ಜಗದ ತಮವ ಕಳೆವ ಬೆಳಕು ಭಾರತ
ವಿಶ್ವಕ್ಕೆ ಜ್ಞಾನದ ಸಚ್ಚಿಂತನೆಯನ್ನು ಧಾರೆಯೆರೆದ ಆರ್ಯಾವರ್ತ, ಸಂತರ ಕರ್ಮಭೂಮಿ. ಮಾನವಕಲ್ಯಾಣದ ಮಹದಭಿಲಾಷೆಯೊಂದಿಗೆ ಗಿರಿಕಾನನಗಳಲ್ಲಿ ತಪೋನಿಷ್ಠರಾದ ಸಂನ್ಯಾಸಿಗಳ ಮಹೋನ್ನತ ಬದುಕು ಆ ಕಾಲಕ್ಕಷ್ಟೇ ಪ್ರೇರಣೆಯಾಗಿರದೆ ಯುಗಯುಗಗಳವರೆಗೂ ಅದು ಸ್ಫೂರ್ತಿಬುತ್ತಿ. ಧರ್ಮದ ಪ್ರತಿಪದವನ್ನೂ ಅರ್ಥೈಸಿ, ಆನಂದಿಸಿ, ಅನುಭವಿಸಿ, ಉಪದೇಶಿಸಿ ಜನಸಾಮಾನ್ಯರನ್ನು ಉದ್ಧರಿಸುತ್ತಿದ್ದ ಸಂತರ ಪರಂಪರೆಯೇ ಈ ಮಣ್ಣಿನ ಹೆಮ್ಮೆ. ವೇದಸುಧೆಯನ್ನು ಅರಿಯಲಾಗದ ಮೂಢನಿಗೂ ಮನಮುಟ್ಟುವಂತೆ ಜೀವನಕಲೆಯನ್ನು ವಿವರಿಸಿದ ಯೋಗಿಗಳೇ ಹಿಂದು ವಿಜಯವೈಭವದ ಸೂತ್ರಧಾರರು. ಆಕ್ರಮಣಪೂರ್ವ ಕಾಲದಲ್ಲಿ ಧರ್ಮದಂಡ ಹಿಡಿದು ಶಾಸ್ತ್ರೋಕ್ತ ಜೀವನದ ರೀತಿನೀತಿಗಳನ್ನು ಭಕ್ತಜನರಿಗೆ ತಿಳಿಹೇಳಿ ಮಾನವನೂ ಮಾಧವನಾಗುವ ಬಗೆಯನ್ನು ವಿವರಿಸಿದ ಸಾಧುಗಳು, ವಿದೇಶೀ ದಾಳಿಯ ತರುವಾಯ ಧರ್ಮರಕ್ಷಣೆ ಮತ್ತು ದೇಶದ ಗಡಿಯ ಉಳಿವಿಗಾಗಿ ಕ್ಷಾತ್ರತೇಜಸ್ವಿಗಳಾಗಿ ಸಾಮ್ರಾಜ್ಯಗಳಿಗೇ ದಿಗ್ದರ್ಶಕರಾಗಿ ಸಂಸ್ಕೃತಿ, ಆಚಾರಗಳ ಉಳಿವಿಗೆ ಕಟಿಬದ್ಧರಾದರು. ಗಣಿತದ ಲೆಕ್ಕಾಚಾರವನ್ನೇ ಮೀರಿದ ಅನಾದಿ' ಕಾಲದಿಂದ ಇಂದಿನವರೆಗೂ ಜಗತ್ತು ಎದುರಿಸುತ್ತಿರುವ ಅಜ್ಞಾನದ ಅಂಧಕಾರಕ್ಕೆ ಆಧ್ಯಾತ್ಮದ ಬೆಳಕಿತ್ತು ಪೊರೆಯುತ್ತಿರುವ ಭಾರತದ ಋಷಿಕುಲ ಅಪೂರ್ವ ಮತ್ತು ಅತ್ಯುತ್ಕ್ರಷ್ಟ. ಆ ಶ್ರೇಷ್ಠ ಪರಂಪರೆಯ ಕೊಂಡಿಗಳಾದ ಮಹರ್ಷಿ ಶುದ್ಧಾನಂದ ಭಾರತಿ ಮತ್ತು ಸ್ವಾಮಿ ಚಿನ್ಮಯಾನಂದ ಸರಸ್ವತಿ ಇಪ್ಪತ್ತನೆಯ ಶತಮಾನದಲ್ಲಿ ಭಾರತೀಯತೆಯನ್ನು ಜಗದಗಲ ಪಸರಿಸಿದ ಯತಿವರೇಣ್ಯರು.
