For the best experience, open
https://m.samyuktakarnataka.in
on your mobile browser.

ಘನತೆಯಿಂದ ಪಟ್ಟ ತೊರೆದ ಅಪರೂಪದ ನಾಯಕ

03:00 AM Jun 07, 2024 IST | Samyukta Karnataka
ಘನತೆಯಿಂದ ಪಟ್ಟ ತೊರೆದ ಅಪರೂಪದ ನಾಯಕ

ಸಾಮಾನ್ಯವಾಗಿ ಭಾರತೀಯ ರಾಜಕಾರಣ ದಲ್ಲಿ ವಂಶಪಾರಂಪರ‍್ಯವಾಗಿ ಅಧಿಕಾರ ದಲ್ಲಿರುವ ಕುಟುಂಬಗಳೇ ಹೆಚ್ಚು. ಈ ರೀತಿ ಕುಟುಂಬ ರಾಜಕಾರಣಕ್ಕೆ ಕೊನೆ ಹಾಡಬೇಕು ಎಂದು ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲರೂ ಬಯಸುವುದು ಸಹಜ. ಆದರೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರನ್ನು ನೋಡಿದವರು ಯಾರೂ ವಂಶಪಾರಂಪರ‍್ಯ ರಾಜಕಾರಣವನ್ನು ವಿರೋಧಿಸುವುದಿಲ್ಲ. ತಂದೆ-ತಾತನ ಹೆಸರು ಉಳಿಸಿದ ೨೪ ವರ್ಷಗಳು ಸತತವಾಗಿ ಮುಖ್ಯಮಂತ್ರಿಯಾಗಿ ಈಗ ಚುನಾವಣೆಯ ಸೋಲಿನಿಂದ ಪದವಿ ತ್ಯಜಿಸಿದ ಪಟ್ನಾಯಕ್ ತಮ್ಮ ಪಕ್ಷದ ಸೋಲನ್ನು ಸ್ವೀಕರಿಸಿದ್ದಾರೆ. ಜನರನ್ನು ದೂಷಿಸಲು ಹೋಗಿಲ್ಲ. ತನ್ನ ಪಕ್ಷ ಎಷ್ಟು ಕೆಲಸ ಮಾಡಬೇಕಿತ್ತೊ ಅಷ್ಟು ಕೆಲಸ ಮಾಡಿದೆ ಎಂದು ಹೇಳಿ ಬಿಜೆಪಿಗೆ ಅಧಿಕಾರ ಬಿಟ್ಟು ಕೊಟ್ಟಿದ್ದಾರೆ.
ನವೀನ್ ಪಟ್ನಾಯಕ್ ಅವರ ತಂದೆ ಬಿಜು ಪಟ್ನಾಯಕ್ ನೆಹರೂ ಕಾಲದವರು. ಮುಖ್ಯಮಂತ್ರಿಯಾಗಿ ಒಡಿಶಾ ಕಟ್ಟಿದವರು. ನವೀನ್ ಪಟ್ನಾಯಕ್ ಡೂನ್ ಶಾಲೆ ವಿದ್ಯಾರ್ಥಿ. ಸಂಜಯಗಾಂಧಿ ಸಹಪಾಠಿ. ರಾಜೀವಗಾಂಧಿಗಿಂತ ೩ ವರ್ಷ ಚಿಕ್ಕವರು. ದೆಹಲಿಯಲ್ಲಿ ಬಿಎ ಪದವಿ. ಕಲೆ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ. ಪಂಚತಾರಾ ಸಂಸ್ಕೃತಿಯಲ್ಲಿ ಯೌವನ ಸರಿದದ್ದು ತಿಳಿಯಲೇ ಇಲ್ಲ. ಒಡಿಶಾ ಕಡೆ ತಿರುಗಿಯೂ ನೋಡಿರಲಿಲ್ಲ. ೧೯೯೭ ಇದ್ದಕ್ಕಿದ್ದಂತೆ ತಂದೆ ಬಿಜು ಪಟ್ನಾಯಕ್ ನಿಧನರಾದರು. ಕೂಡಲೇ ಪಕ್ಷದ ಹೊಣೆಗಾರಿಕೆ ನವೀನ್ ಮೇಲೆ ಬಿತ್ತು. ಆಗ ಅವರಿಗೆ ಒಡಿಯಾ ಭಾಷೆಯೇ ಬರುತ್ತಿರಲಿಲ್ಲ. ಇಂಗ್ಲಿಷ್, ಫ್ರೆಂಚ್, ಹಿಂದಿ ಬರುತ್ತಿತ್ತು. ತಂದೆಯಿಂದ ತೆರವಾದ ಆಸ್ಕಾ ಲೋಕಸಭೆಯಿಂದ ಸ್ಪರ್ಧಿಬೇಕಾಯಿತು. ನಾಮಪತ್ರ ಸಲ್ಲಿಸಲು ಹೋದಾಗ ಅವರಿಗೆ ಒಡಿಶಾದ ನಿಜವಾದ ದರ್ಶನವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಕತ್ತಲಾಗುವುದನ್ನು ಕಾಯುತ್ತ ಶೌಚಕ್ಕೆ ಕುಳಿತುಕೊಳ್ಳುವ ಜನ. ವಾಹನಗಳು ಬರುತ್ತಿದ್ದಂತೆ ನಿಲ್ಲುತ್ತಿದ್ದರು. ಸುತ್ತಲೂ ದುರ್ನಾತ. ಮೂಗುಮುಚ್ಚಿಕೊಂಡು ಬರಬೇಕು. ಸರ್ಕಾರಿ ಆಸ್ಪತ್ರೆಗೆ ಹೋದರೆ ಬಿಡಾಡಿ ನಾಯಿಗಳ ಕಾಟ. ಇಂಥ ಸ್ಥಿತಿಯಲ್ಲಿದ್ದ ರಾಜ್ಯವನ್ನು ೨೦೧೩ರಲ್ಲಿ ವಿಶ್ವಸಂಸ್ಥೆ ಉತ್ತಮ ರಾಜ್ಯ ಎಂದು ಪ್ರಶಸ್ತಿ ನೀಡುವಂತೆ ಮಾಡಿದವರು ನವೀನ್. ನಾಮಪತ್ರ ಸಲ್ಲಿಸಲು ಬಂದಾಗ ಅವರೊಂದಿಗೆ ಸಹೋದರಿ ಗೀತಾ, ಪಕ್ಷದಿಂದ ರಾಂ ಕೃಷ್ಣ ಪಟ್ನಾಯಕ್ ಮತ್ತು ವಿ. ಸುಗುಣ ಕುಮಾರಿ ಮಾತ್ರ ಇದ್ದರು. ಬಿಜು ಸಾವಿನಿಂದ ಜನ ಕಂಗೆಟ್ಟಿದ್ದರು. ಅದರ ಅನುಕಂಪದಲ್ಲಿ ನವೀನ್ ಗೆದ್ದರೆ ಸಾಕು ಮುಂದೆ ಪಕ್ಷ ನಡೆಸುವುದು ನಮಗೇ ಬರುತ್ತದೆ. ಹುಡುಗನಿಗೆ ಏನೂ ಗೊತ್ತಿಲ್ಲ ಎಂದು ಪಕ್ಷದ ಹಿರಿಯರು ಭಾವಿಸಿದ್ದರು. ಏನೂ ಗೊತ್ತಿಲ್ಲದ ಮೃದುಭಾಷಿ ನವೀನ್ ಎಲ್ಲವನ್ನೂ ಕೇಳಿ ತಿಳಿದುಕೊಳ್ಳಲು ಆರಂಭಿಸಿದರು. ಸಂಸದರಾಗಿ ಜನರೊಂದಿಗೆ ಬೆರೆಯಲು ಆರಂಭಿಸಿದರು. ಕೇಂದ್ರದಲ್ಲಿ ಸಚಿವರಾಗಿದ್ದಲ್ಲದೆ ಒಡಿಶಾದಲ್ಲಿ ವಿಧಾನಸಭೆ ಚುನಾವಣೆ ನಡೆದ ಮೇಲೆ ಮುಖ್ಯಮಂತ್ರಿ ಪದವಿ ಒಪ್ಪಿಕೊಂಡರು. ಆಗ ಅವರಿಗೆ ೫೧ ವರ್ಷ. ಅಂದು ಒಡಿಶಾಗೆ ಬಂದವರು ತಿರುಗಿ ನೋಡಲಿಲ್ಲ. ಮೂರು ಬಾರಿ ಲೋಕಸಭೆ ಸದಸ್ಯರು. ೪ ಬಾರಿ ಮುಖ್ಯಮಂತ್ರಿ. ೨೦೧೪ ರಲ್ಲಿ ಮೋದಿ ಅಲೆ ಇದ್ದಾಗಲೂ ನವೀನ್ ತಮ್ಮ ರಾಜ್ಯಭಾರಕ್ಕೆ ಕುಂದುಂಟಾಗದಂತೆ ನೋಡಿಕೊಂಡರು.

ಒಡಿಶಾ ಅಭಿಮಾನ
ಅಭಿವೃದ್ಧಿ ಕಾರ್ಯಗಳಿಗಿಂತ ಒಡಿಶಾ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತಿದೆ ಎಂಬುದೇ ಪ್ರಮುಖ ಸಂಗತಿಯಾಯಿತು. ವಯೋಸಹಜ ಸಮಸ್ಯೆಯಿಂದ ನವೀನ್ ಚುನಾವಣೆ ಪ್ರಚಾರ ಕಡಿಮೆಯಾಯಿತು. ಹಿಂದೂ ಸಮುದಾಯದಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ ಹಾಗೂ ಪುರಿ ಜಗನ್ನಾಥ ದೇವಾಲಯದ ಹುಂಡಿ ದುರುಪಯೋಗವಾಗಿದೆ ಎಂಬುದು ಪ್ರಮುಖ ಸಂಗತಿಯಾಯಿತು. ೨೪ ವರ್ಷಗಳ ನವೀನ್ ಆಡಳಿತ ಕೊನೆಗೊಂಡಿತು.

ರಾಜ್ಯಕ್ಕೆ ಕಾಯಕಲ್ಪ: ಎಲ್ಲರ ಹಾಗೆ ಮುಖ್ಯಮಂತ್ರಿ ಪದವಿಯನ್ನು ಸುಖದ ಸುಪ್ಪತ್ತಿಗೆ ಎಂದು ತಿಳಿಯಲಿಲ್ಲ. ೧೯೯೯ರಲ್ಲಿ ಚಂಡ ಮಾರುತ ಬಂದಾಗ ೧೦ ಸಾವಿರ ಜನ ಸತ್ತರು. ಚಂಡಮಾರುತ ಮತ್ತೆ ಬಂದರೆ ಏನು ಮಾಡಬೇಕು ಎಂಬುದನ್ನು ಯೋಜಿಸಿ ಕ್ರಮ ಕೈಗೊಂಡರು.
೨೦೧೩ರಲ್ಲಿ ಚಂಡಮಾರುತ ಬಂದಾಗ ಸಾವು ಕೇವಲ ೨೧ಕ್ಕೆ ಇಳಿಯಿತು. ರಾಜ್ಯ ಸರ್ಕಾರ ಕೈಗೊಂಡ ಕ್ರಮವನ್ನು ವಿಶ್ವಸಂಸ್ಥೆ ಕೂಡ ಶ್ಲಾಘಿಸಿತು. ಮೊದಲು ಬಿಜೆಪಿಯೊಂದಿಗೆ ಮೈತ್ರಿಹೊಂದಿದ್ದ ನವೀನ್ ಕಂದಮಲ್ ಗಲಭೆಯಲ್ಲಿ ಬಿಜೆಪಿ ಕೈವಾಡ ಇರುವುದನ್ನು ಮನಗಂಡು ಸಖ್ಯ ತ್ಯಜಿಸಿದರು. ಎನ್‌ಡಿಎ ಯಿಂದ ಹೊರಬಂದು ಪ್ರತ್ಯೇಕ ಬಿಜು ಜನತಾದಳ ಕಟ್ಟಿದರು.
ರಾಜ್ಯದ ಚಿತ್ರಣ ಬದಲಿಸಲು ಹಲವು ಕ್ರಮಗಳನ್ನು ಕೈಗೊಂಡರು. ಅದರಲ್ಲಿ ಪ್ರಮುಖ ಎಂದರೆ ಪ್ರವಾಹ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ, ಮೂಲಭೂತ ಸವಲತ್ತು ಅಂದರೆ ರಸ್ತೆ, ರೈಲು, ವಿಮಾನ ಸವಲತ್ತುಗಳ ಸುಧಾರಣೆ, ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.೩೩ ರಷ್ಟು ಮೀಸಲಾತಿ ತಂದು ವಿಶ್ವಸಂಸ್ಥೆಯ ಮನ್ನಣೆ ಗಳಿಸಿದರು. ಕೈಗಾರಿಕೆಗೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಎಲ್ಲ ಕಡೆ ಮೇಳಗಳನ್ನು ಆಯೋಜಿಸಿದರು. ಆರೋಗ್ಯ ಮತ್ತು ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ತಂದರು. ಇದರಿಂದ ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಹೋಗಿದ್ದ ಯುವ ಪಡೆ ಹಿಂದಕ್ಕೆ ಬಂದಿತು.
ಬಿಜೆಪಿ ಪಾತ್ರ : ೨೦೧೯ರಲ್ಲಿ ಯಾವುದೇ ರೀತಿಯಲ್ಲೂ ನವೀನ್ ಪಟ್ನಾಯಕ್ ಪ್ರಾಬಲ್ಯ ಕಡಿಮೆ ಮಾಡಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ನವೀನ್ ಜನಪ್ರಿಯತೆ ಇಳಿಮುಖಗೊಂಡಿರಲಿಲ್ಲ. ಅಗ ಬಿಜೆಪಿ ಒಡಿಯಾ ಅಸ್ಮಿತೆಯನ್ನು ಪ್ರಮುಖವಾಗಿ ಚರ್ಚಿಸಲು ಆರಂಭಿಸಿದರು. ನವೀನ್ ಆರೋಗ್ಯದಲ್ಲಿ ಏರುಪೇರು ಆಗಿರುವುದನ್ನೇ ಚುನಾವಣೆಗೆ ಅಸ್ತçವಾಗಿ ಬಳಸಿಕೊಂಡರು. ಅಲ್ಲದೆ ನವೀನ್ ನಂತರ ಯಾರು ಎಂಬ ಪ್ರಶ್ನೆ ಎಲ್ಲ ಕಡೆ ಕೇಳಿ ಬರುವಂತೆ ಮಾಡಿದರು. ಆಗ ತೇಲಿ ಬಂದ ಹೆಸರು ವಿ.ಕೆ.ಪಾಂಡ್ಯನ್.

ಯಾರು ಈ ಪಾಂಡ್ಯನ್: ಪಾಂಡ್ಯನ್ ಮೂಲತಃ ತಮಿಳುನಾಡಿನವರು. ಐಎಎಸ್ ಅಧಿಕಾರಿ. ಇವರ ಪತ್ನಿ ಸುಜಾತ ಒಡಿಶಾ ಮೂಲದವರು. ಇವರೂ ಐಎಎಸ್ ಅಧಿಕಾರಿ. ೨೦೧೧ರಿಂದ ಇವರು ನವೀನ್‌ಗೆ ಬಲಗೈ ಬಂಟ. ಇವರಿಲ್ಲದೆ ನವೀನ್ ಯಾವ ಕೆಲಸವನ್ನೂ ಮಾಡುವುದಿಲ್ಲ. ನವೀನ್ ಇವರನ್ನು ಉತ್ತರಾಧಿಕಾರಿಯಾಗಿ ಘೋಷಿಸುತ್ತಾರೆ ಎಂಬುದೇ ಈ ಬಾರಿ ಚುನಾವಣೆಯಲ್ಲಿ ಪ್ರಮುಖ ಸಂಗತಿಯಾಗಿತ್ತು.
