ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಟ್ರಂಪ್ ಪುನರಾಗಮನ: ಶಾಂತಿಯೇ, ಅಸ್ಥಿರತೆಯೇ?

03:30 AM Nov 09, 2024 IST | Samyukta Karnataka

ಜಗತ್ತಿನಾದ್ಯಂತ ಬಹಳಷ್ಟು ಜನರು ತಮ್ಮ ದೇಶಗಳು ಸಾಗುತ್ತಿರುವ ದಿಕ್ಕಿನ ಕುರಿತು ಹತಾಶೆ ಹೊಂದುತ್ತಿದ್ದು, ರಾಜಕೀಯ ವ್ಯವಸ್ಥೆ ಜಾಗತಿಕ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ ಎಂಬ ಮನಸ್ಥಿತಿಯನ್ನು ತಾಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ೨೦೨೪ರ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನೆರವೇರಿದೆ. ತಜ್ಞರ ಅಭಿಪ್ರಾಯದ ಪ್ರಕಾರ, ಶೇ. ೭೦ಕ್ಕೂ ಹೆಚ್ಚು ಅಮೆರಿಕನ್ನರು ತಮ್ಮ ದೇಶ ಸಾಗುತ್ತಿರುವ ದಿಕ್ಕಿನ ಕುರಿತು ಅಸಮಾಧಾನ ಹೊಂದಿದ್ದು, ಬೆಲೆ ಏರಿಕೆ ಮತ್ತು ವಲಸೆಯಂತಹ ಗಂಭೀರ ವಿಚಾರಗಳನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸುವುದರ ಬಗ್ಗೆ ಅನುಮಾನ ಹೊಂದಿದ್ದರು.
ಇಂದಿನ ಬಹುತೇಕ ಹತಾಶೆಗಳಿಗೆ ದಿನೇದಿನೇ ಕೆಟ್ಟದಾಗುತ್ತಿರುವ ಜಾಗತಿಕ ರಾಜಕೀಯವೇ ಕಾರಣ ಎಂದು ರಾಜಕೀಯ ತಜ್ಞರಾದ ಇಯಾನ್ ಬ್ರೆಮ್ಮರ್ ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರಗಳನ್ನು ವ್ಯಾಪಾರ, ಸಂವಹನ, ತಂತ್ರಜ್ಞಾನ, ಸರಕು, ಸೇವೆ, ಆಲೋಚನೆ ಮತ್ತು ಸಂಸ್ಕೃತಿಗಳ ಮೂಲಕ ಸಂಪರ್ಕಿಸಿರುವ ಜಾಗತೀಕರಣ, ಸಾಮಾನ್ಯ ನಾಗರಿಕರಿಗೆ ನೆರವಾಗುವ ಬದಲು ಕೇವಲ ಶಕ್ತಿಶಾಲಿಗಳಿಗೆ ಪೂರಕವಾಗಿದೆ ಎಂದು ಜನರಿಂದು ಭಾವಿಸುತ್ತಿದ್ದಾರೆ. ಈ ಶ್ರೀಮಂತ ವರ್ಗದ ಜನರು ಸಾರ್ವಜನಿಕರ ಅಗತ್ಯಗಳನ್ನು ಕಡೆಗಣಿಸಿ, ತಮ್ಮ ಸ್ವಾರ್ಥವನ್ನೇ ಸಾಧಿಸುತ್ತಿರುವುದರಿಂದ ಜನರ ಕೋಪ ಜಾಗತೀಕರಣದತ್ತ ತಿರುಗಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಉಂಟಾದ ಹಣದುಬ್ಬರದ ಏರಿಕೆ ಮತ್ತು ಹೆಚ್ಚಾದ ವಲಸೆಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ.
ಮೊದಲೆಲ್ಲ ಅನುಭವ ಮತ್ತು ದೂರದೃಷ್ಟಿಗಳು ಆಡಳಿತದಲ್ಲಿರುವವರಿಗೆ ಚುನಾವಣೆಗಳಲ್ಲಿ ಮೇಲುಗೈ ಸಾಧಿಸಲು ನೆರವಾಗುತ್ತಿದ್ದವು. ಆದರೆ, ಇಂದಿನ ರಾಜಕೀಯ ವಾತಾವರಣದಲ್ಲಿ ಹಣದುಬ್ಬರ ಮತ್ತು ವಿದೇಶಿಗರ ವಲಸೆಯ ಕುರಿತು ಇರುವ ಆಕ್ರೋಶ ಅಧಿಕಾರಸ್ಥರಿಗೆ ವಿರೋಧಿಯಾಗಿ ಪರಿಣಮಿಸಿದೆ. ತಮ್ಮ ಸಮಸ್ಯೆಗಳಿಗೆ ಅಧಿಕಾರದಲ್ಲಿರುವ ನಾಯಕರೇ ಕಾರಣವೆಂದು ಜನರು ಆರೋಪಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ, ಬಹಳಷ್ಟು ನಾಯಕರು ಅಧಿಕಾರ ಕಳೆದುಕೊಂಡಿದ್ದಾರೆ ಅಥವಾ ಚುನಾವಣೆಯಲ್ಲಿ ತುಂಬಾ ಪ್ರಯಾಸಪಟ್ಟಿದ್ದಾರೆ. ಅಧಿಕಾರ ವಿರೋಧಿ ಅಲೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದು ಯುನೈಟೆಡ್ ಕಿಂಗ್‌ಡಮ್, ಜಪಾನ್, ಫ್ರಾನ್ಸ್, ಜರ್ಮನಿ, ಆಸ್ಟಿçಯಾ, ಭಾರತ ಮತ್ತು ದಕ್ಷಿಣ ಆಫ್ರಿಕಾಗಳಲ್ಲೂ ಕಂಡುಬಂದಿದೆ.
ನ. ೭, ಗುರುವಾರದಂದು ಈಸ್ಟರ್ನ್ ಸಮಯ ೪:೧೧ರ ವೇಳೆಗೆ ಡೊನಾಲ್ಡ್ ಟ್ರಂಪ್ ಅವರು ೨೨೬ ಮತ ಗಳಿಸಿದ ಕಮಲಾ ಹ್ಯಾರಿಸ್ ಅವರನ್ನು ಹಿಂದಿಕ್ಕಿ, ೨೯೫ ಸ್ಥಾನಗಳನ್ನು ಗೆದ್ದುಕೊಂಡು, ಭಾರಿ ಬಹುಮತ ಸಂಪಾದಿಸಿದರು. ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷರಾಗಿದ್ದಾಗ, ಜೋ ಬೈಡನ್ ನೇತೃತ್ವದ ನಾಲ್ಕು ವರ್ಷಗಳ ಅವಧಿಯ ಸರ್ಕಾರ ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಆದ್ದರಿಂದ ಈ ಬಾರಿಯ ಚುನಾವಣೆಯ ಫಲಿತಾಂಶ ಆಶ್ಚರ್ಯಕರವೇನಲ್ಲ. ನಾಯಕನ ಜನಬೆಂಬಲ ಪ್ರಮಾಣ ಈಗಿನಷ್ಟು ಕಡಿಮೆಯಿರುವಾಗ, ಯಾವುದೇ ಪಕ್ಷ ಶ್ವೇತ ಭವನದಲ್ಲಿ ಅಧಿಕಾರದಲ್ಲಿ ಉಳಿದ ಇತಿಹಾಸವೇ ಇಲ್ಲ.
ಅಮೆರಿಕದ ಹಣದುಬ್ಬರ ಸಾಂಕ್ರಾಮಿಕದ ಅವಧಿಗಿಂತ ಸಾಕಷ್ಟು ಇಳಿಕೆ ಕಂಡಿದ್ದು, ಈಗ ಅಮೆರಿಕದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್ ನೀಡಿರುವ ಗುರಿಗೆ ಸನಿಹದಲ್ಲಿದೆ. ಆದರೆ, ವರ್ಷಗಳ ಕಾಲದ ಹಣದುಬ್ಬರದ ಪರಿಣಾಮವಾಗಿ ಬೆಲೆಗಳು ಇಂದಿಗೂ ಹೆಚ್ಚಾಗಿದ್ದು, ಅಷ್ಟು ಸುಲಭವಾಗಿ ಇಳಿಯುವಂತೆ ಕಾಣುತ್ತಿಲ್ಲ. ಅದರೊಡನೆ, ಟ್ರಂಪ್ ಅವರ ಯೋಜನೆಗಳು ಹಣದುಬ್ಬರವನ್ನು ಇನ್ನಷ್ಟು ಹೆಚ್ಚಿಸುವ ಅಪಾಯಗಳಿವೆ.
ಸರಿಯೋ ತಪ್ಪೋ, ಆದರೆ ಎಲ್ಲ ಸಮಸ್ಯೆಗಳಿಗೂ ಆಡಳಿತ ಪಕ್ಷವನ್ನೇ ದೂಷಿಸಲಾಗುತ್ತದೆ. ಅದೇ ರೀತಿ, ಗಡಿ ದಾಟಿ ಅಮೆರಿಕದೊಳಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿಯೇ ಇದ್ದು, ಅಕ್ರಮವಾಗಿ ದೇಶವನ್ನು ಪ್ರವೇಶಿಸುವವರು ಅಮೆರಿಕದಲ್ಲೇ ಉಳಿಯಲು ಏನಾದರೂ ಉಪಾಯ ಹುಡುಕುತ್ತಾರೆ. ಬಹಳಷ್ಟು ಅಕ್ರಮ ವಲಸಿಗರನ್ನು ರಿಪಬ್ಲಿಕನ್ ಬೆಂಬಲಿತ ರಾಜ್ಯಗಳಿಂದ ಡೆಮಾಕ್ರಟಿಕ್ ಬೆಂಬಲಿತ ರಾಜ್ಯಗಳಿಗೆ ಸ್ಥಳಾಂತರಿಸಲಾಗಿದ್ದು, ಇದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದ್ದರಿಂದ ವಲಸೆಯ ವಿಚಾರ ಹಿಂದೆಂದಿಗಿಂತಲೂ ಹೆಚ್ಚು ಮುನ್ನೆಲೆಗೆ ಬಂದಿದೆ.
ಗರ್ಭಪಾತಕ್ಕೆ ಅನುಮತಿ, ಆರ್ಥಿಕ ವಿಚಾರಗಳು, ಟ್ರಂಪ್ ಅವರು ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಅವರು ಅಧ್ಯಕ್ಷರಾಗಲು ಅಸಮರ್ಥ ಎಂಬ ಸಂದೇಶಗಳನ್ನು ಹರಡಿ, ಟ್ರಂಪ್ ಒಡ್ಡುವ ಎಲ್ಲಾ ಸವಾಲುಗಳನ್ನು ಮೀರಿ ಅಧಿಕಾರಕ್ಕೆ ಬರಬಹುದು ಎಂದು ಡೆಮಾಕ್ರಾಟ್ಸ್ ಭಾವಿಸಿದ್ದರು. ಆದರೆ, ಅಮೆರಿಕನ್ ಮಾಧ್ಯಮಗಳೇ ಸ್ಪಷ್ಟವಾಗಿ ವಿಭಜನೆ ಹೊಂದಿದ್ದು, ದೇಶಾದ್ಯಂತ ಭಿನ್ನ ನಿಲುವು ಹೊಂದಿರುವವರನ್ನು ಸಂಪರ್ಕಿಸಲು ಉಭಯ ಪಕ್ಷಗಳಿಗೂ ಕಷ್ಟಕರವಾಗಿತ್ತು.