ಭಾರತೀಯ ವೈಚಾರಿಕ ದೃಷ್ಟಿಯಿಂದ ಆಧ್ಯಾತ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ವೇದ, ಶಾಸ್ತ್ರ, ಪುರಾಣಗಳು ಸಾರಿದ ಸತ್ಯ, ಬೀರಿದ ಬೆಳಕಿಂದ ಮಾತ್ರವೇ ಮಾನವ ಜನಾಂಗದ ಏಳಿಗೆ ಸಾಧ್ಯ. ವಿಶ್ವಭ್ರಾತೃತ್ವದ ಕರೆಯಿಂದ ಮನುಕುಲದ ಕಣ್ತೆರೆಸಿದ ಸನಾತನ ಧರ್ಮದ ಆದರ್ಶಗಳ ಪಾಲನೆಯಿಂದ ಮಾತ್ರವೇ ಎಲ್ಲೆಲ್ಲೂ ಶಾಂತಿಯನ್ನೂ, ಸಮೃದ್ಧಿಯನ್ನೂ ಕಾಣಲು ಸಾಧ್ಯ. ಯೋಗಮಾರ್ಗದ ದಾರಿ ತುಸು ಕಠಿಣವೆನಿಸಿದರೂ ಜೀವನದ ಧನ್ಯತೆಗೆ ಅದಕ್ಕಿಂತ ಮಿಗಿಲಾದ ರಾಜಮಾರ್ಗ ಬೇರೊಂದಿಲ್ಲ' ಎಂಬ ಸರಳಸೂತ್ರದಿಂದ ದೇಶವಿದೇಶೀಯರ ಕಣ್ತೆರೆಸಿದ ಮಹರ್ಷಿ ಶುದ್ಧಾನಂದ ಭಾರತಿ, ಸಮಯೋಗ ಪ್ರವರ್ತಕಾಚಾರ್ಯರೆಂದೇ ಪ್ರಸಿದ್ಧರು. ತಮಿಳುನಾಡಿನ ಶಿವಗಂಗೆಯ ಸಂಪ್ರದಾಯಸ್ಥ, ಜ್ಞಾನಶ್ರೀಮಂತ ಕುಟುಂಬದ ಜಟಾಧರ ಅಯ್ಯರ್-ಕಾಮಾಕ್ಷಿ ಅಮ್ಮ ದಂಪತಿಗಳಿಗೆ ಜನಿಸಿದ ವೆಂಕಟಸುಬ್ರಹ್ಮಣ್ಯರು ಅತ್ಯಲ್ಪ ಪ್ರಾಯದಲ್ಲೇ ಆಧ್ಯಾತ್ಮದತ್ತ ಆಕರ್ಷಿತರಾದರು. ಅಜ್ಜನಿಂದ ಯೋಗ, ಮಂತ್ರಗಳನ್ನು ಕಲಿತ ಬಾಲಕ, ಚಿದಂಬರಂನ ದೇವಸ್ಥಾನದ ಪ್ರಾಂಗಣದಲ್ಲಿ ಕೇಳಿದ ಮಂತ್ರೋಚ್ಚಾರದಿಂದ ದಿವ್ಯಾನುಭೂತಿ ಹೊಂದಿ ವೈದಿಕ ಸಾಹಿತ್ಯದ ಅಧ್ಯಯನದತ್ತ ಚಿತ್ತವನ್ನು ಕೇಂದ್ರೀಕರಿಸಿದರು. ಅಕಾಲದಲ್ಲಿ ತಂದೆಯನ್ನು ಕಳೆದುಕೊಂಡು ಸೋದರಮಾವನ ಆಶ್ರಯದಲ್ಲಿ ಬೆಳೆದ ತರುಣನನ್ನು ವಕೀಲನನ್ನಾಗಿಸುವ ಕನಸು ಕುಟುಂಬಿಕರದಾದರೆ, ಧಾರ್ಮಿಕ ಕ್ಷೇತ್ರದಲ್ಲಿ ಮುಂದುವರಿಯುವುದು ವೆಂಕಟರ ಅಭಿಲಾಷೆ. ಆದಾಗ್ಯೂ, ಶಿಕ್ಷಣ ಮುಂದುವರಿಸಿ, ಅಲ್ಪಕಾಲ ಅಧ್ಯಾಪಕವೃತ್ತಿ ಕೈಗೊಂಡು ವಿದ್ಯಾರ್ಥಿಗಳ ಮಾನಸಿಕ ವಿಕಾಸಕ್ಕೆ ಆದ್ಯತೆಯಿತ್ತು ತಾವೂ ವಿವಿಧ ಮತ, ಪಂಥಗಳ ಬೋಧನೆಗಳ ಅಧ್ಯಯನದತ್ತ ಮುಖ ಮಾಡಿದರು. ಸಮರ್ಪಕ ಅಧ್ಯಯನವಿಲ್ಲದೆ ವ್ಯಕ್ತಿ ಅಥವಾ ವಿಚಾರಗಳನ್ನು ಅಲಕ್ಷಿಸಬಾರದೆಂಬ ನಿಲುವಿಗೆ ಬದ್ಧರಾಗಿ ವಿವಿಧ ಸಂಪ್ರದಾಯಗಳ ಆಚರಣೆಯ ಹಿಂದಿರುವ ನಂಬಿಕೆಗಳ ಹುಡುಕಾಟದತ್ತ ಮನಸ್ಸನ್ನು ನೆಟ್ಟರು.
