For the best experience, open
https://m.samyuktakarnataka.in
on your mobile browser.

ಜನ ಚೇಂಜ್ ಕೇಳ್ತಾರೆ ಜೀ…

08:54 AM May 05, 2024 IST | Samyukta Karnataka
ಜನ ಚೇಂಜ್ ಕೇಳ್ತಾರೆ ಜೀ…

ಈ ಚುನಾವಣೆಯಲ್ಲಿ ತಿರುಗಾಡಿ… ತಿರುಗಾಡಿ ಸಾಕಾಗಿ ಹೋಗಿದೆ. ಯಾರ ಜತೆಯೂ ಮಾತಾಡುವುದಕ್ಕೂ ಪುರುಸೊತ್ತು ಇಲ್ಲದಂಗೆ ಆಗಿದೆ. ಏನೋ ಒಂಥರಾ ಆಗೋಗಿದೆ ಎಂದು ಸೋದಿಮಾಮಾ ಅಂದುಕೊಳ್ಳುತ್ತಿದ್ದ.
ಸುಮ್ಮನೇ ಕುರ್ಚಿಯ ಮೇಲೆ ಕುಳಿತು ನಾಳೆ ಅಲ್ಲಿ ಏನು ಮಾತನಾಡುವುದು? ಏನು ಬಿಡುವುದು ಎಂದು ಲೆಕ್ಕ ಹಾಕುತ್ತಿದ್ದ. ಹೀಗೆ ಆದರೆ ಸರಿ ಇರಲ್ಲ. ನಾನು ಯಾರದರ ಜತೆ ಮಾತನಾಡಲೇಬೇಕು ಎಂದು ನಿರ್ಧರಿಸಿದ. ಅವರು ಇದ್ದಲ್ಲಿಗೆ ಹೋಗಿ ಮಾತನಾಡುವುದು ತೀರಕಷ್ಟ. ಹಾಗಾಗಿ ಫೋನಿನಲ್ಲೇ ಮಾತನಾಡೋಣ ಎಂದು ನಿರ್ಧರಿಸಿ ಸೀದಾ ಸೋನಮ್ಮಾರಿಗೆ ಎಂದು ಅವರ ನಂಬರ್ ತಿರುಗಿಸಿದ.
ಸೋನಮ್ಮಾರು- ಹಾಂಜೀ…
ಸೋದಿಮಾಮ- ಮೈ ಹೂಂ ಜೀ…
ಸೋನಮ್ಮಾರು- ಹಾಂ ಬೋಲೋಜಿ
ಸೋದಿಮಾಮ- ಏನ್ ಬೋಲೋಜಿ ತಿರುಗಾಡಿ ಸಾಕಾಗಿದೆ ಜೀ
ಸೋನಮ್ಮಾರು- ಪುರುಸೊತ್ತಿಲ್ಲದೆ ನಿಮಗೆ ತಿರುಗು ಅಂದರಾರು ಜೀ
ಸೋದಿಮಾಮ- ಅದು ಹಂಗಲ್ಲ. ಜನರು ಕೇಳ್ತಾರೆ ಜೀ…
ಸೋನಮ್ಮಾರು-ಹೌದಾ..ಈ ಸಲ ಚೇಂಜ್ ಕೇಳ್ತಾರೆ ಜೀ…
ಸೋದಿಮಾಮ-ನೀವು ಹಂಗೆ ತಿಳಕೊಂಡೀರಿ ಜೀ…
ಸೋನಮ್ಮಾರು-ಜೂನ್ ೪ ಸಂಜಿಮುಂದ ನೋಡುವಂತ್ರಿ ಜೀ
ಸೋದಿಮಾಮ- ನೋಡುವಂತ್ರಿ ಜೀ… ಫೋನ್ ಇಡ್ತೀನಿ ಜೀ…
ಸೋನಮ್ಮಾರು- ಒಕೆ ಜೀ.. ನಾನೂ ರಾಯಬರೇಲಿಗೆ ಹೋಗಬೇಕು ಜೀ…
ಹೀಗೆ ಜೀ.. ಜೀ ಮಾತನಾಡಿದ ನಂತರ ಸೋನಮ್ಮಾರು ಈ ಬಾರಿ ಚೇಂಜ್ ಕೇಳ್ತಾರೆ ಅಂತ ಬಹಳಷ್ಟು ಮಂದಿ ಹೇಳಿದ್ದಾರೆ. ಇವರು ನೋಡಿದರೆ ಹೀಗೆ ಅನ್ನುತ್ತಾರೆ. ಎಂದು ಹೋಟೆಲ್ ಶೇಷಮ್ಮನಿಗೆ ಕಾಲ್ ಮಾಡಿ ಶೇಷಮ್ಮಾ…ಇಂಗಿಂಗೆ ಈ ಬಾರಿ ಜನ ಚೇಂಜ್ ಕೇಳ್ತಾರೆ ಎಂದು ಪೋಸ್ಟರ್ ಮಾಡಿಸಿ ನಿನ್ನ ಹೋಟೆಲ್‌ನಲ್ಲಿ ಹಾಕು ಎಂದು ಹುಕುಂ ನೀಡಿದರು. ಶೇಷಮ್ಮ ಹೋಟೆಲ್ ಹೊರಗೆ, ಒಳಗೆ, ಆಜೂ-ಬಾಜೂ ಎಲ್ಲ ಕಡೆ ಈ ಬಾರಿ ಜನ ಚೇಂಜ್ ಕೇಳ್ತಾರೆ ಇಂತಿ ಶೇಷಮ್ಮ ಎಂದು ಬೋರ್ಡ್ ಹಾಕಿಸಿದಳು. ಮರುದಿನದಿಂದ ಆಕೆಯ ಹೊಟಲ್ ಗೆ ಬರುವ ಜನರಿಗೆ ಮಂಡಾಳೊಗ್ಗಣ್ಣಿ ಕೊಡ್ಲಾ ಅಂದರೆ ಸಾಬೂದಾನಿ ವಡಾ ಕೊಡಿ ಅನ್ನುತ್ತಿದ್ದರು.
ಸಾಬೂದಾನಿ ವಡಾ ಕೊಡಲಾ ಅಂದರೆ ನೋ…ಉದ್ದಿನ ವಡೆ ಕೊಡಿ ಅನ್ನುತ್ತಿದ್ದರು. ಕೊನೆಗೆ ಯಾಕೆ ಹೀಗೆ ಎಂದು ಕೇಳಿದರೆ ನೀವೇ ಹಾಕಿದೀರಲ್ಲ ಜನ ಚೇಂಜ್ ಕೇಳ್ತಾರೆ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳತೊಡಗಿದರು.