ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಡಿಲೀಟ್ ವರೀಸ್, ಇನ್‌ಸ್ಟಾಲ್ ಮೆರೀಸ್

04:00 AM Dec 25, 2024 IST | Samyukta Karnataka

ಚಳಿಗೆ ಗಡಗಡ ಎಂದು ಕೈಕಾಲು ನಡುಗಿದಾಗ ಡಿಸೆಂಬರ್ ಮುಗಿಯುತ್ತಿರುತ್ತದೆ. ಕ್ಯಾಲೆಂಡರ್‌ಗಳು ಬದಲಾಗುವ ಕಾಲವದು. ಪ್ರತಿ ವರ್ಷ ಕ್ಯಾಲೆಂಡರ್ ಬದಲಿಸಿದಾಗ ವಿಶಾಲೂಗೆ ತಾನೆಲ್ಲಿ ಆಂಟಿ ಆಗುತ್ತಿದ್ದೇನೋ ಎಂಬ ಭಯ.
“ವಯಸ್ಸಾದ ಮೇಲೆ ಆನಂದ, ಜೀವನೋತ್ಸಾಹ ಕುಗ್ಗುತ್ತಾ?” ಎಂಬ ಪ್ರಶ್ನೆ ವಿಶ್ವ ಹಾಕಿದ.
ನನಗೆ ನಗು ಬಂತು, ಬೇಡ ಅಂತ ಬೇಡಿಕೊಂಡ್ರೂ ಕಾಲ ನಮ್ಮನ್ನ ಹುಡುಕಿಕೊಂಡು ಬಂದು ಆವರಿಸಿ ಅಲ್ಲಾಡಿಸೋದು ವಯಸ್ಸು ಆದಾಗ ಮಾತ್ರ.
“ನಾವು ೬೦ ವರ್ಷ ಆದ ಮೇಲೆ ಹೇಗರ‍್ತೀವಿ?” ಎಂದು ವಿಶಾಲು ಕೇಳಿದಳು.
“ಆ ವೇಳೆಗೆ ನಿಮ್ಮ ಮಗನಿಗೆ ಮದುವೆ ಆಗಿ ಮೊಮ್ಮಗ ಹುಟ್ಟಿರುತ್ತಾನೆ, ನೀವು ಆಂಟಿ ಅಥವಾ ಅಜ್ಜಿ ಆಂಟಿ ಆಗರ‍್ತೀರ” ಎಂದೆ.
“ಆಗ ನಮ್ಮ ಗತಿ ಏನಾಗುತ್ತೆ?” ಎನ್ನುತ್ತಾ ವಿಶಾಲು ನಿಲುವು ಕನ್ನಡಿ ನೋಡಿಕೊಂಡಳು. ಮುಖದ ಚರ್ಮ ಸುಕ್ಕು ಕಟ್ಟಿದಂತೆ ಭಾಸವಾಗಿ ಬೆಚ್ಚಿದಳು…
“ಹೆದರಬೇಡಿ ವಿಶಾಲು, ಜೀವನದಲ್ಲಿ ಇವೆಲ್ಲ ವಿವಿಧ ಘಟ್ಟಗಳು, ಮಕ್ಕಳು, ಮೊಮ್ಮಕ್ಕಳು ಅವರವರ ಜೀವನ ಅವರು ನೋಡ್ಕೋತಾರೆ… ಕಾವೇರಿ ನದಿ ತಲಕಾವೇಕರಿಯಲ್ಲಿ ಹುಟ್ಟಿ, ಆಮೇಲೆ ಅದು ಎಲ್ಲೆಲ್ಲಿ ಹೋಗುತ್ತೆ, ಅದಕ್ಕೆ ದಾರಿ ತಿಳಿಯುತ್ತಾ ಅಂತ ನಾವು ಫಾಲೋ ಮಾಡೋಕ್ ಆಗೊಲ್ಲ, ಅದು ತನಗೆ ತಾನೇ ದಾರಿ ಕಂಡ್ಕೊಳ್ಳುತ್ತೆ. ಅದೇ ರೀತಿ ಬೆಳೆದ ಮಕ್ಕಳನ್ನ ತಾವೇ ನಿರ್ಧಾರ ತೆಗೆದುಕೊಳ್ಳುವಂತೆ ಬಿಟ್ಟು ಬಿಡಬೇಕು” ಎಂದೆ.
“ನಮಗೆ ಛಾಯ್ಸ್ ಇಲ್ಲವಾ?” ವಿಶಾಲು ಕೇಳಿದಳು.
“೭೦-೮೦ ದಾಟಿ ನೀವು ಹಾಸಿಗೆ ಕಚ್ಚಿ ಹಿಡಿದಾಗ ನಿಮಗೆಲ್ಲಿರುತ್ತೆ ವಾಯ್ಸು, ವಾಯ್ಸ್ ಇಲ್ಲದ ಮೇಲೆ ಛಾಯ್ಸ್ ಇಲ್ಲ” ಎಂದೆ…
“ವಯಸ್ಸಾದ ಮೇಲೆ ನಾನು ಹೇಗಿರಬೇಕು?” ವಿಶ್ವ ಕೇಳಿದ.
“ವಯಸ್ಸಾಗಿ ಕೈಗೆ ಊರುಗೋಲು ಬಂದಾಗ ಹಳೆಯ ಸ್ನೇಹಿತರನ್ನ, ಹಳೆಯ ಬಂಧಗಳನ್ನ ಆಗಾಗ ಭೇಟಿ ಆಗ್ತಾ ಇರು, ಅವರು ನಿನ್ನ ಕ್ಲಾಸ್ಮೇಟ್ಸ್ ಆಗಿರಬಹುದು, ನಿನ್ನ ಸಹೋದ್ಯೋಗಿಗಳು ಆಗಿರಬಹುದು, ಒಂದು ಕಾಲದಲ್ಲಿ ನಿನ್ನ ಅಕ್ಕಪಕ್ಕ ಇದ್ದವರು ಆಗಿರಬಹುದು, ಅವರ ಜೊತೆ ಸಂಪರ್ಕ ಇಟ್ಕೊ, ಅವರ ಜೊತೆ ಆಗಾಗ ಫೋನ್‌ನಲ್ಲಿ ಮಾತಾಡು, ತಿಂಗಳಿಗೊಮ್ಮೆ ಭೇಟಿ ಮಾಡು, ವರ್ಷಕ್ಕೊಮ್ಮೆ ಟೂರ್ ಹೋಗು” ಎಂದೆ.
“ಬಹಳ ಒಳ್ಳೆ ವಿಷಯ, ನನ್ನ ಫ್ರೆಂಡ್ಸ್ ನನ್ನ ತುಂಬಾ ಇಷ್ಟ ಪಡ್ತಾರೆ” ಎಂದು ವಿಶ್ವ ಹೆಮ್ಮೆಯಿಂದ ಹೇಳಿದ.
“ವಯಸ್ಸಾದ ಮೇಲೆ ಅದೇ ಗೆಳೆಯರು ಇನ್ನೂ ಜಾಸ್ತಿ ಇಷ್ಟ ಪಡುತ್ತಾರೆ” ಎಂದೆ.
“ಸೀನಿಯರ್ ಆದ ಮೇಲೆ ನಾನ್ಹಾಗೆ ಟೈಮ್ ಸ್ಪೆಂಡ್ ಮಾಡೋದು?” ವಿಶಾಲು ಕೇಳಿದಳು.
“ಸೀನಿಯರ್ ಆದ್ರೆ ನಿಮ್ಮನ್ನ ಎಲ್ರೂ ಗೌರವದಿಂದ ಅಜ್ಜಿ ಆಂಟಿ ಅಂತಾರೆ… ಅದಕ್ಕೆ ಬೇಸರ ಬೇಡ, ಬೆಳಿಗ್ಗೆ ಯೋಗ ಮಾಡಿ, ವಾಕಿಂಗ್ ಹೋಗಿ, ವಾಕ್ ಮುಗಿಸಿ ವಾಪಸ್ ಬರುವಾಗ ಒಳ್ಳೆ ಹೋಟೆಲ್‌ನಲ್ಲಿ ಬೈಟು ಕಾಫಿ ಕುಡಿಯಿರಿ, ಸಣ್ಣಪುಟ್ಟ ಅಡಿಗೇನ ಸೊಸೆಗೆ ಹೇಳಿಕೊಡಿ, ಮಗು ಜೊತೆ ಮಗುವಾಗಿ ಆಟ ಆಡಿ, ತಿಂಗಳಿಗೊಮ್ಮೆ ಗಂಡನ ಜೊತೆ ಲೈಟಾಗಿ ಜಗಳ ಆಡಿ, ಮಕ್ಕಳಲ್ಲಿ ಶಿಸ್ತು ತರುವ ತಪ್ಪು ಕೆಲಸಕ್ಕೆ ಕೈ ಹಾಕಬೇಡಿ” ಎಂದೆ. ಇದು ಕೂಡ ವಿಶ್ವನಿಗೆ ಇಷ್ಟ ಆಯ್ತು.
