ಚೀನಾ ಜತೆ ಬಾಂಧವ್ಯ ವೃದ್ಧಿ
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಉತ್ತಮ, ಸ್ಥಿರ ಮತ್ತು ಶಾಂತಿಯುತ ಸಂಬಂಧವು ಈ ಪ್ರದೇಶ ಮತ್ತು ಇಡೀ ಜಗತ್ತಿಗೆ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಇದಕ್ಕಾಗಿ ಗಡಿ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸುವ ಅಗತ್ಯವೂ ಇದೆ. ಈ ದಿಕ್ಕಿನಲ್ಲಿ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ಮತ್ತೆ ಆರಂಭವಾಗಲಿದೆ ಎನ್ನುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ನ್ಯೂಸ್ ವೀಕ್ ನಿಯತ ಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ, ಪಾಕಿಸ್ತಾನದೊಂದಿಗಿನ ಸಂಬಂಧ, ಕ್ವಾಡ್ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ಮನಬಿಚ್ಚಿ ಮಾತನಾಡಿದ್ದಾರೆ.
ಪಾಕಿಸ್ತಾನದೊಂದಿಗಿನ ಬಾಂಧವ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತವಾದ ವಾತಾವರಣದಲ್ಲಿ ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಸಾಧಿಸುತ್ತದೆ ಎಂದು ಪ್ರತಿಪಾದಿಸಿದರು. ಆದರೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಚೀನಾ ಮತ್ತು ಕ್ವಾಡ್ ಗುಂಪಿನ ಬಗ್ಗೆ ಮಾತನಾಡಿದ ಅವರು, ಇದು ಯಾವುದೇ ದೇಶದ ವಿರುದ್ಧ ಗುರಿಯನ್ನು ಇಟ್ಟುಕೊಂಡಿಲ್ಲ. ಇತರ ಅನೇಕ ಅಂತಾರಾಷ್ಟ್ರೀಯ ಗುಂಪುಗಳಂತೆ, ಕ್ವಾಡ್ ಸಹ ಹಂಚಿಕೊಂಡ ಸಕಾರಾತ್ಮಕ ಕಾರ್ಯಸೂಚಿಯನ್ನು ಹೊಂದಿದೆ ಎಂದರು.