ಜಾಂಬುವಂತ-ನೀನೇ ಬುದ್ಧಿವಂತ
ಅಲ್ಲಿಲ್ಲಿ ತಿರುಗಾಡಿ ಜನರನ್ನು ನಗಿಸುತ್ತಿದ್ದ ತಿಗಡೇಸಿ ಇತ್ತೀಚಿಗೆ ಭಾರೀ ಫೇಮಸ್ ಆಗಿದ್ದ. ಒಂದೆರಡು ಬಾರಿ ತಳವಾರ್ಕಂಟಿಯು ತಿಗಡೇಸಿಯನ್ನು ಟಿವಿಯಲ್ಲಿ ಕರೆದು ಪರಿಚಯಿಸಿದ್ದ. ಹೀಗಾಗಿ ತಿಗಡೇಸಿಯನ್ನು ಎಲ್ಲರೂ ಗುರುತು ಹಿಡಿಯುತ್ತಿದ್ದರು. ಒಂದು ವೇಳೆ ಜನರು ಗುರುತು ಹಿಡಿಯದಿದ್ದರೂ ತಾನೇ ಹೋಗಿ ಆಚೆ ತಿಂಗಳು ಹತ್ತೊಂಭತ್ತನೇ ತಾರೀಕು ಮಧ್ಯಾಹ್ನ ೨.೩೦ಕ್ಕೆ ಟಿವಿಯಲ್ಲಿ ನನ್ನ ಕಾರ್ಯಕ್ರಮ ನೋಡಿದಿರಾ? ಎಂದು ಕೇಳುತ್ತಿದ್ದ. ಕೆಲವರು ಮುಜುಗರಕ್ಕೆ ಬಿದ್ದು ಹೂಂ ಅಂದರೆ ಇನ್ನೂ ಹಲವರು ಇಲ್ಲ ಅವತ್ತು ನಾನು ಊರಲ್ಲಿ ಇರಲಿಲ್ಲ ಎಂದು ಹೇಳುತ್ತಿದ್ದರು. ಇದೇ ಮಾತನ್ನು ಕನ್ನಾಳ್ಮಲ್ಲನಿಗೆ ಕೇಳಿದಾಗ.. ಅಯ್ಯೋ ಅವತ್ತು ನೋಡೋಣ ಅಂತಾನೇ ಬಂದೆ ಆದರೆ ಮಟಮಟ ಮಧ್ಯಾಹ್ನ ಭಯಂಕರ ಬಿಸಿಲು ಇತ್ತು ಊಟ ಮಾಡಿ ಸುಮ್ಮನೇ ಮಲಗಿದೆ. ಜೋಂಪು ಹತ್ತಿ ನಿದ್ದೆ ಮಾಡಿಬಿಟ್ಟೆ ಎಂದು ಹೇಳಿದ. ಹೌದಾ ಎಂದು ಸುಮ್ಮನಾದ. ಇನ್ನು ಯಾರನ್ನಾದರೂ ಕೇಳಿದರೆ ಮತ್ತಿನ್ನೇನಾದರೂ ಹೇಳಿಯಾರು ಎಂದು ಸುಮ್ಮನಾದ. ಅವರಿವರನ್ನು ರಿಕ್ವೆಸ್ಟ್ ಮಾಡಿಕೊಂಡು ಲಾದುಂಚಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತನ್ನ ಕಾರ್ಯಕ್ರಮ ಹಾಕಿಸಿಕೊಂಡ. ಅವತ್ತು ಲಾದುಂಚಿ ರಾಜ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ. ಇವರು ಇದ್ದಾರಲ್ಲಾ? ಅವರು ಎಂತಹ ಸಾಧನೆ ಮಾಡಿದ್ದಾರೆ ಗೊತ್ತ? ನೀವು ನಂಬಲಿಕ್ಕಿಲ್ಲ, ಅವರು ಪಾತ್ರ ಮಾಡಿದ ಧಾರಾವಾಹಿ ವರ್ಷಗಟ್ಟಲೇ ಓಡಿದೆ. ಜನರು ಹುಚ್ಚೆದ್ದಿದ್ದರು. ಇನ್ನೂ ಟಿವಿಯಲ್ಲಿ ಹಾಕಿ ಎಂದು ಪತ್ರ ಬರೆಯುತ್ತಿದ್ದಾರೆ ಎಂದಾಗ… ತಿಗಡೇಸಿ ಗಾಬರಿಯಾಗಿ ನಾನು ಯಾವ ಧಾರಾವಾಹಿ ಮಾಡಿದ್ದೇನೆ ಎಂದು ಯೋಚನೆ ಮಾಡುತ್ತಿದ್ದ. ಅಷ್ಟರಲ್ಲಿ ಸಭಿಕರೊಬ್ಬರು ಎದ್ದುನಿಂತು ಅವರು ಮಾಡಿದ ಧಾರಾವಾಹಿ ಹೆಸರು ಹೇಳಿ ಲಾದುಂಚಿ ರಾಜರೇ ಎಂದಾಗ… ಸ್ವಲ್ಪ ಕೆಮ್ಮಿ ಗಂಟಲು ಸರಿಮಾಡಿಕೊಂಡು…. ಅವರು ಮಾಡಿದ ಧಾರವಾಹಿ ಯಾವುದೆಂದರೆ……. ಅದೇ ರಾಮಾಯಣ ಧಾರಾವಾಹಿ ಅಂದಾಗ… ಸರ್ಕಲ್ ಹನ್ಮಂತನು ಸಾಹೇಬರೇ.. ನಾನು ಆ ಧಾರಾವಾಹಿಯನ್ನು ನಾನು ರೆಗ್ಯುಲರ್ ನೋಡುತ್ತಿದ್ದೆ. ಇವರ ಪಾತ್ರ ಯಾವುದು? ಎಂದು ಕರಿಲಕ್ಷಂಪತಿ ಕೂಗಿ ಕೇಳಿದ. ಅದಕ್ಕೆ ಲಾದುಂಚಿ ರಾಜನು… ಹ್ಹ..ಹ್ಹ..ಹ್ಹ… ತಿಗಡೇಸಿ ಪಾತ್ರ ಯಾವುದೆಂದರೆ….. ಅದೇ ಜಾಂಬುವಂತನ ಪಾತ್ರ ಅಂದ. ಸಭಿಕರಲ್ಲೊಬ್ಬ ಜಾಂಬುವಂತ-ನೀನೇ ಬುದ್ಧಿವಂತ ಎಂದು ಕೂಗಿದ. ತಿಗಡೇಸಿ ವೇದಿಕೆ ಇಳಿದು ಓಡಿಹೋದ.