ಟವಲ್ ಹಾಕ್ಲಾ ಬೆಂಬಲ ಕೊಡ್ಲಾ?
ಪರಿಸ್ಥಿತಿ ಹೀಗಾಗಿ ಹೋಯ್ತಲ್ಲ ಏನು ಮಾಡುವುದು? ಎಂದು ಚಿಂತೆ ಮಾಡುತ್ತ ಟಿವಿ ಮುಂದೆ ಕುಳಿತಿದ್ದ ಅಲೈಕನಕನಿಗೆ ಕಿವುಡನುಮಿ ಗಂಟಲು ಹರಿದುಕೊಳ್ಳುವ ಹಾಗೆ ಕಿರುಚಿಕೊಳ್ಳುತ್ತ… ಹಿಂದೆ ಮುಂದೆ ಓಡಾಡುತ್ತಿರುವವರು ಈಗ ಟವಲ್ ಹಾಕ್ತಾರಾ? ಬೆಂಬಲ ಕೊಡ್ತಾರಾ…? ನೀವೇ ನೋಡಿ.. ನೀವೇ ನೋಡಿ ಎಂದು ಒದರುತ್ತಿದ್ದಳು. ಕನಕನ ತಲೆಯ ಮೂಲೆಯಲ್ಲಿ ಎಲ್ಲೋ ಛಳ್ ಎಂದಂತಾಯಿತು. ಹಾಗೆ ಆದದ್ದೇ ತಡ…..
ನಾ ಟವಲ್ ಹಾಕ್ಲಾ?
ಬೆಂಬಲ ಕೊಡ್ಲಾ
ಅವರ ಕಡೆ ಹೋಗ್ಲಾ
ಇಲ್ಲ ಸೆಟೆದೋಗ್ಲಾ
ಎಂಬ ಹಾಡನ್ನು ತಾನೇ ಸೃಷ್ಟಿ ಮಾಡಿಕೊಂಡು ಹಾಡತೊಡಗಿದ. ಮೊದಲು ಮೆಲ್ಲಗೇ ಹಾಡುತ್ತಿದ್ದ ಕನಕ ಒಮ್ಮಿಂದೊಮ್ಮೆಲೇ ಜೋರಾಗಿ ಹಾಡತೊಡಗಿದ. ಅಕ್ಕಪಕ್ಕದ ಮನೆಯವರು ರೆಡಿಯೋ ಎಷ್ಟು ಜೋರಾಗಿ ಹಚ್ಚಿದ್ದಾರೆ ನೋಡು ಎಂದು ಆಡಿಕೊಂಡರು. ಮೇಕಪ್ ಮರೆಮ್ಮಳು… ಏನೋ ಹೊಸ ನಾಟಕ ಕಲಿತಿದ್ದಂಗೆ ಇದಾರೆ ಎಂದು ಅಂದುಕೊಂಡು ಮುಂದೆ ಹೋದಳು. ಅಲೈ ಕನಕನ ಮನೆ ಮುಂದೆ ಹೋಗುತ್ತಿದ್ದ ಕಂಟಿನಗೌಡನಿಗೆ ಈ ಹಾಡು ಕೇಳಿ… ಇದೇನಪ್ಪ ? ಹೀಗೆ ಕೆಟ್ಟದನಿಯಿಂದ ಹಾಡುತ್ತಿದ್ದಾನೆ. ಏನು ನಡೀತಾ ಇದೆ ಎಂದು ನೋಡಿಕೊಂಡು ಬರುತ್ತೇನೆ ಎಂದು ಒಳಗೆ ಹೋಗಿ ಏನೋ ಕನಕ ಅದೂ ಎಂದಾಗ ಅಯ್ಯೋ ದೊಡಪ್ಪಾರೆ….. ಕೇಳಿ ನಾನೂ ಇಷ್ಟು ವರ್ಸ ಆತು. ಎಲ್ಲರೂ ಕುರ್ಚಿ ಮೇಲೆ ಟವಲ್ ಆಕುತಿದಾರೆ… ನಾನು ಆಕ್ಲಾ… ಸಪೋಲ್ಟ್ ಮಾಡ್ಲಾ ಅದಕ್ಕಾಗಿ ಈ ಚಿಂತೆ… ಈ ಹಾಡು ಎಂದು ನಿಟ್ಟುಸಿರು ಬಿಟ್ಟಂಗೆ ಮಾಡಿದ. ಎಲ್ಲಿ ಟವಲ್…. ಎಲ್ಲಿ ಬೆಂಬಲ ಅಂದಾಗ…. ಅಯ್ಯೋ ದೊಡ್ಡಪ್ಪಾ…. ಅದೇ ಕುರ್ಚಿ ಮೇಲೆ ಟವಲ್ ಆಕೋದು.. ಅಂದ… ಅಲ್ಲೇ ಇದ್ದ ಕುರ್ಚಿಯ ಮೇಲೆ ಕಂಟಿನಗೌಡನು ತನ್ನ ಹೆಗಲ ಮೇಲಿದ್ದ ಟವಲ್ ಕುರ್ಚಿಯ ಮೇಲೆ ಒಗೆದು… ನಾನು ಹಾಕಿದ್ದೀನಿ ಬಿಡೋ ಅಂದು ಸುಮ್ಮನೇ ಹೋದ.