ಬಿಜೆಪಿ ತನ್ನ ಪ್ರಚಾರದಲ್ಲಿ ನವೀನ್ ಆರೋಗ್ಯ ಚೆನ್ನಾಗಿಲ್ಲ. ಪಾಂಡ್ಯನ್‌ರೇ ಪರದೆಯ ಹಿಂದೆ ಕೆಲಸ ಮಾಡುವ ಮುಖ್ಯಮಂತ್ರಿ (ಡಿಫ್ಯಾಕ್ಟೊ) ಎಂದು ಪ್ರಚಾರ ಮಾಡಿದರು. ಇದನ್ನು ಅಲ್ಲಗಳೆಯುವ ಸ್ಥಿತಿಯಲ್ಲಿ ಪಕ್ಷ ಇರಲಿಲ್ಲ. ಇದರೊಂದಿಗೆ ಒಡಿಶಾ ಅಸ್ಮಿತೆಗೆ ಧಕ್ಕೆ ಬಂದಿದೆ. ಹೊರಗಿನಿಂದ ಬಂದವರು ಆಡಳಿತ ನಡೆಸುವಂತಾಗಿದೆ ಎಂಬುದೇ ಪ್ರಮುಖ ವಿಷಯವಾಯಿತು.

ದಾಖಲೆ ಮಾಡಿದ ಮುಖ್ಯಮಂತ್ರಿಗಳು: ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಗಳಾದವರ ಪಟ್ಟಿಗೆ ನವೀನ್ ಪಟ್ನಾಯಕ್ ಸೇರಿದ್ದಾರೆ. ಪವನ್ ಕುಮಾರ್(ಸಿಕ್ಕಿಂ) ಮಾಣಿಕ್ ಸರ್ಕಾರ(ತ್ರಿಪುರ) ಜ್ಯೋತಿಬಸು(ಪ. ಬಂಗಾಳ)ದಲ್ಲಿ ಮುಖ್ಯಮಂತ್ರಿಯಾಗಿ ದಾಖಲೆ ಸ್ಥಾಪಿಸಿದವರು.

ಆರ್ಥಿಕ ಪ್ರಗತಿ: ಒಡಿಶಾ ೨೦೦೧ ರಿಂದ ೨೦೧೦ ವರೆಗೆ ವಾರ್ಷಿಕ ಶೇ.೯ ರಷ್ಟು ಬೆಳವಣಿಗೆ ಕಂಡಿದೆ. ೨೦೨೨-೨೩ರಲ್ಲಿ ಶೇ.೭.೮ ಮತ್ತು ೨೦೨೩-೨೪ರಲ್ಲಿ ಶೇ.೮.೫ರಷ್ಟು ಬೆಳವಣಿಗೆ ಕಾಣಲಿದೆ. ೭೦ ಲಕ್ಷ ಮಹಿಳೆಯರಿಗೆ ಸ್ವಸಹಾಯ ಗುಂಪು ರಚನೆಗೆ ನೆರವು. ೪ ಕೋಟಿ ಜನರಿಗೆ ಉಚಿತ ಆರೋಗ್ಯ ಸೇವೆ. ಕಾಲಿಯಾ ಯೋಜನೆ ಮೂಲಕ ೬೪ ಲಕ್ಷ ರೈತರಿಗೆ ನೆರವು. ಮಧುಬಾಬು ಪಿಂಚಿಣಿಯಲ್ಲಿ ವೃದ್ಧರಿಗೆ ಸಹಾಯ ನೀಡಲಾಗಿದೆ.