For the best experience, open
https://m.samyuktakarnataka.in
on your mobile browser.

ಚಂಡೀಗಢ ಆಪ್ ಅಭ್ಯರ್ಥಿ ಮೇಯರ್: ಸುಪ್ರೀಂ ತೀರ್ಪು

11:55 PM Feb 20, 2024 IST | Samyukta Karnataka
ಚಂಡೀಗಢ ಆಪ್ ಅಭ್ಯರ್ಥಿ ಮೇಯರ್  ಸುಪ್ರೀಂ ತೀರ್ಪು

ನವದೆಹಲಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ತಿರಸ್ಕೃತಗೊಂಡಿದ್ದ ೮ ಮತಪತ್ರಗಳನ್ನು ಸಿಂಧು ಎಂದು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆಪ್ ಅಭ್ಯರ್ಥಿ ಕುಲದೀಪ್ ಸಿಂಗ್ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದೆ. ಜನವರಿ ೩೦ರಂದು ಬಿಜೆಪಿ ಅಭ್ಯರ್ಥಿ ಮೇಯರ್ ಆಗಿದ್ದ ಫಲಿತಾಂಶವನ್ನು ರದ್ದುಗೊಳಿಸಿದೆ.
ಜೊತೆಗೆ, ಉದ್ದೇಶಪೂರ್ವಕವಾಗಿ ಮತಪತ್ರಗಳ ಮೇಲೆ ಗುರುತು ಹಾಕಿ, ಅವುಗಳನ್ನು ತಿರಸ್ಕೃತಗೊಳಿಸಲಾಗಿದೆ ಎಂದಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ, ಚುನಾವಣಾ ಅಧಿಕಾರಿ ಅನಿಲ್ ಮಸೀಹ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಕೋರ್ಟ್ನಲ್ಲಿ ಸುಳ್ಳು ಹೇಳಿಕೆ ನೀಡಿರುವುದರಿಂದ ಮಸೀಹ್ ವಿರುದ್ಧ ಸೆಕ್ಷನ್ ೩೪೦ನೇ ವಿಧಿ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗೆ ಸೂಚಿಸಿದ್ದಾರೆ.
ಸೋಮವಾರ ನಡೆದಿದ್ದ ವಿಚಾರಣೆ ಸಂದರ್ಭದಲ್ಲಿ ಮತಪತ್ರಗಳನ್ನು ಕೋರ್ಟ್ಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅವನ್ನು ಪರಿಶೀಲಿಸಿದ ಸಿಜೆಐ, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದೀವಾಲಾ, ಮನೋಜ್ ಮಿಶ್ರಾ ಅವರ ವಿಭಾಗೀಯ ಪೀಠದಿಂದ ತೀರ್ಪು ಹೊರಬಿದ್ದಿದೆ.
ಚುನಾವಣಾ ಪ್ರಕ್ರಿಯೆಲ್ಲಿ ಮೋಸ ಹಾಗೂ ವಂಚನೆ ನಡೆದಿದೆ ಎಂದು ಆಪ್ ಕೋರ್ಟ್ ಮೆಟ್ಟಿಲೇರಿತ್ತು.
ಬಿಜೆಪಿಯನ್ನು ಗೆಲ್ಲಿಸಿದ್ದ ಬಗೆ : ಜನವರಿ ೩೦ರಂದು ನಡೆದಿದ್ದ ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ಪರವಾಗಿ ಚಲಾವಣೆಯಾಗಿದ್ದ ಎಂಟು ಮತಪತ್ರಗಳನ್ನು ತಿರಸ್ಕೃತಗೊಳಿಸಿ, ಬಿಜೆಪಿ ಅಭ್ಯರ್ಥಿ ಮನೋಜ್ ಸೋನಕರ್ ಗೆದ್ದಿರುವುದಾಗಿ ಘೋಷಿಸಲಾಗಿತ್ತು. ಒಟ್ಟು ೩೬ ಮತಗಳ ಪೈಕಿ ೮ ಮತಗಳನ್ನು ಅಸಿಂಧು ಎಂದು ಪರಿಗಣಿಸಿ, ಕೇವಲ ೨೮ ಮತಗಳನ್ನು ಮಾತ್ರ ಎಣಿಕೆ ಮಾಡಲಾಗಿತ್ತು. ಆಪ್ ಅಭ್ಯರ್ಥಿ ೧೨, ಬಿಜೆಪಿ ಅಭ್ಯರ್ಥಿ ೧೬ ಮತಗಳನ್ನು ಪಡೆದಿದ್ದರು. ಈಗ ತಿರಸ್ಕೃತಗೊಂಡಿದ್ದ ೮ ಮತಗಳು ಆಪ್ ಅಭ್ಯರ್ಥಿಗೆ ಬಿದ್ದಿರುವುದರಿಂದ ಕುಲದೀಪ್ ಸಿಂಗ್ ಒಟ್ಟು ೨೦ ಮತಗಳನ್ನು ಪಡೆದಂತಾಗಿದೆ.