ಡೊನಾಲ್ಡ್ ಟ್ರಂಪ್‌ಗೆ ಮತ್ತೊಮ್ಮೆ ಅಧಿಕಾರ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿಯ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. ಭಾರತ ಮೂಲದ ಡೆಮೋಕ್ರಾಟ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ಟ್ರಂಪ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಕಮಲಾ ಕೇವಲ ೨೨೩ ಎಲೆಕ್ಟೊರಲ್ ಕಾಲೇಜ್ ಮತಗಳನ್ನು ಪಡೆದರೆ, ಟ್ರಂಪ್ ೨೭೯ ಮತಗಳನ್ನು ಪಡೆದು ವೈಟ್ ಹೌಸ್‌ಗೆ ಎರಡನೇ ಬಾರಿ ಪ್ರವೇಶ ಪಡೆದುಕೊಂಡಿದ್ದಾರೆ.
೨೦೧೬ರಲ್ಲಿ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನ ಗೆದ್ದಿದ್ದ ಟ್ರಂಪ್, ೨೦೨೦ರಲ್ಲಿ ಬೈಡನ್ ಎದುರು ಸೋಲನುಭವಿಸಿದ್ದರು. ಇದೀಗ ಜನರಲ್ಲಿ ಮನೆ ಮಾಡಿರುವ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಇದೀಗ ಎರಡನೇ ಬಾರಿ ಮತ್ತೊಮ್ಮೆ ಗೆಲುವಿನ ದಡ ತಲುಪಿದ್ದಾರೆ.
ಏಳು ರಾಜ್ಯಗಳನ್ನು ಸ್ವಿಂಗ್ ರಾಜ್ಯಗಳು ಎಂದು ಗುರುತಿಸಲಾಗಿತ್ತು. ಇಲ್ಲಿ ಯಾರಿಗೆ ಹೆಚ್ಚು ಮತಗಳು ಬೀಳುತ್ತವೋ, ಆ ಪಕ್ಷ ಗೆಲ್ಲುವುದು ಬಹುತೇಕ ಖಚಿತವಾಗಿತ್ತು. ನಾಲ್ಕು ರಾಜ್ಯಗಳಲ್ಲಿ ರಿಪಬ್ಲಿಕನ್ ಗೆದ್ದಿದ್ದು, ಉಳಿದ ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದೆ.
ಪ್ರಮುಖ ರಾಜ್ಯವಾದ ಪೆನ್‌ಸಿಲ್ವೇನಿಯಾದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ತಮ್ಮ ಬೆಂಬಲಿಗರನ್ನುದ್ದೇಶಿಸಿ ಟ್ರಂಪ್ ವಿಜಯದ ಭಾಷಣ ಮಾಡಿ, ಇದು ಅಮೆರಿಕ ಜನರ ಭವ್ಯವಾದ ಗೆಲುವು ಎಂದು ಬಣ್ಣಿಸಿದ್ದು, ಅಮೆರಿವನ್ನು ಸ್ವರ್ಣಯುಗಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದರು. ಜುಲೈ ೧೩ರಂದು ತಮ್ಮ ಮೇಲೆ ನಡೆದಿದ್ದ ಹತ್ಯೆ ಯತ್ನವನ್ನು ನೆನಪಿಸಿಕೊಂಡ ಅವರು, ದೇವರು ವಿಶೇಷ ಕಾರಣಕ್ಕಾಗಿ ತಮ್ಮನ್ನು ಉಳಿಸಿರುವುದಾಗಿ ಅಭಿಪ್ರಾಯಪಟ್ಟು, ಕಡೇ ಉಸಿರಿನ ತನಕ ಜನರಿಗಾಗಿ ಹೋರಾಡುವುದಾಗಿ ತಿಳಿಸಿದರು.
ಸೆನೇಟ್‌ನಲ್ಲಿ ಕೂಡ ರಿಪಬ್ಲಿಕನ್ಸ್ ಕೈತಪ್ಪಿ ಹೋಗಿದ್ದು, ಅದು ಡೆಮೋಕ್ರಾಟ್‌ಗಳು ಕೈತಪ್ಪಿ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ, ಫ್ರೆಂಚ್ ಪ್ರಧಾನಿ ಇಮ್ಯಾನ್ಯುಯೆಲ್ ