For the best experience, open
https://m.samyuktakarnataka.in
on your mobile browser.

ಜನಸೇವೆಗಿಂತಲೂ ಮಿಗಿಲಾದ ಪಟ್ಟ ಬೇರಾವುದು

03:34 AM Aug 01, 2024 IST | Samyukta Karnataka
ಜನಸೇವೆಗಿಂತಲೂ ಮಿಗಿಲಾದ ಪಟ್ಟ ಬೇರಾವುದು

ಸ್ವಾತಂತ್ರ‍್ಯ ಹೋರಾಟದ ಅಂತಿಮ ಘಟ್ಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕಾಂಗ್ರೆಸ್‌ನ ಮಹಾನಾಯಕರ ಯಾದಿಯನ್ನು ನೆನಪಿಸುವುದೇ ರೋಚಕ. ರಾಷ್ಟ್ರ ಸಂರಕ್ಷಣೆಯ ಪರಮಧ್ಯೇಯದ ಸಾಧನೆಗಾಗಿ ಸರ್ವಸ್ವವನ್ನೂ ಧಾರೆಯೆರೆದು ಸ್ವತಂತ್ರ ಭಾರತದ ರಚನೆಯೊಂದನ್ನೇ ಮೋಕ್ಷಮಾರ್ಗವೆಂದು ಭಾವಿಸಿದ ದಧೀಚಿ ಪರಂಪರೆಯ ಕೊಂಡಿಗಳು ಹಲವರು. ತ್ಯಾಗ, ಸಮರ್ಪಣೆ, ಬಲಿದಾನ, ಉತ್ಸಾಹಗಳೇ ಮೊದಲಾದ ಸರ್ವಶ್ರೇಷ್ಠ ಆದರ್ಶಗಳ ಮೂರ್ತರೂಪದಂತಿದ್ದ ಹಿರಿಯರ ಬದುಕು ಗಂಗೆಯಷ್ಟೇ ನಿರ್ಮಲ. ಮನೆ, ಪರಿವಾರದ ಸ್ವಾರ್ಥಕ್ಕೆ ಕಟ್ಟುಬೀಳದೆ, ಅಧಿಕಾರದ ಅಮಲಿಗೆ ಕಿಂಚಿತ್ತೂ ಆಸ್ಪದವೀಯದೆ ಸ್ವಂತದ್ದನ್ನೂ ಸಮಾಜಹಿತಕ್ಕಾಗಿಯೇ ವಿನಿಯೋಗಿಸಿದ ಮಹಾನುಭಾವರ ಕಥೆ ಇಂದಿನ ದಿನಕ್ಕೆ ಅಚ್ಚರಿಯ ಸಂಗತಿ. ರಾಜಕೀಯವನ್ನು ಹಿಂದುಸ್ಥಾನದ ಔನ್ನತ್ಯದ ಪ್ರಥಮ ಸೋಪಾನವೆಂದು ಭಾವಿಸಿ ಮುಂದಡಿಯಿಟ್ಟ ಪುಣ್ಯಾತ್ಮರಲ್ಲಿ ಫೀರೋಜ್ ಶಾ ಮೆಹ್ತಾ ಮತ್ತು ಪುರುಷೋತ್ತಮ ದಾಸ್ ಟಂಡನ್ ಪ್ರಮುಖರು.
'ಭಾರತವನ್ನು ಭಾರತೀಯರು ಆಳಬೇಕೇ ಹೊರತು ವಿದೇಶೀ ಶಕ್ತಿಗಳಲ್ಲ. ಹಿಂದುಸ್ಥಾನದ ಪ್ರತಿ ವಸ್ತುವಿನ ಮೇಲೆ ಅಧಿಕಾರವಿರುವುದು ಇಲ್ಲಿನ ಜನಸಾಮಾನ್ಯರಿಗೇ ಹೊರತು ಆಕ್ರಮಣಕಾರರಿಗಲ್ಲ. ಇಂಗ್ಲೆಂಡನ್ನು ಜರ್ಮನರೋ, ಅಮೇರಿಕನ್ನರೋ ಆಳುವುದನ್ನು ಸಹಿಸುವುದು ಇಂಗ್ಲೀಷರಿಗೆ ಎಷ್ಟು ಕಷ್ಟವೋ ಹಾಗೆಯೇ ನಮ್ಮ ದೇಶವನ್ನು ಪರಕೀಯರ ಕೈಗೊಪ್ಪಿಸುವುದು ನಮಗೂ ಅಸಹನೀಯ. ಜಗತ್ತನ್ನೇ ಆಳಬಲ್ಲ ಸಾಮರ್ಥ್ಯ, ವಿದ್ಯೆಯ ಮೂಲಕ ವಿಶ್ವದ ಅಸಂಭವಗಳೆಲ್ಲವನ್ನೂ ಸಾಧಿಸಬಲ್ಲ ಅವಕಾಶವಿರುವ ತರುಣರ ನಾಡಿಗೆ ಪರಕೀಯರ ದಾಸ್ಯದ ಕರಿನೆರಳು ಬೇಕಿಲ್ಲ' ಎಂಬ ವಿಶ್ವಸನೀಯ ಮಾತಿನಿಂದ ಯುವಜನಾಂಗಕ್ಕೆ ಸ್ಫೂರ್ತಿಚೈತನ್ಯರಾದ ಫಿರೋಜ್ ಶಾ ಮೆಹ್ತಾ, ಕಾಂಗ್ರೆಸ್ ಸಂಸ್ಥಾಪಕ ಸದಸ್ಯರಲ್ಲೋರ್ವರು. ಶ್ರೀಮಂತ ಔದ್ಯಮಿಕ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಮೆಹ್ತಾ, ತಂದೆಯ ಉದ್ಯಮದಲ್ಲಿ ಆಸಕ್ತಿ ತೋರಿದರೂ ಗಮನವಿದ್ದುದು ಮಾತ್ರ ಉನ್ನತ ಶಿಕ್ಷಣದತ್ತ. ಎಲ್ಫಿನ್ಸ್ಟನ್ ಕಾಲೇಜಿನಲ್ಲಿ ಪದವಿ ಪೂರೈಸಿ ಮುಂಬೈ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಶಿಕ್ಷಣ ಮುಗಿಸಿದ ಮೆಹ್ತಾ, ವಿದ್ಯಾರ್ಥಿವೇತನ ಸಹಿತ ವಿದೇಶೀ ಅಧ್ಯಯನದ ಅವಕಾಶವನ್ನು ಕೈಚೆಲ್ಲಿದರು. ಆದರೆ ಪುನರಪಿ ಲಭಿಸಿದ ಪ್ರೇರಣೆಯಿಂದ ಇಂಗ್ಲೆಂಡಿಗೆ ತೆರಳಿ ಕಾನೂನು ಪದವಿ ಸಂಪಾದಿಸಿದರು. ಉಮೇಶಚಂದ್ರ ಬ್ಯಾನರ್ಜಿ ಸಹಿತ ಅನೇಕರ ಗೆಳೆತನದಿಂದ ಸ್ವಾತಂತ್ರ‍್ಯ ಹೋರಾಟ, ಸ್ವದೇಶೀ ಆಡಳಿತ, ರಾಷ್ಟ್ರೀಯ ಶಿಕ್ಷಣದ ವಿಚಾರಗಳಲ್ಲಿ ಆಸಕ್ತರಾದರು. ಭಾರತಕ್ಕೆ ಮರಳಿದ ಬಳಿಕ ವಕೀಲಿಕೆಯನ್ನು ಆರಂಭಿಸಿ ತಮ್ಮ ಅಪೂರ್ವ ವಾದವೈಖರಿ ಹಾಗೂ ವಿದ್ವತ್ತಿನಿಂದ ಅಲ್ಪಕಾಲದಲ್ಲೇ ಯಶಸ್ವಿ ನ್ಯಾಯವಾದಿಯೆಂಬ ಗೌರವಕ್ಕೂ ಪಾತ್ರರಾದರು. ವಾದ, ಕಾನೂನು ಪಾಂಡಿತ್ಯದಲ್ಲಿ ತಮ್ಮನ್ನು ಮೀರಿಸಿದವರು ಇನ್ನೊಬ್ಬರಿಲ್ಲವೆಂದು ಮೆರೆದಾಡುತ್ತಿದ್ದ ಇಂಗ್ಲೀಷರ ಸೊಕ್ಕು ಮುರಿಯುವಂತೆ ಬೆಳೆದ ಮೆಹ್ತಾ, ಬ್ರಿಟಿಷರ ಕೆಂಗಣ್ಣಿಗೂ ಗುರಿಯಾದರು. ತಮ್ಮದೇ ಆದ ಕುಟಿಲ ಕಾನೂನುಗಳನ್ನು ರೂಪಿಸಿ ಭಾರತೀಯರನ್ನು ಶೋಷಿಸುತ್ತಿದ್ದ ಆಂಗ್ಲರಿಗೆ ಅವರದೇ ಭಾಷೆಯಲ್ಲಿ ಉತ್ತರಿಸಿದ ಶಾ, ಜನಪ್ರಿಯರಷ್ಟೇ ಆಗಿ ಉಳಿಯದೆ ಜನಾನುರಾಗಿ ಪ್ರಖರ ದೇಶಭಕ್ತರಾಗಿ ರೂಪುಗೊಂಡರು.
