ಚಳಿಯಲ್ಲಿ ಕುಸ್ತಿ ಆಡುವುದು ಸುಲಭವೇ? .
ನಾಡಿನ ಮಹಾಜನಗಳೇ ಇತ್ತ ಕಡೆ ಲಕ್ಷ್ಯಗೊಟ್ಟು ಕೇಳಿ. ಇಂದಿನಿಂದ ಬೆಳಗಾವಿ ಯಲ್ಲಿ ದೊಡ್ಡ ಮಟ್ಟದ ಕುಸ್ತಿ ನಡೆಯಲಿದೆ. ಈ ಕುಸ್ತಿಯಲ್ಲಿ ಪೈಲವಾನ್ ಮದ್ರಾಮಣ್ಣನ ಆಟ-ಹಾರಾಟ ನೋಡಲು ಮರೆಯದಿರಿ ಮರೆತು ಮರುಗದಿರಿ. ಈ ಕುಸ್ತಿ ಪಂದ್ಯಾಟದಲ್ಲಿ ಕಮಲೇಶ್ ಗರಡಿಮನಿ ಪೈಲವಾನರು ಹಾಗೂ ತೆನೆಮನೆ ಕುಸ್ತಿಪಟುಗಳು ಜತೆಗೂಡಿ ಕುಸ್ತಿ ಆಡುತ್ತೇವೆ. ನಾವು ಗೆಲ್ಲುತ್ತೇವೆ. ಗೆಲ್ಲುವವರೆಗೆ ನಿಲ್ಲುವುದಿಲ್ಲ ಎಂದು ಕುಳಿತುಕೊಂಡೇ ಹೇಳಿದ್ದಾರೆ. ಚಳಿಯಲ್ಲಿ ಕುಸ್ತಿ ಆಡೋದು ಅಷ್ಟು ಸುಲಭವೇ? ಎಂದು ಛದ್ಮಲಾಭನಗರದ ಮನೆಯ ಅಟ್ಟದ ಮೇಲೆ ಕುಳಿತ ಪಂ. ಲೇವೇಗೌಡರು ಕೆಮ್ಮಿಕೊಂಡು ಪ್ರಶ್ನೆ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ನನ್ನ ಹತ್ತಿರ ಉತ್ತರವಿಲ್ಲ ಎಂದು ಸುಮಾರಣ್ಣನವರು ಅಂದಿದ್ದು ಈಗ ಗುಟ್ಟಾಗೇನೂ ಉಳಿದಿಲ್ಲ.
ಈ ಕುಸ್ತಿ ಆಟದ ಸಂಬಂಧ ಪೈಲವಾನರ ಸಂದರ್ಶನ ಬೇಕು ಎಂದು ತಪ್ರಕರ್ತ ತಿಗಡೇಸಿ ಮದ್ರಾಮಣ್ಣನನ್ನು ಒಪ್ಪಿಸಿದ.
ತಿಗಡೇಸಿ; ಏನ್ರೀ ಇಂದಿನಿಂದ ಕುಸ್ತಿನಾ?
ಮದ್ರಾಮಣ್ಣ; ನೋಡಿ ಕುಸ್ತಿ ಅಂದರೆ ಕುಸ್ತಿ, ಸುಸ್ತಿ ಅಂದರೆ ಸುಸ್ತಿ ಹ್ಹ ಹ್ಹ ಹ್ಹ
ತಿಗಡೇಸಿ; ಎಲ್ಲ ತಯಾರಿ ಮಾಡಿಕೊಂಡಿದ್ದೀರಾ?
ಮದ್ರಾಮಣ್ಣ; ಹೂಂ..ದಿನಾಲೂ ತಾಲೀಮು ಮಾಡುತ್ತೇನೆ.
ತಿಗಡೇಸಿ; ಶಕ್ತಿ ಬರಲು ಆಹಾರ ಗಿಹಾರ?
ಮದ್ರಾಮಣ್ಣ; ಹಾಂ…ಮುಂಜಾನೆ ಸೇಂಗಾ, ಮಧ್ಯಾಹ್ನ ಟಮಾಟಣ್ಣು ತಿಂತೀನಪ್ಪ
ತಿಗಡೇಸಿ; ನೀವೊಬ್ರೆ ತಿಂತೀರಾ ಅಥವಾ?
ಮದ್ರಾಮಣ್ಣ; ಇಲ್ಲಪ್ಪ ಎಲ್ಲರಿಗೂ ತಿನಸ್ತೀನಿ. ಬಂಡೆಸಿವು ಉಟಾಬೈಸ್ ಎಲ್ಲ ಹೊಡೀತಾನೆ
ತಿಗಡೇಸಿ; ಮತ್ತೆ ಕಮಲೇಸಿ ತೆನೆಮನೆ ಗರಡಿ ಪೈಲವಾನರದ್ದು ಹೇಗೆ?
ಮದ್ರಾಮಣ್ಣ; ಅಯ್ಯೋ ಬುಡಿ, ಮೊನ್ನೆ ಮೊನ್ನೆ ಮೂರು ಜಾಗದಲ್ಲಿ ನಾವು ಗೆದ್ದು ಪಟಾಕಿ ಹೊಡೆದಿದ್ದೇವೆ. ಅವರೆಲ್ಲ ಅಂಜಿ..ಅಂಜಿಬಿಟ್ಟಿದ್ದಾರೆ. ಕುಸ್ತಿಗೆ ಬನ್ನಿ ನೋಡೋಣ ಅಂದಿದ್ದೀವಿ. ಅವರೇನರ ಮಾಡಲಿ ನಾವೂ ನೋಡುತ್ತೇವೆ ಎಂದು ಸುಮ್ಮನಾದರು.