For the best experience, open
https://m.samyuktakarnataka.in
on your mobile browser.

ಗೃಹಲಕ್ಷ್ಮೀ ನಿಲ್ಲಿಸುವ ಮಾತೇ ಇಲ್ಲ…

08:41 PM Dec 18, 2024 IST | Samyukta Karnataka
ಗೃಹಲಕ್ಷ್ಮೀ ನಿಲ್ಲಿಸುವ ಮಾತೇ ಇಲ್ಲ…

ಬೆಳಗಾವಿ: ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮೀ ಯೋಜನೆ ನಿಲ್ಲಿಸುವ ಮಾತೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧಕ್ಕೆ ಆಗಮಿಸಿದ್ದ ಗೃಹಲಕ್ಷ್ಮೀಯರ ಜೊತೆ ಸಂವಾದ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಹಣದಿಂದ ಬದುಕಿನ ಅವಕಾಶಗಳನ್ನು ಸೃಷ್ಟಿಸಿಕೊಂಡ 25ಕ್ಕೂ ಹೆಚ್ಚು ಮಂದಿ ಫಲಾನುಭವಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ. ಗೃಹಲಕ್ಷ್ಮೀ ಯೋಜನೆಯಿಂದ ಫಲಾನುಭವಿಗಳ ಜೀವನದಲ್ಲಿ ಆಗಿರುವ ಲಾಭಗಳ ಬಗ್ಗೆ ವಿವರಿಸಿದ್ದಾರೆ. ಬದುಕಿಗೆ ಹೊಸ ಚೈತನ್ಯ ನೀಡಿದ ಗೃಹಲಕ್ಷ್ಮೀ ಯೋಜನೆಯನ್ನು ಸಾಕಾರಗೊಳಿಸಿದ ನನಗೆ, ಇಲಾಖೆಯ ಸಚಿವರು ಹಾಗೂ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಗೃಹಲಕ್ಷ್ಮಿಯರು ತಿಳಿಸಿದ್ದಾರೆ. ಈ ಎಲ್ಲರ ಮಾತುಗಳು ಕೇಳಿ ಸಂತೃಪ್ತ ಭಾವ ನನ್ನಲ್ಲಿ ಮೂಡಿದೆ. ಗೃಹಲಕ್ಷ್ಮೀ ಯೋಜನೆಯಿಂದ ಒಂದೇ ಮನೆಯ ಅತ್ತೆ ಸೊಸೆಯ ಮಧ್ಯೆ ಜಗಳ ತಂದಿದೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಆದರೆ ಇಂದಿನ ಕಾರ್ಯಕ್ರಮಕ್ಕೆ ಅತ್ತೆ-ಸೊಸೆಯರು ಜೊತೆ ಜೊತೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯೋಜನೆಯಿಂದ ತಮಗಾಗಿರುವ ಲಾಭದ ಬಗ್ಗೆ ಮಾತನಾಡಿದ್ದಾರೆ. ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗುತ್ತಿರುವುದು ಸಂತೋಷದ ವಿಚಾರ. ಆದ್ದರಿಂದ ಮಹಿಳೆಯರನ್ನು ಸಶಕ್ತಗೊಳಿಸುವ ಈ ಯೋಜನೆ ಮುಂದುವರಿಸಲಿದ್ದೇವೆ ಎಂದರು.