For the best experience, open
https://m.samyuktakarnataka.in
on your mobile browser.

ಜನಪದ ವಿದ್ವಾಂಸ ಎಂ.ಜಿ. ಈಶ್ವರಪ್ಪ ಇನ್ನಿಲ್ಲ

06:32 PM Jun 01, 2024 IST | Samyukta Karnataka
ಜನಪದ ವಿದ್ವಾಂಸ ಎಂ ಜಿ  ಈಶ್ವರಪ್ಪ ಇನ್ನಿಲ್ಲ

ದಾವಣಗೆರೆ: ಜನಪದ ವಿದ್ವಾಂಸ, ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕರು ಹಾಗೂ ನಿವೃತ್ತ ಪ್ರಾಂಶುಪಾಲ ಎಂ.ಜಿ. ಈಶ್ವರಪ್ಪ ಅವರು ಶನಿವಾರ ಶ್ವಾಸಕೋಶ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಕಳೆದ ಒಂದು ವಾರದಿಂದ ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಈಶ್ವರಪ್ಪ ಅವರು ಶನಿವಾರ ಸಂಜೆ ಇಹಲೋಕ ತ್ಯಜಿಸಿದ್ದು, ಅಪಾರ ಗಣ್ಯರು, ಜನಪ್ರತಿನಿಧಿಗಳು ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿಯವರಾದ ಎಂ.ಜಿ. ಈಶ್ವರಪ್ಪ ಅವರು ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು. ರಂಗಭೂಮಿಯ ನಂಟು ಹೊಂದಿದ್ದ ಈಶ್ವರಪ್ಪ ಚಂಪಾ ಅವರ 'ಕೊಡೆಗಳು' ನಾಟಕದಲ್ಲಿ ಅಭಿನಯಿಸಿದ್ದರು. ಅಚ್ಚುಕಟ್ಟು ಕನ್ನಡ ಬಳಕೆ, ಅಪಾರ ಜ್ಞಾನದಿಂದಲೇ ದಾವಣಗೆರೆ ಜನತೆಯ ಮನಗೆದ್ದಿದ್ದರು. ವೈಚಾರಿಕ ಪ್ರಜ್ಞೆವುಳ್ಳವರಾಗಿದ್ದ ಈಶ್ವರಪ್ಪ ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ, ಸಾಣೆಹಳ್ಳಿಯ ಶಿವಸಂಚಾರ ಕಲಾತಂಡಗಳಿಂದ ಸಹಕಾರದೊಂದಿಗೆ ನಾಟಕಗಳನ್ನು ಪ್ರದರ್ಶಿಸಿದ್ದರು.

ಈಶ್ವರಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳು ಅರಸಿ ಬಂದಿದ್ದವು. ಪತ್ನಿ ಬಸಮ್ಮ, ಓರ್ವ ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅವರು ಅಗಲಿದ್ದಾರೆ.