ಕಾಂಗ್ರೆಸ್‌ನ ಆರಂಭಿಕ ದಿನಗಳಿಂದಲೂ ಜೊತೆಗಿದ್ದ ಮೆಹ್ತಾ, ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. ಭಾರತದ ರಾಜಕೀಯ ಸ್ಥಿತಿಗತಿಗಳನ್ನು ಅವಲೋಕಿಸಿ ತಮ್ಮ ವಕೀಲಿ ವೃತ್ತಿಯನ್ನು ಕೈಬಿಟ್ಟು ಸಾಮಾಜಿಕ ಚಳವಳಿ, ಸ್ವಾತಂತ್ರ‍್ಯ ಹೋರಾಟಕ್ಕೆ ಧುಮುಕಿದರು. ರಾಜಕೀಯ ಕ್ಷೇತ್ರವನ್ನು ಆಯ್ದು ಮುಂಬೈ ಪ್ರೆಸಿಡೆನ್ಸಿ ಅಸೋಸಿಯೇಶನ್ ಅಧ್ಯಕ್ಷರಾಗಿ ಆಯ್ಕೆಯಾದ ಮೆಹ್ತಾ, ಅನೇಕ ತರುಣರಿಗೆ ವಿದೇಶಕ್ಕೆ ತೆರಳಲು ನೆರವಾದರಲ್ಲದೆ ಅಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವ ಯುವಕರಿಗೆ ಆರ್ಥಿಕ ನೆರವು, ವಿದ್ಯಾರ್ಥಿವೇತನ, ವಸತಿ ವ್ಯವಸ್ಥೆಗೂ ಸಹಾಯಹಸ್ತ ಚಾಚಿದರು. ಮುಂಬೈ ಆಡಳಿತದ ಅವ್ಯವಸ್ಥೆ, ಬ್ರಿಟಿಷ್ ಹಸ್ತಕ್ಷೇಪದಿಂದ ಸೊರಗಿದ ದೈನಂದಿನ ಕೆಲಸಕಾರ್ಯಗಳಿಗೆ ಚಾಲನೆಯಿತ್ತು ರಾಷ್ಟ್ರಕ್ಕೇ ಮಾದರಿಯಾದ ಪಾಲಿಕೆಯನ್ನಾಗಿ ಪರಿವರ್ತಿಸಿ ಅರ್ಹವಾಗಿಯೇ 'ಮುಂಬೈ ಪಾಲಿಕೆಯ ಜನಕ' ಎಂಬ ಗೌರವಕ್ಕೆ ಪಾತ್ರರಾದರು. ಇಂದು ಕಾಣುತ್ತಿರುವ ಮಾಯಾನಗರಿ ಬಿರುದಾಂಕಿತ ಮುಂಬೈ ನಗರವನ್ನು ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಯ ಕೇಂದ್ರವನ್ನಾಗಿ ಬದಲಾಯಿಸಿದ ಅವರ ದೂರದೃಷ್ಟಿ ಅತುಲ್ಯ. ಪಾಲಿಕೆಯ ಆಯುಕ್ತರಾಗಿ ಹಾಗೂ ನಾಲ್ಕು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಮೆಹ್ತಾ, ತಮ್ಮ ಶುದ್ಧಹಸ್ತ ಆಡಳಿತ ರೀತಿನೀತಿಗಳಿಂದ ಜನಮನ್ನಣೆ ಗಳಿಸಿದರು. ಶಿಕ್ಷಣ, ಸಮರ್ಪಕ ಕುಡಿಯುವ ನೀರಿನ ಪೂರೈಕೆ, ಆರೋಗ್ಯಸಂಬಂಧಿ ಜನಜಾಗೃತಿಯೇ ಮೊದಲಾಗಿ ಹಲವು ಆಯಾಮಗಳಲ್ಲಿ ಕಾರ್ಯನಿರ್ವಹಿಸಿದರು. ಮುಂಬೈಯನ್ನು ಕೇಂದ್ರೀಕರಿಸಿ ರಾಷ್ಟ್ರೀಯವಾದಿ ಪತ್ರಿಕೆಯನ್ನೂ ಆರಂಭಿಸಿದ ಮೆಹ್ತಾ, ಯುವಕರಿಗೆ ಸದಾ ಸ್ಫೂರ್ತಿಯ ಸೆಲೆಯಾಗಿ ಸದಾ ಸ್ವರಾಜ್ಯದ ಚಿಂತನೆಯನ್ನೇ ಧಾರೆಯೆರೆದರು. ಮುಂಬೈಯ ಅನಭಿಷಿಕ್ತ ದೊರೆಯೆಂಬ ಪ್ರಸಿದ್ಧಿ ಗಳಿಸಿದ ಫಿರೋಜ್ ಶಾ ಮೆಹ್ತಾರ ಧನ್ಯ ಬಾಳು ದೇಶಕ್ಕೆ ಸ್ಫೂರ್ತಿ.
