For the best experience, open
https://m.samyuktakarnataka.in
on your mobile browser.

ತಪ್ಪು ಗ್ರಹಿಕೆ: ಸಿಐಡಿ ಅಧಿಕಾರಿಗಳಿಗೆ ಹಲ್ಲೆ

09:03 PM Dec 18, 2024 IST | Samyukta Karnataka
ತಪ್ಪು ಗ್ರಹಿಕೆ  ಸಿಐಡಿ ಅಧಿಕಾರಿಗಳಿಗೆ ಹಲ್ಲೆ

ಕುಂದಾಪುರ: ನಗರದ ಹೊರವಲಯದ ಕೋಡಿ ಸಮುದ್ರ ತೀರದಲ್ಲಿ ಅಂಬರ್ ಗ್ರೀಸ್(ತಿಮಿಂಗಿಲ ವಾಂತಿ) ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಾರುವೇಷದಲ್ಲಿ ಬಂದ ಸಿಐಡಿ ಅಧಿಕಾರಿಗಳ ಬಗ್ಗೆ ಸ್ಥಳೀಯರು ತಪ್ಪು ಗ್ರಹಿಕೆಯಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಡಿ. 18ರಂದು ಬುಧವಾರ ಮಧ್ಯಾಹ್ನ ಕುಂದಾಪುರ ಎಂ. ಕೋಡಿಯಲ್ಲಿ ನಡೆದಿದೆ.
ಘಟನೆ ವಿವರ: ಕೋಡಿಯಲ್ಲಿ ಅಂಬರ್ ಗ್ರೀಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾರುವೇಷದಲ್ಲಿ ಮೂರು ಕಾರಿನಲ್ಲಿ ಬಂದ ಅರಣ್ಯ ಇಲಾಖೆ ಸಿಐಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಕಾರಿಗೆ ತುಂಬುವ ವೇಳೆ ಸ್ಥಳೀಯರ ತಪ್ಪು ಗ್ರಹಿಕೆಯಿಂದ ಅಧಿಕಾರಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುತ್ತಾರೆ. ಅಲ್ಲದೆ ಆ ವೇಳೆ ಸುತ್ತಮುತ್ತಲಿನ ಜನ ಸೇರಿದ್ದರಿಂದ ತಳ್ಳಾಟ ನಡೆದಿದೆ.
ಇದರಿಂದಾಗಿ ಅಧಿಕಾರಿಗಳು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಕೋಟ ಮಣೂರಿನಲ್ಲಿ ಸಿಐಡಿ ಸೋಗಿನಲ್ಲಿ ದರೋಡೆಕೋರರು ಬಂದು ಮನೆ ದರೋಡೆಗೆ ವಿಫಲ ಪ್ರಯತ್ನ ಮಾಡಿದ್ದರು. ಸಿಸಿ ಕ್ಯಾಮೆರಾ ಮೂಲಕ ದರೋಡೆ ಯತ್ನದ ದೃಶ್ಯ ಸೆರೆಯಾಗಿತ್ತು. ಈ ಘಟನೆಯನ್ನು ನೆನಪಿಸಿಕೊಂಡ ಜನರು ಇದು ಕೂಡ ಅಂತಹದೆ ಮತ್ತೊಂದು ದರೋಡೆ ಯತ್ನ ಎಂದು ತಪ್ಪು ತಿಳಿದು, ಇವರು ನಿಜವಾದ ಅಧಿಕಾರಿಗಳು ಎಂಬ ಅರಿವಿಲ್ಲದೆ ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದಿದ್ದರು. ಆದರೆ ಇನ್ನೊಂದು ಮೂಲದ ಪ್ರಕಾರ ಅಂಬರ್ ಗ್ರೀಸ್ ವ್ಯವಹಾರ ಸತ್ಯವಾಗಿದ್ದು ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎನ್ನುವ ಮಾಹಿತಿ ಕೇಳಿ ಬರುತ್ತಿದೆ.
ತಕ್ಷಣ ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ಟೌನ್ ಎಸ್ಐ ನಂಜ ನಾಯ್ಕ ಹಾಗೂ ಸಿಬ್ಬಂದಿ ಸಿಐಡಿ ಅಧಿಕಾರಿಗಳನ್ನು ಸ್ಥಳಾಂತರಿಸಿದರು.