ಸಹೋದರನ ಸಾಲಕ್ಕೆ ವೃದ್ಧಾಪ್ಯ ವೇತನ ಜಮಾ
ಚಿತ್ರದುರ್ಗ: ತನ್ನ ಸಹೋದರ ಮಾಡಿದ ಸಾಲಕ್ಕೆ ವೃದ್ಧಾಪ್ಯ ವೇತನದ ಹಣವನ್ನು ಜಮಾ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ನನ್ನ ಸಹೋದರ ಮಾಡಿದ ಸಾಲಕ್ಕೆ ನನ್ನ ವೃದ್ಧಾಪ್ಯ ವೇತನ, ಬೆಳೆ ನಷ್ಟ ಪರಿಹಾರ ಹಣವನ್ನು ಜಮಾ ಮಾಡಿಕೊಳ್ಳುತ್ತಿದ್ದು, ಕೂಡಲೇ ಕ್ರಮ ಕೈಗೊಂಡು ನ್ಯಾಯ ಕೊಡಿಸಿ ಎಂದು ನೊಂದ ವ್ಯಕ್ತಿ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ತಾಲ್ಲೂಕಿನ ಹುಣಸೇಕಟ್ಟೆ ಗ್ರಾಮದ ಕೆ.ಆರ್.ಓಬಣ್ಣ ಅವರ ಎರಡೂ ಕಾಲುಗಳು ಸರಿ ಇಲ್ಲದೆ ಇದ್ದರೂ ಬರುವ ವೃದ್ಧಾಪ್ಯ ವೇತನ ಹಣದಿಂದ ಜೀವನ ನಡೆಸುತ್ತಿದ್ದಾರೆ. ಓಬಣ್ಣ ಅವರಿಗೆ ಸರ್ವೆ ನಂಬರ್ ೩೬ರಲ್ಲಿ ಜಮೀನಿದೆ. ಸಹೋದರನ ಹೆಸರಿನಲ್ಲಿ ಸರ್ವೆ ನಂಬರ್ ೪೪ರಲ್ಲಿ ಜಮೀನಿದೆ. ಪಾಲು ವಿಭಾಗ ಕೂಡ ಆಗಿದೆ. ವಿಚಿತ್ರವೆಂದರೆ ಓಬಣ್ಣ ಸಾಲ ಮಾಡಿಲ್ಲ. ಇವರ ಸಹೋದರ ತುರುವನೂರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ೩.೫೦ ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಸಹೋದರ ಸಾಲ ಪಾವತಿ ಮಾಡದ ಕಾರಣಕ್ಕಾಗಿ ಓಬಣ್ಣ ಅವರ ವೃದ್ಧಾಪ್ಯ ವೇತನ ೧೨೦೦ ರೂಪಾಯಿಯನ್ನು ಸಹೋದರನ ಸಾಲಕ್ಕೆ ಜಮಾ ಮಾಡಿಕೊಳ್ಳಲಾಗುತ್ತಿದೆ ಎಂದು ಓಬಣ್ಣ ಆರೋಪಿಸಿದ್ದಾರೆ.
ಮಗಳ ಶಿಕ್ಷಣಕ್ಕೆಂದು ಪಡೆದಿದ್ದ ಸಾಲ ತೀರಿಸಲಾಗಿದೆ. ಬಡ್ಡಿ ೨೯ ಸಾವಿರ ರೂಪಾಯಿ ಇದ್ದು, ಇದಕ್ಕೆ ಬೆಳೆ ನಷ್ಟ ಪರಿಹಾರದ ಹಣವನ್ನು ಜಮಾ ಮಾಡಿಕೊಳ್ಳಲಾಗುತ್ತಿದೆ. ಇನ್ನು ಬ್ಯಾಂಕಿನ ಇಬ್ಬರು ದಿನಗೂಲಿ ನೌಕರರು ಉದ್ಧಟತನದಿಂದ ವರ್ತಿಸುತ್ತಿದ್ದು, ಅವರಿಂದ ಸಾಕಾಗಿದೆ. ಕೂಡಲೇ ಇವರ ಮೇಲೆ ಶಿಸ್ತುಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ವೆಂಕಟೇಶ್, ಕೂಡಲೇ ಪರಿಶೀಲಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದರು.