ಗೆದ್ದರೆ ಇವಿಎಂ ಓಕೆ; ಸೋತರೆ ದೋಷ..!
ಹುಬ್ಬಳ್ಳಿ: ಚುನಾವಣೆ ಗೆದ್ದರೆ ಇವಿಎಂ ಸಮಸ್ಯೆ ಇರಲ್ಲ; ಅದೇ ಸೋತರೆ ಇವಿಎಂ ದೋಷ ಎನ್ನುತ್ತಾರೆ. ಕಾಂಗ್ರೆಸ್ಸಿನವರದ್ದು ಇದೆಂಥ ಮನಸ್ಥಿತಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ದ್ವಂದ್ವ ನಿಲುವು ತೋರುವ ಕಾಂಗ್ರೆಸ್ಸಿಗರ ಮನಸ್ಥಿತಿಯೇ ಸರಿಯಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸೋತ ಹತಾಶೆಯಲ್ಲಿ ವಿನಾಕಾರಣ ಇವಿಎಂ ದೋಷ ಎಂದೆಲ್ಲ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಮೇಲೆ ಗೂಬೆ ಕುರಿಸುತ್ತಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಪ್ರಜಾಪ್ರಭುತ್ವಕ್ಕೆ ಸಿಕ್ಕ ವಿಜಯ
ಹರಿಯಾಣ, ಜಮ್ಮು ಕಾಶ್ಮೀರದ ಚುನಾವಣೆಯಲ್ಲಿ ಪ್ರಜಾಪ್ರಭುತ್ವಕ್ಕೆ ಸಿಕ್ಕ ಬಹುದೊಡ್ಡ ವಿಜಯವಾಗಿದೆ ಎಂದು ಜೋಶಿ ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹತ್ವರ ಪರಿವರ್ತನೆ ತಂದಿದೆ. ಆರ್ಟಿಕಲ್ ೩೭೦ ರದ್ದು, ದಲಿತ ಮೀಸಲಾತಿ, ಪಂಚಾಯತಿ, ಪಾಲಿಕೆಗಳ ಸೌಲಭ್ಯಗಳನ್ನು ಸರಳಗೊಳಿಸಿದ್ದರಿಂದ ಬಿಜೆಪಿ ಅಲ್ಲಿ ೨೯ ಸ್ಥಾನಗಳನ್ನು ಪಡೆದಿದೆ. ಮತದಾರರು ಬಿಜೆಪಿಯನ್ನು ದೊಡ್ಡ ವಿರೋಧ ಪಕ್ಷವಾಗಿ ಹೊರ ಹೊಮ್ಮುವಂತೆ ಮಾಡಿದ್ದಾರೆ ಎಂದು ಹೇಳಿದರು.
ಹರಿಯಾಣದ ಇತಿಹಾಸದಲ್ಲೇ ಯಾವ ಪಕ್ಷವೂ ಸತತ ಮೂರು ಬಾರಿ ಅಧಿಕಾರಕ್ಕೆ ಬಂದ ಉದಾಹರಣೆಯಿಲ್ಲ. ಬಿಜೆಪಿ ಹ್ಯಾಟ್ರಿಕ್ ಗೆಲುವಿನ ದಾಖಲೆ ನಿರ್ಮಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಬೆದರಿಸೋ ತಂತ್ರ: ಮೂಡಾ, ವಾಲ್ಮೀಕಿ ಹಗರಣಗಳಿಂದಾಗಿ ಸಿಎಂ ಸಿದ್ದರಾಮಯ್ಯ ಅವರು ಈಗ ರಾಜೀನಾಮೆ ನೀಡೋ ಪರಿಸ್ಥಿತಿ ಬಂದಿದೆ. ಹಾಗಾಗಿ ಬಿಜೆಪಿ ಅವಧಿಯಲ್ಲಿನ ಪ್ರಕರಣಗಳ ತನಿಖೆ ನಡೆಸುತ್ತೇವೆ ಎನ್ನುತ್ತ ಭ್ರಷ್ಟಾಚಾರ ವಿರುದ್ಧದ ಧ್ವನಿ ಅಡಗಿಸಲು ಯತ್ನಿಸುತ್ತಿದೆ. ಆದರೆ, ಬಿಜೆಪಿ ಇದಕ್ಕೆಲ್ಲ ಜಗ್ಗಲ್ಲ. ತನಿಖೆ ನಡೆಸಿ ಎಂದೇ ಸವಾಲು ಹಾಕಿದೆ ಎಂದರು.