ಡಿಡಿಪಿಐರಿಂದ ಪೊಲೀಸರಿಗೆ ದೂರು: ಯಾದವ ಸಂಘದ ಆಕ್ರೋಶ
ಶ್ರೀಕೃಷ್ಣರ ಬ್ಯಾನರ್ ಹರಿದ ಕೃತ್ಯಕ್ಕೆ ಆಕ್ರೋಶ
ಕೋಲಾರ: ಜನವರಿ ೩ರಂದು ನಡೆದ ಕೋಲಾರ ಬಂದ್‌ನ ವೇಳೆ ಸರ್ಕಾರಿ ಕಚೇರಿಗಳನ್ನು ಮುಚ್ಚಿಸುತ್ತಿದ್ದ ವೇಳೆ ದಲಿತ ಮುಖಂಡರ ಗುಂಪೊಂದು ನಗರದ ಡಿಡಿಪಿಐ ಕಚೇರಿಯಲ್ಲಿದ್ದ ಶ್ರೀಕೃಷ್ಣ ಭಗವಾನರ ಭಾವಚಿತ್ರವನ್ನು ಹರಿದುಹಾಕಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸಚಿವ ಅಮಿತ್‌ಷಾ ಸಂವಿಧಾನಶಿಲ್ಪಿ ಅಂಬೇಡ್ಕರ್ ವಿರುದ್ಧ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ವಿವಿಧ ಸಂಘಟನೆಗಳು ಕಳೆದ ಶುಕ್ರವಾರ ಕೋಲಾರ ಬಂದ್‌ಗೆ ಕರೆ ನೀಡಿದ್ದವು. ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಕಚೇರಿಗಳನ್ನು ಮುಚ್ಚಿಸಲು ದಲಿತ ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ, ಚಂದ್ರಮೌಳಿ ಮತ್ತಿತರರ ಗುಂಪು ಮುಂದಾಗಿತ್ತು.
ಈ ವೇಳೆ ಡಿಡಿಪಿಐ ಕಚೇರಿಗೆ ತೆರಳಿದ ಗುಂಪು ಅಲ್ಲಿನ ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾಧಿಕಾರಿ ಕೊಠಡಿಯಲ್ಲಿ ಹಾಕಿದ್ಧ ಭಗವದ್ಗೀತೆಯ ಸಂದೇಶ ಹೊತ್ತ ಶ್ರೀಕೃಷ್ಣ ಪರಮಾತ್ಮರ ಫೋಟೋವನ್ನು ಹರಿದು ಬಿಸಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರಸಭೆ ಮಾಜಿ ಸದಸ್ಯ ಚಂದ್ರಮೌಳಿ ಗೀತಾಸಾರದ ಬ್ಯಾನರ್ ಕಂಡು ಆಕ್ರೋಶಭರಿತರಾಗಿ ಇದೇನು ಆರ್‌ಎಸ್‌ಎಸ್ ಅಜೆಂಡಾದಂತೆ ಇದನ್ನು ಅಳವಡಿಸಲಾಗಿದೆಯೇ? ಎಂದು ಪ್ರಶ್ನಿಸಿ ಹರಿದು ನೆಲಕ್ಕೆ ಹಾಕಿದರು.
ಈ ವಿಡಿಯೋ ವೈರಲ್ ಆಗಿದ್ದು ಸೋಮವಾರ ಡಿಡಿಪಿಐ ಕೃಷ್ಣಮೂರ್ತಿ ಕೋಲಾರ ನಗರಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಯಾರದ್ದೇ ಹೆಸರು ಪ್ರಸ್ತಾಪಿಸಿಲ್ಲ, ಆದರೆ ವಿಡಿಯೋದಲ್ಲಿ ಇರುವ ವ್ಯಕ್ತಿಗಳು ಎಂದು ಆರೋಪಿಸಲಾಗಿದೆ.
ಯಾದವ ಸಂಘದ ಆಕ್ರೋಶ: ಡಿಡಿಪಿಐ ಕಚೇರಿಯಲ್ಲಿದ್ದ ಶ್ರೀಕೃಷ್ಣ ಪರಮಾತ್ಮರ ಬ್ಯಾನರ್ ಹರಿದು ಹಾಕಿರುವ ಕುರಿತು ಯಾದವ ಸಂಘವು ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಸೋಮವಾರ ರಾತ್ರಿ ಸಭೆ ನಡೆಸಿದ ಯಾದವ ಸಂಘದ ಮುಖಂಡರು ಮಂಗಳವಾರ ಶ್ರೀಕೃಷ್ಣರಿಗೆ ಅಪಮಾನ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.