ಡಿನ್ನರ್‌ಗೆ ಬಂದವರು ವಿನ್ನರ್
ನೀವು ಅವರು ಡಿನ್ನರ್‌ಗೆ ಕರೆದರೂ ಹೋಗುತ್ತೀರಿ-ಇವರು ರಾತ್ರಿ ಊಟಕ್ಕೆ ಕರೆದರೂ ಹೋಗುತ್ತೀರಿ ಈಗ ನಾನು ಕರೆಯುತ್ತೇನೆ ನೀವು ಬನ್ನಿರಿ ಎಂದು ತಿಗಡೇಸಿ ಔತಣ ನೀಡಿದ್ದಾನೆ. ನೀವು ನನ್ನ ಡಿನ್ನರ್‌ಗೆ ಬಂದರೆ ಗ್ಯಾರಂಟಿ ವಿನ್ನರ್ ಆಗುತ್ತೀರಿ. ನನ್ನ ಕೈಗುಣವೇ ಹಾಗೆ ತಿಳಿಯಿರಿ ಎಂದು ತಿಗಡೇಸಿ ಹ್ಯಾಂಡ್‌ಬಿಲ್ ಮಾಡಿಸಿ ಎಲ್ಲೆಡೆ ಹಂಚಿದ್ದಾನೆ. ಡಿನ್ನರ್ ಅಂದರೆ ಅಂತಿಂಥ ಡಿನ್ನರ್ ಅಲ್ಲ. ಒಂದು ಸಲ ನೀವು ಬಂದರೆ ಪದೇ..ಪದೇ ಡಿನ್ನರ್..ಡಿನ್ನರ್ ಎಂದು ಕೇಳುತ್ತೀರಿ. ಹಾಗೆ ಮಾಡಿಸುತ್ತೇನೆ ಎಂದು ಹೇಳಿಯೇ ಎಲ್ಲರನ್ನೂ ಕರೆಯುತ್ತಿದ್ದಾನೆ. ಮಾಡಿಸಿದ ಹ್ಯಾಂಡ್‌ಬಿಲ್ಲಿನಲ್ಲಿ ಡಿನ್ನರ್ ಮೆನುವನ್ನೇ ಪ್ರಕಟಿಸಿದ್ದಾನೆ…
ಡಿನ್ನರ್ ನಂತರ ವಿನ್ನರ್‌ಗಳೇ…
ಅಂದು ಸಂಜೆ ನನ್ನ ಮನೆಯ ಹತ್ತಿರ ಬಂದು ನನಗೊಂದು ಮಿಸ್ಡ್ಕಾಲ್ ಕೊಟ್ಟರೆ ನೀವಿದ್ದಲ್ಲಿಂದ ಕರೆದುಕೊಂಡು ಬರಲಾಗುವುದು. ಗೇಟಿನಲ್ಲಿ ಬರುತ್ತಿದ್ದಂತೆ ಹುಣಸೆಹಣ್ಣು-ಸ್ವಲ್ಪವೇ ಸ್ವಲ್ಪ ಕಾರದ ಪುಡಿಯನ್ನು ನೀರಿನಲ್ಲಿ ಬೆರೆಸಿಟ್ಟಿದ್ದ ವೆಲ್‌ಕಮ್ ಡ್ರಿಂಕ್ ಕೊಡಲಾಗುವುದು. ಅದನ್ನು ಕುಡಿದು ಎಡಗಡೆ ಹೊರಳಿದ ಕೂಡಲೇ ಡೊಣ್ಣಮೆಣಸಿನಕಾಯಿಯ ಅರೆಬರೆ ಕರಿದ ಎರಡೆರಡು ಬಜ್ಜಿ ಕೈಯಲ್ಲಿ ಕೊಡಲಾಗುವುದು. ಹಾಗೆ ಬಲಗಡೆ ಬಂದರೆ ಹಾಗಲಕಾಯಿ ಜ್ಯೂಸ್ ನಿಮ್ಮ ಸಲುವಾಗಿ ಕಾಯುತ್ತಿರುತ್ತದೆ. ಅದನ್ನು ಕುಡಿದು ಎರಡೆಜ್ಜೆ ಹೋದ ಕೂಡಲೇ ಕವಳೆಹಣ್ಣು, ಡಬ್ಬಗೊಳಿ ಹಣ್ಣು, ಬೇವಿನಹಣ್ಣು ಸೇರಿದಂತೆ ಅನೇಕ ಹಣ್ಣುಗಳನ್ನು ಕಟ್‌ಮಾಡಿ ಸಾಲಡ್ ನೀಡಲಾಗುವುದು. ಹಣ್ಣು ತಿಂದಾಕ್ಷಣ ಕೆಂಪಗೆ ಹುರಿದ ಸೇಂಗಾಬೀಜ ಮತ್ತು ಪಪ್ಪಾಯ ಬೀಜಗಳನ್ನು ಹಾಳೆಯಲ್ಲಿ ಕಟ್ಟಿ ಕೊಡಲಾಗುವುದು. ಅದು ತಿನ್ನುವ ಪುರುಸೊತ್ತು ಇಲ್ಲದೇ ಊಟಕ್ಕೆ ರೆಡಿಯಾಗಿರುತ್ತದೆ. ಊಟದಲ್ಲಿ ನೀವು ಹಿಂದೆಂದೂ ಉಂಡಿರುವುದಿಲ್ಲ ಮುಂದೆಯೂ ಉಂಡಿರುವುದಿಲ್ಲ…ದಯವಿಟ್ಟು ಬನ್ನಿ..ಬನ್ನಿ.