ಜಂಪಿಂಗ್ ಜಂಪಿಂಗ್ ಲಿಟ್ಲ್ ಸ್ಟಾರ್….
ಹೋಗಪ ನಿಂತುಬುಡು ಎಂದು ಅಂದರೆ ಒಲ್ಲೇ… ನಾನೊಲ್ಲೇ…. ಎಂದು ಕಣ್ಣು ಮತ್ತೊಂದು ವರೆಸಿಕೊಳ್ಳುತ್ತ ಬಾಲಕ ಪುಕಿಲ್ ತಾತ ಲೇವೇಗೌಡರ ತೊಡೆಮೇಲೆ ಮಲಗಿದನಂತೆ. ಹುಡುಗನ ಅಪ್ಪೋರೂ ಸಹ ನೋಡು ನಾನೊಂದು ಮಾತು ಹೇಳ್ತೇನೆ… ಸುಮ್ಮನೇ ನಿಂತುಬುಡು ಅಂದಾಗ… ನೋ ಪಪ್ಪಾ.. ನೋ ತಾತಾ ಅಂದು ಮೊಬೈಲ್ ಕಾಲ್ ಮಾಡಿ ನೋ ದೊಡ್ಡಪ್ಪಾ ಎಂದು ಗೋಳೋ ಅಂದನೆಂಬ ಸುದ್ದಿ ತಿಗಡೇಸಿ ಡೆನ್‌ನಿಂದ ಹೊರಬಿದ್ದಿದೆ. ಈ ಸುದ್ದಿ ಕೇಳಿ ಸೋದಿಮಾಮೋರು.. ಲಮಿತ್ ಸಾ ಕಾಕೋರು.. ಇವನೆಂತಹ ಬಾಲಕ… ಬಾಲಕ ಧೈರ್ಯಸ್ಥನಿರಬೇಕು… ಬಾಲಕ ಯುದ್ಧಮಾಡುವಂತಿರಬೇಕು… ಯಾರಿಗೂ ಹೆದರದೇ ಮುನ್ನುಗ್ಗುವಂತಿರಬೇಕು… ಬಾಲಕರು ಈಗಿನಿಂದಲೇ ಇಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಛೆ…ಛೆ ಅಂದರಂತೆ. ಇನ್ನೊಂದೆಡೆ ಮಿಲ್ಟ್ರಿಮಾಮಾ ಬೋಗೇಸ್ವರ ನಂಗ ಕೊಡ್ರಿ… ಅಂವ ಹೇಗಿದ್ದರೂ ಒಲ್ಲೆ… ಒಲ್ಲೆ ಅಂತಿದಾನೆ ಎಂದು ಹೇಳಿದಾಗ.. ನೋವೇ… ಚಾನ್ಸೇ ಇಲ್ಲ ಎಂದು ಸುಮಾರಣ್ಣೋರು ಅಂದಾಗ.. ಬಂದೆ… ನಾ ಬಂದೆ ಎಂದು ಬಂಡೆಸಿವು ಮನೆಗೆ ಹೋಗಿ ಹಾರ ಹಾಕಿಸಿಕೊಂಡು ಉಪ್ಪಿಟ್ಟು ಸಿರಾ ತಿಂದು ಚಾ ಕುಡಿದು ಬಂದಿದ್ದಾನೆ ಎಂಬ ಸುದ್ದಿಯೂ ಹಾಟ್ ಕೇಕ್‌ನಂತೆ ಆಗಿದೆ. ಈ ಮದ್ರಾಮಣ್ಣ… ಅಯ್ಯೋ ಮುಂದೆ ಬಂದರೆ ಕರೆದುಕೊಳ್ಳಿ ಹಿಂದೆ ಬಂದರೆ ಹಾಗೆ ಕಳ್ಸಿ ಎಂದು ಗೋವಿನ ಹಾಡು ಹಾಡಿದಂತೆ ಹಾಡಿದಾಗ… ಜತೆಯಲ್ಲಿದ್ದವರು ಐ ಶಬಾಷ್ ಎಂದು ಕೂಗಿದ್ದು ಛದ್ಮಲಾಭ ನಗರದ ಮನೆಯ ಅಟ್ಟದ ಮೇಲೆ ಕುಳಿತಿದ್ದ ಪಂಡಿತರಿಗೆ ಕೇಳಿಸಿತಂತೆ… ಅಪ್ಪಾಜಿ… ಅಪ್ಪಾಜಿ ಕೇಳಸ್ಕೊಂಡ್ರಾ ಎಂದು ಅಂದ ಲೇವಣ್ಣ… ನೀವು ಊಂ ಅಂದರೆ ನಮ್ ದೊಡ್ಡವನ್ನ ನಿಂದ್ರಿಸಿಬುಡ್ಲಾ ಅಂದಾಗ… ಏಯ್ ನಿನಗೆ ಬುದ್ದಿ ಇದೆಯಾ… ಏನು ಬೇಡ ಎಂದು ಹೇಳಿದ. ಸಪ್ಪೆ ಮೋರೆ ಹಾಕಿಕೊಂಡು ಅಲ್ಲಿಂದ ಹೋದ ಲೇವಣ್ಣ. ನಮಗೂ ಬ್ಯಾಡ ಅಂತಾರೆ ನೋಡು ಹಿಂಗಾದ್ರೆ ಹೆಂಗೆ ಎಂದು ತನ್ನಷ್ಟಕ್ಕೆ ತಾನು ಮಾತನಾಡುತ್ತ ಕೈಯಲ್ಲಿ ಲಿಂಬೆಹಣ್ಣನ್ನು ತೂರುತ್ತ ಹೊರಬಂದ. ಅಷ್ಟರಲ್ಲಿ ಮಿಲ್ಟ್ರಿ ಮಾಮನಿಗೆ ಸೋದಿಮಾಮನ ಕಾಲ್ ಬಂತು. ಹಲೋ ಅಂದಕೂಡಲೇ ಕ್ಯಾ ಸಮಜ್ ಕರ್ ಗಯಾ ಹೈ… ತುಮಾರಿ ಬಾಸ್ ಕುಸ್ ಹೋಗಾ? ಬೋಲೋ ಬೋಲೋ ಅಂದಾಗ… ಬೊಲೇರೋ ಅಲ್ಲರೀ ನಂದು ಇನ್ನೋವಾ ಇದೆ ಎಂದು ಹೇಳಿದ. ಇದಕ್ಕೆ ಅರ್ಥ ಆಗುತ್ತಿಲ್ಲ ಎಂದು ಜಾವ್.. ಜಾವ್… ಹಬ್ ಭಿ ದೇಖ್ತೇ ಹೈ ಎಂದು ಫೋನ್ ಕಟ್ ಮಾಡಿದರು. ಮತ್ತೆ ಅನ್ನೋನ್ ನಂಬರ್‌ನಿಂದ ಕರೆ ಬಂದಾಗ… ಜಂಪಿಂಗ್.. ಜಂಪಿಂಗ್ ಲಿಟ್ಲ್ ಸ್ಟಾರ್ ಎಂದು ಮೂರು ಸಲ ಅಂದು ಫೋನ್ ಕಟ್ ಮಾಡಿದರು..ಯಾವಂದೋ ಏನೋ ಅಂದುಕೊಂಡು ಅಲ್ಲಿಂದ ಹೋದ ಮಿಲ್ಟ್ರಿ.