For the best experience, open
https://m.samyuktakarnataka.in
on your mobile browser.

ಜೀವಕೋಶಗಳು ಆತ್ಮೋನ್ನತಿಯ ಸಾಧನ

03:00 AM May 28, 2024 IST | Samyukta Karnataka
ಜೀವಕೋಶಗಳು ಆತ್ಮೋನ್ನತಿಯ ಸಾಧನ

ಸುಪ್ತಮನಸ್ಸು ದೇಹನಿರ್ಮಾಣದ, ಪೋಷಣೆಯ, ಬೆಳವಣಿಗೆಯ, ಬೆಂಬಲ ಮತ್ತು ನಿಯಂತ್ರಣದ, ಅಸಹಜ ಪರಿಸ್ಥಿತಿಗಳನ್ನು ತೊಡೆದುಹಾಕುವುದೇ ಮುಂತಾದ ತನ್ನ ಪ್ರಮುಖ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿರುತ್ತದೆ ಮತ್ತು ಉತ್ತಮವಾಗಿ ಪ್ರಯತ್ನಿಸುತ್ತದೆ. ಅದರ ಮೂಲದಿಂದ ಶುದ್ಧ ಹಾಗೂ ಕಲುಷಿತವಾಗದ ಚೈತನ್ಯ ಅಡೆತಡೆಯಿಲ್ಲದೆ ನಿರಂತರವಾಗಿ ಹರಿಯುತ್ತಾ ಇರುತ್ತದೆ. ಯಾವಾಗ ನಮ್ಮ ಭಯದ ಆಲೋಚನೆಗಳು, ತಪ್ಪುನಂಬಿಕೆಗಳು, ಪ್ರತಿಕೂಲ ಸ್ವಯಂ-ಸಲಹೆಗಳು ಉದ್ಭವವಾಗುತ್ತವೆಯೋ ಆಗ ಚೈತನ್ಯದ ಮೂಲ ಮತ್ತು ಅದರ ಹರಿವಿನಲ್ಲಿ ಅಡ್ಡಿಯುಂಟಾಗುವ ಪ್ರಕ್ರಿಯೆಯೇ 'ರೋಗ' ಅಥವಾ 'ಅನಾರೋಗ್ಯ ಸಮಸ್ಯೆ'.
ಮಾನವದೇಹದಲ್ಲಿನ ಪ್ರತಿಯೊಂದು ಜೀವಕೋಶದಲ್ಲಿ ಆತ್ಮ್ತಪ್ರಜ್ಞೆಯ ಒಂದು ಭಾಗವಿದ್ದು, ಅದು ಜೀವಕೋಶಗಳ ಭೌತಿಕಸಮುದಾಯದಲ್ಲಿ ಪ್ರತಿಯೊಂದು ಜೀವಕೋಶವೂ ತನ್ನ ಪಾಲಿನ ನಿರ್ದಿಷ್ಟ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುತ್ತದೆ. ಅದೇ ರೀತಿಯಲ್ಲಿ ಜೀವಕೋಶಗಳ ಪ್ರತಿಯೊಂದು ಗುಂಪು, ದೊಡ್ಡದು ಅಥವಾ ಚಿಕ್ಕದಿರಬಹುದು; ಪ್ರಮಾಣ ಮತ್ತು ಗುಣಮಟ್ಟದಲ್ಲಿ ಅದರ ನಿರ್ಧಿಷ್ಟ ಕಾರ್ಯಭಾರದ ಯಶಸ್ವೀ ಕಾರ್ಯಕ್ಷಮತೆಗೆ ಹೊಂದಿಕೊಳ್ಳುವ ಮನಸ್ಸಿನ ಒಂದು ಭಾಗವೂ ಇದೆ. ಹೃದಯ, ಮೂತ್ರಪಿಂಡ, ಕರುಳು, ಪಿತ್ತಕೋಶ, ಸಣ್ಣಕರುಳು ಮುಂತಾದ ಪ್ರತಿಯೊಂದು ಅಂಗಾಂಗವೂ ಸಂಯೋಜಿತ ಜೀವಕೋಶಗಳ ಸಹಕಾರಿಗುಂಪನ್ನು ಹೊಂದಿದೆ ಮತ್ತು ಒಂದರಿಂದ ಒಂದು ವಿಭಿನ್ನವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ; ಜೀವನದ ಪ್ರತಿಯೊಂದು ಅಂಶವೂ ಜೀವಕೋಶಗಳ ಸಹಕಾರಿ ಗುಂಪುಗಳಿಂದ ನಿರ್ವಹಿಸಲ್ಪಡುತ್ತಿದ್ದು, ಒಟ್ಟಾರೆಯಾಗಿ ನೋಡುವುದಾದಲ್ಲಿ; ದೇಹವು ಸಂಯೋಜಿತ ಜೀವಕೋಶಗಳ ಸಹಕಾರಿಗುಂಪುಗಳ ಒಂದು ಒಕ್ಕೂಟವ್ಯವಸ್ಥೆಯಂತಿದೆ. ಪ್ರತಿಯೊಂದು ಜೀವಕೋಶವೂ ತಮ್ಮ ತಮ್ಮ ಕಾರ್ಯಭಾರವನ್ನು ನಿರ್ವಹಿಸುವಾಗ ತನ್ನದೇ ಗುಂಪಿನ ಇತರ ಜೀವಕೋಶಗಳೊಂದಿಗೆ ನಿರಂತರವಾಗಿ ಸಂಪರ್ಕ ಮತ್ತು ಸಂವಹನದಲ್ಲಿದ್ದು, ಇಡೀ ದೇಹದಲ್ಲಿ ವ್ಯಾಪಿಸಿರುವ ಜೀವಕೋಶಗಳ ಸಹಕಾರಿಗುಂಪುಗಳು ಅದು ಸಾಮಾನ್ಯಸ್ಥಿತಿಯಿರಲಿ ಅಥವಾ ವಿಷಮ ಪರಿಸ್ಥಿತಿಯಿರಲಿ ಏಕೋಭಾವ ಮತ್ತು ಏಕೋದ್ದೇಶದಿಂದ ಒಂದು ಶಿಸ್ತುಬದ್ಧ ಸೈನ್ಯದ ರೀತಿಯಲ್ಲಿ ತಮ್ಮ ಕಾರ್ಯನಿರ್ವಹಿಸುತ್ತವೆ.
ಈ ಮಹಾನ್ ಸಮುದಾಯ ಅಥವಾ ಜೀವಕೋಶಗಳ ಒಕ್ಕೂಟ ಅಥವಾ ರಾಷ್ಟ್ರವು ಒಂದು ಸಾಮಾನ್ಯ ನಿಯಮವನ್ನನುಸರಿಸಿ(ಏಕರಾಷ್ಟ್ರಕ್ಕೆ ನಿಷ್ಠವಾದ ರಾಜ್ಯಗಳಂತೆ) ದೇಹದ ಪ್ರಮುಖ ಅಂಗಗಳಾದ ಹೊಟ್ಟೆ, ಕರುಳು, ಯಕೃತ್ತು, ಮೂತ್ರಪಿಂಡಗಳು, ಗುಲ್ಮ, ಹೃದಯ ಇತ್ಯಾದಿ ಅನೇಕ ಸಣ್ಣ ಸಮುದಾಯಗಳಾಗಿ ಅಥವಾ ರಾಜ್ಯಗಳಾಗಿ ವಿಂಗಡಿಸಲ್ಪಟ್ಟಿವೆ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸಾಮೂಹಿಕ ಮನಸ್ಸು ಮತ್ತು ಪ್ರಜ್ಞೆಯನ್ನು ಹೊಂದಿದ್ದು, 'ಮೂಲಪ್ರಜ್ಞೆಗೆ' ಅಧೀನವಾಗಿ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತವೆ. ಆದರೆ ಸಾಂದರ್ಭಿಕವಾದ ದಂಗೆ, ಕ್ರಾಂತಿ ಅಥವಾ ಅಶಾಂತಿಗೆ ಒಳಗಾದಾಗ (ವ್ಯಕ್ತಿಯ ಪ್ರತಿಕೂಲ ಸ್ವಯಂ-ಸಲಹೆ ಅಥವಾ ಜಾಗೃತಮನಸ್ಸಿನಿಂದ ಹೊರಹೊಮ್ಮುವ ಭಯದ ಆಲೋಚನೆಗಳು) ಸಾಮರಸ್ಯವನ್ನು ಮರೆತು ನೋವು ಅಥವಾ ಕಾಯಿಲೆಯನ್ನು ಉಂಟುಮಾಡುತ್ತವೆ. ಅಂಗಗಳ ಈ 'ಸಾಮೂಹಿಕ ಮನಸ್ಸಿನ' ವಿಷಯದ ಬಗ್ಗೆ ಭವಿಷ್ಯದ ವಿಜ್ಞಾನವು ಹೆಚ್ಚು ಹೆಚ್ಚು ಆವಿಷ್ಕಾರಗಳನ್ನು ಮಾಡಿದರೆ ರೋಗನಿಧಾನ ಮತ್ತು ಚಿಕಿತ್ಸೆಯ ಬಗ್ಗೆ ಆಧುನಿಕ ಔಷಧ ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನದಲ್ಲಿ ಹೊಸ ಶಾಖೆಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ.
ಪ್ರಸಿದ್ಧ ಮಾನಸಿಕ ಚಿಕಿತ್ಸಾತಜ್ಞ ಡಾ. ಪೌಲ್ ಎಡ್ವರ್ಡ್ಸ್ ಹೇಳುವಂತೆ; “ಹೃದಯವು ಅತ್ಯಂತ ಬುದ್ಧಿವಂತ ಅಂಗವಾಗಿದ್ದು ಸೌಮ್ಯವಾದ ಸಲಹೆ, ದಯಾಪೂರ್ಣ ನಿರ್ದೇಶನ ಅಥವಾ ವಿನಂತಿಗಳಿಗೆ ಸುಲಭವಾಗಿ ಪ್ರಭಾವಿತವಾಗುತ್ತದೆ. ಯಕೃತ್ತು ಮುಗ್ಧತೆ ಆದರೆ ಮೊಂಡುತನದಿಂದ ಕೂಡಿದ್ದು, ಸಣ್ಣಮಕ್ಕಳನ್ನು ಆಮಿಷಗಳಿಂದ ರಮಿಸಿ ಒಪ್ಪಿಸುವ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಪಿತ್ತಜನಕಾಂಗದ ಮನಸ್ಸು ಜಡ, ಕ್ಷೆಭೆ, ನಿದ್ದೆ, ಮೊಂಡುತನ ಅಥವಾ ಹಠಮಾರಿ ಸ್ವಭಾವವನ್ನು ಹೊಂದಿದ್ದು, ಅಧಿಕಾರಯುತ ಪ್ರಚೋದನೆಗಳಿಗೆ ಮಾತ್ರವೇ ಬಗ್ಗುತ್ತದೆ. ಹೊಟ್ಟೆಯು ಸಾಕಷ್ಟು ಬುದ್ಧಿವಂತವಿದ್ದು ಹೊಗಳಿಕೆ ಅಥವಾ ಪ್ರೋತ್ಸಾಹಭರಿತ ನಿರ್ದೇಶನಗಳಿಗೆ ಸುಲಭವಾಗಿ ಪ್ರತಿಕ್ರಿಯಿಸುತ್ತದೆ. ನರಮಂಡಲವು ತನ್ನದೇ ಆದ ಮನಸ್ಸನ್ನು ಹೊಂದಿದ್ದು, ಬಾಹ್ಯ ಸಲಹೆಗಳನ್ನು ಸ್ವೀಕರಿಸುತ್ತದೆಯಾದರೂ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ತನ್ನ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತದೆ. ಕರುಳು ದೃಢವಾದ ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತದೆ. ಗರ್ಭಾಶಯವು ತನ್ನದೇ ಆದ ವಿಶಿಷ್ಠತೆಯನ್ನು ಹೊಂದಿದ್ದು, ಇತರ ಅಂಗಗಳ ಮೇಲೆ ತನ್ನ ಪ್ರಭಾವವನ್ನು ಬೀರಿ ಅವುಗಳನ್ನು ನಿಯಂತ್ರಿಸುತ್ತದೆ.”