“ನಿನ್ನ ಹತ್ರ ಕ್ರೆಡಿಟ್ ಕಾರ್ಡ್ ಆಗಲೂ ಇರುತ್ತಾ ವಿಶ್ವ?” ಎಂದು ಕೇಳಿದೆ.
“ಹೌದು ನಾಲ್ಕು ಕ್ರೆಡಿಟ್ ಕಾರ್ಡ್ಸ್ ಈಗಲೂ ಇವೆ, ಆಗಲೂ ಇರುತ್ತೆ” ಎಂದ.
“ಸಾಯೋ ವಯಸ್ಸಲ್ಲಿ ಕ್ರೆಡಿಟ್ ಕಾರ್ಡ್ ಉಜ್ಜಿದರೆ ನರಕ ಪ್ರಾಪ್ತಿ ಆಗುತ್ತೆ, ನಾಳೆ ನೀನು ನೆಗೆದು ಬಿದ್ರೆ ಕ್ರೆಡಿಟ್ ಕಾರ್ಡ್‌ಗಳಲ್ಲಿನ ಸಾಲ ಸೆಟಲ್ ಮಾಡೋದೇ ಕಷ್ಟ ಆಗುತ್ತೆ, ಎಲ್ಲಾ ಕ್ರೆಡಿಟ್ ಕಾರ್ಡ್‌ಗಳನ್ನ ನೀನು ಸೀನಿಯರ್ ಆದ ಕೂಡಲೆ ಕ್ಲೋಸ್ ಮಾಡು” ಎಂದೆ.
“ಒಳ್ಳೆ ವಿಷಯ ಹೇಳಿದೆ ಗೆಳೆಯ” ಎಂದ ವಿಶ್ವ.
“ಮುಂದೊಮ್ಮೆ ನೀನು ನಿನ್ನ ಹೆಂಡ್ತಿ ಯಾವತ್ತಾದ್ರೂ ಅಮೆರಿಕಾ ಟೂರ್‌ನಲ್ಲಿದ್ದಾಗ ಮನೇಲಿ ಏನ್ ಆಗ್ತಾ ಇದೆ ಅನ್ನೋದರ ಬಗ್ಗೆ ಯೋಚ್ನೆ ಮಾಡಬಾರದು, ನನ್ ಸೊಸೆ ರಾತ್ರಿ ಮಲ್ಗೋಕ್ ಮುಂಚೆ ಲೈಟ್‌ಗಳ್ನೆಲ್ಲ ಆರಿಸಿದಳೋ ಇಲ್ವೋ, ಬಾಗಿಲ ಬೋಲ್ಟ್ ಹಾಕಿದಳೋ ಇಲ್ವೋ ಅನ್ನೋ ಚಿಂತೆ ಬಿಡಬೇಕು, ೭೦ ಆದ್ಮೇಲೆ ನಾವು ಸಂಸಾರದ ಜೊತೆ ಸಂಬಂಧ ಹ್ಯಾಗ್ ಇಟ್ಕೊಬೇಕು ಗೊತ್ತಾ? ತಾವರೆ ಎಲೆ ಮೇಲೆ ಕುಳಿತ ನೀರಿನ ಬಿಂದು ಥರ, ತಾವರೆ ಎಲೆ ಜೊತೆಯಲ್ಲೇ ನೀರಿನ ಮಣಿ ಇರುತ್ತೆ, ಆದರೆ ಅದಕ್ಕೂ ಎಲೆಗೂ ಸಂಬಂಧ ಇರೊಲ್ಲ, ಅರ್ಥ ಆಯ್ತಾ?”.
“ಅಂದ್ರೆ ಯಾವುದನ್ನೂ ತಲೆಗೆ ಹಚ್ಕೋಬರ‍್ದು” ಎಂದ ವಿಶ್ವ.
