For the best experience, open
https://m.samyuktakarnataka.in
on your mobile browser.

ಗೊಬ್ಬರ ಸಿಗುತ್ತಿಲ್ಲ, ಕೃಷಿ ಇಲಾಖೆ ರೈತ ವಿರೋಧಿಯಾಗಿದೆ

05:07 PM Jun 13, 2024 IST | Samyukta Karnataka
ಗೊಬ್ಬರ ಸಿಗುತ್ತಿಲ್ಲ  ಕೃಷಿ ಇಲಾಖೆ ರೈತ ವಿರೋಧಿಯಾಗಿದೆ

ಹಾವೇರಿ: ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ 100 ದಿನದ ಕಾರ್ಯಕ್ರಮ ಘೋಷಣೆ ಮಾಡಿ, ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ‌ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಮೈತ್ರಿ ಪಕ್ಷಗಳಿಗೆ ಹಾಗೂ ಆ ಪಕ್ಷಗಳಲ್ಲಿ ಅನುಭವ ಇರುವ‌ ನಾಯಕರಿಗೆ ಆದ್ಯತೆ ಕೊಡುವ ಅಗತ್ಯ ಇತ್ತು. ಅಲ್ಲದೇ, ಹಿಂದಿನ ಸರ್ಕಾರದಲ್ಲಿ ಕೆಲಸ ಮಾಡಿದ ಪ್ರಮುಖರೆಲ್ಲರಿಗೂ ಸಚಿವರನ್ನಾಗಿ ಮುಂದುವರೆಸಲಾಗಿದೆ. ಹೀಗಾಗಿ ನನಗೆ ಸಚಿವ ಸ್ಥಾನ ತಪ್ಪಿರಬಹುದು. ನನಗೆ ಅನುಭವವಿರುವುದರಿಂದ ಸಂಸದನಾಗಿಯೂ ಅತಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡುವೆ ಎಂದರು.
ನಾಳೆ ಹಾವೇರಿ ಜಿಲ್ಲೆಯ ಡಿಸಿ ಕಚೇರಿಯಲ್ಲಿ ಕೇಂದ್ರದ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಿದ್ದೇನೆ. ಕೇಂದ್ರದ ಯೋಜನೆಗಳನ್ನು ಚುರುಕುಗೊಳಿಸುವೆ ಎಂದು ಹೇಳಿದರು.
ಜೂನ್ 17ಕ್ಕೆ ರಾಜಿನಾಮೆ
ಜೂನ್ 17ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ. ಬಳಿಕ ಶಿಗ್ಗಾವಿ ಉಪಚುನಾವಣೆ ಪ್ರಕ್ರಿಯೆ ಶುರುವಾಗಲಿದೆ. ಸಮೀಕ್ಷೆ ನಡೆಸಿ ಜನಾಭಿಪ್ರಾಯ ಯಾರ ಪರ ಇದೆಯೋ ಅವರಿಗೆ ಪಕ್ಷ ಟಿಕೆಟ್ ನೀಡಲಿದೆ. ನಮ್ಮಲ್ಲೂ ಅನೇಕ ಸಮರ್ಥ ಅಭ್ಯರ್ಥಿಗಳಿದ್ದಾರೆ. ಖಂಡಿತವಾಗಿ ಶಿಗ್ಗಾವಿ ಉಪಚುನಾವಣೆ ಗೆಲ್ಲಲಿದ್ದೇವೆ ಎಂದರು.
ಕೃಷಿ ಇಲಾಖೆ ರೈತ ವಿರೋಧಿಯಾಗಿದೆ
ಈ ಬಾರಿ ಮಳೆ ಚೆನ್ನಾಗಿ ಆಗಿದೆ ಮಳೆ ಶುಭ ಸೂಚನೆ. ಕಾಂಗ್ರೆಸ್ ಬಂದಾಗ ಬರಗಾಲ‌ ಶುರುವಾಗಿತ್ತು. ಮೋದಿಯವರ ಸರ್ಕಾರ ಬಂದ ಕೂಡಲೇ ಮಳೆ ಶುರುವಾಗಿದೆ. ರಾಜ್ಯ ಸರ್ಕಾರ ರೈತರಿಗೆ ಬೀಜ- ಗೊಬ್ಬರ ವ್ಯವಸ್ಥೆ ಮಾಡಿಲ್ಲ. ರೈತರಿಗೆ ಬೇಕಾಗಿರುವ ಗೊಬ್ಬರ ಬಿಟ್ಟು ತಮ್ಮ ಹತ್ತಿರ ಇರುವ ಗೊಬ್ಬರ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದಾರೆ. ಕೃಷಿ ಇಲಾಖೆ ರೈತರ ವಿರೋಧಿ ಇಲಾಖೆ ಆಗಿದೆ. ಸೊಸೈಟಿಗಳಲ್ಲಿ ಗೊಬ್ಬರ ಇಲ್ಲ ವ್ಯಾಪಾರಸ್ಥರ ಬಳಿ ಗೊಬ್ಬರ ಇದೆ. ಹೆಚ್ಚಿನ ದರಕ್ಕೆ ಗೊಬ್ಬರ ಮಾರುತ್ತಿದ್ದಾರೆ.
ಆದರೆ, ಅಧಿಕಾರಿಗಳು ಎಲ್ಲಿಯೂ ದಾಳಿ ಮಾಡಿಲ್ಲ. ಹಾವೇರಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮುಂಗಾರು ಹಿಂಗಾಮ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಹದಿನೈದು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ, ಒಂದೇ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಫಲಾನುಭವಿಗಳಿಗೆ ಸರಿಯಾಗಿ ಯೋಜನೆಗಳು ತಲುಪುತ್ತಿಲ್ಲ. ಫಲಾನುಭವಿಗಳಾಗದವರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಎರಡೂ ವರ್ಗದವರು ಶೀಘ್ರವೇ ಸರ್ಕಾರದ ವಿರುದ್ದ ತಿರುಗಿ ಬೀಳಲಿದ್ದಾರೆ ಎಂದರು.