ಸ್ವಾತಂತ್ರ‍್ಯ ಹೋರಾಟ ಮುಗಿಲು ಮುಟ್ಟಿದ್ದ ಪರ್ವಕಾಲದಲ್ಲಿ ರಾಷ್ಟ್ರೀಯ ನೇತಾರರನೇಕರ ಸಂಪರ್ಕ ಸಾಧಿಸಿ ಸಾಧನಾಮಾರ್ಗದ ವಿವರಣೆಯಿತ್ತ ವೆಂಕಟರು ಸುಬ್ರಹ್ಮಣ್ಯ ಭಾರತಿ, ವಿವಿಎಸ್ ಅಯ್ಯರ್, ಯೋಗಿ ಅರವಿಂದ, ಬಾಲಗಂಗಾಧರ ತಿಲಕ್, ರಮಣ ಮಹರ್ಷಿ, ಗಾಂಧೀಜಿಯೇ ಮೊದಲಾದ ನಾಯಕರ ಪಥವನ್ನು ಅನುಸರಿಸಿದರು. ಶಾಂತಿ ಅರಸಿ ಯೋಗಿ ಅರವಿಂದರ ಆಶ್ರಮ ಸೇರಿ ಎರಡು ದಶಕಗಳಿಗೂ ಅಧಿಕ ಕಾಲ ಮೌನವೃತದಲ್ಲಿದ್ದು, ಸಂನ್ಯಾಸಾಶ್ರಮ ಸ್ವೀಕರಿಸಿ ಶುದ್ಧಾನಂದ ಭಾರತಿಯಾಗಿ, ಸಮಯೋಗವೆಂಬ ವಿಶೇಷ ಪ್ರಕಾರವನ್ನು ರೂಪಿಸಿದರು. ಅನೇಕ ಯೋಗಕೇಂದ್ರ, ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ದೇಸೀ ಚಿಂತನೆಗಳ ವ್ಯಾಪಕ ಪ್ರಸಾರಕ್ಕೆ ಅಹರ್ನಿಶಿ ದುಡಿದ ಶುದ್ಧಾನಂದರು, ಹಿಂದೂ ಸಂಸ್ಕೃತಿಯ ಅತಿ ಪ್ರಾಚೀನ ತತ್ವಗಳಿಂದ ಜಗತ್ತಿನ ಸರ್ವವಿಧ ಕ್ಲೇಶಗಳನ್ನು ಪರಿಹರಿಸಬಹುದೆಂದು ಬೋಧಿಸಿದರು. ಇಂಗ್ಲಿಷ್, ತಮಿಳು, ತೆಲುಗು, ಸಂಸ್ಕೃತ, ಹಿಂದಿ, ಫ್ರೆಂಚ್, ಕನ್ನಡ, ಮಲಯಾಳಂ ಭಾಷೆಗಳ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿದ ಶುದ್ಧಾನಂದರು, ಇನ್ನೂರೈವತ್ತಕ್ಕೂ ಅಧಿಕ ಕೃತಿಗಳ ಕರ್ತೃ. ಮಹರ್ಷಿ, ಕವಿಯೋಗಿ ಭಾರತಿ ಮೊದಲಾದ ಬಿರುದುಗಳಿಂದ ಅಲಂಕೃತರಾಗಿ ಜೀವಮಾನದ ಅತ್ಯದ್ಭುತ ಸಾಧನೆ, ಭಾರತ ಶಕ್ತಿ ಮಹಾಕಾವ್ಯಮ್' ಇತ್ಯಾದಿ ಅನೇಕ ಹೊತ್ತಗೆಗೆಳನ್ನು ರಚಿಸಿದ ಅವರು ಪಶ್ಚಿಮದ ಜನರಿಗೆ ಭಾರತದ ಆಂತರ್ಯವನ್ನು ತಿಳಿಸಿದ ರಾಷ್ಟ್ರೀಯವಾದಿ ಮಹಾಮಹಿಮ ಶುದ್ಧಾನಂದ ಭಾರತಿ, ಜ್ಞಾನಕೇಂದ್ರಿತ ಭಾರತದ ಹೆಮ್ಮೆ.
