ಚುನಾವಣಾ ಬೆಟ್ಟಿಂಗ್ ಆಮೇಲೆ ಕಟಿಂಗ್
ಮೊದಲಿನಿಂದಲೂ ಬೆಟ್ಟಿಂಗ್ ಚಟವಿದ್ದ ತಿರುಕೇಸಿ ಪ್ರತಿಚುನಾವಣೆಯಲ್ಲಿ ಗೆದ್ದು ಗೆದ್ದು ಹೊಲ-ಮನಿ ಮಾಡಿದ್ದ. ಎಲ್ಲರೂ ಚುನಾವಣೆಗೆ ಮುಂಚೆ ಭರ್ಜರಿ ಆಕ್ಟೀವ್ ಆಗಿದ್ದರೆ ಮತದಾನ ಮುಗಿದ ನಂತರ ಈತನ ಹಾವಳಿ ಹೆಚ್ಚಾಗುತ್ತಿತ್ತು. ಮತದಾನದ ಹಿಂದಿನ ದಿನವೇ ನೋಡಿ ನಾಳೆ ಮತದಾನ… ನಾಡಿದ್ದು ಮುಂಜಾನೆಯಿಂದ ಬೆಟ್ಟಿಂಗ್ ಶುರುಮಾಡೋಣ… ನೀವೂ ಆಡಿ ನಿಮ್ಮವರಿಗೂ ಆಡಲು ಹೇಳಿ ಎಂದು ಹ್ಯಾಂಡ್‌ಬಿಲ್ ತಯಾರಿಸಿ ಮೂರೂ ಕ್ಷೇತ್ರಕ್ಕೆ ಕಳಿಸಿಕೊಟ್ಟಿದ್ದ. ಹಾಗಾಗಿ ಈಗ ತಿರುಕೇಸಿಯ ಬೆಟ್ಟಿಂಗ್ ಬಲು ಜೋರಾಗಿ ನಡೆದಿದೆ. ಈಗಾಗಲೇ ಕಿಂಗ್‌ಸೈಜಿನ ಐನೂರು ಪೇಜಿನ ನೋಟ್‌ಬುಕ್ ತುಂಬಿ ಇನ್ನೂ ಐದಾರು ನೋಟುಬುಕ್‌ಗಳಿಗೆ ಆರ್ಡರ್ ಮಾಡಿದ್ದಾನೆ ಎಂದು ಗೊತ್ತಾಗಿದೆ. ಬನ್ನಿ ಬನ್ನಿ ಬೆಟ್ಟಿಂಗ್ ಆಡಲು ಬನ್ನಿ… ಅವರು ಗೆಲ್ಲುತ್ತಾರೆ ಎನ್ನುವವರು ಇಲ್ಲಿ ಹೆಸರು ಬರೆದು ಸಹಿ ಮಾಡಿ.. ಇವರು ಗೆಲ್ಲುತ್ತಾರೆ ಅನ್ನುವವರು ಇಲ್ಲಿ ಹೆಸರು ಬರೆಯಿರಿ. ಆಸ್ತಿಗಳನ್ನು ಹಚ್ಚುವುದರಿದ್ದರೆ ಓರಿಜಿನಲ್ ಪಾಣಿ ತೆಗೆದುಕೊಂಡು ಬನ್ನಿರಿ. ಝರಾಕ್ಸ್ ಪ್ರತಿ ನಿಮ್ಮಲ್ಲಿ ಇಟ್ಟುಕೊಳ್ಳಿ ಎಂದು ಮೊದಲೇ ತಿಳಿಸಿದ್ದ. ಹಾಗಾಗಿ ಜನರು ತಿರುಕೇಸಿ ಮನೆಗೆ ಮುಗಿಬಿದ್ದಿದ್ದಾರೆ. ಎತ್ತು, ಎಮ್ಮೆ, ಕುರಿ, ಆಡು, ಕೋಳಿ ಏನೆಂದರೆ ಅವುಗಳನ್ನು ಬೆಟ್‌ಕಟ್ಟಲು ಅವಕಾಶವಿದೆ ಎಂದು ತಿಳಿಸಿದ್ದನಾದ್ದರಿಂದ ಆತನ ಮನೆಯ ಬಲಗಡೆ ಖಾಲಿ ಜಾಗೆಯಲ್ಲಿ ಅವುಗಳನ್ನು ಕಟ್ಟಲಾಗಿದೆ. ಈಗ ಮನೆಯ ಪಕ್ಕ ಕಟ್ಟಿದ್ದ ಜಾನುವಾರುಗಳು ಒಂದೊಂದೇ ಕಡಿಮೆಯಾಗುತ್ತಿದ್ದವು. ಬೆಟ್ಟಿಂಗ್ ಕಟ್ಟಿದವರು ಇದನ್ನು ಗಮನಿಸಿದ್ದರು. ಅವತ್ತೊಂದು ಮುಂಜಾನೆ ತಿರುಕೇಸಿ ಮನೆಯ ಮುಂದೆ ಆಗಮಿಸಿದ ಕೆಲವರಿಗೆ ಗಾಬರಿಯಾಯಿತು. ತಿರುಕೇಸಿ ಮನೆ ಕೀಲಿ ಹಾಕಿತ್ತು… ಪಕ್ಕದ ಜಾಗೆಯಲ್ಲಿ ಕಟ್ಟಿದ್ದ ಜಾನುವಾರುಗಳು ಕಾಣಲೇಇಲ್ಲ. ಆತನ ಮೊಬೈಲ್ ಸ್ವಿಚ್ಡಾಫ್ ಆಗಿತ್ತು. ಪೊಲೀಸರಿಗೆ ದೂರು ಕೊಡಬೇಕು ಅಂದರೆ ಇದು ಬೆಟ್ಟಿಂಗ್.. ಕಾನೂನು ಬಾಹಿರ ಎಂದು ಕೈ ಕೈ ಹಿಚುಕಿಕೊಳ್ಳುತ್ತಿದ್ದರು. ಅದಾಗಲೇ ಬೆಟ್ಟಿಂಗ್ ಕಟ್ಟಿಸಿಕೊಂಡನ್ನು ಸಿಕ್ಕರೇಟಿಗೆ ಮಾರಿ ದುಡ್ಡು ಜಮಾ ಮಾಡಿಕೊಂಡು ಪಕ್ಕದ ರಾಜ್ಯಕ್ಕೆ ಓಡಿಹೋಗಿ ಅಲ್ಲಿ ನಡೆಯುವ ಚುನಾವಣೆಯಲ್ಲಿ ಬೆಟ್ಟಿಂಗ್ ಕಟ್ಟಿಸಿಕೊಳ್ಳಲು ಸಜ್ಜಾಗಿದ್ದ. ಚುನಾವಣೆ ಬೆಟ್ಟಿಂಗ್ ನಮಗೆ ಕಟಿಂಗ್ ಮಾಡಿತಲ್ಲ ಎಂದು ಜನರು ಪೇಚಾಡಿದರು.