ಟ್ರಾಫಿಕ್‌ನಿಂದ ಸಿಕ್ಕಿಬಿದ್ದ ಸುಚನಾ
ಪಣಜಿ: ತನ್ನ ನಾಲ್ಕು ವರ್ಷದ ಮಗನನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಬೆಂಗಳೂರಿಗೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಸಿಇಒ ಸುಚನಾ ಸೇಠ್ ಪೊಲೀಸರ ಬಲೆಗೆ ಬೀಳಲು ಗೋವಾದ ಚೋರ್ಲಾ ಘಾಟ್‌ನ ಟ್ರಾಫಿಕ್ ಜಾಮ್ ಸಹಕಾರಿಯಾಯ್ತು ಎನ್ನಲಾಗುತ್ತಿದೆ.
ಭಾನುವಾರ ಸುಚನಾ ಗೋವಾದ ಚೋರ್ಲಾ ಘಾಟ್‌ನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಳು. ಕ್ಯಾಬ್ ಮೂಲಕ ಬೆಂಗಳೂರಿಗೆ ತಲುಪಲು ಸಾಮಾನ್ಯವಾಗಿ ೮ ರಿಂದ ೧೦ ಗಂಟೆಗಳು ಬೇಕಾಗುತ್ತದೆ. ಲಭ್ಯ ಮಾಹಿತಿ ಪ್ರಕಾರ, ಕಳೆದ ಭಾನುವಾರ ರಾತ್ರಿ ಚೋರ್ಲಾ ಘಾಟ್‌ನಲ್ಲಿ ಟ್ರಾಲಿ ಟ್ರಕ್ ಅಪಘಾತಕ್ಕೀಡಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಪರಿಣಾಮವಾಗಿ ಬೆಳಿಗ್ಗೆ ೨ರಿಂದ ೬ ಗಂಟೆಯವರೆಗೆ ಘಾಟ್‌ನಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಇಲ್ಲದಿದ್ದರೆ ಆಕೆ ಆಗಲೇ ಬೆಂಗಳೂರು ತಲುಪುತ್ತಿದ್ದಳು ಮತ್ತು ಆಕೆಯನ್ನು ಪತ್ತೆ ಹಚ್ಚುವುದು ಕಲಂಗುಟ್ ಪೊಲೀಸರಿಗೆ ತುಂಬಾ ಕಷ್ಟವಾಗುತ್ತಿತ್ತು. ಮೇಲಾಗಿ, ಮೃತ ದೇಹವನ್ನು ವಿಲೇವಾರಿ ಮಾಡುವ ಸಾಧ್ಯತೆಯಿತ್ತು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ವೇಳೆ ಚೋರ್ಲಾ ಘಾಟ್‌ನಲ್ಲಿ ಕ್ಯಾಬ್ ಚಾಲಕ ಹಿಂತಿರುಗೋಣ ಎಂದು ಸೂಚಿಸಿದರೂ ಆಕೆ ನಿರಾಕರಿಸಿದ್ದಳು ಎನ್ನಲಾಗಿದೆ.
ಸದ್ಯ ಗೋವಾ ಪೋಲಿಸ್ ಕಸ್ಟಡಿಯಲ್ಲಿರುವ ಆರೋಪಿ ಸುಚನಾ ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದ್ದು, ಆಕೆಯನ್ನು ಪರೀಕ್ಷೆಗಾಗಿ ಗೋವಾದ ಬಾಂಬೋಲಿ `ಐಪಿಎಚ್‌ಬಿ'ಗೆ ಕರೆದೊಯ್ಯಲಾಗಿದೆ.
ಸದ್ಯ ಈ ಪ್ರಕರಣದಲ್ಲಿ ೧೨ ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.