For the best experience, open
https://m.samyuktakarnataka.in
on your mobile browser.

ಜಕಾತ್: ಸಂಪತ್ತಿನ ಶುದ್ಧೀಕರಣ

03:30 AM Mar 29, 2024 IST | Samyukta Karnataka
ಜಕಾತ್  ಸಂಪತ್ತಿನ ಶುದ್ಧೀಕರಣ

ದುರಾಸೆ ಲೋಭಗಳಿಗೆ ವಶನಾದ ವ್ಯಕ್ತಿ ತಾನು ಸಂಗ್ರಹಿಸಿದ ಸಂಪತ್ತನ್ನು ರಕ್ಷಿಸುವುದು ಹೇಗೆ ಎಂಬ ಚಿಂತೆಯಲ್ಲಿಯೇ ಇರುತ್ತಾನೆ. ಹೀಗೆ ಸಂಗ್ರಹಿಸಿ ಇಟ್ಟ ಸಂಪತ್ತನ್ನು ಯಾವುದೇ ಸತ್ಕಾರ್ಯಗಳಿಗೆ ಉಪಯೋಗಕ್ಕೆ ಬಾರದೆ ಒಂದು ದಿನ ಅದು ನಾಶವಾಗಿಬಿಡುತ್ತದೆ.
ಸಂಪತ್ತಿನ ಅಕ್ರಮ ಸಂಗ್ರಹ ಅವಶ್ಯಕತೆಗಿಂತ ಹೆಚ್ಚು ಧನ ಕನಕ ಆಸ್ತಿಪಾಸ್ತಿಗಳ ಸಂಗ್ರಹ ಇವುಗಳನ್ನು ಶುದ್ಧೀ ಕರಿಸಲು ಸಮಾಜದ ದೀನ, ಬಡವರಿಗೂ ಅದರ ಪಾಲು ಸಿಗಬೇಕು ಎಂಬ ಉದಾತ್ತ ಧ್ಯೇಯ ಎಲ್ಲ ಧರ್ಮಗಳ ಬೋಧನೆ ಆಗಿದೆ. ಆಸೆ, ಲೋಭ ,ದುರಾಸೆ, ಅಕ್ರಮ ಸಂಗ್ರಹ ಇವುಗಳನ್ನು ನಿಯಂತ್ರಿಸಿ ಗಳಿಸಿದ ಸಂಪತ್ತು ಸತ್ಕಾರ್ಯಗಳಿಗೆ ಸದುಪಯೋಗವಾಗಬೇಕೆಂಬ ಧ್ಯೇಯದಿಂದ ಇಸ್ಲಾಂನಲ್ಲಿ ಜಕಾತ್ ಎಂಬ ಕಡ್ಡಾಯ ದಾನವನ್ನು ಆಜ್ಞಾಪಿಸಲಾಗಿದೆ.
ಕುರಾನಿನ ೨೭ ಅಧ್ಯಾಯಗಳಲ್ಲಿ ಸುಮಾರು ೩೨ ಶ್ಲೋಕಗಳಲ್ಲಿ ಜಕಾತನ್ನು ಕೂಡಿರಿ' ಎಂದು ಆಜ್ಞಾಪಿಸಲಾಗಿದೆ. ಇದನ್ನು ನಾವು ಗಮನಿಸಿರುವುದು ವಿರಳ. ಕುರಾನಿನ ೯ನೇ ಅಧ್ಯಾಯದ ೬೦ನೆಯ ಶ್ಲೋಕವನ್ನು ನೋಡಿ. ಕುರಾನ್ ಹೇಳುತ್ತದೆಈ ಕಡ್ಡಾಯ ದಾನಗಳು ಬಡವರಿಗೆ, ದೀನರಿಗೆ ನೀಡಬೇಕಾಗಿದೆ. ಇದು ಅಲ್ಲಾಹನ ಆಜ್ಞೆ' ಎಂದು, ಅಂತೆಯೇ ಜಕಾತ್ ಪ್ರಾರ್ಥನೆ (ನಮಾಜ್)ಯ ಒಂದು ಭಾಗವಾಗಿದೆ. ಅಷ್ಟೇ ಅಲ್ಲ ಕುರಾನಿನ ಶ್ರೇಣಿಯಲ್ಲಿ ಪ್ರಾರ್ಥನೆ (ನಮಾಜ್) ನಂತರ ಕಡ್ಡಾಯ ದಾನ(ಜಕಾತ್)ಕ್ಕೆ ಸ್ಥಾನ ನೀಡಲಾಗಿದೆ. ಎಲ್ಲಾ ಮುಸ್ಲಿಮರು ತಮ್ಮ ಸಂಪತ್ತಿನ ಒಂದು ಭಾಗವನ್ನು ಜಕಾತ್ಗಾಗಿ ಕೊಡಬೇಕಾದದು ಅವರ ಕರ್ತವ್ಯವಾಗಿದೆ. ಕಠಿಣ ಶ್ರಮದಿಂದ ಸಂಪಾದಿಸಿದ ಸಂಪತ್ತನ್ನು ಯಾವ ಸ್ವಾರ್ಥ ಇಲ್ಲದೆ ಜಕಾತ್ ನೀಡುವವನೇ ನಿಜವಾದ ಮುಸ್ಲಿಂ. ಇದು ಆದಾಯ ಇದ್ದ ಪ್ರತಿಯೊಬ್ಬ ಮುಸ್ಲಿಮನ ಒಟ್ಟು ಉಳಿತಾಯವನ್ನು ಮತ್ತು ಸಂಪತ್ತಿನ ೨.