For the best experience, open
https://m.samyuktakarnataka.in
on your mobile browser.

ಜೂನ್‌ನಲ್ಲೇ ಮುಂಗಾರು ಮಳೆ ಪ್ರವೇಶವಾಗುವುದು ಏಕೆ?

03:36 AM May 21, 2024 IST | Samyukta Karnataka
ಜೂನ್‌ನಲ್ಲೇ ಮುಂಗಾರು ಮಳೆ ಪ್ರವೇಶವಾಗುವುದು ಏಕೆ

ಮುಂಗಾರು ಮಳೆಗೂ ನಮ್ಮ ದೇಶದ ರೈತರಿಗೂ ಅವಿನಾಭಾವ ಸಂಬಂಧ. ಕಳೆದ ವಾರದಿಂದ ಸ್ವಲ್ಪಮಟ್ಟಿಗೆ ಮಳೆ ಬರುತ್ತಿದ್ದರೂ ಇನ್ನೂ ಬಿಸಿಲಿನ ದಗೆಯಿಂದ ಜನರು ಹೈರಾಣಾಗುತ್ತಿದ್ದಾರೆ. ರೈತರು ಬಿತ್ತನೆಗಾಗಿ ಜಮೀನನ್ನು ಸಜ್ಜುಗೊಳಿಸುತ್ತಿದ್ದಾರೆ. ಕೆಲವು ಕಡೆ ರೈತರು ಉಳಿಮೆ ಮಾಡಲು ಮಳೆಯನ್ನು ಕಾಯುತ್ತಿದ್ದಾರೆ. ಕೆರೆ ಕಟ್ಟೆಗಳು ಬಿಸಿಲಿನ ಧಗೆಯಿಂದ ಬರಿದಾಗಿದ್ದು, ಭೂಮಿಯ ಅಂತರ್ಜಲ ಬಹುತೇಕ ಕುಸಿದಿದೆ. ಒಂದು ಪ್ರದೇಶದ ವಾತಾವರಣದ ಉಷ್ಣಾಂಶ, ಒತ್ತಡಗಳು ಉಳಿದೆಲ್ಲ ವಾಯುಗುಣದ ಅಂಶಗಳಾದ ತೇವಾಂಶ, ಗಾಳಿ, ಮೋಡ, ಮಳೆಯ ಮೇಲೆ ಪ್ರಭಾವ ಬೀರುತ್ತವೆ. ವ್ಯವಸಾಯ ಪ್ರಧಾನವಾದ ಮತ್ತು ವಿಶಾಲ ಭೂ ಪ್ರದೇಶವನ್ನು ಹೊಂದಿದ ಭಾರತದ ಆರ್ಥಿಕ ಸ್ಥಿತಿ-ಗತಿಗಳು ಮಾನ್ಸೂನ್ ಮಾರುತಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತವೆ.
ಮೂರು ಕಡೆ ನೀರು ಒಂದು ಭಾಗದಲ್ಲಿ ಮಾತ್ರ ಭೂಭಾಗವನ್ನು ಹೊಂದಿರುವ ಪರ್ಯಾಯ ದ್ವೀಪದ ವಿಶಿಷ್ಟ ದೇಶ ಭಾರತ. ಇದು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ. ಉತ್ತರದಿಂದ ದಕ್ಷಿಣದ ಕಡೆಗೆ ಕಿರಿದಾಗುತ್ತಾ ತ್ರಿಕೋನಾಕಾರ ರೂಪದಲ್ಲಿದೆ. ಭೂಭಾಗ ಮತ್ತು ಜಲಸ್ತೋಮದ ನಡುವಿನ ಉಷ್ಣಾಂಶ ಮತ್ತು ಒತ್ತಡದ ವ್ಯತ್ಯಾಸವು ಮುಂಗಾರು ಮಾರುತಗಳ ಉಗಮಕ್ಕೆ ಕಾರಣವಾಗಿವೆ.
