ಪುಟ್ಯಾ ಬರುತ್ತಿದ್ದಾನೆ
ರಷಿಯಾ ಪುಟ್ಯಾ ಇಲ್ಲಿಗೆ ಬರುತ್ತಾನೆ ಎಂಬ ಸುದ್ದಿ ಗಾಡ್ಗಿಚ್ಚಿನಂತೆ ಹಬ್ಬಿದೆ. ಎಲ್ಲ ಬುಟ್ಟು ಈ ಥಂಡಿ ಗಾಲದಲ್ಲಿ ಪುಟ್ಯಾ ಯಾಕೆ ಬರುತ್ತಾನೆ.. ಅವನಿಗೆ ಬೇರೆ ದಿನಗಳು ಇಲ್ಲವೇ? ಎಂದು ಹಲವರ ವಾದ. ಅಂವ ಯಾವಾಗಾದರೂ ಬರಲಿ… ಬರುವುದ್ಯಾತಕ್ಕೆ ಎಂಬುದು ನನ್ನ ಪ್ರಶ್ನೆ ಎಂದು ತಿಗಡೇಸಿ ಕೇಳುತ್ತಿದ್ದಾನೆ. ಯಾಕೆ ಬರುತ್ತಿದ್ದಾನೆ ಅನ್ನುವುದಕ್ಕೆ ಹಲವರು ತಮಗೆ ತಿಳಿದಂತೆ ಹೇಳಿದರು. ನಮ್ಮ ಎಮ್ಮೆ ಇತ್ತೀಚಿಗೆ ಸರಿಯಾಗಿ ಮೇವು ತಿನ್ನುತ್ತಿಲ್ಲ. ಹೀಗಂತ ನಾನು ಆತನಿಗೆ ಎಸ್ಎಂಎಸ್ ಮಾಡಸಿದ್ದೆ ಅದನ್ನು ಪರೀಕ್ಷೆ ಮಾಡಲು ಬರುತ್ತಿದ್ದಾನೆ ಎಂದು ಲೊಂಡೆನುಮ ಹೇಳಿದ. ಇಲ್ಲಿಲ್ಲ ನನ್ನ ಮಾವನ ಹೆಣ್ ಮೊಮ್ಮಗಳ ಮಗು ಅಂಜಿಕೊಂಡು ಚಳಿಜ್ವರ ಹಚ್ಚಿಕೊಂಡಿದೆ. ಯಾವ ಡಾಕ್ಟರ್ ಕಡೆ ತೋರಿಸಿದರೂ ಕಡಿಮೆ ಆಗುತ್ತಿಲ್ಲ. ಗಾಳಿ ಶಕ ಇರಬಹುದು ತಾಯತ ಕಟ್ಟಿಸಬೇಕು ಎಂದು ಆತನಿಗೆ ಸಂದೇಶ ಕಳಿಸಿದ್ದೆ ಅದಕ್ಕೆ ತಾಯತ ಕಟ್ಟಲು ಬರುತ್ತಿದ್ದಾನೆ ಎಂದು ಕುಮೀರ್ ಅಹ್ಮದ್ ಹೇಳಿದ. ಮೆಂಬರ್ ಅಲೈ ಕನಕನು ದೊಡ್ಡ ಧ್ವನಿಮಾಡಿ
ಅಯ್ಯೋ ಹುಚ್ಚರ ಹಾಗೆ ಮಾತಾಡಬೇಡಿ… ಈಗ ಮಹಾದಲ್ಲಿ ಏಕನಾಥನೋ.. ಫಡ್ನಿಬೇಬಿನೋ ಎಂಬ ಗದ್ದಲ ನಡದಿದೆ. ಇಲ್ಲಿ ಮೂಡಾ ಪಾಡಾ ಅಂತ ಮದ್ರಾಮಣ್ಣನವರ ಲಫಡಾ…. ಗುತ್ನಾಳ ವಿಜಣ್ಣರ ಗುದಮುರುಗಿ… ಲೇವಣ್ಣ ಲಿಂಬೆಣ್ಣಿನ ಆಟ… ಪಂ ಲೇವೇಗೌಡರ ದೊಡ್ಡ ಗುಡುಗು.. ಸುಮಾರಣ್ಣೋರ ಬ್ರದರ್ ಖದರ್… ಇವೆಲ್ಲ ಬಗೆಹರಿಸಿ ಹೋಗಲು ಬರುತ್ತಿದ್ದಾನಂತೆ… ನಿನ್ನೆನೇ ಅವರ ಮಿಸೆಸ್ ಕಾಲ್ ಮಾಡಿ… ಕನಕಪ್ಪ ನಮ್ಮೆಜಮಾನ್ರು ಅಲ್ಲಿ ಬರುತ್ತಿದ್ದಾರೆ… ಸ್ವಲ್ಪ ನೋಡಿಕೋ ಅಂದರು… ಯಾಕೆ ಅಂದಾಗ ಅವರೇ ಇದನ್ನು ಹೇಳಿದರು ನಡೀರಿ ಇನ್ನ ಅಂತ ಅಲ್ಲಿಂದ ಎದ್ದು ಹೊರಟ.