For the best experience, open
https://m.samyuktakarnataka.in
on your mobile browser.

ಝೋಹೋ ಕಟ್ಟಿದ ಶ್ರೀಧರ್ ವೆಂಬುಗೆ ಜೈ ಹೋ…

02:30 AM Nov 18, 2024 IST | Samyukta Karnataka
ಝೋಹೋ ಕಟ್ಟಿದ ಶ್ರೀಧರ್ ವೆಂಬುಗೆ ಜೈ ಹೋ…

ಸಾಮಾನ್ಯವಾಗಿ ಸಾಫ್ಟ್‌ವೇರ್ ಸಂಸ್ಥೆ ಎಂದರೆ ಒಂದೋ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಕಚೇರಿ ಇರಬೇಕು ಅದಾಗದಿದ್ದರೆ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಾದರೂ ಕಚೇರಿ ಇರಬೇಕು ಎಂಬುದು ಟೆಕ್ಕಿಗಳ ಅಭಿಲಾಷೆ. ಆದರೆ ವೆಂಬು ಇರುವುವುದು ದಕ್ಷಿಣದ ತುತ್ತ ತುದಿಯ ತೆಂಕಾಸಿ ಎಂಬ ಪುಟ್ಟ ಹಳ್ಳಿಯಲ್ಲಿ. ಅಲ್ಲಿಂದಲೇ ಅವರು ತಮ್ಮ ದಿನ ನಿತ್ಯದ ಕಚೇರಿಯ ಆಗು ಹೋಗುಗಳನ್ನೂ ನಿರ್ವಹಿಸುತ್ತಾರೆಂದರೆ ನೀವು ನಂಬಲೇಬೇಕು. ಅಂತೆಯೇ ಅವರ ಉಡುಗೆ ತೊಡುಗೆಯೂ ಅಷ್ಟೇ ಸರಳ. ಬಿಳಿ ಲುಂಗಿ ಹಾಗೂ ಅದರ ಮೇಲೊಂದು ಬಣ್ಣ ಬಣ್ಣದ ಅಂಗಿ. ಹೀಗೆ ಎಲ್ಲರದು ಒಂದು ಹಾದಿ ಆದರೆ ಇವರದು ಹಾದಿ ಇಲ್ಲದ ಜಾಗದಲ್ಲಿ ತಮಗೂ ತಮ್ಮವರಿಗೂ ಹಾದಿ ಮಾಡಿ ಕೊಟ್ಟ ಕಥೆ.

ಸ್ವಾಮಿ ಜಗದಾತ್ಮಾನಂದ ಅವರ ಬದುಕಲು ಕಲಿಯಿರಿ' ಪುಸ್ತಕವನ್ನು ನೀವೆಲ್ಲರೂ ಓದಿರುತ್ತೀರಿ, ಕಡೆ ಪಕ್ಷ ಓದದಿದ್ದರೂ ಶೀರ್ಷಿಕೆಯನ್ನಾದರೂ ಕೇಳಿರುತ್ತೀರಿ. ಅರೆ, ನಾವೆಲ್ಲರೂ ಕಲಿಯುವುದು ಬದುಕಲೊ ಅಥವಾ ಓದಿ ನೌಕರಿ ಮಾಡಲೋ... ಎಂಬ ಪ್ರಶ್ನೆ ಆಗಾಗ ಇಣುಕು ಹಾಕುತ್ತಿರುತ್ತದೆ. ಅದರಲ್ಲೂ ಇತ್ತೀಚೆಗೆ ಕೇಳಿಬರುತ್ತಿರುವ ವಾರ್ತೆಗಳನ್ನು ನೋಡಿದರಂತೂ ಇದು ಅಕ್ಷರಶಃ ಸತ್ಯ ಅನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಕಲಿಯುತ್ತಿರುವುದು ನೌಕರಿ ಮಾಡಲೇ ಹೊರತು ಬದುಕಲಲ್ಲ. ಅದೇ ನಮ್ಮೆಲ್ಲರ ಮೂಲ ಸಮಸ್ಯೆ. ಹಾಗಾಗಿಯೇ ಕೈ ತುಂಬಾ ಸಂಬಳ ಬರುವ ಎಂಜಿನಿಯರ್ ಒಬ್ಬನಿಗೆ ನಾಳೆಯಿಂದ ನಿನಗೆ ಕೆಲಸವಿಲ್ಲ ಎಂದಾಗ ಆಕಾಶವೇ ತನ್ನ ಮೇಲೆ ಬಿದ್ದಂತಾಡುತ್ತಾನೆ. ಅದು ಸ್ವಾಭಾವಿಕ ಕೂಡ. ಮೊದಲೆಲ್ಲ ಕೂಡು ಕುಟುಂಬದಲ್ಲಿ ಅಲ್ಲಿ ಇಲ್ಲಿ ಮನೆಯ ಸದಸ್ಯರೊಬ್ಬರು ಈ ರೀತಿಯ ಕೆಲಸವಿಲ್ಲದ ಅಥವಾ ಕೆಲಸ ಕಳೆದುಕೊಂಡ ಸಮಸ್ಯೆ ಎದುರಿಸಿದರೆ ಅದೊಂದು ಸಮಸ್ಯೆಯೇ ಅಲ್ಲ ಎಂಬಂತೆ ಉದಾಸೀನ ಮಾಡುತ್ತಿದ್ದರು. ಏಕೆಂದರೆ ಅಲ್ಲಿ ದುಡಿಯುವ ಕೈಗಳು ಇದ್ದವು. ತುತ್ತು ಅನ್ನಕ್ಕೆ ಹಾಗೂ ಸೂರಿಗೆ ಚಿಂತೆ ಇರುತ್ತಿರಲಿಲ್ಲ. ಆದರೆ, ಇದು ಸಾಫ್ಟ್‌ವೇರ್ ದುನಿಯಾ. ಬದುಕೆಂದರೇನು ಎಂದು ಕಣ್ ಬಿಟ್ಟು ನೋಡುವ ಮುನ್ನವೇ ಕೈ ತುಂಬ ಬರುವ ಸಂಬಳ ಬದುಕೆಂಬ ಬದುಕಿನ ಒಳ ಹರಿವುಗಳನ್ನು ಕಾಣಲು ಬಿಡುವುದಿಲ್ಲ. ಪರಿಣಾಮ ನಾಳೆಯಿಂದ ನಿನಗೆ ನೌಕರಿ ಇಲ್ಲ ಎಂದಾಗ ಟೆಕ್ಕಿ ಭಯಭೀತನಾಗಿ ಕೈಚೆಲ್ಲಿ ಕೂಡುವಂತಾಗುತ್ತಾನೆ. ಕೆಲಸವಿಲ್ಲದೇ ಇದ್ದಾಗ ಅಥವಾ ಉದ್ಯಮವು ನಷ್ಟದಲ್ಲಿದಾಗ ಉದ್ಯಮಿ ಆದವನು ಕೆಲಸ ಕೊಡುವುದಾದರೂ ಹೇಗೆ ಎಂಬ ಸಹಜ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ ಅದು ಸರಿಯೇ. ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕಳೆದ ಎರಡು ವರ್ಷಗಳಿಂದ ಸಾಫ್ಟ್ವೇರ್ ಲೋಕದಲ್ಲಿಪಿಂಕ್ ಸ್ಲಿಪ್' ಪರ್ವ (ಕೆಲಸದಿಂದ ಕಡ್ಡಾಯವಾಗಿ ವಿಮುಕ್ತಿ ಗೊಳಿಸುವುದಕ್ಕೆ ಕಾರ್ಪೊರೇಟ್ ವಲಯದಲ್ಲಿ ಆಂಗ್ಲ ಭಾಷೆಯಲ್ಲಿ ಬಳಸಲ್ಪಡುವ ಪದ) ತಹಬಂದಿಗೆ ಬಂದಿಲ್ಲ.