ಡಾ. ಪೌಲ್ ಎಡ್ವರ್ಡ್ಸ್ನ ಈ ಮೇಲಿನ ಹೇಳಿಕೆಯ ಹಿನ್ನೆಲೆಯಲ್ಲಿ ನೆನಪಿಡಬೇಕಾದ ಅಂಶವೇನೆಂದರೆ; ನಾವು ಮಾತನಾಡುವುದು ನಿರ್ಜೀವ ವಸ್ತುಗಳ ಜೊತೆಯಲ್ಲಲ್ಲ, ಬದಲಿಗೆ ತಮ್ಮದೇ ಆದ ಸೂಕ್ಷ್ಮ ಸಂವೇದನಾಶೀಲ ಮನಸ್ಸನ್ನು ಹೊಂದಿರುವ ಪ್ರಜ್ಞಾವಂತ ಒಕ್ಕೂಟವ್ಯವಸ್ಥೆಯೊಂದಿಗೆ ಎಂಬುದು! ಪ್ರತಿಯೊಂದು ಜೀವಕೋಶ, ನರ, ಅಂಗ ಮತ್ತು ಒಟ್ಟಾರೆಯಾಗಿ ದೇಹದಲ್ಲೊಂದು ಸಂವೇದನಾಶೀಲ ಮನಸ್ಸಿದೆ ಎಂಬುದನ್ನು ಚಿಕಿತ್ಸಾ ಸಂದರ್ಭದಲ್ಲಿ ಚಿಕಿತ್ಸಕರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಿದ್ದರೆ ಮಾತ್ರವೇ ನಾವು ನಮ್ಮೊಂದಿಗೆ (ನಮ್ಮ ದೇಹ ಮತ್ತು ಇತರೆಲ್ಲಾ ಅಂಗಗಳ ಸಮೂಹ) ಉತ್ತಮ ಬಾಂಧವ್ಯವನ್ನು ನಿಭಾಯಿಸಬಹುದು. ಇವುಗಳು ನಮ್ಮ ಮಾತಿನಲ್ಲಿರುವ ಪದಗಳನ್ನು ಅರ್ಥೈಸಿಕೊಳ್ಳುವುದಿಲ್ಲ, ಬದಲಾಗಿ ಪದಗಳ ಹಿಂದಿರುವ ಸಂದೇಶಗಳನ್ನಷ್ಟೇ ಗ್ರಹಿಸುತ್ತವೆ ಮತ್ತು ಆ ಸಂದೇಶಗಳ ಪ್ರಕಾರವೇ ಪ್ರತಿಕ್ರಿಯಿಸುತ್ತವೆ! ಹೀಗಾಗಿ ಚಿಕಿತ್ಸಾ ಸಮಯದಲ್ಲಿ ಚಿಕಿತ್ಸಕರಾಗಲೀ, ಚಿಕಿತ್ಸೆಗೆ ಒಳಪಡುವವರಾಗಲೀ ಬಳಸಬೇಕಾದ ಪದಗಳ ಆಯ್ಕೆಯಲ್ಲಿ ಎಚ್ಚರವಿರಬೇಕು. ರೋಗವೆಂಬುದು ಜೀವಕೋಶಗಳ ಕರ್ತವ್ಯಪಾಲನೆಯಲ್ಲಿನ ವೈಫಲ್ಯ ಅಥವಾ ಜೀವಕೋಶಗಳ ಸಾಯುವಿಕೆಯಿಂದ ಉಂಟಾಗುವ ತ್ಯಾಜ್ಯನಿರ್ವಹಣೆಯಲ್ಲಿನ ವೈಫಲ್ಯತೆಯಾಗಿರುತ್ತದೆ. ಪ್ರತಿಯೊಂದು ಜೀವಕೋಶವೂ ತನ್ನದೇ ಆದ ಅಸ್ತಿತ್ವ ಹಾಗೂ ಸ್ವಯಂನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಅನಾರೋಗ್ಯ ಸಂದರ್ಭದಲ್ಲಿ ನೀಡುವ ಚಿಕಿತ್ಸೆ ಈ ವ್ಯವಸ್ಥೆಯನ್ನು ಪುನಃಸ್ಥಾಪಿಸಿ ಕಾರ್ಯಶೀಲವಾಗಿಸುವಂತಿರಬೇಕು. ಇದು ಸಾಧ್ಯವಾಗುವುದು ಬಹುತೇಕ ಸಂದರ್ಭಗಳಲ್ಲಿ ಮಾನಸಿಕ ಚಿಕಿತ್ಸಾವಿಧಾನಗಳಿಂದ ಮಾತ್ರವೇ ಎಂಬುದು ಪದೇ ಪದೇ ನಿರೂಪಿತವಾಗಿದೆ. ಜೀವಕೋಶವೆಂಬುದು ಕೇವಲ ಒಂದು ವಸ್ತು ಅಥವಾ ಯಂತ್ರವಲ್ಲ; ಅದು ದೇಹವು ಮಾಡುವ ಎಲ್ಲವನ್ನೂ ಸಾಧ್ಯವಾಗಿಸುವ ಜೀವಂತ ಘಟಕ. ಅದು ತಿನ್ನುತ್ತದೆ, ಕುಡಿಯುತ್ತದೆ, ಚಲಿಸುತ್ತದೆ, ತನ್ನದೇ ಇನ್ನೊಂದು ಕೋಶವನ್ನು ಪುನರುತ್ಪಾದಿಸುತ್ತದೆ, ಆಹಾರವನ್ನು ಆಯ್ಕೆಮಾಡುತ್ತದೆ, ತ್ಯಾಜ್ಯವನ್ನು ನಿರ್ವಹಿಸುತ್ತದೆ……..
ಪ್ರತಿಯೊಂದು ಅಂಗ, ಅದರ ಘಟಕ ಕೋಶಗಳು ಮತ್ತು ಸಹಕಾರಿಗುಂಪುಗಳು ಸಹಜವಾಗಿ ಸುಪ್ತಮನಸ್ಸಿನ ನಿಯಂತ್ರಣದಲ್ಲಿರುವುದರಿಂದ ಮತ್ತು ಅದರ ವಸ್ತುಸಾಕಾರದ ಒಂದು ಭಾಗವಾಗಿರುವುದರಿಂದ ಸುಪ್ತಮನಸ್ಸಿನ ಸಲಹೆ ಮತ್ತು ನಂಬಿಕೆಯಿಂದ ಪ್ರಚೋದಿಸಲ್ಪಡುತ್ತವೆ. ವಿಫಲಗೊಂಡ ಜೀವಕೋಶ ಅಥವಾ ಗುಂಪು ಅಥವಾ ಅಂಗವು ಸುಪ್ತಮನಸ್ಸಿನ ಪ್ರಚೋದನೆಯಿಂದ ಜೀವಕೋಶಗಳು ಸ್ವತಃ ತನ್ನ ಅಥವಾ ತಮ್ಮ ಚೇತರಿಕೆ ಪ್ರಕ್ರಿಯೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತವೆ ಹಾಗೂ ಗುಣಪಡಿಸುವಿಕೆಯ ಪ್ರಕ್ರಿಯೆಯನ್ನು ಶೀಘ್ರವಾಗಿಸುತ್ತವೆ. ಚಿಕಿತ್ಸೆ ಎಂಬುದು ಜೀವಕೋಶಗಳ ದುರಸ್ತಿ ಅಥವಾ ಸಾಮಾನ್ಯ ಚಟುವಟಿಕೆಯನ್ನು ಮರುಸ್ಥಾಪಿಸುವುದೇ ಆಗಿರುತ್ತದೆ.
