For the best experience, open
https://m.samyuktakarnataka.in
on your mobile browser.

ಡೊಂಕು ಬಾಲದ ನಾಯಕರೆ…

01:30 AM Feb 21, 2024 IST | Samyukta Karnataka
ಡೊಂಕು ಬಾಲದ ನಾಯಕರೆ…

ಇದು ರಾಜಕೀಯ ಲೇಖನವಲ್ಲ, ಸಾಕು ಪ್ರಾಣಿಗೆ ಸಂಬಂಧಪಟ್ಟ ಬರಹ. ನಾಯಿಗಿಂತ ನಿಷ್ಠೆ ಯಾವ ನಾಯಕನಲ್ಲೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತು.
ನಾಯಕರು ವಿವಿಧ ಪಕ್ಷಗಳನ್ನು ಬದಲಿಸಬಹುದು. ಆದರೆ ಡೊಂಕು ಬಾಲದ ನಾಯಕರು ತನ್ನ ಬೀದಿ ಬಿಟ್ಟು ದೂರ ಹೋಗೊಲ್ಲ.
"ಡೊಂಕು ಬಾಲದ ನಾಯಕರೆ… ನೀವೇನು ಊಟವ ಮಾಡಿದಿರಿ"
ಎಂದು ಪುರಂದರ ದಾಸರು ಡಾಗೇಶನನ್ನು ಹಾಡಿ ಹೊಗಳಿದ್ದಾರೆ. "ಅಲ್ ಅಬೌಟ್ ಎ ಡಾಗ್” ಎಂಬ ಪ್ರಬಂಧದಲ್ಲಿ ಎ.ಜಿ.ಗಾರ್ಡಿನರ್ ನಾಯಿಗಳ ಕಷ್ಟ ಸುಖಗಳನ್ನ ವರ್ಣಿಸಿದ್ದಾನೆ. ಕೆಲವು ಶ್ರೀಮಂತರು ವಿದೇಶಿ ಸಾಕು ನಾಯಿಗಳನ್ನು ಮನೆ ಮಂದಿ ಜೊತೆಗೆ ಸೇರಿಸುತ್ತಾರೆ. ಅವರ ಮನೆಯ ಹುಡುಗಿಯರು ನಾಯಿಯನ್ನು ಮುದ್ದಿಸುವುದು, ಹಾಸಿಗೆಯಲ್ಲಿ ಮಲಗಿಸಿಕೊಳ್ಳುವುದು, ಷೇಕ್ ಹ್ಯಾಂಡ್ ಕೊಟ್ಟರೆ ಅದಕ್ಕೆ ಮುತ್ತು ಕೊಡುವುದು….. ಮುಂತಾದವುಗಳನ್ನು ನೋಡಿದಾಗ "ನಾನು ನಾಯಿಯಾಗಿ ಹುಟ್ಟಿದ್ದರೆ ಚೆನ್ನಾಗಿತ್ತು" ಎಂದು ಪಡ್ಡೆ ಹುಡುಗರು ಪೇಚಾಡುತ್ತಾರೆ.
ಇತ್ತೀಚೆಗೆ ನಗರಗಳಲ್ಲಿ ಅಪಾರ್ಟ್ಮೆಂಟ್‌ಗಳು ಹೆಚ್ಚಾಗಿವೆ. ಅಪಾರ್ಟ್ಮೆಂಟ್‌ನಲ್ಲಿ ಇರುವವರು ರಸ್ತೆಗೆ ಬಂದರೆ ಬೀದಿ ನಾಯಿಗಳು ಬೊಗಳುತ್ತೆ, ಕಚ್ಚಲು ಬರುತ್ತೆ.
ಈ ವಿಷಯ ಪತ್ರಿಕೆಗಳಲ್ಲಿ ಆಗಾಗೆ ವರದಿ ಆಗುತ್ತಲೇ ಇದೆ.
ಅಪಾರ್ಟ್ಮೆಂಟ್‌ನಲ್ಲಿ ಇರುವ ವ್ಯಕ್ತಿಗಳು ಬೆಳಗ್ಗೆ ೬ ಗಂಟೆ ಹೊತ್ತಲ್ಲಿ ವಾಕಿಂಗ್ ಹೋಗಲು ಭಯಪಡುವರು. ವೈಯಾಲಿಕಾವಲ್‌ನಲ್ಲಿರುವ ನನ್ನ ಗೆಳೆಯ ಸೂರಿ ರಾತ್ರಿ ತಡವಾಗಿ ಅಂದರೆ ೮ ಗಂಟೆ ಆದ್ಮೇಲೆ ಮನೆಗೆ ಹೋಗಲು ಭಯ ಪಡುವುದು ಹೆಂಡತಿಗಲ್ಲ, ಆ ಬೀದಿಯಲ್ಲಿರುವ ಪುಂಡು ನಾಯಿಗಳಿಗೆ. ಎಷ್ಟೋ ಸಲ ಪಕ್ಕದ ರಸ್ತೆಯಿಂದ ಆಟೋ ಮಾಡಿಕೊಂಡು ಬಂದು ಮನೆ ಮುಂದೆ ಇಳಿದಿದ್ದಾರೆ.
ವಾಕಿಂಗ್ ಮನುಷ್ಯನಿಗೆ ಅತ್ಯವಶ್ಯಕವಾದ ವ್ಯಾಯಾಮ ಆಗಿದೆ. ಮಧುಮೇಹ ಕಾಯಿಲೆ ಇರುವವರಿಗೆ ವಾಕಿಂಗ್ ಒಂದು ವರದಾನ. ಕಾಲುಗಳಿಗೆ ಶಕ್ತಿ ಕೊಡುತ್ತದೆ, ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ ಮತ್ತು ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಎಷ್ಟು ದೂರ ವಾಕ್ ಮಾಡಬೇಕು, ಹೇಗೆ ವಾಕ್ ಮಾಡಬೇಕು ಎಂಬುದನ್ನು ಕಾಲು ಹೇಳುತ್ತದೆ.
ವಿಶ್ವ ಇತ್ತೀಚೆಗೆ ರಕ್ತ ಪರೀಕ್ಷೆ ಮಾಡಿಸಿದ, ವಿಶಾಲು ಜೊತೇಲಿ ಇದ್ದಳು.
"ಮಧುಮೇಹ ಬಾರ್ಡರ್‌ಗೆ ಬಂದು ಬಾಗಿಲ ಹತ್ತಿರ ನಿಂತಿದೆ" ಎಂದು ವೈದ್ಯರು ತಿಳಿಸಿದರು.
ಶತ್ರು ಬಾರ್ಡರ್‌ನಲ್ಲಿರುವುದು ಸದಾ ಅಪಾಯ. ಯಾವಾಗ ಅವನು ಒಳಗೆ ನುಗ್ಗುತ್ತಾನೋ ಹೇಳೋದಕ್ಕೆ ಆಗುವುದಿಲ್ಲ, ದೇಹ ಆಗಲಿ, ದೇಶ ಆಗಲಿ ಬಾರ್ಡರ್ ಸೆಕ್ಯೂರಿಟಿ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.
"ಕಾಫಿಗೆ ಸಕ್ಕರೆ ಹಾಕ್ಕೊಳ್ಳಲ್ಲ ಸಾರ್” ಎಂದು ವಿಶ್ವ ವೈದ್ಯರಿಗೆ ಹೇಳಿದ.
"ಆದರೆ ಜೋಡಿ ಜಾಮೂನು ಜಮಾಯಿಸ್ತಾರೆ" ಎಂದಳು ವಿಶಾಲು.
"ಸಕ್ಕರೆ ಬಿಟ್ಹಾಕಿ, ವಾಕಿಂಗ್‌ಗೆ ಹೋಗಿ, ಒಂದು ತಿಂಗಳು ಬಿಟ್ಟು ಮತ್ತೆ ರಕ್ತ ಪರೀಕ್ಷೆ ಮಾಡೋಣ" ಎಂದರು ವೈದ್ಯರು.