ಭೌತಿಕ ಜಗತ್ತಿನ ಸರ್ವವಿಧ ಸೌಕರ್ಯಗಳನ್ನು ಪಡೆಯಲು ಜೀವನದ ಸುಮಧುರ ಕ್ಷಣಗಳನ್ನೂ, ಮಾನವೀಯ ಸಂಬಂಧಗಳನ್ನೂ, ಅತ್ಯುತ್ಕ್ರಷ್ಟ ಮಾನಸಸುಖವನ್ನೂ ಬಲಿಕೊಡುವ ನಮ್ಮ ಮನೋಸ್ಥಿತಿ ಅತ್ಯಂತ ವಿಚಿತ್ರ. ಲೋಕವ್ಯವಹಾರದ ಏಳಿಗೆಯನ್ನೇ ಸಾಧನೆಯೆಂದು ಗ್ರಹಿಸಿ, ಅದರತ್ತ ಓಡುವ ಆಸೆಗೆ ಕಡಿವಾಣ ಹಾಕದ ಹೊರತು ದೈವಸಾಕ್ಷಾತ್ಕಾರ ದುರ್ಲಭ. ಗುರುವಿನ ಹುಡುಕಾಟದಲ್ಲಿಯೇ ಜೀವನಪೂರ್ತಿ ಸಮಯ ವ್ಯರ್ಥಗೊಳಿಸಿ ಮೋಕ್ಷಕ್ಕಾಗಿ ಹಾತೊರೆಯುವ ಬದಲು ಅಂತರಂಗದ ಸತ್ ಶಕ್ತಿಯನ್ನು ಬಡಿದೆಚ್ಚರಿಸುವುದು ಒಳಿತು' ಎಂಬ ಸತ್ಪಥದ ಹಾದಿಯನ್ನು ಪರಿಚಯಿಸಿ ಮಾನವ ಜನಾಂಗದ ಉದ್ಧಾರಕ್ಕಿರುವ ಜ್ಞಾನಮಾರ್ಗವನ್ನು ಬೋಧಿಸಿದ ಸ್ವಾಮಿ ಚಿನ್ಮಯಾನಂದ ಸರಸ್ವತಿ, ಭಾರತೀಯ ವೇದಾಂತನಿಧಿ ಶ್ರೀಮದ್ಭಗವದ್ಗೀತೆಯ ಸಾರವನ್ನು ಜಗತ್ತಿಗೆ ಪರಿಚಯಿಸಿದ ಮಹಾಮಹಿಮ. ಕೇರಳದ ಎರ್ನಾಕುಲಂನ ವಿ.ಕೆ. ಕುಟ್ಟನ್ ಮೆನನ್ - ಪಾರುಕುಟ್ಟಿ ಅಮ್ಮಾ ದಂಪತಿಗಳಿಗೆ ಜನಿಸಿದ ಬಾಲಕೃಷ್ಣ ಮೆನನ್, ಬುದ್ಧಿವಂತ ಬಾಲಕ. ಲಕ್ನೋ ವಿಶ್ವವಿದ್ಯಾಲಯದಿಂದ ಕಾನೂನು ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ತರುಣ ಅದಾಗಲೇ ಸ್ವಾತಂತ್ರ‍್ಯ ಹೋರಾಟದಲ್ಲಿ ಮನಸ್ಸು ನೆಟ್ಟಿದ್ದ. ಚಲೇ ಜಾವ್ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ ತರುಣರನ್ನು ಸಂಘಟಿಸಿ ಕ್ರಾಂತಿಕಾರಿ ಸಾಹಿತ್ಯ ವಿತರಣೆ, ದೇಸೀ ವಸ್ತುಗಳ ಪ್ರೋತ್ಸಾಹ ಕಾರ್ಯದಲ್ಲಿ ತೊಡಗಿಸಿದ ಮೆನನ್ ಜೈಲುಶಿಕ್ಷೆಯನ್ನು