`ಅಧಿಕಾರದ ಆಸೆ, ಪಟ್ಟದ ವ್ಯಾಮೋಹ, ತನ್ನ ದೃಷ್ಟಿಯ ದೂರಕ್ಕೆ ಆಡಳಿತ ನಡೆಯಬೇಕೆಂಬ ಹಪಾಹಪಿತನಕ್ಕೆ ದೇಶವನ್ನು ವಿಭಜಿಸುವುದು ಸರ್ವಥಾ ಸೂಕ್ತ ನಿರ್ಧಾರವಲ್ಲ. ಬ್ರಿಟಿಷ್, ಮುಸ್ಲಿಂ ಲೀಗ್ ಬೇಡಿಕೆಗಳಿಗೆ ಒಪ್ಪಿ ಸ್ವಾಭಿಮಾನವನ್ನು ಒತ್ತೆಯಿಟ್ಟು ಲಕ್ಷಾಂತರ ಬಲಿದಾನಿಗಳ ತ್ಯಾಗವನ್ನು ನಿರ್ಲಕ್ಷಿಸುವ ನಿರ್ಧಾರ ಆತ್ಮಹತ್ಯೆಗಿಂತಲೂ ಘೋರ' ಎಂಬ ನೇರನುಡಿಯಿಂದ ದೇಶವಾಸಿಗಳನ್ನು ಬಡಿದೆಚ್ಚರಿಸಿದ ಸ್ವಾತಂತ್ರ‍್ಯ ಹೋರಾಟಗಾರ ರಾಜರ್ಷಿ ಪುರುಷೋತ್ತಮ ದಾಸ್ ಟಂಡನ್, ಹಿಂದೂ ರಾಷ್ಟ್ರೀಯವಾದದ ಅಗತ್ಯತೆಯನ್ನು ಪ್ರತಿಪಾದಿಸಿದ ರಾಷ್ಟ್ರಪ್ರೇಮಿ. ಉತ್ತರಪ್ರದೇಶದ ಪ್ರಯಾಗದಲ್ಲಿ ಜನಿಸಿದ ಟಂಡನ್ ಕಾನೂನು ಶಿಕ್ಷಣದ ಬಳಿಕ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದು ವಕೀಲಿ ವೃತ್ತಿಜೀವನ ಆರಂಭಿಸಿದರು. ಸ್ವಲ್ಪಕಾಲ ಹಿಂದಿ ಪ್ರಾಧ್ಯಾಪಕರಾಗಿಯೂ ಕರ್ತವ್ಯ ನಿರ್ವಹಿಸಿ ಗಾಂಧೀಜಿ ಕರೆಗೆ ಓಗೊಟ್ಟು ಅಸಹಕಾರ ಚಳವಳಿಯ ಮೂಲಕ ಸಾರ್ವಜನಿಕ ಜೀವನ ಆರಂಭಿಸಿದರು. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಸತ್ಯಶೋಧನಾ ಸಮಿತಿಯ ಸದಸ್ಯರಾಗಿ ಬ್ರಿಟಿಷ್ ದೌರ್ಜನ್ಯವನ್ನು ದೇಶವಾಸಿಗಳೆದುರು ತೆರೆದಿಟ್ಟ ಟಂಡನ್, ರೈತ ಚಳವಳಿಯಲ್ಲಿ ತೊಡಗಿ ಬಿಹಾರ ಪ್ರಾಂತೀಯ ಕಿಸಾನ್ ಸಭಾದ ಅಧ್ಯಕ್ಷರಾಗಿ ಗುರುತರ ಸೇವೆ ಸಲ್ಲಿಸಿದರು. ಬ್ರಿಟಿಷ್ ಸರಕಾರದ ಅನ್ಯಾಯಗಳನ್ನು ಕಣ್ಣಾರೆ ಕಂಡ ಟಂಡನ್, ಅತ್ಯುಗ್ರ ರಾಷ್ಟ್ರೀಯವಾದಿಯಾಗಿ ಹೊರಹೊಮ್ಮಿದರಲ್ಲದೆ ಮಾನವೀಯತೆಯನ್ನೇ ಮರೆತ ಕುರುಡು ಸರಕಾರದ ಹುಚ್ಚುನೀತಿಗಳನ್ನು, ರಾಕ್ಷಸೀ ಗುಣಗಳನ್ನು ಬಹಿರಂಗವಾಗಿಯೇ ಖಂಡಿಸಿದರು. ಲೋಕಸೇವಕ ಮಂಡಳಿಯ ಮುಖ್ಯಸ್ಥರಾಗಿ ಸ್ವದೇಶೀ ಹೋರಾಟ, ದೇಸೀ ಆರ್ಥಿಕತೆಯ ಅನೇಕ ಕಾರ್ಯಗಳಲ್ಲಿ ವ್ಯಸ್ತರಾಗಿ ಯುವಜನರ ದೊಡ್ಡ ಸಮೂಹ ನಿರ್ಮಿಸಿ ಉತ್ತರ ಪ್ರದೇಶ ಗಾಂಧಿಯೆಂದೇ ಪ್ರಖ್ಯಾತರಾದರು. ಸೇವಾ ಚಟುವಟಿಕೆ, ಬ್ರಿಟಿಷ್ ಸರಕಾರದ ವಿರುದ್ಧ ಸಿಡಿದೇಳುವ ಮನೋಭಾವವನ್ನು ತರುಣರಲ್ಲಿ ಮೂಡಿಸಿ ದಾಸ್ಯಮುಕ್ತ ಭಾರತದ ಕನಸಿಗೆ ಆಸರೆಯಾದ ಟಂಡನ್ ಚಿಂತನೆಗಳು ಆಗಸದಷ್ಟೇ ವಿಶಾಲ.
ಕರ ನಿರಾಕರಣೆ, ಉಪ್ಪಿನ ಸತ್ಯಾಗ್ರಹ, ಜನ ಅಸಹಕಾರ ಆಂದೋಲನವೇ ಮೊದಲಾಗಿ ಸಂಗ್ರಾಮದ ಅನೇಕ ಪ್ರಮುಖ ಹೆಜ್ಜೆಗಳಲ್ಲಿ ಜೊತೆಯಾದ ಟಂಡನ್ ಹಲವು ವರ್ಷಗಳ ಜೈಲುಶಿಕ್ಷೆಗೂ ಗುರಿಯಾದರು. ಭಾರತ ವಿಭಜನೆಯಿಂದ ದೇಶಕ್ಕೂ, ಕೋಟ್ಯಂತರ ಹಿಂದುಗಳಿಗೂ, ಅಸಂಖ್ಯ ಕಾರ್ಯಕರ್ತರ ಭಾವನೆಗಳಿಗೂ ಆಗುವ ನಷ್ಟವನ್ನು ಲೆಕ್ಕಿಸದೆ ಕೆಲವೇ ಜನರ ಸ್ವಾರ್ಥಕ್ಕಾಗಿ ಘೋರ ದುರಂತಕ್ಕೆ ಒಪ್ಪಿಗೆ ಸೂಚಿಸಿದ ತಮ್ಮದೇ ಪಕ್ಷದ ನಾಯಕತ್ವವನ್ನು ಕಟುವಾಗಿಯೇ ವಿರೋಧಿಸಿದರು. ಸ್ವಾತಂತ್ರ‍್ಯಾನಂತರದ ಸರಕಾರಿ ಪ್ರಾಯೋಜಿತ ಹಿಂದುದಮನ ಕಾರ್ಯವನ್ನು ನೇರಾನೇರ ಪ್ರಶ್ನಿಸಿದ ಪುರುಷೋತ್ತಮರು ಮತಾಂತರದ ವಿರುದ್ಧ ಕಠಿಣ ಕಾನೂನು ರೂಪಿಸಲು ಸಂವಿಧಾನ ಸಭೆಯಲ್ಲಿ ಪ್ರಸ್ತಾಪ ಮಂಡಿಸಿದರು. ಪಾಕ್ ಹಿಂದುಗಳ ನೋವಿಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸಿದ ನೆಹರೂವನ್ನು ತರಾಟೆಗೆ ತೆಗೆದ ಕಾರಣ ಯಾವುದೇ ತಪ್ಪಿಲ್ಲದಿದ್ದರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಅನಿವಾರ್ಯತೆಗೆ ಸಿಲುಕಿದ ಅವರು ಗುಲಾಮಿ ಮಾನಸಿಕತೆಯನ್ನು