ಜೀವನ ಜೋಕಾಲಿ ನಾಗರ ಪಂಚಮಿ
ನಾಗರಪಂಚಮಿ ಹಬ್ಬವು ಪ್ರಕೃತಿ ಮತ್ತು ಅದರ ಶಕ್ತಿಗಳು ನಮ್ಮನ್ನು ಉಳಿಸುವ ಮತ್ತು ರಕ್ಷಿಸುವ ಹಲವು ವಿಧಾನಗಳನ್ನು ನೆನಪಿಸುತ್ತದೆ. ನಾಗದೇವತೆಗಳನ್ನು ಪ್ರಾರ್ಥಿಸುವ ಮೂಲಕ, ನಮ್ಮ ಸುತ್ತಲಿನ ಎಲ್ಲಾ ಜೀವಿಗಳೊಂದಿಗೆ ಸಾಮರಸ್ಯದಿಂದ ಬದುಕಲು ಪ್ರೇರೇಪಿಸುತ್ತೇವೆ. ಅವುಗಳನ್ನು ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ.
ಅಂದು ನಾಗರ ಕಲ್ಲು, ಮಣ್ಣಿನ ನಾಗ ಅಥವಾ ಚಿತ್ರ ಪಟದ ಮುಂದೆ ಹುರಿದ ಭತ್ತ, ಧೂರ್ವವನ್ನು ಇಟ್ಟು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಾರತದ ಎಲ್ಲಾ ಭಾಗಗಳಲ್ಲಿ ಬಹುತೇಕ ಒಂದೇ ಬಗೆಯಲ್ಲಿ ಆಚರಿಸಲಾಗುತ್ತದೆ. ನಾಗದೇವತೆಗೆ ಹಾಲನ್ನು ಉಣಿಸಬೇಕು ಎಂಬುದು ಜನಪ್ರಿಯ ನಂಬಿಕೆ, ನಾಗರ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡುವುದು ಪ್ರತೀತಿ.
ನಾಗರ ಪಂಚಮಿಯಂದು ಭೂಮಿ ಅಗೆಯುವುದು ಅಥವಾ ಹೊಲಗಳನ್ನು ಉಳುಮೆ ಮಾಡಬಾರದು. ಸೊಪ್ಪನ್ನು ಕೀಳಬಾರದು. ನಂಬಿಕೆಗಳ ಪ್ರಕಾರ, ನಾಗ ಪಂಚಮಿಯ ದಿನದಂದು ಸೂಜಿ, ಚಾಕು ಮುಂತಾದ ಹರಿತಾದ ಮತ್ತು ಚೂಪಾದ ವಸ್ತುಗಳನ್ನು ಬಳಸಬಾರದು ಎಂಬ ನಂಬಿಕೆಯೂ ಇದೆ.
ಹಾಲೆರೆಯುವ ಪದ್ಧತಿ ಕುರಿತು ನಂಬಿಕೆಗಳು
ನಾಗದೇವತೆಗಳಿಗೆ ಹಾಲೆರೆಯುವ ಪದ್ಧತಿಯ ಹಿಂದೆ ಹಲವಾರು ನಂಬಿಕೆಗಳು ಅಡಗಿವೆ. ಇವುಗಳಿಗೆ ಇರುವ ಹೆಸರುಗಳು ಸಹ ಬೇರೆ ಬೇರೆಯಾಗಿವೆ. ಮದುವೆಯಾಗದ ಯುವತಿಯರು ನಾಗಗಳಿಗೆ ಹಾಲೆರೆಯುವುದರಿಂದ ಅವರು ಬಯಸಿದಂತಹ ಒಳ್ಳೆಯ ಪತಿ ದೊರಕುತ್ತಾನೆ ಎಂಬ ನಂಬಿಕೆ ಇದೆ. ಇದರಿಂದ ಅವರು ಬಾಳು ಸುಖಮಯವಾಗುತ್ತದೆ. ಇನ್ನು ಮದುವೆಯಾದ ಹೆಂಗಸರು ನಾಗಗಳಿಗೆ ಹಾಲೆರೆಯುವ ಹಿಂದೆ ಕುತೂಹಲಕಾರಿ ವಿಚಾರ ಅಡಗಿದೆ.