ವಿಶಾಲುಗೆ ಇದೇ ಸಾಕಾಗಿತ್ತು. ಬೆಳಗ್ಗೆ ದಿನಪತ್ರಿಕೆ ಮುಂದಿಟ್ಟುಕೊಂಡು ಗಂಟೆ ಗಂಟೆಗೂ ಕಾಫಿ ಕೇಳುವ ಗಂಡನ ಕಾಟ ಸ್ವಲ್ಪವಾದರೂ ಕಡಿಮೆ ಆಗುತ್ತದೆಂದು "ವಾಕಿಂಗ್‌ಗೆ ಹೋಗಿ" ಎಂದು ಆದೇಶಿಸಿದಳು.
ವಿಶ್ವ ವಾಕಿಂಗ್‌ಗೆ ಬಂದರೆ ಬೀದಿ ನಾಯಿಗಳ ಕಾಟ, ಅವುಗಳು ಪಾರ್ಟಿ ಕಟ್ಟಿಕೊಂಡಿವೆ. ಕ್ಷೇತ್ರಗಳನ್ನು ಗುರುತಿಸಿ ದರ್ಬಾರ್ ನಡೆಸುತ್ತದೆ. ಒಂದು ನಾಯಿ "ಬೌ" ಎಂದರೆ ಎಲ್ಲವೂ ಒಟ್ಟಿಗೆ ಅಟ್ಯಾಕ್ ಮಾಡುತ್ತದೆ. ರಾಜಕೀಯ ಕಲಾಪಗಳನ್ನು ಈ ನಾಯಿಗಳು ನೋಡಿರಬಹುದಾ ಎಂಬ ಸಂಶಯ ನಮ್ಮ ವಿಶ್ವನಿಗೆ.
ವಾಕಿಂಗ್‌ಗೆ ಹೊರಟಾಗ ತನ್ನ ಮನೆಯ ಗಲ್ಲಿ ರಸ್ತೆ ದಾಟಿ ಮೈನ್ ರೋಡ್‌ಗೆ ಬರಲೇಬೇಕು. ನಾಯಿ ಕಾಟಕ್ಕೆ ಬೆದರಿದ ವಿಶ್ವ ಗುಂಪಾಗಿ ಬರುತ್ತಿರುವ ಬೇರೆ ಜನಗಳ ಜೊತೆ ಸೇರಿ ತನ್ನ ಮನೆಯ ರಸ್ತೆಯನ್ನು ದಾಟುವ ಅಭ್ಯಾಸ ಮಾಡಿಕೊಂಡ. ಆದರೂ ಕೆಲವು ನಾಯಿಗಳು ವಿಶ್ವನನ್ನು ಕಂಡರೆ ಹಿಂದ್ಹಿಂದೆ ಬೊಗಳುತ್ತ್ತಾ ಬರುತ್ತಿತ್ತು. ಅವೆನೂ ಮಾಡುವುದಿಲ್ಲವಾದರೂ ಅವುಗಳ ಬೊಗಳುವಿಕೆ, ಸನಿಹಕೆ ಬರುವಿಕೆ, ಮೂಸುವಿಕೆಯಿಂದ ವಿಶ್ವನಿಗೆ ಗಾಬರಿಯಾಗುತ್ತಿತ್ತು. ಹೆದರಿ ಓಡಿದರೆ ಮುಗೀತು ಕಾಲಿಗೆ ಬಾಯಿ ಹಾಕಿ ಮೀನಖಂಡವನ್ನು ಕಿತ್ತು ಆಚೆ ಹಾಕುವುದು ಗ್ಯಾರಂಟಿ.

ಮನೆಯಲ್ಲಿ ಬೀದಿ ನಾಯಿಗಳ ಕಾಟದ ಬಗ್ಗೆ ಹೇಳಿದಾಗ ವಿಶಾಲು,
"ವಾಕಿಂಗ್ ತಪ್ಪಿಸಿಕೊಳ್ಳೋಕೆ ಕುಂಟು ನೆಪ ಹೇಳಬೇಡಿ" ಎಂದಳು.
"ನಾಯಿಗಳ ಕಾಟ ವಿಪರೀತ" ಎಂದ ವಿಶ್ವ.
"ರೀ ಒಂದು ಪ್ಯಾಕೆಟ್ ಬಿಸ್ಕತ್ ತಗೊಂಡ್ಹೋಗಿ, ಬೊಗಳೋಕೆ ಬಂದ ನಾಯಿಗಳ ಬಾಯಿಗೆ ಬಿಸ್ಕತ್ ಹಾಕಿ" ಎಂದಳು.
ವಿಶ್ವನಿಗೆ ಹೌದೆನಿಸಿತು. ವೃಥಾ ಬೊಗಳುವ ನಾಯಿಗೆ ಆಗಲಿ ಪುಂಡರಿಗೇ ಆಗಲಿ ಬಿಸ್ಕತ್ ಬಾಯಿಗೆ ಹಾಕಿದರೆ ಸೌಂಡ್ ಕಡಿಮೆ ಆಗುತ್ತದೆ. ಅದೇ ರೀತಿ ವಿಶ್ವ ಬಿಸ್ಕತ್ ಪ್ಯಾಕೆಟ್ ಹಿಡಿದು ಹೊರಟ, ಬೊಗಳೋಕೆ ಬಂದ ನಾಯಿಗಳಿಗೆ ಬಿಸ್ಕತ್ ಹಾಕಿದ, ನಾಯಿಗಳು ಬಾಲ ಅಲ್ಲಾಡಿಸಿ ಬಿಸ್ಕತ್ ತಿನ್ನುವುಷ್ಟರಲ್ಲಿ ವಿಶ್ವ ರಸ್ತೆ ದಾಟುತ್ತಿದ್ದ. ಪ್ರತಿ ನಿತ್ಯ ಬಿಸ್ಕತ್ ಪ್ಯಾಕೆಟ್‌ನ್ನು ತೆಗೆದುಕೊಂಡು ಹೋಗುವುದು ಹೇಗೆ?. ಮಡದಿ ಖರ್ಚಿನ ಜೊತೆ ನಾಯಿಯ ಖರ್ಚು ನಿಭಾಯಿಸುವುದು ಕಷ್ಟ ಎಂಬುದು ಅರಿವಾಯಿತು. ಒಂದು ದಿನ ಬಿಸ್ಕತ್ ತೆಗೆದುಕೊಂಡು ಹೋಗಿರಲಿಲ್ಲ, ವಿಶ್ವನ ಹಿಂದೆ ಹಿಂದೆ ಬಂದ ನಾಲ್ಕು ನಾಯಿಗಳ ಹಿಂಡು,
"ಎಲ್ಲಿ ಬಿಸ್ಕತ್, ಯಾಕ್ ರ‍್ಲಿಲ್ಲ”
ಎಂದು ತನ್ನ ಬೌಬೌ ಭಾಷೆಯಲ್ಲಿ ಕೇಳಿತು. ಹತ್ತಿರ ಬಂತು, ಕಚ್ಚುತ್ತದೆ ಎಂಬ ಹೆದರಿಕೆಯಲ್ಲಿ ವಿಶ್ವ ನಾಯಿಗಳಿಗೆ ಕೈ ಮುಗಿದ,
"ಮರೆತು ಬಂದೆ ನಾಳೆ ತರುವೆ"
ಎಂದು ಪ್ರಮಾಣ ಮಾಡಿ ಹೇಳಿದ, ನಾಯಿಗಳಿಗೆ ಭಾಷೆ ಅರ್ಥವಾಯ್ತೋ ಇಲ್ಲವೋ ಗೊತ್ತಿಲ್ಲ, ಅವಂತೂ ಸುಮ್ಮನಾದವು.
ಒಂದೆರಡು ತಿಂಗಳು ಕಳೆದ ಮೇಲೆ ಒಂದು ವಿಚಿತ್ರ ಘಟನೆ ನಡೆಯಿತು.
