ಡುಪ್ಲೀಕೇಟ್ ನೋಟಿಸ್ ಕೊಟ್ಟಾರ
ಹಿಂದಿ ಭಾಷೆಯಲ್ಲಿ ಅಮಿತಾಬಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವನ್ನು ರಾಜಕೀಯ ಸಂದರ್ಶನದ ಟೈಪ್ ಕಾರ್ಯಕ್ರಮವನ್ನಾಗಿ ಮಾಡಲು ತಿಗಡೇಸಿ ನಿರ್ಧರಿಸಿದ. ರಾಜಕೀಯ ಮಂದಿಯನ್ನು ಕರೆಸುವುದು. ಅವರನ್ನು ಹಾಟ್‌ಸೀಟ್ ಮೇಲೆ ಕೂಡಿಸಿ ಪ್ರಶ್ನೆಗಳನ್ನು ನಾನೇ ಪ್ರಶ್ನೆಗಳನ್ನು ಕೇಳುವುದು. ನಂತರ ಅವರನ್ನು ಸನ್ಮಾನಿಸಲು ನಿರ್ಧರಿಸಲಾಯಿತು. ಈ ವಿಷಯವನ್ನು ಸಿಕ್ಕಾಪಟ್ಟೆ ಪಬ್ಲಿಸಿಟಿ ಮಾಡಿ ರಾಜಕೀಯ ಮಂದಿ ಬರುವ ಹಾಗೆ ಮಾಡಲಾಯಿತು. ಪುಗಸೆಟ್ಟೆ ಪ್ರಚಾರ ಸುಮ್ಮನೇ ಯಾಕೆ ಬಿಡುವುದು ಎಂದು ಅವರೂ ಸಹ ಒಪ್ಪಿದರು. ಮೊದಲಿಗೆ ಯಾರನ್ನು ಕರೆಯಿಸಬೇಕು ಎಂದು ವಿಚಾರ ಮಾಡಿ ಫಸ್ಟ್ ಅಪರೀಯನ್ಸ್ ಈಸ್ ಬೆಸ್ಟ್ ಅಪಿರೀಯನ್ಸ್ ಆಗಬೇಕು. ಈಗ ಚಾಲ್ತಿಯಲ್ಲಿರುವ ಗುತ್ನಾಳ್ ಗುಸ್ಸಣ್ಣ ಅವರನ್ನು ಕರೆಯಿಸಲಾಯಿತು. ಅವರು ಬಂದು ಸೀಟಿನ ಮೇಲೆ ಕುಳಿತರು… ಪ್ರಶ್ನೆಗಳ ಸುರಿಮಳೆ ಶುರುವಾಯಿತು.
ಪ್ರಶ್ನೆ; ಮಿಸ್ಟರ್ ಗುತ್ನಾಳ್… ನಿಮಗೆ ನೋಟಿಸ್ ಬಂದಿದ್ದು ನಿಜವೇ?
ಗುಸ್ಸಣ್ಣ; ನನಗ ನೋಟಿಸ್ ಕೊಡ ಗಣಮಗ ಯಾರು? ಸುಳ್ಳ ಡುಪ್ಲಿಕೇಟ್ ನೋಟಿಸ್ ಅದು.
ಪ್ರಶ್ನೆ; ನಿಮಗ ಆ ಗುಜಣ್ಣರ ನಡುವೆ ಏನದು ಜಗಳ?
ಗುಸ್ಸಣ್ಣ; ಸಣ್ ಹುಡುಗ ಅಂವ… ನಾನ್ಯಾಕ ಜಗಳ ಆಡ್ಲಿ ?
ಪ್ರಶ್ನೆ; ಈಗ ನೀವು ಏನು ಮಾಡಬೇಕು ಅಂತ ಮಾಡೀರಿ?
ಗುಸ್ಸಣ್ಣ; ನಾನಾ? ನೀವು ಬುಟ್ರ ಸೀದಾ ಮನೀಗೆ ಹೊಕ್ಕೀನ್ರಿ
ಪ್ರಶ್ನೆ; ನೀವು ಯಾಕೆ ಪೂಜ್ಯ ಅಂತ ಬಳಸುತ್ತೀರಿ?
ಗುಸ್ಸಣ್ಣ; ಮತ್ತೆ ಇನ್ನೇನಂತ ಬಳಸಬಕು?
ಪ್ರಶ್ನೆ; ನಿಮ್ ಜತೆ ಇದ್ದೋರೂ ಏನೇನೋ ಮಾತಾಡ್ತಾರಲ್ಲ?
ಗುಸ್ಸಣ್ಣ; ಅಲ್ರೀ ಅವರ ಬಾಯಿ ಅವರ ಮರ್ಜಿ ನನಗೇನು?
ಪ್ರಶ್ನೆ; ಈಗ ನಿಮ್ಮ ಮುಂದಿನ ನಡೆ ಏನು?
ಗುಸ್ಸಣ್ಣ; ನಾನು ಮಾತ್ರ ಸುಮ್ಮನೆ ಇರಂಗಿಲ್ಲರಿ. ನಾನು ಏನು ಅಂತ ತೋರಿಸ್ತೀನಿ. ಸುಮ್ಮನೇ ಕೂಡಂಗಿಲ್ಲ. ಈಗಲೇ ಉತ್ತರ ಕೊಟ್ಟರೆ ಅದು ಸರಿ ಆಗಂಗಿಲ್ಲ. ನೋಡ್ರಿ ಆಗಲೇ ಐದಾರು ರಿಫಿಲ್ ತಗೊಂಡು ಬಂದಿದೀನಿ. ಬಿಳಿ ಹಾಳಿನೂ ರೆಡಿ ಅದಾವು. ಮಸಿ ಖಾಲಿ ಆಗುವವರೆಗೆ ಬರೆದು ಅವರಿಗೆ ಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.