ಒಂದು ಅಂದಾಜಿನ ಪ್ರಕಾರ ಅಮೆರಿಕಾದಲ್ಲಿಯೇ ಸುಮಾರು ಒಂದು ಲಕ್ಷದ ತೊಂಬತ್ತು ಸಾವಿರ ಜನರನ್ನು ದೊಡ್ಡ ದೊಡ್ಡ ಕಂಪನಿಗಳು ೨೦೨೩ ಹಾಗೂ ೨೦೨೪ ರ ಹಣಕಾಸು ವರ್ಷದಲ್ಲಿ ಕೆಲಸದಿಂದ ವಜಾ ಮಾಡಿದೆ. ಅದರಲ್ಲೂ ಕೆಲವು ಕಂಪನಿಗಳು ತಮ್ಮ ಕಂಪನಿಗಳ ನಿವ್ವಳ ಲಾಭ ಹೆಚ್ಚಿದ್ದರೂ ನಾಳೆಯ ಸವಾಲುಗಳನ್ನು ಗಮನದಲ್ಲಿಟ್ಟು ಉದ್ಯೋಗಿಗಳನ್ನು ವಜಾ ಮಾಡುತ್ತಿವೆ. ಆ ಸಾಲಿನಲ್ಲಿ ಇದೀಗ ಭಾರತೀಯ ಮೂಲದ ಬಹು ರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿ ಫ್ರೆಶ್ ವರ್ಕ್ಸ್ ಹೊಸ ಸೇರ್ಪಡೆ. ಈ ನಡೆಯನ್ನು ಸಾಫ್ಟ್‌ವೇರ್ ಲೋಕದ ಮತ್ತೊಬ್ಬ ದಿಗ್ಗಜ ಶ್ರೀಧರ್ ವೆಂಬು ಟೀಕಿಸಿದ್ದಾರೆ. ಟೀಕಿಸಲು ಕಾರಣವೂ ಉಂಟು ಒಂದು ಅಂದಾಜಿನ ಪ್ರಕಾರ ಫ್ರೆಶ್ ವರ್ಕ್ಸ್ ಕಂಪನಿಯು ೧ ಬಿಲಿಯನ್ ನಷ್ಟು ನಗದನ್ನು ಹೊಂದಿದ್ದರೂ ಸುಮಾರು ಶೇ. ೧೩ ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ನಡೆಯನ್ನು ಶ್ರೀಧರ್ ವೆಂಬು ಮಾನವನ ದುರಾಸೆಯ ಪರಮಾವಧಿ ಎಂದೇ ವ್ಯಾಖ್ಯಾನಿಸಿದ್ದಾರೆ. ಒಂದು ಸಂಸ್ಥೆ ಬೆಳೆದು ಸಾಧಿಸಬೇಕೆಂದರೆ ಅಲ್ಲಿನ ಉದ್ಯೋಗಿಗಳೇ ಸಂಸ್ಥೆಯ ಸರ್ವಸ್ವ. ಅದರಲ್ಲೂ ಅಪಾರ ಬುದ್ಧಿಮತ್ತೆಯನ್ನು ಬಯಸುವ ಸಾಫ್ಟ್ವೇರ್ ಲೋಕದಲ್ಲಂತೂ ಇದು ಅಕ್ಷರಶ ನಿಜ. ಹಾಗಾದರೆ ಶ್ರೀಧರ್ ವೆಂಬುಗೇನು ಗೊತ್ತು ಉದ್ಯಮಿಗಳ ಕಷ್ಟ ಎಂದರೆ ಶ್ರೀಧರ್ ವೆಂಬು ಸ್ವತಃ ಒಬ್ಬ ಸಾಫ್ಟ್ವೇರ್ ಉದ್ಯಮಿ. ದೇಶದ ನಾನಾ ಸಾಫ್ಟ್ವೇರ್ ದಿಗ್ಗಜರದ್ದೇ ಒಂದು ದಾರಿ ಆದರೆ ಇವರದೇ ಒಂದು ದಾರಿ. ಪ್ರಪಂಚದಾದ್ಯಂತ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಕೋವಿಡ್ ಒತ್ತಡದಲ್ಲಿ ಸಾವಿರಾರರು ಜನರನ್ನು ಪಿಂಕ್ ಸ್ಲಿಪ್ ಕೊಟ್ಟು ಮನೆಗೆ ಕಳಿಸುತ್ತಿದರೆ ಶ್ರೀಧರ್ ವೆಂಬು ಅವರ ಕಂಪನಿ ಝೋಹೋ ಮಾತ್ರ ಯಾವುದೇ ಉದ್ಯೋಗಿಯನ್ನು ವಜಾ ಮಾಡಲಿಲ್ಲ. ಅಂತೆಯೇ ಕಳೆದ ೨೫ ವರ್ಷಗಳ ಇತಿಹಾಸದಲ್ಲಿಯೇ "ಝೋಹೋ" ಯಾವುದೇ ಲೇ-ಆಪ್‌ಗಳ ದಾಖಲೆಯನ್ನು ಹೊಂದಿಲ್ಲ. ಹಾಗಾದರೆ ವೆಂಬು ಕಟ್ಟಿದ ಝೋಹೋ ಸಂಸ್ಥೆಯ ಹಾಗೂ ಶ್ರೀಧರ್ ವೆಂಬು ಅವರ ವಿಚಾರಗಳ ಇಣುಕು ನೋಟ ಅತ್ಯಗತ್ಯ.
ವೆಂಬು ತಂದೆ ಚೆನ್ನೈ ಕೋರ್ಟ್ ಕಚೇರಿಯಲ್ಲಿ ಕುಳಿತು ನ್ಯಾಯಾಧೀಶರ ಜಡ್ಜ್ಮೆಂಟ್‌ಗಳನ್ನೂ ಟೈಪಿಂಗ್ ಮಷೀನಿನಲ್ಲಿ ಕುಟ್ಟಿ ಕೊಟ್ಟು ಬಿಳಿ ಹಾಳೆಗಳ ಮೇಲೆ ಹಸನಾದ ಅಕ್ಷರಗಳನ್ನು ಮೂಡಿಸುತ್ತಿದ್ದರೆ ಮುಂದೊಂದು ದಿನ ತನ್ನ ಮಗ ಶ್ರೀಧರ್ ವೆಂಬು ಹಳ್ಳಿಗಳ ಮಕ್ಕಳ ಬಾಳನ್ನು ಹಸನಾಗಿಸುವತ್ತ ದಿಟ್ಟ ಹೆಜ್ಜೆ ಇಟ್ಟಾನೆಂದು ಕನಸು ಮನಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಆದರೆ ವೆಂಬು ಸದ್ದಿಲ್ಲದೇ ೭೦೦೦ ಕೋಟಿ ರೂಪಾಯಿಗಳ ಝೋಹೋ ಎಂಬ ಸಾಫ್ಟವೇರ್ ಸಾಮ್ರಾಜ್ಯ ಕಟ್ಟುವ ದಾರಿಯಲ್ಲಿ ತನಗರಿವಿಲ್ಲದೆ ಹೆಜ್ಜೆ ಇಟ್ಟಿದ್ದರು. ಇಂಜಿನಿಯರಿಂಗ್ ಪದವಿ ಮುಗಿದ ಮೇಲೂ ಓದುವ ಹಸಿವು ನೀಗಿರಲಿಲ್ಲ, ಓದುತ್ತ ತಂತ್ರಜ್ಞಾನಗಳ ಪೂರ್ವಾಪರವನ್ನು ಅರಿತುಕೊಳ್ಳುತ್ತಿದ್ದರು. ಈ ಜ್ಞಾನಾರ್ಜನೆಯ ಹಸಿವು ನ್ಯೂ ಜರ್ಸಿಯ ಪ್ರಿನ್ಸಟನ್ ಯೂನಿವರ್ಸಿಟಿಯ ಪಿಎಚ್ ಡಿ ಪದವಿಯತ್ತ ಕರೆದೊಯ್ದಿತ್ತು. ತದ ನಂತರ ಅಣ್ಣನ ಸಲಹೆಯಂತೆ ಚೆನ್ನೈಗೆ ಮರಳಿ ತಮ್ಮದೇ ಆದ ಹಾರ್ಡ್ವೇರ್ ಉದ್ಯಮ ಸ್ಥಾಪಿಸಬೇಕೆಂದು ಸ್ಥಾಪಿಸಿದ್ದು "ಅಡ್ವೆಂಟ್ ನೆಟ್" ಎಂಬ ಸಂಸ್ಥೆ. ಆದರೆ, ಆದದ್ದೇ ಬೇರೆ ಕೂಡಿಟ್ಟ ಹಣವೆಲ್ಲ ಹಾರ್ಡ್ವೇರ್ ಮಷೀನ್‌ಗಳನ್ನೂ ತಯಾರಿಸುವದರಲ್ಲಿ ಕಳೆದುಹೋಗಿತ್ತು. ಆದರೆ ಮಷೀನ್‌ಗಳಿಗೆ ಕಾಯಕಲ್ಪ ಸಿಗಲಿಲ್ಲ, ಆಗ ಈಗಿನಂತೆ ಸ್ಟಾರ್ಟ್ ಅಪ್ ಗಳಿಗೆ ಹೇರಳ ಹಣವು ಹರಿದುಬರುತ್ತಿರಲಿಲ್ಲ. ಆದರೂ ದೃತಿಗೆಡದೆ ಹಾರ್ಡ್ವೇರ್ ಬದಲು ಸಾಫ್ಟ್ವೇರ್ ತಂತ್ರ ಜ್ಞಾನದತ್ತ ಎಲ್ಲ ಶಕ್ತಿಯನ್ನು ಕೇಂದ್ರೀಕರಿಸಿ ಜಪಾನ್ ನ ದಿಗ್ಗಜ ಕಂಪನಿಗಳಿಗೆ ಸೆಡ್ಡು ಹೊಡೆಯುವಂತೆ ಸಾಫ್ಟ್ವೇರ್ ಅಪ್ಲಿಕೇಶನ್‌ಗಳನ್ನು ನಿರ್ಮಾಣ ಮಾಡಿ ಸಣ್ಣ ಪುಟ್ಟ ಕಂಪನಿಗಳಿಗೆ ಮಾರಾಟ ಮಾಡುವಲ್ಲಿ ಯಶಸ್ವಿ ಆಗಿದ್ದರು ಶ್ರೀಧರ್ ವೆಂಬು. ಹೀಗೆ ಕೇವಲ ಎರಡೇ ವರ್ಷಗಳಲ್ಲಿ ಅವರ ಸಂಸ್ಥೆ ೮ ಕೋಟಿಯ ಲಾಭವನ್ನು ಗಳಿಸಿತ್ತು. ಆಗ ಅದ್ಯಾರೋ ಸಂಸ್ಥೆಯನ್ನು ದುಪ್ಪಟು ರೇಟಿಗೆ ಮಾರಿ ಬಿಡಿ ಅಂದರಂತೆ ಆದರೆ ವೆಂಬು ಒಪ್ಪಲಿಲ್ಲ. ಅದಾದ ಕೆಲವೇ ದಿನಗಳಲ್ಲಿ ಡಾಟ್ ಕಾಮ್ ಹೊಡೆತಕ್ಕೆ ಸಿಕ್ಕ ಹಲವಾರು ಕಂಪನಿಗಳು ತರೆಗೆಲೆಯಂತೆ ನಷ್ಟಕ್ಕೆ ಸಿಲುಕಿ ನಲುಗಿದ್ದವು. ಶ್ರೀಧರ್ ವೆಂಬು ಕಂಪನಿಯ ಶೇ. ೮೦ ಗ್ರಾಹಕರು ಅಂಗಡಿ ಮುಚ್ಚಿದ್ದರು. ಆದರೆ ವೆಂಬು ಮೊದಲಿಂದಲೂ ಯಾವುದೇ ಸಾಲ ಸೋಲ ಮಾಡುವ ಜಂಜಾಟಕ್ಕೆ ಹೋಗಿದ್ದಿಲ್ಲ ಆದ್ದರಿಂದ ೨೦೦೦ ಇಸವಿಯ ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿಯೂ ೧೫೦೦ ಇಂಜಿನಿಯರ್ ಗಳನ್ನು ಪಿಂಕ್ ಸ್ಲಿಪ್ ಕೊಟ್ಟು ಕಳಿಸಲಿಲ್ಲ. ಶ್ರೀಧರ್ ವೆಂಬು ಅವರ ಸಂಸ್ಥೆಯಲ್ಲಿ ಕೇವಲ ೮ ರಿಂದ ೧೨ ತಿಂಗಳ ಸಂಬಳಕ್ಕಾಗುವಷ್ಟು ಹಣವಿತ್ತು, ಆಗ ವೆಂಬು ೨೦೦೦ ಇಸವಿಯನ್ನು ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಇಯರ್ ಎಂದು ಘೋಷಿಸಿ ಇದ್ದ ಎಲ್ಲ ಎಂಜಿನಿಯರ್‌ಗಳನ್ನು ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ನಲ್ಲಿ ತೊಡಗಿಸಿದ್ದರು. ಆಗ ಹುಟ್ಟಿದ್ದೇ "ಝೋಹೋ" ತದ ನಂತರ ಅಂದಿನಿಂದ ಇಂದಿನವರೆಗೆ ವೆಂಬು ಹಿಂತಿರುಗಿ ನೋಡಲಿಲ್ಲ.
ಹೀಗೆ ವೆಂಬು "ಝೋಹೋ" ಹುಟ್ಟು ಹಾಕಿದ ಪರಿ ಒಂದು ಬಗೆಯದಾದರೆ ನಂತರ ಪ್ರತಿಪಾದಿಸಿದ ಹಾಗೂ ಅಳವಡಿಸಿಕೊಂಡಿರುವ ನಿಲುವುಗಳು ಮತ್ತೊಂದು ಬಗೆಯದು. ಎಲ್ಲರಂತೆ ದೊಡ್ಡ ದೊಡ್ಡ ನಗರಗಳಲ್ಲಿಯ ಐಷಾರಾಮಿ ಕಚೇರಿಗಳನ್ನು ತೆಗೆದು ಕಾರ್ಯಾಚರಣೆ ಮಾಡುವುದಕ್ಕಷ್ಟೇ ಸೀಮಿತವಾಗದೆ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಹಳ್ಳಿಗಳಲ್ಲಿ ತಮ್ಮ ಕಚೇರಿಗಳನ್ನು ತೆರೆದು ಸ್ಥಳೀಯರಿಗೆ ಸಾಫ್ಟ್‌ವೇರ್ ಸಂಸ್ಥೆಯ ಹೆಬ್ಬಾಗಿಲನ್ನು ತೆರೆದಿತ್ತು. ಅಲ್ಲದೆ ದೊಡ್ಡ ದೊಡ್ಡ ಕಂಪೆನಿಗಳಂತೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಗೆ ಕ್ಯಾಂಪಸ್ ಇಂಟರ್‌ವ್ಯೂಗಾಗಿ ತಡಕಾಡದೆ ನೆಕ್ಸ್ಟ್‌ ಬೆಸ್ಟ್ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕೊಟ್ಟಿತು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಪ್ರಾಚೀನ ಕಾಲದ ಗುರುಕುಲ ಪದ್ಧತಿಗೆ ಒತ್ತು ಕೊಟ್ಟು ೨೦೦೪ ರಲ್ಲಿ ಕೇವಲ ಆರು ವಿದ್ಯಾರ್ಥಿಗಳೊಂದಿಗೆ ಹಾಗೂ ಎರಡು ಶಿಕ್ಷಕರೊಂದಿಗೆ ಝೋಹೋ ಯೂನಿವರ್ಸಿಟಿ ಯನ್ನು ಪ್ರಾರಂಭಿಸಿ ಸಾಫ್ಟ್‌ವೇರ್‌ನ ಆ ಆ ಈ ಈ ಯನ್ನು ಕಲಿಸಿ ನಾಳಿನ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ತಯಾರು ಮಾಡುವ ಕೆಲಸಕ್ಕೆ ನಾಂದಿ ಹಾಡಿತ್ತು. ಹಾಗೂ ಹಾಗೆ ಓದಲು ಬಂದ ಮಕ್ಕಳಿಗೆ ತಾನೇ ಒಂದಿಷ್ಟು ಹಣವನ್ನು ಕೊಡುತ್ತಿದ್ದದ್ದು ಮತ್ತೊಂದು ವಿಶೇಷ. ಹೀಗೆ ಹೊಸ ಹೊಸ ಸಾಧ್ಯತೆಗಳತ್ತ ಝೋಹೋ ಸಂಸ್ಥೆಯನ್ನು ಹೊರಳುವಂತೆ ಮಾಡಿ ಗ್ರಾಮೀಣ ಭಾರತದ ಮಕ್ಕಳಿಗೂ ಸಾಫ್ಟ್ವೇರ್ ಬೆಳಕನ್ನು ಕಾಣುವಂತೆ ಮಾಡಿದವರು ಶ್ರೀಧರ್ ವೆಂಬು, ಪರಿಣಾಮವಾಗಿ ಚಿಣಣಡಿiಣioಟಿ ಅಂದರೆ ಕೆಲಸ ಬಿಡುವವರ ಸಂಖ್ಯೆ ಅನ್ಯ ಕಂಪೆನಿಗಳಲ್ಲಿ ಶೇ. ೨೦ ಇದ್ದರೆ ಇವರ ಕಂಪನಿಯಲ್ಲಿ ಅದು ಕೇವಲ ಶೇ. ೭, ಇದು ನಿಜಕ್ಕೂ ಎಲ್ಲರೂ ಹೆಮ್ಮೆಪಡುವ ವಿಷಯ ಅಷ್ಟೇ ಅಲ್ಲ ವೆಂಬು ವಿಚಾರಗಳಿಗೆ ಇಂಬು ಕೊಡುವ ಸಮಯವು ಹೌದು. ಇದೆಲ್ಲದರ ನಡುವೆ ಇತ್ತೀಚೆಗೆ ಶ್ರೀಧರ್ ವೆಂಬು ಸೆಮಿಕಂಡಕ್ಟರ್ ಕಾರ್ಖಾನೆಗಾಗಿ ಅರ್ಜಿ ಸಲ್ಲಿಸಿ ೨೦ ಮಿಲಿಯನ್ ಡಾಲರ್‌ನಷ್ಟು ಹೂಡಿಕೆಯನ್ನು ಮಾಡಿದ್ದಾರೆ. ಭಾರತೀಯರು ಸೆಮಿಕಂಡಕ್ಟರ್ ಲೋಕದ ಅಚ್ಚರಿಗಾಗಿ ಕಾದು ಕುಳಿತ್ತಿದ್ದಾರೆ. ಇದೇ ಅಲ್ಲವೇ ಸುಸ್ಥಿರ ಅಭಿವೃದ್ಧಿ.