“ತಲೆಗೆ ಕೊಬ್ಬರಿ ಎಣ್ಣೆ ಬಿಟ್ಟು ಇನ್ನೇನೂ ಹಚ್ಕೋಬರ‍್ದು, ದೇವರಲ್ಲಿ ಭಕ್ತಿ ಇಡು, ನಿನ್ನ ಹಳೇ ಮಾಸ್ತ್ರು ಇದ್ರೆ ಭೇಟಿ ಮಾಡು. ಹಳೇ ಗೆಳೆಯ ಗೆಳತಿಯರನ್ನು ಭೇಟಿ ಆಗು, ಆಗಾಗ ಟೂರ್ ಮಾಡು, ನಿನಗೆ ಖುಷಿಯಾಗೋ ರೀತಿಯಲ್ಲಿ ಹೆಚ್ಚಾಗಿ ಇರೋ ಹಣನ ವಿನಿಯೋಗಿಸು, ಬಡ ಮಕ್ಕಳನ್ನು ಓದ್ಸು, ತರಕಾರಿಯವಳ ಜೊತೆ ಚೌಕಾಶಿ ಮಾಡೋದನ್ನ ಬಿಡು, ಹೋಟೆಲ್‌ಗೆ ಹೋದಾಗ ಬಡ ಸಪ್ಲೆಯರ್‌ಗೆ ಧಾರಾಳವಾಗಿ ಟಿಪ್ಸ್ ಕೊಡು. ಸಂಜೆ ಸೋಮಾರಿ ಕಟ್ಟೆಗೆ ಹೋಗಿ ಸೀನಿಯರ್ ಗೆಳೆಯರ ಜೊತೆ ರಾಜಕೀಯ ಚರ್ಚೆ ಮಾಡು…”
“ಪ್ರಯೋಜನ ಏನು?” ವಿಶಾಲೂಗೂ ಕುತೂಹಲ.
“ಆ ಅಧಿಕಾರಿ ಸರಿ ಇಲ್ಲ, ಈ ಮಂತ್ರಿ ಸರಿ ಇಲ್ಲ ಅಂತ ನಾವಿಲ್ಲಿ ಚರ್ಚೆ ಮಾಡಿದರೆ ಅದು ಸಂಬಂಧಿಸಿದವರಿಗೆ ಕೇಳ್ಸೋಲ್ಲ, ಮಾತಾಡೋ ತೆವಲು ಮುಗಿಯುತ್ತೆ” ಎಂದೆ…
“ವಯಸ್ಸಾದ ಮೇಲೆ ಏನು ಹತ್ರ ಇಟ್ಕೋಬೇಕು?” ವಿಶಾಲು ಕೇಳಿದಳು…
“ಸಂತೋಷ ಮಾತ್ರ ಹತ್ತಿರ ಇಟ್ಕೋಬೇಕು, ವರೀಸ್ನೆಲ್ಲ ಡಿಲೀಟ್ ಮಾಡಬೇಕು”. ಎಂದಾಗ ಇಬ್ಬರೂ ಚಪ್ಪಾಳೆ ತಟ್ಟಿದರು.
“ಒಂದು ಜೋಕ್‌ಗೆ ಎರಡು ಸಲ ನಗ್ತೀರಾ?” ಕೇಳಿದೆ.
“ನಮ್ಮಪ್ಪನ ಆಣೆಗೂ ಇಲ್ಲ” ಎಂದ ವಿಶ್ವ.
“ಹಾಗಿದ್ಮೇಲೆ ಒಂದು ದುಃಖಕ್ಕೆ ಎರಡು ಸಲ ಮೂರು ಸಲ ಹತ್ತು ಸಲ ಅಳೋದ್ಯಾಕೆ? ಸಾಕಿದ ನಾಯಿ ಸತ್ತೋಯ್ತಪ್ಪ, ಆವತ್ತು ಅಳಬೇಕು ಅಲ್ಲಿಗೆ ಬಿಡಬೇಕು, ಮನೆಗೆ ಬಂದೋರ್ ಹತ್ರ ಎಲ್ಲಾ ನಾಯಿ ನಾಯಿ ನಾಯಿ ಅಂತ ವರ್ಷ ಪೂರ್ತಿ ಬಡ್ಕೋತಾ ಇದ್ರೆ, ನಾಯಿಗೂ ನಿಮಗೂ ವ್ಯತ್ಯಾಸ ಇರೋದಿಲ್ಲ” ಎಂದೆ. ವಿಶ್ವನಿಗೆ ಅರ್ಥವಾಯ್ತು.
“ಸೀನಿಯರ್ ಸಿಟಿಜನ್ ಆದ ಮೇಲೆ ಹೇಗೆ ಇರಬೇಕು ಅಂತ ಈಗಲೇ ಒಳ್ಳೆ ಉಪದೇಶ ಕೊಟ್ಟೆ” ಎಂದ ವಿಶ್ವ.
“ಉಪದೇಶಕ್ಕೆ ಕಾಫಿನೂ ಇಲ್ವಾ?” ಎಂದೆ.
“ಅಯ್ಯೋ ದೇವರೇ, ಮಾತಲ್ಲೇ ಕಾಫಿ ಕೊಡೋಕೆ ಮರೆತೆ, ಒಂದ್ ನಿಮಿಷ ಇರಿ” ಎಂದು ಅಡುಗೆ ಮನೆಗೆ ಕಡೆ ದೌಡಾಯಿಸಿದಳು ವಿಶಾಲು.

Next Article