ವಿರೋಧಿಸಿದ ಅಂಗುಲಿಗಣನೀಯ ನಾಯಕರಲ್ಲೋರ್ವರು. ಉರ್ದುಮಿಶ್ರಿತ ಹಿಂದಿಯ ಹೇರಿಕೆಗೆ ಸಹಕರಿಸದೆ, ದೇವನಾಗರಿ ಲಿಪಿಯ ಶುದ್ಧಹಿಂದಿಯೇ ರಾಷ್ಟ್ರಭಾಷೆಯಾಗಬೇಕೆಂದು ಆಗ್ರಹಿಸಿ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವ ಜವಾಬ್ದಾರಿ ಯುವಜನರದೆಂದು ಸೂಕ್ಷ್ಮವಾಗಿ ಎಚ್ಚರಿಸಿದ ರಾಜರ್ಷಿ, ಭಾರತೀಯತೆಯನ್ನು ಉಳಿಸಿ ಬೆಳೆಸಬೇಕಾದವರೇ ಅದರ ನಾಶಕ್ಕೆ ಪ್ರಯತ್ನಿಸುವ ಬಗ್ಗೆ ನೊಂದರು. ಅಹಿಂಸೆ ಹಾಗೂ ಸರಳತೆಯ ಕಟ್ಟಾ ಅಭಿಮಾನಿಯಾಗಿದ್ದ ಟಂಡನ್, ಖಾದಿಧಾರಿ ಸಂತನಂತೆಯೇ ಬಾಳಿದರು. ಪ್ರಾಣಿಗಳ ಚರ್ಮದಿಂದ ತಯಾರಿಸುವ ಯಾವ ವಸ್ತುವನ್ನೂ ಉಪಯೋಗಿಸದ ಭಾರತರತ್ನ ಮಹಾತ್ಮಾ ಪುರುಷೋತ್ತಮದಾಸ್ ಟಂಡನ್, ಸರಕಾರದಿಂದ ತಮಗೆ ದೊರೆಯುವ ಯಾವ ಸೌಲಭ್ಯವನ್ನೂ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸದೆ ಸೇವಾಸಂಸ್ಥೆಗಳಿಗೆ ದಾನಗೈದ ಪರಿ ಮತ್ತು ತುಂಬು ಬದುಕಿನ ಮೌಲ್ಯಾದರ್ಶಗಳು ಸದಾ ಮಾರ್ಗದರ್ಶಿ.
ಅಧಿಕಾರ ಪ್ರಾಪ್ತವಾಗುವುದಾದರೆ ದೇಶವನ್ನು ಒಡೆದು, ಸಂಸ್ಕೃತಿಯನ್ನು ಛಿದ್ರಗೊಳಿಸಲು ಹಿಂದೆಮುಂದೆ ನೋಡದ ನಾಯಕರು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿರುವ ಅಪಾಯಕಾರಿ ಸಮಯದಲ್ಲಿ ದೇಶಹಿತವನ್ನೇ ಬಯಸಿದ ಮಹನೀಯರ ಜೀವನದರ್ಶನ ಅತ್ಯಗತ್ಯ. ಸಾಂವಿಧಾನಿಕ ಹುದ್ದೆಗಳನ್ನೇರಿ ಮೆರೆದಾಡಲು ದೇಶವಿರೋಧಿಗಳೊಡನೆಯೂ ಕೈಜೋಡಿಸಲು ಹಿಂಜರಿಯದ ನಾಯಕರ ಆತಂಕಕಾರಿ ಮಾನಸಿಕತೆ ದೂರಾಗಿ ಫಿರೋಜ್ ಶಾ ಮೆಹ್ತಾ ಮತ್ತು ಪುರುಷೋತ್ತಮ ದಾಸ್ ಟಂಡನರ ಜನ್ಮೋತ್ಸವದ ನೆಲೆಯಲ್ಲಾದರೂ ಅವರ ದೇಶನಿಷ್ಠೆ ಬೆಳಕಾಗಲಿ.