ಡಾ. ವಾಪಸ್ ಕೊಟ್ಟೀನಿ…
ತಿಗಡೇಸಿಗೆ ಡಾಕ್ಟರ್ ಆಗಬೇಕು ಎಂಬ ಕನಸು ಇತ್ತು. ಅವರ ಅಪ್ಪ ಅಮ್ಮ ಇಬ್ಬರೂ ಮಗ ಡಾಕ್ಟರ್ ಆಗಲಿ ಮಗನನ್ನು ಎಲ್ಲರೂ ಡಾಕ್ಟರ್ ಎಂದು ಕರೆಯಲಿ ಎಂದು ಹತ್ತಾರು ದೇವರಿಗೆ ಹರಕೆ ಹೊತ್ತಿದ್ದರು. ಅಲ್ಲದೇ ಪ್ರತಿ ಶನಿವಾರ ಬಯಲು ಹನುಮಪ್ಪನಿಗೆ ಬರಿಗಾಲಿನಿಂದ ಹೋಗಿ ನಮಸ್ಕಾರ ಮಾಡಿ… ಹೇಗಾದರೂ ಮಾಡು… ನಮ್ಮ ಮಗನನ್ನು ಡಾಕ್ಟರ್ ಮಾಡು ಎಂದು ಬೇಡಿಕೊಳ್ಳುತ್ತಿದ್ದರು. ತಿಗಡೇಸಿ ಓದಿನಲ್ಲಿ ಚುರುಕು ಇಲ್ಲ ಅದು ಹೇಗೆ ದೇವರಲ್ಲಿ ಬೇಡಿಕೊಳ್ಳುತ್ತೀರಿ ಎಂದು ಸಂಪನ್ನ ಪಡದಯ್ಯ ಮಾಸ್ತರ್ ಕೇಳಿದಾಗ.. ಅಯ್ಯೋ ಈಗ ಹಾಗಿರಬಹುದು ಮುಂದೆ ನೋಡಿ ಎಂದು ಮಾರ್ಮಿಕವಾಗಿ ಹೇಳುತ್ತಿದ್ದರು. ಒಂಭತ್ತನೇ ತರಗತಿವರೆಗೆ ಶಾಲೆಯಲ್ಲಿ ಮೇಷ್ಟ್ರುಗಳು ಪಾಸು ಮಾಡಿದರು. ಮರುವರ್ಷ ಹತ್ತನೇ ತರಗತಿಗೆ ಬರುತ್ತಿದ್ದಂತೆ… ತಿಗಡೇಸಿ ಅಪ್ಪ ಹುಡುಕಾಡಿ ಒಳ್ಳೆಯ ಕಡೆ ಟ್ಯೂಷನ್‌ಗೆ ಹಾಕಿದರು. ಬೆಳಗ್ಗೆ ಟ್ಯೂಷನ್ನು… ನಂತರ ಶಾಲೆ… ಅಲ್ಲಿಂದ ಬಂದ ಮೇಲೆ ಮತ್ತೆ ಟ್ಯೂಷನ್ನು… ತಿಗಡೇಸಿ ಅಪ್ಪನ ಗೆಳೆಯರು ಏನ್ರೀ ನಿಮ್ ಮಗ… ಈ ಬಾರಿ ರಾಜ್ಯಕ್ಕೇ ಪ್ರಥಮನಾ ಎಂದು ಕೇಳಿದಾಗ… ಅವನನ್ನು ಡಾಕ್ಟರ್‌ನನ್ನಾಗಿ ಮಾಡುತ್ತೇನೆ… ನಮ್ಮ ಅಪ್ಪ ನನ್ನ ಡಾಕ್ಟರ್ ಮಾಡಬೇಕು ಅಂದುಕೊಂಡಿದ್ದ ಆಗಲಿಲ್ಲ. ಅದೇ ಚಿಂತೆಯಲ್ಲಿ ಶಿವನ ಪಾದ ಸೇರಿದ.. ಅದಕ್ಕೆ ನನ್ನ ಮಗನನ್ನು ಡಾಕ್ಟರ್ ಮಾಡಿ ಅವರ ಆಸೆಯನ್ನು ಈಡೇರಿಸುತ್ತೇನೆ ಎಂದು ಹೇಳುತ್ತಿದ್ದ. ಕಾಲ ಉರುಳಿತು… ತಿಗಡೇಸಿ ಪರೀಕ್ಷೆ ಬರೆದ… ಫಲಿತಾಂಶವೂ ಬಂತು.. ತಿಗಡೇಸಿ ಬರೋಬ್ಬರಿ ನಾಲ್ಕು ವಿಷಯದಲ್ಲಿ ಫೇಲಾಗಿದ್ದ. ಗೆಳೆಯರೆಲ್ಲ ಡುಮ್ಕಿ ತಿಗಡಿ ಎಂದು ಗೇಲಿ ಮಾಡುತ್ತಿದ್ದರು.
ಆತನ ತಂದೆ ತಾಯಿಗೆ ಭಯಂಕರ ಚಿಂತೆ ಆಯಿತು. ನಮ್ಮ ಕನಸೆಲ್ಲ ನುಚ್ಚು ನೂರಾಯಿತು. ಯಾವ ದೇವರೂ ನಮ್ಮ ಕೈ ಹಿಡಿಯಲಿಲ್ಲ ಏನು ಮಾಡುವುದು ಎಂದು ಯೋಚಿಸಿ ಕೊನೆಗೆ ತಿಗಡೇಸಿಗೆ ಕಿರಾಣಿ ಅಂಗಡಿ ಇಟ್ಟುಕೊಟ್ಟರು. ಗೆಳೆಯರು ಅಂಗಡಿ ಮುಂದೆ ಬಂದಾಗ…. ಏನಪಾ ಡಾ.. ಡುಮ್ಕಿ ಎಂದು ಕಾಡಿಸತೊಡಗಿದರು. ಕೊನೆಗೆ ಎಲ್ಲರೂ ಡಾ. ಡುಮ್ಕಿ .. ಡಾ ಡುಮ್ಕಿ ಎಂದು ಕರೆಯ ತೊಡಗಿದರು. ಇದರಿಂದ ತಿಗಡೇಸಿ ಅಪ್ಪ ಅಮ್ಮ ಮನಸ್ಸಿಗೆ ಹಚ್ಚಿಕೊಂಡು ಒಂದು ದಿನ ಅವರೂ ಇಹಲೋಕ ತ್ಯಜಿಸಿದರು. ಸಾಯುವ ಮುನ್ನ ತಿಗಡೇಸಿ ಅಪ್ಪ ಹತ್ತಿರ ಕರೆದು… ನೋಡು ತಿಗಡೇಸ್ಯಾ ಒಂದು ದಿನವಾದರೂ ನೀನು ಡಾಕ್ಟರ್ ಎಂದು ಕರೆಯಿಸಿಕೋ.. ಅವತ್ತು ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿ ಎರಡು ಹನಿ ಗಂಗಾಜಲ ಹಾಕಿಸಿಕೊಂಡು ಪ್ರಾಣಬಿಟ್ಟ. ಅದಾಗಿ ಆರು ತಿಂಗಳ ನಂತರ ತಿಗಡೇಸಿ ಮದುವೆ ಆದ. ಹೆಂಡತಿಯ ಮನೆಯವರಿಗೆಲ್ಲ.. ತಿಗಡೇಸಿ ಅಪ್ಪ ಡಾಕ್ಟರ್ ಸಲುವಾಗಿ ಜೀವ ಬಿಟ್ಟಿದ್ದಾನೆ ಎಂಬ ವಿಷಯ ತಿಳಿದಿತ್ತು. ಇತ್ತ ತಿಗಡೇಸಿಗೆ ಅಪ್ಪನ ಆತ್ಮ ಸುತ್ತುತ್ತ ಇರುತ್ತದೆ… ಅದಕ್ಕೆ ಮೋಕ್ಷ ಕೊಡಿಸಬೇಕು ಅಂತ ಗೋಳಾಡುತ್ತಿದ್ದ.
ಗೆಳೆಯರೆಲ್ಲ ಏನೋ ಡುಮ್ಕಿ ಡಾಕ್ಟರ್ ಅಂತಲೇ ಕರೆಯುತ್ತಿದ್ದರು. ಎಲ್ಲರೂ ಹೀಗೆ ಕಾಟ ಕೊಡುತ್ತಿದ್ದಾರೆ ಎಂದು ಹೆಂಡತಿಯ ಮುಂದೆ ಕಣ್ಣೀರು ಹಾಕುತ್ತಿದ್ದ. ಆಕೆ…ಇರಿ ನೋಡೋಣ ಅಂತ ರಮಿಸುತ್ತಿದ್ದಳು. ತಿಗಡೇಸಿ ಹೆಂಡತಿಯ ದೊಡ್ಡಪ್ಪ ವಿಶ್ವವಿದ್ಯಾಲಯದಲ್ಲಿ ವಿಸಿ ಚೇಂಬರ್ ಅಟೆಂಡರ್ ಆಗಿದ್ದ. ಆತನಿಗೆ ಈ ವಿಷಯ ತಿಳಿದು ಅಳಿಯಂದಿರಿಗೆ ಡಾಕ್ಟರೇಟ್ ಕೊಡಿಸಬೇಕು… ಜನರು ಡಾಕ್ಟರ್ ಅಂತ ಕರೆದರೆ ಅವರಪ್ಪನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು..ಕಾಡಿ ಬೇಡಿ ಅವರಿವರ ಕೈಕಾಲು ಹಿಡಿದು ವಿವಿಯಿಂದ ತಿಗಡೇಸಿಗೆ ಡಾಕ್ಟರೇಟ್ ಕೊಡಿಸಿದ. ತಿಗಡೇಸಿಯ ಆನಂದಕ್ಕೆ ಪಾರವೇ ಇರಲಿಲ್ಲ. ಅದೇ ಬೀಗರು ತಮ್ಮ ಖರ್ಚಿನಲ್ಲಿ ಊರೂಟ ಹಾಕಿಸಿದರು. ಊಟ ಮಾಡಿ ಬರುತ್ತಿದ್ದ ಜನರಿಗೆ ಎಲ್ಲಿ ಹೋಗಿದ್ದಿ ಎಂದು ಕೇಳಿದರೆ… ಅಯ್ಯೋ ಡುಮ್ಕಿ ತಿಗಡೇಸಿಗೆ ಡಾಕ್ಟರ್ ಸಿಕ್ಕಿದೆ ಎಂದು ಹೇಳಿದರು… ಈಗ ಊರವರು ಪಕ್ಕದ ಊರವರು ಎಲ್ಲರೂ ತಿಗಡೇಸಿಗೆ ಡಾ. ಡುಮ್ಕಿ ತಿಗಡೇಸಿ ಅನ್ನ ತೊಡಗಿದರು. ಇದು ಹೀಗೆ ಮುಂದುವರಿದರೆ ಕಷ್ಟ ಎಂದು ತಿಗಡೇಸಿ ವಿಸಿ ಚೇಂಬರ್‌ಗೆ ಡಾಕ್ಟರೇಟನ್ನ ವಾಪಸ್ ಕೊಟ್ಟು ಮರುದಿನವೇ ಪೇಪರ್‌ಗಳಲ್ಲಿ… ಟಿವಿಗಳಲ್ಲಿ ಡಾ. ವಾಪಸ್ ಎಂದು ಜಾಹೀರಾತು ಹಾಕಿಸಿದ. ಅಲ್ಲದೇ ಓಣಿ ಓಣಿಗಳಲ್ಲಿ ಡಾ… ವಾಪಸ್… ಡಾ. ವಾಪಸ್ ಎಂಬ ಫ್ಲೆಕ್ಸ್ ಹಾಕಿಸಿದ. ಮರುದಿನದಿಂದ. ತಿಗಡೇಸಿಯನ್ನು… ಡುಮ್ಕಿ ತಿಗಡೇಸಿ ಡಾ.. ವಾಪಸ್ .. ಡಾ ವಾಪಸ್ ಎಂದು ಕರೆಯತೊಡಗಿದರು.