ಪ್ರಸಾದವೆಂದೇ ಸ್ವೀಕರಿಸಿ ಬಿಡುಗಡೆಯ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗುಪ್ತ ಮಾತುಕತೆಯಲ್ಲಿ ತೊಡಗಿಸಿದರು. ಸೆರೆವಾಸ ಪೂರ್ಣಗೊಂಡ ತರುವಾಯ ಪತ್ರಿಕೆಯೊಂದರ ವರದಿಗಾರನಾಗಿ ವೃತ್ತಿಜೀವನ ಆರಂಭಿಸಿದ ಮೆನನ್, ಸಾಧುಸಂತರ ಜೀವನದ ಸತ್ಯಾಸತ್ಯತೆ, ಬದುಕಿನ ರೀತಿ, ಆಡುಮಾಡುಗಳ ಸಾಮ್ಯತೆಯನ್ನು ಅರಿಯುವ ದೃಷ್ಟಿಯಿಂದ ಹೃಷಿಕೇಶದ ಆನಂದ ಕುಟೀರಕ್ಕೆ ಭೇಟಿಯಿತ್ತರು.
ಸಂನ್ಯಾಸಿಗಳ ರೀತಿನೀತಿ ಕಂಡು ಆಧ್ಯಾತ್ಮಸುಖದತ್ತ ವಾಲಿದ ಮೆನನ್, ಸ್ವಾಮಿ ಶಿವಾನಂದರ ಅದ್ವಿತೀಯ ವಿದ್ವತ್ತು, ವೇದಶಾಸ್ತ್ರ ಪುರಾಣಗಳು ಮಾನವಜೀವನದ ಮೇಲೆ ಬೀರುವ ಸತ್ಪರಿಣಾಮಗಳ ಕುರಿತ ಮೌಲಿಕ ಸಂಶೋಧನೆಗಳಿಂದ ಪ್ರೇರಿತರಾಗಿ ಸಂನ್ಯಾಸದೀಕ್ಷೆ ಸ್ವೀಕರಿಸಿ ಸ್ವಾಮಿ ಚಿನ್ಮಯಾನಂದ ಸರಸ್ವತಿಯೆಂಬ ಹೊಸಹುಟ್ಟು ಪಡೆದರು. ಉತ್ತರಕಾಶಿಯ ತಪೋವನ ಮಹಾರಾಜರ ಬಳಿ ವೇದಾಧ್ಯಯನಗೈದು, ಭಗವದ್ಗೀತೆ ಹಾಗೂ ಉಪನಿಷತ್ತುಗಳ ಕುರಿತು ವೈಜ್ಞಾನಿಕ ಸಂಶೋಧನೆ ನಡೆಸಿ ಆಧ್ಯಾತ್ಮಿಕ ತಳಹದಿಯ ಮೇಲೆ ಜೀವನ ರೂಪಿಸಿದರೆ ಸೋಲಿಲ್ಲದ ಧನ್ಯ ಬದುಕು ಹೊಂದುವ ಬಗೆ ವಿವರಿಸಿದರು. ಅನೇಕಾನೇಕ ವಿದ್ವಾಂಸರು, ಯತಿಶ್ರೇಷ್ಠರ ಬಳಿ ಶಾಸ್ತçಮಂಥನ ನಡೆಸಿ ಅರಿವಿನ ಆಳವನ್ನು ವಿಸ್ತರಿಸಿದ ಸ್ವಾಮೀಜಿ, ಸಂಪಾದಿತ ಜ್ಞಾನದ ಪ್ರಸಾರಕ್ಕಾಗಿ ಕಟಿಬದ್ಧರಾಗಿ ಆರಂಭಿಸಿದ ಜ್ಞಾನಯಜ್ಞ ಉಪನ್ಯಾಸ ಮಾಲಿಕೆ ಭಾರತೀಯ ಆಚಾರ್ಯ ಪರಂಪರೆಗೆ ಅವರಿತ್ತ ಮಹೋನ್ನತ ಕೊಡುಗೆ. ಆಧ್ಯಾತ್ಮಸುಖ ಅನುಭವಿಸುವ ಹಕ್ಕು ಪ್ರತಿಯೊಬ್ಬನಿಗೂ ಇದೆ ಎಂದೇ ಪ್ರತಿಪಾದಿಸಿ ಸಾಂಸ್ಕೃತಿಕ ಭಾರತದ ವಿರಾಟ್ ಸ್ವರೂಪವನ್ನು ವಿಶ್ವಕ್ಕೆ ಪರಿಚಯಿಸಿದರು. ವೇದ ಎಲ್ಲರಿಗಾಗಿ ಎಂಬ ಧ್ಯೇಯದೊಂದಿಗೆ ಅಮೆರಿಕಾ, ಇಂಗ್ಲೆಂಡ್, ಬೆಲ್ಜಿಯಂ, ಫ್ರಾನ್ಸ್, ಸ್ವಿಜರ್ಲ್ಯಾಂಡ್, ಇಟಲಿ, ಜರ್ಮನಿ ಪ್ರವಾಸಗೈದು ಭಾರತವನ್ನು ಕೇಂದ್ರವಾಗಿಸಿ ವಿದೇಶಗಳೂ ಸೇರಿದಂತೆ ಮುನ್ನೂರಕ್ಕೂ ಅಧಿಕ ಆಧ್ಯಾತ್ಮ ಕೇಂದ್ರಗಳ ಸ್ಥಾಪನೆಗೆ ಕಾರಣೀಭೂತರಾದರು. ಚಿನ್ಮಯ ಮಿಶನ್ ಮೂಲಕ ವಿದ್ಯೆ, ಆರೋಗ್ಯ, ಜನಸೇವಾ ಕ್ಷೇತ್ರಗಳಲ್ಲಿ ತೊಡಗಿಸಿ ಲಕ್ಷಾಂತರ ಮಂದಿಯ ಬದುಕು ಬದಲಿಸಿದ ಕೀರ್ತಿ ಪಡೆದ ಸ್ವಾಮೀಜಿ, ಅನೇಕ ವಿವಿಗಳಲ್ಲಿ ಭಾರತೀಯ ತತ್ವಶಾಸ್ತç ವಿಷಯದ ಆಹ್ವಾನಿತ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು. ಸ್ವಾತಂತ್ರ‍್ಯಾನಂತರ ಹಿಂದುಸಮಾಜವು ಸಶಕ್ತವಾದರೆ ಮಾತ್ರವೇ ದೇಶ ಉಳಿಯಬಹುದೆಂಬ ದೂರದೃಷ್ಟಿಯಿಂದ ಸ್ಥಾಪನೆಗೊಂಡ ವಿಶ್ವಹಿಂದೂ ಪರಿಷತ್ತಿನ ಮಾರ್ಗದರ್ಶಕರಾಗಿ, ಉತ್ತಮ ಲೇಖಕರಾಗಿ ಜನಮನ್ನಣೆ ಗಳಿಸಿದ ಸ್ವಾಮಿ ಚಿನ್ಮಯಾನಂದರು, ಗೀತೆಯ ಬೆಳಕಲ್ಲಿ ಭವ್ಯಭಾರತನಿರ್ಮಿತಿಯ ಕನಸು ಬಿತ್ತಿದ ರಾಷ್ಟ್ರಸಂತ.
ಭರತವರ್ಷದ ಆಧ್ಯಾತ್ಮಗಂಗೋದಕವನ್ನು ಜ್ಞಾನಾಕಾಂಕ್ಷಿಗಳಿಗಿತ್ತು ಮನುಕುಲದ ಧನ್ಯಬದುಕಿಗೆ ದಾರಿದೀಪಗಳಂತಿರುವ ಉಭಯಯತಿಗಳ ಜಯಂತಿಯು ನಮ್ಮೆಲ್ಲರ ಅಜ್ಞಾನವನ್ನು ದೂರೀಕರಿಸಿ, ಅಹಂಕಾರದ ತಮವನ್ನು ಕಳೆದು, ಸತ್ಪಥದತ್ತ ಹೆಜ್ಜೆ ಹಾಕಲು ಪ್ರೇರಣೆಯಾಗಲಿ.