ನೆಲದಲ್ಲಿ ಮೊಳಕೆಯೊಡೆಯುವ ಸಣ್ಣದಾದ ಬೀಜವೊಂದು ಅದರ ಸಾವಿರಪಟ್ಟು ಭಾರವನ್ನು ಎತ್ತುವ ಪ್ರಕ್ರಿಯೆ ಏನಿದೆಯಲ್ಲಾ ಅದು ತನ್ನೊಳಗಿನ ಮನಸ್ಸಿನ ತತ್ವದ ಸ್ವಯಂ-ಸಂರಕ್ಷಣಾ ಶಕ್ತಿಗಳು ಮತ್ತು ಅದರ ಚಟುವಟಿಕೆಗಳ ಪ್ರಕಟಗೊಳ್ಳುವಿಕೆಯಾಗಿದೆ. ಈ ತತ್ವ ಜೀವಕೋಶಗಳಿಗೂ ಅನ್ವಯವಾಗುತ್ತದೆ. ಗಾಯ ಅಥವಾ ಮೂಳೆಮುರಿತದಂಥ ಸಂದರ್ಭಗಳಲ್ಲಿ ಸ್ವಯಂ-ಗುಣಪಡಿಸಿಕೊಳ್ಳುವಿಕೆ ಸಾಧ್ಯವಾಗುವುದು ಜೀವಕೋಶಗಳ ಈ ಶಕ್ತಿ ಮತ್ತು ಗುಣದಿಂದಾಗಿಯೇ. ದೇಹಕ್ಕೆ ಜ್ವರವನ್ನುಂಟುಮಾಡಿ ಆ ಮೂಲಕ ದೇಹದ ಉಷ್ಣತೆಯನ್ನು ಏರಿಸಿ ದೇಹದೊಳಗಿನ ಅಸ್ವಸ್ಥ ಪದಾರ್ಥಗಳನ್ನು ಹೊರಹಾಕಲು ಪ್ರಯತ್ನಿಸುವ ಜೀವಕೋಶಗಳ ಪ್ರಜ್ಞಾವಂತಿಕೆ ಮೊಳಕೆಯೊಡೆಯುವ ಬೀಜದ ಪ್ರಜ್ಞಾವಂತಿಕೆಯನ್ನೇ ಸಾದರಪಡಿಸುತ್ತದೆ. ಇದನ್ನೇ ನಾವು “ಪ್ರಕೃತಿಯ ಗುಣಪಡಿಸುವ ಶಕ್ತಿ” ಎನ್ನುವುದು. ಇದು ಜೀವಿಯ ಸುಪ್ತಮನಸ್ಸಿನ ಕಾರ್ಯಾಚರಣೆಯೇ ಆಗಿರುತ್ತದೆ. ದೇಹದೊಳಗಿನ ಚೈತನ್ಯವು ಸದಾ ಮೇಲ್ಮುಖವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಆತ್ಮೋನ್ನ ತಿಯ ಮೆಟ್ಟಲುಗಳನ್ನು ಏರುತ್ತಾ ಹೋಗುವಲ್ಲಿ ಸಹಕಾರಿ. ಅದೇ ಕೆಳಮುಖವಾಗಿ ಕೆಲಸಮಾಡಿದರೆ ಶೀಘ್ರ ಸಾವಿಗೆ ರಹದಾರಿ ಎಂಬುದು ಇದರ ಸಾರಾಂಶ.