ವಿಶ್ವ ಬೆಳಗ್ಗೆ ೬ ಗಂಟೆಯ ನಸುಕು ಕತ್ತಲೆಯಲ್ಲಿ ವಾಕಿಂಗ್‌ಗೆ ಹೊರಟ್ಟಿದ್ದ ಯಾವನೋ ಒಬ್ಬ ಕಳ್ಳ ಅಡ್ರೆಸ್ ಕೇಳುವ ನೆಪದಲ್ಲಿ ವಿಶ್ವನ ಬಳಿಗೆ ಬಂದು ಕೈಯಲ್ಲಿದ್ದ ಮೊಬೈಲ್‌ನ್ನು ಕಸಿದು ಕೊಂಡು ಓಡಿದ. ಅಲ್ಲೇ ಇದ್ದ ನಾಯಿಗಳು ಕಳ್ಳನನ್ನು ಬಿಡಲಿಲ್ಲ. ಕಾರಣ ವಿಶ್ವನಿಗೆ ಆ ವ್ಯಕ್ತಿ ತೊಂದರೆ ಮಾಡ್ತಿದ್ದಾನೆ ಎಂಬುದು ನಾಯಿಗಳಿಗೆ ತಿಳಿದಿತ್ತು. ಮೊಬೈಲ್ ಕದ್ದ ವ್ಯಕ್ತಿಯನ್ನು ಅಟ್ಯಾಕ್ ಮಾಡಿ ಕೆಳಗೆ ಬೀಳಿಸಿತು. ಅವ್ನನ್ನು ಕಚ್ಚಿತು, ಜನ ಸೇರಿದರು, ವಿಶ್ವ ಹೋಗಿ ತನ್ನ ಮೊಬೈಲ್‌ನ್ನು ವಾಪಸ್ ಪಡೆದ.
"ನನ್ನ ಮೊಬೈಲ್ ಸಿಕ್ತು, ಕಳ್ಳನನ್ನು ಬಿಟ್ಟು ಬಿಡಿ, ಹಾಳಾಗಿ ಹೋಗಲಿ, ನೀವು ಕಚ್ಚಿದ್ದೇ ಸಾಕು ಹ್ಯಾಗೂ ಇಂಜೆಕ್ಷನ್ ತಗೋಬೇಕಾಗುತ್ತೆ"
ಎಂದು ವಿಶ್ವ ನಾಯಿಗಳಿಗೆ ಪ್ರಾರ್ಥನೆ ಸಲ್ಲಿಸಿದ. ನಾಯಿಗಳು ಸುಮ್ಮನಾದವು.
ಇಲ್ಲಿಂದ ಆಚೆಗೆ ನಾಯಿಗಳ ಬಗ್ಗೆ ವಿಶ್ವನಿಗೆ ಪ್ರೀತಿ ಹೆಚ್ಚಾಯ್ತು. ಮನೆ ನಾಯಿಗಿಂತ ಬೀದಿ ನಾಯಿಯೇ ವಾಸಿ ಎನ್ನಿಸಿತು.
"ಇಂಟರ್‌ನ್ಯಾಷನಲ್ ಡಾಗ್ಸ್ ಡೇ" ಅಂತ ಪ್ರತಿ ವರ್ಷ ಆಗಸ್ಟ್ ೨೬ ರಂದು ಅನೇಕ ದೇಶಗಳು ಆಚರಣೆ ಮಾಡೋ ಬಗ್ಗೆ ವಿಶ್ವನಿಗೆ ಹೆಮ್ಮೆ ಎನ್ನಿಸಿತು. ತಾನೂ ಬೀದಿ ನಾಯಿಗಳಿಗೆ ಆ ದಿನ ಸ್ಪೆಷಲ್ ಬಿಸ್ಕತ್ ಹಾಕಿ ಪ್ರೀತಿ ಸಲ್ಲಿಸಬೇಕು ಎಂದುಕೊಂಡ.