For the best experience, open
https://m.samyuktakarnataka.in
on your mobile browser.

ಕೋಟೆನಾಡು ಪ್ರವೇಶ ಮುನ್ನವೇ ಗೋವಿಂದ ಕಾರಜೋಳಗೆ ವಿಘ್ನ

12:37 AM Mar 29, 2024 IST | Samyukta Karnataka
ಕೋಟೆನಾಡು ಪ್ರವೇಶ ಮುನ್ನವೇ ಗೋವಿಂದ ಕಾರಜೋಳಗೆ ವಿಘ್ನ

ಎನ್.ಎಂ. ಬಸವರಾಜ್
ಚಿತ್ರದುರ್ಗ ಎಸ್ಸಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ನಾಯಕರು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಹೆಸರನ್ನು ಅಂತಿಮಗೊಳಿಸುತ್ತಿದ್ದಂತೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾರಜೋಳ ಅವರು ಜಿಲ್ಲೆಗೆ ಪ್ರವೇಶ ಮಾಡುವ ಮುನ್ನವೇ `ಗೋ ಬ್ಯಾಕ್ ಕಾರಜೋಳ’ ಎನ್ನುವ ಅಭಿಯಾನ ಫೇಸ್‌ಬುಕ್‌ನಲ್ಲಿ ಆರಂಭವಾಗಿದೆ. ಇದರಿಂದ ಕಾರಜೋಳ ಅವರಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿಯೂ ಎಡಗೈ ಸಮುದಾಯದ ಬಿ.ಎನ್.ಚಂದ್ರಪ್ಪ ಹೆಸರು ಅಂತಿಮಗೊಳಿಸಲಾಗಿದೆ. ಬಿಜೆಪಿಯಲ್ಲಿ ಅಳೆದು ತೂಗಿ ಮುಧೋಳ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿರುವ ಗೋವಿಂದ ಕಾರಜೋಳ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಚಂದ್ರಪ್ಪ ಮತ್ತು ಕಾರಜೋಳ ಈರ್ವರೂ ಎಡಗೈ ಸಮುದಾಯಕ್ಕೆ ಸೇರಿದವರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಸೂಕ್ಷö್ಮವಾಗಿ ಅವಲೋಕಿಸಿದರೆ ನಿಜಲಿಂಗಪ್ಪ, ಇಮಾಮ್‌ಸಾಬ್ ಸೇರಿದಂತೆ ಮರ‍್ನಾಲ್ಕು ಸ್ಥಳೀಯರಿಗೆ ಟಿಕೆಟ್ ಕೊಟ್ಟಿರುವುದನ್ನು ಬಿಟ್ಟರೆ ಇದುವರೆಗೆ ವಲಸೆಗಾರರಿಗೆ ಮಣೆ ಹಾಕಲಾಗಿದೆ. ಇದು ಎರಡೂ ರಾಷ್ಟ್ರೀಯ ಪಕ್ಷಗಳು ರೂಢಿಸಿಕೊಂಡಿರುವ ಪದ್ಧತಿ. ಬಿಜೆಪಿಯಲ್ಲಿ ಇದುವರೆಗೆ ಜನಾರ್ದನಸ್ವಾಮಿ ಬಿಟ್ಟರೆ ಸ್ಥಳೀಯರಿಗೆ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ವಲಸೆಗಾರರಿಗೆ ಟಿಕೆಟ್ ನೀಡಿದ ಮೇಲೆ ವಿರೋಧ ವ್ಯಕ್ತವಾದರೂ ಅದರ ಬಿಸಿ ಹೆಚ್ಚಾಗಲಿಲ್ಲ. ಡಾ.ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ನರ‍್ಲಗುಂಟೆ ರಾಮಪ್ಪ ಇರ್ವರು ಪ್ರಬಲ ಆಕಾಂಕ್ಷಿಗಳಾಗಿದ್ದರು. ರಾಮಪ್ಪ ಮೌನವಹಿಸಿದರೆ ತಿಪ್ಪೇಸ್ವಾಮಿ ಮಾತ್ರ ಇನ್ನೂ ಬೆಂಬಲಿಗರ ಸಭೆ ಕರೆದು ಸಮಾಲೋಚಿಸುತ್ತಿದ್ದಾರೆ.
ಪ್ರಬಲ ಆಕಾಂಕ್ಷಿಯಾಗಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘುಚಂದನ್ ಕೂಡ ಬಿಜೆಪಿ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಸ್ಥಳೀಯರಿಗೆ ಕೊಡದೆ ೫೦೦ ಕಿ.ಮೀ. ದೂರದ ೭೪ ವರ್ಷದ ಕಾರಜೋಳ ಅವರಿಗೆ ಟಿಕೆಟ್ ಏಕೆ ನೀಡಬೇಕಾಗಿತ್ತು. ಗಂಡುಮೆಟ್ಟಿನ ನಾಡಿನಲ್ಲಿ ಗಂಡಸರು ಇಲ್ಲವೆ ಎಂದು ಪ್ರಶ್ನಿಸುವ ಮೂಲಕ ದುರ್ಗದ ಜನರ ಸ್ವಾಭಿಮಾನವನ್ನು ಕೆಣಕಿದ್ದಾರೆ. ಇತ್ತ ಇವರ ತಂದೆ ಚಂದ್ರಪ್ಪ ಕೂಡ ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ. ಚಂದ್ರಪ್ಪ ಕೂಡ ಯಡಿಯೂರಪ್ಪ ಆಪ್ತರಲ್ಲಿ ಒಬ್ಬರು. ಈಗ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಚಂದ್ರಪ್ಪ ಮತ್ತು ಮಗ ರಘುಚಂದನ್ ಕಾರ್ಯಕರ್ತರ, ಬೆಂಬಲಿಗರ ಸಭೆ ಕರೆದಿದ್ದು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲಕ್ಕೆಡೆಮಾಡಿಕೊಟ್ಟಿದೆ. ರಘುಚಂದನ್ ಅವರನ್ನು ಪಕ್ಷೇತರರಾಗಿ ಸ್ಫರ್ಧೆಗೆ ಇಳಿಸುವ ಲಕ್ಷಣಗಳು ಕಾಣತೊಡಗಿವೆ. ಕಾರ್ಯಕರ್ತರು ನೀಡುವ ಸಲಹೆ ಮೇರೆಗೆ ತಂದೆ-ಮಕ್ಕಳು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.