ಜ್ಞಾನಾರ್ಜನೆ ವಿಷಯದಲ್ಲಿ ವಿದ್ಯಾರ್ಥಿಗಳು ಎಂದೂ ತೃಪ್ತರಾಗಬಾರದು
ಮೈಸೂರು: ಶಾಸ್ತ್ರ ಜ್ಞಾನ ಕಲಿಕೆಯ ಹಸಿವು ಮತ್ತು ಅಧ್ಯಯನದಿಂದ ಪಡೆಯುವ ಆನಂದ-ಇವೆರಡೂ ಇದ್ದವರು ಮಾತ್ರ ವಿದ್ವತ್ತನ್ನು ಸಂಪಾದಿಸಬಲ್ಲರು ಎಂದು ಉಡುಪಿ ಶ್ರೀ ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಸೋಸಲೆ ಶ್ರೀ ವ್ಯಾಸರಾಜ ಮಹಾ ಸಂಸ್ಥಾನ ಮತ್ತು ಶ್ರೀ ವ್ಯಾಸ ತೀರ್ಥ ವಿದ್ಯಾಪೀಠ ಸಂಯುಕ್ತವಾಗಿ ಆಯೋಜಿಸಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಪರೀಕ್ಷೆಗಳ ನಿಮಿತ್ತ ಗುರುವಾರ ಶ್ರೀಮಠದಲ್ಲಿ ಆಯೋಜನೆ ಮಾಡಿದ್ದ ವಿದ್ವತ್ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜ್ಞಾನಾರ್ಜನೆ ವಿಷಯದಲ್ಲಿ ವಿದ್ಯಾರ್ಥಿಗಳು ಎಂದೂ ತೃಪ್ತರಾಗಬಾರದು. ವಿವಿಧ ಗ್ರಂಥಗಳ ಅಧ್ಯಯನ, ಅವಲೋಕನ, ಪರಾಮರ್ಶನ ಮತ್ತು ಚಿಂತನಗಳಿಂದ ಜ್ಞಾನವನ್ನು ವಿಸ್ತಾರ ಮಾಡಿಕೊಳ್ಳುತ್ತಿರಬೇಕು.
ಕೇವಲ ಪರೀಕ್ಷೆಗಾಗಿ ಓದುವುದು ಒಂದು ಹಂತದ ಸಾಧನೆ. ಆದರೆ ಸುಧಾ ಸೇರಿ ಆಚಾರ್ಯ ಮಧ್ವರ ಗ್ರಂಥಗಳ ಅಧ್ಯಯನ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆಚಾರ್ಯ ಮಧ್ವರು ನೀಡಿದ ಪ್ರತಿಯೊಂದು ಸಂದೇಶವೂ ಎಲ್ಲ ದೇಶ ಕಾಲಕ್ಕೆ ದಿಕ್ಸೂಚಿಯಾಗಿವೆ ಎಂದರು.
ಮಧ್ವರ ಮಹೋನ್ನತ ಕೃತಿಗಳ ಸಾರಸಂಗ್ರಹವಾದ ಶ್ರೀಮನ್ ನ್ಯಾಯ ಸುಧಾ ಮತ್ತು ಶ್ರೀ ವ್ಯಾಸತೀರ್ಥರ ತತ್ವ ಚಂದ್ರಿಕಾ ಗ್ರಂಥಗಳ ಅಧ್ಯಯನವು ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಲಿದೆ ಎಂದರು.
ಎತ್ತರಕ್ಕೆ ಬೆಳೆಯಿರಿ:
ಬೆಂಗಳೂರಿನ ಭುವನಗಿರಿ ಆಶ್ರಮದ ಶ್ರೀ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಮುದ್ರದಷ್ಟು ಆಳಕ್ಕೆ ಪರ್ವತದಷ್ಟು ಎತ್ತರಕ್ಕೆ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳ ಕೀರ್ತಿ ಬೆಳಗಲಿ ಎಂದರು.
ಅದಮಾರು ಮಠದ ಶ್ರೀ ವಿಶ್ವ ಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿ, ಜ್ಞಾನಕ್ಕೆ ಸಮನಾದದು ಜಗತ್ತಿನಲ್ಲಿ ಯಾವುದೂ ಇಲ್ಲ. ಹಾಗಾಗಿ ವಿದ್ವತ್ತನ್ನು ಪಡೆಯಲು ಶ್ರಮ ಹಾಕಿದರೆ ಭವಿಷ್ಯದಲ್ಲಿ ಸುಖ ಸಂಪತ್ತು ಅರಸಿ ಬರುತ್ತವೆ ಎಂದರು.
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ವಿದ್ಯಾರ್ಥಿಗಳ ಶಾಸ್ತ್ರ ಜ್ಞಾನ ಪರೀಕ್ಷೆ ಮಾಡಿದರು. ವಿದ್ಯಾರ್ಥಿ ಪ್ರಣವ ಆಚಾರ್ಯ ಅವರು ಶ್ರೀಮನ್ ನ್ಯಾಯ ಸುಧಾ ತಾತ್ಪರ್ಯ ಚಂದ್ರಿಕಾ ಮತ್ತು ನ್ಯಾಯಾಮೃತ ಗ್ರಂಥಗಳ ಮೇಲಿನ ಪ್ರಶ್ನೆಗಳಿಗೆ ಸಮರ್ಥ ಉತ್ತರವನ್ನು ನೀಡಿ ಗಮನಸೆಳೆದರು.
ಹಿರಿಯ ವಿದ್ವಾಂಸ ಹರಿದಾಸ ಭಟ್, ಮುಂಬೈ ವಿದ್ಯಾಪೀಠದ ಕುಲಪತಿ ಮಾಹುಲಿ ವಿದ್ಯಾಸಿಂಹಾಚಾರ್ಯ, ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ವಿದ್ಯಾಧೀಶ ಆಚಾರ್ಯ ಗುತ್ತಲ ಪಂಡಿತ ಪ್ರಹ್ಲಾದಾಚಾರ್ಯ, ಮಾತರಿಶ್ವಾಚಾರ್ಯ, ಡಿ.ಪಿ. ಅನಂತಾಚಾರ್ಯ, ಡಿ.ಪಿ. ಮಧುಸೂದನಾಚಾರ್ಯ, ಡಾ. ಶ್ರೀನಿಧಿ ಪ್ಯಾಟಿ ಇದ್ದರು.