ಜೂನ್‌ದಲ್ಲೇ ಏಕೆ ಮುಂಗಾರು ಮಳೆಗಾಲ ಪ್ರಾರಂಭವಾಗುತ್ತದೆ? ಹೌದು, ಜೂನ್‌ಕ್ಕಿಂತ ಮೊದಲು ಉತ್ತರಾಯಣ ಕಾಲವಾಗಿದ್ದು, ಭಾರತದಲ್ಲಿ ಬೇಸಿಗೆ ಕಾಲವಿರುತ್ತದೆ. ಬಹುತೇಕ ಫೆಬ್ರುವರಿಯಿಂದ ಮೇ ತಿಂಗಳ ಅಂತ್ಯದವರೆಗಿನ ಕಾಲಾವಧಿಯು ಬೇಸಿಗೆ ಕಾಲವಾಗಿ ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ. ಮಾರ್ಚ ೨೧ ರಿಂದ ಸೂರ್ಯನ ಕಿರಣಗಳು ಕರ್ಕಾಟಕ ಸಂಕ್ರಾಂತಿ ವೃತ್ತದ ಕಡೆಗೆ ಚಲಿಸಿದಂತೆ ಭಾರತದ ಭೂಭಾಗದ ಉಷ್ಣಾಂಶವು ನಿಧಾನವಾಗಿ ಹೆಚ್ಚಾಗುತ್ತಾ ಹೋಗುವುದರಿಂದ ಭಾರತದ ಭೂಭಾಗದ ವಾತಾವರಣವು ಹೆಚ್ಚು ಉಷ್ಣತೆಯಿಂದ ಮತ್ತು ಕನಿಷ್ಠ ಒತ್ತಡಪಟ್ಟಿಯಾಗಿ ಮಾರ್ಪಡುತ್ತದೆ. ತದ್ವಿರುದ್ಧವಾಗಿ ವಾತಾವರಣದ ಒತ್ತಡವು ದಕ್ಷಿಣದ ಹಿಂದೂ ಮಹಾಸಾಗರದ ಜಲಸ್ತೋಮದ ಕಡೆಗೆ ಜಾರುತ್ತದೆ. ಅಂದರೆ ಈ ಕಾಲದಲ್ಲಿ ಒತ್ತಡವು ಭೂಭಾಗದಿಂದ ಹಿಂದೂ ಮಹಾಸಾಗರ ಮತ್ತು ಅದರ ಶಾಖೆಯಾದ ಅರಬ್ಬೀ ಸಮುದ್ರದ ಕಡೆಗೆ ಜಾರಿ ಸಂಪೂರ್ಣ ಒತ್ತಡವು ಸಾಗರ-ಸಮುದ್ರಗಳಲ್ಲಿ ಕೇಂದ್ರಿಕೃತವಾಗುತ್ತದೆ. ಮೇ ತಿಂಗಳ ಕೊನೆಯ ಅವಧಿಯಲ್ಲಿ ಹೆಚ್ಚು ಒತ್ತಡದಿಂದ ಕೇಂದ್ರೀಕೃತವಾದ ದಕ್ಷಿಣದ ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರದಲ್ಲಿ ಒತ್ತಡ ಉಂಟಾಗುವುದರಿಂದ ಮತ್ತು ಸಮಭಾಜಕ ವೃತ್ತದ ದಕ್ಷಿಣದಲ್ಲಿ ಬೀಸುತ್ತಿರುವ ಆಗ್ನೇಯ ಸಾಂದ್ರತೆ ಗಾಳಿಗಳು ಸಮಭಾಜಕ ವೃತ್ತವನ್ನು ದಾಟಿದ ಕೂಡಲೇ ತಮ್ಮ ದಿಕ್ಕನ್ನು ಬದಲಾಯಿಸಿ ಹೆಚ್ಚು ಒತ್ತಡ ಪಟ್ಟಿಯಿಂದ ಈಗಾಗಲೇ ಕನಿಷ್ಠ ಒತ್ತಡ ಪ್ರದೇಶವಾಗಿದ್ದ ಭಾರತದ ಭೂಭಾಗದ ಕಡೆಗೆ ಮಾನ್ಸೂನ್ ಗಾಳಿಗಳು ಬೀಸುತ್ತವೆ. ಭಾರತದ ದಕ್ಷಿಣ ತೀರವನ್ನು ತಲುಪಿದ ಮಾನ್ಸೂನ್ ಗಾಳಿಗಳು ಪರ್ಯಾಯ ದ್ವೀಪದ ಚೂಪು ತುದಿಯ ಭೂಭಾಗದಿಂದಾಗಿ ಎರಡು ಶಾಖೆಗಳಾಗಿ ಬೀಸುತ್ತವೆ. ಅವುಗಳಲ್ಲೊಂದು ಅರಬ್ಬೀ ಸಮುದ್ರದ ಮೇಲಿಂದ ಪಶ್ಚಿಮ ಕರಾವಳಿಯನ್ನು ದಾಟಿ ಭಾರತವನ್ನು ಪ್ರವೇಶಿಸಿದರೆ ಇನ್ನೊಂದು ಶಾಖೆಯು ಬಂಗಾಳ ಉಪಸಾಗರದ ಮೇಲಿಂದ ಭಾರತದ ಈಶಾನ್ಯ ಭಾಗವನ್ನು ಪ್ರವೇಶಿಸುವುದು. ಇವು ಸಮುದ್ರದಲ್ಲಿ ಉಗಮಿಸಿ ಅವುಗಳ ಮೇಲೆ ಹಾಯ್ದು ಬರುವುದರಿಂದ ತಮ್ಮೊಡನೆ ಹೆಚ್ಚು ತೇವಾಂಶವನ್ನು ಹೊತ್ತುಕೊಂಡು ಬಂದು ಸಾಕಷ್ಟು ಮಳೆಗರೆಯುತ್ತವೆ. ಹೀಗಾಗಿ ನೈರುತ್ಯ ಮಾನ್ಸೂನ್‌ಗಳಿಂದ ಬರುವ ಮುಂಗಾರು ಮಳೆಗಾಲ ಜೂನ್‌ದಲ್ಲೇ ಪ್ರಾರಂಭವಾಗುತ್ತವೆ ಮತ್ತು ಈ ಗಾಳಿಗಳು ರಭಸದಿಂದ ಬೀಸಿ ಭಾರತಕ್ಕೆ ವ್ಯಾಪಕವಾಗಿ ಮಳೆಯನ್ನು ಸುರಿಸುವುವು. ಈ ಗಾಳಿಗಳನ್ನು ದಕ್ಷಿಣೋತ್ತರವಾಗಿ ಹಬ್ಬಿರುವ ಹೆಚ್ಚು ಎತ್ತರವಿರುವ ಸಹ್ಯಾದ್ರಿ ಪರ್ವತಗಳು ತಡೆಯಲ್ಪಟ್ಟು ಅವುಗಳ ಪೂರ್ವಭಾಗದಲ್ಲಿ ಭಾರಿ ಪ್ರಮಾಣದ ಮಳೆಯನ್ನು ಸುರಿಸಿ ಈ ಪ್ರದೇಶವನ್ನು ಮಲೆನಾಡನ್ನಾಗಿಯೂ, ಮುಂದೆ ಹೋಗುವ ತೇವಾಂಶರಹಿತ ಖಾಲಿಮೋಡಗಳು ಉತ್ತರದ ಭಾಗಗಳಾದ ವಿಜಯಪುರರ, ಬೀದರ್, ಕಲಬುರ್ಗಿ, ರಾಯಚೂರು, ಬಳ್ಳಾರಿ ಜಿಲ್ಲೆಗಳನ್ನು ಮಳೆಯ ನೆರಳಿನ ಬಯಲು ಸೀಮೆಗಳಾಗಿಸಿವೆ.
ದಿನದಿಂದ ದಿನಕ್ಕೆ ಮಾನವನ ಆಧುನಿಕ ಚಟುವಟಿಕೆಗಳಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿರುವುದರಿಂದ ಗಾಳಿ, ಉಷ್ಣತೆ, ತೇವಾಂಶ, ಒತ್ತಡ, ಮಳೆಯಂತಹ ಅಂಶಗಳಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಒಮ್ಮೊಮ್ಮೆ ಜೂನ್ ಮೊದಲ ವಾರದಲ್ಲಿ ಪ್ರಾರಂಭವಾಗಬೇಕಾದ ಮುಂಗಾರು ಮಳೆ ಜುಲೈ ಅಂತ್ಯದವರೆಗೂ ಬರುವುದಿಲ್ಲ. ಇದರಿಂದ ಹವಾಮಾನದಲ್ಲಿ ವೈಪರೀತ್ಯಗಳಾಗಿ ಮಳೆ ಬೆಳೆ ಸಾಂಪ್ರದಾಯಕ-ಸಾಂಸ್ಕೃತಿಕ ಬದುಕು ವ್ಯತ್ಯಾಸವಾಗುತ್ತಿವೆ.