೫% ಅಥವಾ ೧/೪೦ಮೊತ್ತವನ್ನು ಜಕಾತಿನಲ್ಲಿ ನೀಡಬೇಕು. ಸಂಪತ್ತಿನ ಲೆಕ್ಕಾಚಾರ ಮಾಡಿ ಅದನ್ನು ಯಾವುದೇ ಒಂದು ವರ್ಷದಲ್ಲಿ ಅದರ ಕೊನೆಗೆ ಪಾವತಿಸಬಹುದು. ರಂಜಾನ್ ತಿಂಗಳಲ್ಲಿ ಜಕಾತ್ ಕೊಡುವುದು ಅದೃಷ್ಟ ತರುತ್ತದೆ ಎಂಬ ಭಾವನೆ ಅನೇಕರಿಗೆ ಇದೆ.
ಅಲ್ಲಾಹನು ಕುರಾನಿನ ವಿವಿಧ ಅಧ್ಯಾಯಗಳಲ್ಲಿ ಹೇಳಿರುವುದನ್ನು ಪ್ರತಿಯೊಬ್ಬ ಮುಸ್ಲಿಮನು ಲಕ್ಷ್ಯ ಕೊಡಬೇಕು. ದುಷ್ಟ ಭಾವನೆಗಳಿಂದ ಮನಸ್ಸನ್ನು ಮುಕ್ತವಾಗಿರಿಸಿ ಕೇವಲ ನನ್ನ ಪ್ರೀತಿಗಾಗಿ ನಿಮ್ಮ ಸಂಪತ್ತಿನಿಂದ ಬಡವರಿಗೆ, ನಿರ್ಗತಿಕರಿಗೆ ಪಾಲು ನೀಡಿದರೆ ನಾನು ನಿಮಗೆ ಸಂಪತ್ತಿನ ಅಕ್ಷಯಪಾತ್ರೆ ನೀಡುತ್ತೇನೆ ಎಂದ.
ಜಕಾತ್ ಯಾರಿಗಾದರೂ, ಯಾವುದಾದರೊಂದು ಉದ್ದೇಶಕ್ಕಾಗಿ ಕೊಡುವ ವಿಧಾನವಲ್ಲ. ಅದು ದೇವರ ಆಜ್ಞೆಯಂತೆ ಸಮಾಜದ ಒಳಿತಿಗಾಗಿ, ಒಳ್ಳೆಯ ಕಾರ್ಯ ಗಳಿಗಾಗಿ ಮುಸ್ಲಿಮರು ಕೈಗೊಳ್ಳುವ ಕಾರ್ಯವಾಗಿದೆ. ಅದು ಅಲ್ಲಾಹನ ಆಜ್ಞೆ ಎಂಬುದರ ಅರಿವು ಆಗಬೇಕು. ಲಾಲಸೆ, ಸ್ವಾರ್ಥ, ಲೋಭ, ದುರಾಸೆ, ಪ್ರಪಂಚದ ವಿಲಾಸಿಭೋಗ, ಪ್ರಲೋಭಗಳಿಂದ ಜಕಾತ್ ನಮ್ಮನ್ನು ದೂರಗೊಳಿಸುತ್ತದೆ. ನಮ್ಮದೆಂದು ಹೇಳಿಕೊಳ್ಳುವ ಸಂಪತ್ತಿನಲ್ಲಿ ನಮ್ಮದಲ್ಲದ ಭಾಗವನ್ನು ಬಡವರಿಗೆ, ನಿರ್ಗತಿಕರಿಗೆ ನೀಡುವ ಮೂಲಕ ನಮ್ಮ ಸಂಪತ್ತನ್ನು ಶುದ್ಧೀಕರಿಸುತ್ತದೆ.
ಕಾನೂನು ಬಾಹಿರವಾಗಿ ಇಟ್ಟುಕೊಳ್ಳುವ ಸಂಪತ್ತು ಯಾವಾಗಲೂ ನಮ್ಮನ್ನು ವಿಪತ್ತಿಗೆ ಬಳಪಡಿಸುವುದು ಇಂದಿಗೂ ಸತ್ಯವಾದ ಮಾತು. ನಾವು ಗಳಿಸಿದ್ದು ಕಾನೂನಿನ ಚೌಕಟ್ಟಿನಲ್ಲಿಟ್ಟು ನಮಗೆ ನಮ್ಮ ಕುಟುಂಬಕ್ಕೆ ನೆಮ್ಮದಿಯ ಜೀವನ ನೀಡುತ್ತದೆ ಜಕಾತ್.