಶಿಕ್ಷಕರ ವೃತ್ತಿಯಲ್ಲಿನ ಸೇವೆಯಲ್ಲ, ಬದಲಾಗಿ ಸೇವೆಯ ಹೆಸರಲ್ಲಿ ನಡೆಯುವ ಗುಲಾಮಗಿರಿ' ಅಂತ.
ಕೊನೆಯದಾಗಿ ಹೇಳುವ ಮಾತೊಂದಿದೆ. ಅತ್ಯುತ್ತಮ ಅಂಕ ಪಡೆಯುವ ವಿದ್ಯಾರ್ಥಿಗಳಿಂದ ಇನ್ನೂ ಹೆಚ್ಚಿನ ಅಂಕ ಪಡೆಯುವಂತೆ ತಯಾರು ಮಾಡುವುದು ಶಿಕ್ಷಕರ ಹೆಚ್ಚುಗಾರಿಕೆಯಲ್ಲ, ಅನುತ್ತೀರ್ಣರಾಗುತ್ತಿರುವ, ಪಾಠ ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿರುವ ವಿದ್ಯಾರ್ಥಿಗಳನ್ನು ಮುಂದೆ ಬರುವ ಹಾಗೆ, ಅವರನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಹಾಗೆ ಮಾಡುವ ಕೆಲಸವಿದೆಯಲ್ಲ, ಅದು ನಿಜವಾದ ಶಿಕ್ಷಕರ ಸಾಮರ್ಥ್ಯ ಮತ್ತು ಕಾಯಕದ ಉದ್ದೇಶ. ಈ ತರಹದ ಶಿಕ್ಷಕ ನಿಜವಾದ ಗುರುವಾಗಬಲ್ಲ, ಆ ಗುರುತ್ವಕ್ಕೆ ಸಿಗಬೇಕಾದದ್ದು ಗೌರವ.