For the best experience, open
https://m.samyuktakarnataka.in
on your mobile browser.

ಡಾಕ್ಟರ್ ಮಾತ್ರೆ ಸೈಡ್ ಎಫೆಕ್ಟ್

03:00 AM Dec 06, 2024 IST | Samyukta Karnataka
ಡಾಕ್ಟರ್ ಮಾತ್ರೆ ಸೈಡ್ ಎಫೆಕ್ಟ್

ಮಹಾದಲ್ಲಿ ಏಕನಾಥನಿಗೆ ಕುರ್ಚಿ ಕೊಡಲಿಲ್ಲ ಎಂಬ ಸುದ್ದಿಕೇಳಿ ಮನಸ್ಸಿಗೆ ಹಚ್ಚಿಕೊಂಡ ಚಾನಲ್ ವರದಿಗಾರ್ತಿ ಕಿವುಡನುಮಿ ಕ್ಯಾಮರಾ ಹೊತ್ತುಕೊಂಡು ಮುಂಬೈಗೆ ಓಡಿದಳು. ಅವರಿವರಿಗೆ ಕೇಳಿ ಆತನ ಅಡ್ರೆಸ್ ತೆಗೆದುಕೊಂಡು ಏಕನಾಥನ ಮನೆ ಮುಂದೆ ನಿಂತು ಏಕನಾಥಣ್ಣಾ…. ಏಯ್ ಏಕನಾಥಣ್ಣ ಎಂದು ಕೂಗಿದಾಗ… ಗಡ್ಡಬಿಟ್ಡುಕೊಂಡು ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ಏಕನಾಥನು ಯಾಕವ್ವಾ ಎಂದು ಕೇಳಿದಾಗ ರೊಂಯ್ಯನೇ ಅಳತೊಡಗಿದಳು ಕಿವುಡನುಮಿ. ಏಕನಾಥ ಕಕ್ಕಾಬಿಕ್ಕಿಯಾಗಿ ಯಾಕೆ ಏನಾಯ್ತು? ಏನಾಯ್ತು ಎಂದು ಕೇಳಿದಾಗ…. ಅದ್ಯಾವ ಬಾಯಿಂದ ಹೇಳಲಣ್ಣಾ…. ನಿನ ಮುಂದ ಆ ಹುಡುಗ ಯಾರು? ಹೆಸರು ದೇವೇಂದ್ರ ಅಂತ ಇಟ್ಡುಕೊಂಡರೆ ದೇವರಾಗುವುದಕ್ಕೆ ಸಾಧ್ಯವೇ? ನೀನೆ ಹೇಳು ನೋಡೋಣ ಅಂತ ಅಂದಳು. ನಾನೇ ಮನಸ್ಸಿಗೆ ಹಚ್ಚಿಕೊಂಡಿಲ್ಲ ನೀ ಯಾಕೆ ಚಿಂತೆ ಮಾಡುತ್ತಿ ಬುಡು ಎಂದು ಹೇಳಿದ. ಇರಲಿ ಬುಡು ಅಂದು ಆತನ ಸಂದರ್ಶನಕ್ಕೆ ಅಣಿ ಆದಳು.
ಕಿವುಡನುಮಿ: ನೀವು ಸಿಎಂ ಆಗಲಿಲ್ಲವಲ್ಲ ಏನನಿಸುತ್ತೆ ?
ಏಕನಾಥ: ಹೊಟ್ಟಿಯೊಳಗಿನ ಶಕ್ತಿ ರಟ್ಟಿಯಲ್ಲಿ ಇಲ್ಲ ಅಂತ ಅನಸ್ತದೆ.
ಕಿವುಡನುಮಿ; ವಿಟ್ಯಾಮಿನ್ ಮಾತ್ರೆ ತೆಗೆದುಕೊಳ್ಳಬಹುದಿತ್ತಲ್ಲ?
ಏಕನಾಥ; ಆ ಮಾತ್ರೆ ತೆಗೆದುಕೊಂಡರೆ ಸೈಡ್ ಎಫೆಕ್ಟ್ ಅಂತ ಡಾ. ಲಮಿತ್ ಸಾ ಹೇಳಿದರು.
ಕಿವುಡನುಮಿ; ದೊಡ್ ಡಾಕ್ಟರ್ ಸೋದಿಮಾಮಾರ ಕಡೆ ಸೆಕೆಂಡ್ ಓಪಿನಿಯನ್ ತಗೋಬೇಕಿತ್ತು.
ಏಕನಾಥ; ನಾ ಭಾಳ ಬಿಜಿ ಅಪಾಯಂಟ್ಮೆಂಟ್ ಕೊಡಂಗಿಲ್ಲ ಅಂತ ಅಂದರು.
ಕಿವುಡನುಮಿ: ಮುಂದ?
ಏಕನಾಥ; ಹಂಗ ಹೋಗೋದು. ಈ ಡಾಕ್ಟರ್ ಗಳು ನಂಗೆ ಕನ್ ಫ್ಯೂಸ್ ಮಾಡುತ್ತಾರೆ ಅಂತ ಗೊತ್ತಾಗಿದ್ದೆ ಈಗ. ನಾನು ಡಾಕ್ಟರ್ ಸಹವಾಸ ಬುಟ್ಟು ಆಯುರ್ವೇದದ ಹಿಂದೆ ಬೀಳುತ್ತೇನೆ ಎಂದು ಸುಮ್ಮನಾದ ಏಕನಾಥ.