ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯ ಬರ್ಬರ ಹತ್ಯೆ
ಮಂಗಳೂರು: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಕಡಪ್ಪರ ಸಮೀರ್ ಎಂಬಾತನನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.
ಸಮೀರ್ ರವಿವಾರ ರಾತ್ರಿ ತಾಯಿ ಜತೆ ಕಾರಿನಲ್ಲಿ ಕಲ್ಲಾಪಿನ ಫಾಸ್ಟ್ ಫುಡ್‌ಸ್ಟಾಲ್‌ವೊಂದಕ್ಕೆ ಉಪಹಾರಕ್ಕೆ ತೆರಳಿದ್ದ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ. ಸಮೀರ್ ಕಾರಿನಿಂದ ಇಳಿಯುತ್ತಿದ್ದಂತೆ ಮತ್ತೊಂದು ಕಾರುನಲ್ಲಿದ್ದ ಮೂವರ ತಂಡ ಮಾರಕಾಸ್ತ್ರಗಳಿಂದ ಸಮೀರ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಸಮೀರ್ ತಪ್ಪಿಸಿಕೊಂಡು ರೈಲ್ವೇ ಹಳಿ ಕಡೆಗೆ ಓಡಿರುವುದಾಗಿ ತಾಯಿ ಹೇಳಿಕೆ ನೀಡಿದ್ದರು.
ಘಟನೆಯ ಮಾಹಿತಿ ತಿಳಿದು ಕಲ್ಲಾಪು ಜಂಕ್ಷನ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದು, ಸಮೀರ್‌ಗಾಗಿ ಹುಡುಕಾಟ ನಡೆಸಿದರು. ತಡರಾತ್ರಿ ಸಮೀರ್ ಮೃತದೇಹವು ಪೊದೆಯಲ್ಲಿ ಸಿಕ್ಕಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಮೀರ್ ಮತ್ತು ತಂಡವು ಇತ್ತೀಚಿಗಷ್ಟೆ ದರೋಡೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು ಎರಡು ದಿನಗಳ ಹಿಂದಷ್ಟೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.