ಹಾವುಗಳು ತಮಗೆ ನೋವನ್ನು ಉಂಟು ಮಾಡಿದವರ ಮೇಲೆ ದ್ವೇಷವನ್ನು ತೀರಿಸಿಕೊಳ್ಳುವ ಮತ್ತು ಅವರು ಇಲ್ಲದಿದ್ದಲ್ಲಿ ಅವರ ಕುಟುಂಬದ ಸದಸ್ಯರ ಮೇಲೆ ದ್ವೇಷವನ್ನು ತೀರಿಸಿಕೊಳ್ಳುವ ಛಲವನ್ನು ಹೊಂದಿರುತ್ತವೆಯಂತೆ. ಹಾಗಾಗಿ ಮುತ್ತೈದೆಯರು ನಾಗ ದೇವತೆಗಳನ್ನು ಪೂಜಿಸಿ, ತಮ್ಮ ಕುಟುಂಬ ಸದಸ್ಯರು ತಿಳಿದೊ ಅಥವಾ ತಿಳಿಯದೆಯೋ ಮಾಡಿದ ಅಪರಾಧವನ್ನು ಮನ್ನಿಸುವಂತೆ ಕೋರುತ್ತಾರೆ.
ನಿಸರ್ಗ ಪೂಜೆಯೂ ಹೌದು
ಹಬ್ಬಗಳನ್ನು ಆಚರಿಸುವ ಹಿನ್ನೆಲೆಯಲ್ಲಿ ನಿಸರ್ಗ ಪೂಜೆ ಕೂಡಾ ಇದೆ. ರೈತನ ಮಿತ್ರ ಎಂದೇ ಪರಿಗಣಿತವಾಗುವ ಸರ್ಪಪೂಜೆ ಮಾಡಿ ಕೃತಜ್ಞತೆ ಅರ್ಪಿಸುವ, ಹಾವನ್ನು ಮಣ್ಣಿನಲ್ಲಿ ಮಾಡುವ ಮೂಲಕ ಭೂಮಿತಾಯಿಯ ಪೂಜೆ ಮಹತ್ವ ಪಡೆಯುವದಾದರೆ, ಅಣ್ಣ ತಂಗಿಯರ ಹಬ್ಬ ಎಂದೆನ್ನುವ ಮೂಲಕ ಪ್ರೀತಿ ಬಾಂಧವ್ಯ ಹೆಚ್ಚಿಸುವ, ಮದುವೆ ಮಾಡಿಕೊಂಡವರು ತವರಿಗೆ ಬರುವದು, ಪ್ರೀತಿ ಖಾದ್ಯಗಳನ್ನು ಪರಸ್ಪರ ವಿನಿಮಯ, ಜೋಕಾಲಿ ಜೀಕುವದು, ಬೋಲ ಬಗರಿ ತಿರುಗಿಸುವದು, ಲಿಂಬೆ ಹಣ್ಣು ಪಣ ಕಟ್ಟಿ ಎಸೆಯುವದು, ಜಾತ್ರೆಗಳ ಆಯೋಜನೆ ಇವೆಲ್ಲ ಆನಂದವನ್ನು ಹಂಚಿಕೊಳ್ಳಲು ಇದ್ದ ಪರಂಪರೆಗೆ ಸಾಕ್ಷಿ. ಇದು ಇಂದಿಗೂ ಮುಂದುವರಿದಿದೆ.
ಮಲ್ಲಿಕಾರ್ಜುನ ಚಿಕ್ಕಮಠ, ಧಾರವಾಡ