For the best experience, open
https://m.samyuktakarnataka.in
on your mobile browser.

ಗೋಬಿಮಂಚೂರಿ ವಿರುದ್ಧ ಜನಾಕ್ರೋಶ

03:00 AM Feb 06, 2024 IST | Samyukta Karnataka
ಗೋಬಿಮಂಚೂರಿ ವಿರುದ್ಧ ಜನಾಕ್ರೋಶ

ಪಣಜಿ: ಗೋವಾದ ನಗರ ಪಟ್ಟಣಗಳಲ್ಲಿ ಈಗ ಜನಪ್ರಿಯ ಖಾದ್ಯ ಗೋಬಿ ಮಂಚೂರಿ ವಿರುದ್ಧ ಸಮರ ಸಾರಲಾಗುತ್ತಿದೆ. ಈ ಖಾದ್ಯ ಕೆಂಪಾಗಿ ಕಾಣುವಂತೆ ಕೃತಕ ಬಣ್ಣ ಬಳಸಲಾಗುತ್ತಿದ್ದು, ಆಹಾರಪ್ರಿಯರ ಆರೋಗ್ಯಕ್ಕೆ ಹಾನಿಕಾರಕವಾದ ಕೆಲವು ಸಾಸ್ ಪೌಡರ್ ಹಾಗೂ ಬಟ್ಟೆ ತೊಳೆಯಲು ಬಳಸುವ ಪೌಡರನ್ನೂ ಉಪಯೋಗಿಸಲಾಗುತ್ತಿದೆ. ಹೀಗಾಗಿ ಈ ಗಂಭೀರ ವಿಷಯ ಅರಿತ ಸಾರ್ವಜನಿಕರು ಇಂಥ ಖಾದ್ಯ ತಯಾರಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾಪುಸಾ ನಗರಪಾಲಿಕೆ ಈಗ ತನ್ನ ವ್ಯಾಪ್ತಿಯ ಹೋಟೆಲ್, ಅಂಗಡಿಗಳು ಹಾಗೂ ಹಬ್ಬ ಜಾತ್ರೆಗಳ ಸ್ಟಾಲ್‌ಗಳಲ್ಲಿ ಗೋಬಿಮಂಚೂರಿ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿದೆ. ಕಳೆದ ತಿಂಗಳಾಂತ್ಯದಲ್ಲಿ ಬೋದ್ಗೇಶ್ವರ ದೇವಾಲಯದ ಜಾತ್ರೆ ಸಮಯದಲ್ಲಿ ಗೋಬಿ ಮಂಚೂರಿ ಮಾರಾಟ ನಿಷೇಧಿಸುವಂತೆ ಮಾಪುಸಾ ಪಾಲಿಕೆ ಸದಸ್ಯ ತಾರಕ್ ಅರ್ಲೊಕರ್ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲಾ ಸದಸ್ಯರು ಈ ಖಾದ್ಯ ನಿಷೇಧಕ್ಕೆ ಸಮ್ಮತಿ ನೀಡಿದ್ದಾರೆ.
ಈ ರೀತಿ ಗೋಬಿ ಮಂಚೂರಿಗೆ ನಿಷೇಧ ಹೇರಿರುವುದರಲ್ಲಿ ಮಾಪುಸಾ ಪಾಲಿಕೆಯೇ ಮೊದಲಲ್ಲ. ಈ ಹಿಂದೆ ೨೦೨೨ರಲ್ಲಿ ಮರ್ಮಗೋವಾದ ಶ್ರೀ ದಾಮೋದರ ದೇವಾಲಯದ ವಾಸ್ಕೋ ಸಪ್ತಾಹ ಮೇಳದಲ್ಲಿ ಗೋಬಿ ಮಂಚೂರಿಗೆ ನಿಷೇಧ ಹೇರಲಾಗಿತ್ತು. ಈ ಮೇಳದಲ್ಲಿ ಇಂಥ ಖಾದ್ಯ ಮಾರಾಟ ಮೇಲೆ ನಿಷೇಧ ಹೇರುವಂತೆ ಮರ್ಮಗೋವಾ ಪಾಲಿಕೆಗೆ ರಾಜ್ಯದ ಆಹಾರ ಮತ್ತು ಔಷಧ ಆಡಳಿತ ಇಲಾಖೆ ಸೂಚಿಸಿತ್ತು.
ಅಧಿಕಾರಿಯೊಬ್ಬರ ಪ್ರಕಾರ ರೆಸ್ಟೋರೆಂಟ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಒಂದು ಪ್ಲೇಟ್ ಗೋಬಿ ಮಂಚೂರಿಗೆ ೭೦ ರಿಂದ ೮೦ ರೂ.ಗಳಷ್ಟು ಹಣ ವಿಧಿಸಲಾಗುತ್ತಿದೆ. ಇನ್ನು ಹಬ್ಬ ಜಾತ್ರೆ ಸಂದರ್ಭಗಳಲ್ಲಿ ಮಾರಾಟ ಮಾಡುವ ಸ್ಥಳಗಳಲ್ಲಿ ಈ ಆಹಾರಕ್ಕೆ ೩೦ರಿಂದ ೪೦ ರೂ. ವಿಧಿಸಲಾಗುತ್ತಿದೆ. ಇಷ್ಟೊಂದು ಕಡಿಮೆ ಮೊತ್ತಕ್ಕೆ ಯಾಕೆ ಈ ಆಹಾರವನ್ನು ನೀಡಲಾಗುತ್ತಿದೆ ಎಂದರೆ ಇದರಲ್ಲಿ ಬಟ್ಟೆಗಳನ್ನು ತೊಳೆಯಲು ಉಪಯೋಗಿಸುವ ರೀತಾ ಎನ್ನುವ ಪೌಡರ್ ಬಳಸಲಾಗುತ್ತಿದೆ.