ಅಮೆರಿಕದಲ್ಲಿ, ಮಾಧ್ಯಮ ಜಗತ್ತು ಎರಡು ವಿಭಿನ್ನ ವಿಭಾಗಗಳಾಗಿದ್ದು, ಆನ್‌ಲೈನ್ ತಾಣಗಳು ಜನರು ಈಗಾಗಲೇ ಒಪ್ಪಿರುವುದನ್ನೇ ಅವರಿಗೆ ತೋರಿಸುತ್ತಾ, ಈ ಅಂತರ ಇನ್ನಷ್ಟು ಹೆಚ್ಚುವಂತೆ ಮಾಡುತ್ತಿವೆ. ಯಾವುದೇ ವಿಚಾರದಲ್ಲಾದರೂ ಎರಡೂ ಅಭಿಪ್ರಾಯಗಳನ್ನೊಳಗೊಂಡ ಚರ್ಚೆ ನಡೆಸುವುದು ಅಥವಾ ಸಮಸ್ಯೆಯನ್ನು ಜನರು ಒಂದೇ ರೀತಿಯಲ್ಲಿ ಕಾಣದಿರುವಾಗ ಅದಕ್ಕೆ ಪರಿಹಾರ ಹುಡುಕುವುದು ಕಷ್ಟ. ಇದು ಪ್ರಜಾಪ್ರಭುತ್ವದ ಮಟ್ಟಿಗೆ ಖಂಡಿತಾ ಉತ್ತಮ ಬೆಳವಣಿಗೆಯಲ್ಲ.
ಕೊನೆಯಲ್ಲಿ ಅಮೆರಿಕನ್ನರು ಇಬ್ಬರು ಅಭ್ಯರ್ಥಿಗಳನ್ನು ಅಳೆದು ತೂಗಿ, ಟ್ರಂಪ್ ಅವರ ಸಂದೇಶ ಹೆಚ್ಚು ಮನವೊಲಿಸುವಂತಿದೆ, ತಮಗೆ ಸೂಕ್ತವಾಗಿದೆ ಎಂದು ನಿರ್ಧರಿಸಿದರು. ರಾಜಕೀಯ ಸನ್ನಿವೇಶ ವಿಭಜನೆಗೊಂಡಿದ್ದರೂ, ಜನರು ಟ್ರಂಪ್ ಅವರಿಗೆ ನಿರ್ಣಾಯಕ ಗೆಲುವು ನೀಡಿದರು. ಟ್ರಂಪ್ ೨೦೨೦ಕ್ಕೆ ಹೋಲಿಸಿದರೆ ಈಗ ಹೆಚ್ಚಿನ ರಾಷ್ಟ್ರೀಯ ಬೆಂಬಲ ಮತ್ತು ವ್ಯಾಪಕ ಒಪ್ಪಿಗೆ ಪಡೆದುಕೊಂಡಿದ್ದಾರೆ.
ಉಕ್ರೇನ್ ಮೇಲೆ ತೂಗುಕತ್ತಿ
ಡೊನಾಲ್ಡ್ ಟ್ರಂಪ್ ಪುನರಾಗಮನ ಅಮೆರಿಕಗಿಂತಲೂ ಜಗತ್ತಿನ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಟ್ರಂಪ್ ಆಗಮನದಿಂದ ಅತಿದೊಡ್ಡ ಹಿನ್ನಡೆಯಾಗಲಿರುವುದು ಉಕ್ರೇನ್‌ಗೆ. ಟ್ರಂಪ್ ಬಹಳಷ್ಟು ಸಲ ಉಕ್ರೇನ್ ಯುದ್ಧವನ್ನು ೨೪ ಗಂಟೆಗಳೊಳಗೆ ಕೊನೆಗೊಳಿಸುವುದಾಗಿ ಹೇಳಿದ್ದರು. ರಷ್ಯಾ ಈಗಾಗಲೇ ವಶಪಡಿಸಿಕೊಂಡ ಪ್ರದೇಶವನ್ನು ಅದಕ್ಕೆ ಬಿಟ್ಟುಕೊಟ್ಟು, ಯುದ್ಧವನ್ನು ಸ್ಥಗಿತಗೊಳಿಸುವಂತೆ ಮಾಡುವುದು ಟ್ರಂಪ್ ಯೋಜನೆಯಂತೆ ಕಾಣುತ್ತಿದೆ. ಟ್ರಂಪ್ ತನ್ನ ಅಧಿಕಾರಾವಧಿ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಜೆಲೆನ್ಸ್ಕಿ ಮತ್ತು ವ್ಲಾಡಿಮಿರ್ ಪುಟಿನ್ ಅವರೊಡನೆ ಕದನ ವಿರಾಮದ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಟ್ರಂಪ್ ಕದನ ವಿರಾಮ ಸ್ಥಾಪನೆಗೆ ಉಕ್ರೇನ್‌ಗೆ ಮಿಲಿಟರಿ ನೆರವನ್ನು ಉಭಯ ಪಕ್ಷಗಳೊಡನೆಯೂ ಚೌಕಾಸಿಯ ಸಾಧನವಾಗಿ ಬಳಸಿಕೊಂಡು, ಅಮೆರಿಕದ ಯುರೋಪಿಯನ್ ಮಿತ್ರರನ್ನು ಒಳಗೊಳ್ಳದೆ ಕಾರ್ಯ ನಿರ್ವಹಿಸುವ ಸಾಧ್ಯತೆಗಳಿವೆ. ಒಂದು ವೇಳೆ ಕೆಲವೊಂದು ಪ್ರದೇಶಗಳ ಮೇಲಿನ ಅಧಿಕಾರವನ್ನು ಬಿಟ್ಟುಕೊಟ್ಟು ಕದನ ವಿರಾಮ ಸಾಧಿಸುವ ಟ್ರಂಪ್ ಸಲಹೆಯನ್ನು ಜೆಲೆನ್ಸ್ಕಿ ಒಪ್ಪದಿದ್ದರೆ, ಮುಂದಿನ ನಿರ್ಧಾರ ಪುಟಿನ್ ಕೈಯಲ್ಲಿರಲಿದೆ.
ಮಧ್ಯಪೂರ್ವದ ಜಂಜಾಟ
ಇತ್ತೀಚಿನ ಮಿಲಿಟರಿ ಯಶಸ್ಸಿನ ಕಾರಣದಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಜಕೀಯ ಬೆಂಬಲವನ್ನೂ ಗಳಿಸಿದ್ದಾರೆ. ಕಮಲಾ ಹ್ಯಾರಿಸ್ ಅವರಿಗಿಂತ ಹೆಚ್ಚಾಗಿ, ಡೊನಾಲ್ಡ್ ಟ್ರಂಪ್ ಅವರಿಂದ ನೆತನ್ಯಾಹು ಬೆಂಬಲ ಗಳಿಸುವ ಸಾಧ್ಯತೆಗಳಿವೆ. ಹಾಗೆಂದು ಕಮಲಾ ಇಸ್ರೇಲ್ ಜೊತೆಗಿನ ಆತ್ಮೀಯ ಸಂಬಂಧವನ್ನು ಕೊನೆಗೊಳಿಸಲು ಸಿದ್ಧರಿರರಿಲ್ಲ. ಆದರೆ ಟ್ರಂಪ್ ಕೊಲ್ಲಿ ರಾಷ್ಟ್ರಗಳಿಗೂ ಅನುಕೂಲಕರವಾಗುವಂತೆ, ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ಸ್ನೇಹವನ್ನು ಇನ್ನಷ್ಟು ಉತ್ತೇಜಿಸುವ ಸಾಧ್ಯತೆಗಳಿವೆ. ಟ್ರಂಪ್ ಮತ್ತು ನೆತನ್ಯಾಹು ಇಬ್ಬರೂ ಇರಾನ್ ವಿರೋಧಿ ಧೋರಣೆ ಹೊಂದಿದ್ದಾರೆ. ಟ್ರಂಪ್ ಪೂರ್ಣ ಬೆಂಬಲದೊಡನೆ, ನೆತನ್ಯಾಹು ಇನ್ನಷ್ಟು ದೃಢ ನಿರ್ಧಾರಗಳನ್ನು ಕೈಗೊಂಡು, ಇರಾನ್ ಪರಮಾಣು ಘಟಕಗಳ ಮೇಲೆ ಏನಾದರೂ ದಾಳಿ ನಡೆಸಿದರೆ, ಆಗ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿಯಾಗಬಹುದು.
ಪರಿಹಾರ ಕಾಣದ ಡ್ರ್ಯಾಗನ್ ಸವಾಲುಗಳು
ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾ ಈಗ ನಿಧಾನವಾಗಿದ್ದು, ಟ್ರಂಪ್ ಅಧಿಕಾರಾವಧಿಯಲ್ಲಿ ವ್ಯಾಪಾರ ಅಧಿಕಾರಿಯಾಗಿದ್ದ ರಾಬರ್ಟ್ ಲೈಟಿಜರ್ ಅವರಂತಹ ಕಟ್ಟುನಿಟ್ಟಿನ ನಿಲುವಿನ ವ್ಯಕ್ತಿಗಳು ಸುಂಕದ ಬೆದರಿಕೆ ಒಡ್ಡಿರುವುದು ಇದಕ್ಕೆ ಕಾರಣವಾಗಿದೆ. ಚೀನಾ ಟ್ರಂಪ್ ಜೊತೆ ಸ್ನೇಹ ಸಾಧಿಸಲು ಟ್ರಂಪ್ ಜೊತೆ ಆತ್ಮೀಯರಾಗಿರುವ ಇಲಾನ್ ಮಸ್ಕ್ ಥರದವರೊಡನೆ ತೆರೆಮರೆಯಲ್ಲಿ ಸಾಧ್ಯವಾದಷ್ಟೂ ಪ್ರಯತ್ನ ನಡೆಸುವ ಸಾಧ್ಯತೆಗಳಿವೆ. ಆ ಮೂಲಕ ಉದ್ವಿಗ್ನತೆಗಳನ್ನು ಶಮನಗೊಳಿಸಿ, ಹೆಚ್ಚು ಪರಸ್ಪರ ಸಹಕಾರಿಯಾಗುವ ಸಂಬಂಧ ಹೊಂದಲು ಚೀನಾ ಬಯಸುತ್ತಿದೆ. ತನ್ನ ಮೊದಲ ಅವಧಿಯಂತೆ, ಈಗಲೂ ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷನಾಗಿರುವ ಕಾರಣದಿಂದ ಟ್ರಂಪ್ ಒಂದಷ್ಟು ವಿದೇಶಾಂಗ ನೀತಿಯಲ್ಲಿ ಯಶಸ್ಸು ಗಳಿಸಬಹುದು. ಆದರೆ, ಈಗ ಕೆಲವು ವಿಚಾರಗಳಲ್ಲಿ ಪರಿಸ್ಥಿತಿ ಟ್ರಂಪ್ ಕೈಮೀರಿ ಹೋಗುವ ಸಾಧ್ಯತೆಗಳೂ ಹೆಚ್ಚಾಗಿವೆ. ಅಮೆರಿಕ ಕೇಂದ್ರಿತವಾಗಿರುವ ಜಾಗತಿಕ ರಾಜಕಾರಣ ಒಂದು ಅಸ್ಥಿರ ಹಾಗೂ ಅನಿರೀಕ್ಷಿತ ಸನ್ನಿವೇಶದೆಡೆ ಸಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.

Next Article