ಬಾಕಿ ಬಿಲ್ ನೀಡಲು ೪ ಲಕ್ಷ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
05:09 PM May 06, 2024 IST | Samyukta Karnataka
ಚಿತ್ರದುರ್ಗ: ಬಾಕಿ ಬಿಲ್ ನೀಡಲು ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಬಯಲುಸೀಮೆ ಅಭಿವೃದ್ದಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸೋಮವಾರ ನಗರದ ತಮಟಕಲ್ಲು ರಸ್ತೆಯಲ್ಲಿರುವ ಮಂಡಳಿ ಕಚೇರಿಯಲ್ಲಿ ನಾಲ್ಕು ಲಕ್ಷ ರೂಪಾಯಿಯನ್ನು ಸ್ವೀಕರಿಸುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಸಿದ್ದನಗೌಡ ಅವರು ಬಯಲು ಸೀಮೆ ಅಭಿವೃದ್ದಿ ಮಂಡಳಿಯಲ್ಲಿ ೧೫ ವಿವಿಧ ಅಭಿವೃದ್ದಿ ಕಾಮಗಾರಿ ಮಾಡಿದ್ದು ಇದರ ಬಿಲ್ ಅನುಮೋದನೆಗೆ ಸಲ್ಲಿಸಿದ್ದರು. ಹಣಕಾಸು ಅನುಮೋದನೆ ನೀಡಲು ಹಣದ ಬೇಡಿಕೆ ಇಟ್ಟರು.
ಸಿದ್ದನಗೌಡ ಹಣ ನೀಡದೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು. ದೂರು ದಾಖಲಿಸಿಕೊಂಡ ಎಸ್ಪಿ ವಾಸುದೇವರಾಮ, ಡಿವೈಎಸ್ಪಿ ಮೃತಂಜಯ್ಯ ಹಾಗೂ ಸಿಬ್ಬಂದಿಗಳು ಸಿದ್ದನಗೌಡ ಅವರ ಕೈಯಲ್ಲಿ ಹಣ ಕಳುಹಿಸಿದರು. ಬಸವರಾಜಪ್ಪ ಹಣ ಸ್ವೀಕರಿಸುತ್ತಿದ್ದಂತೆ ದಾಳಿ ನಡೆಸಿ ಬಂಧಿಸಿದರು.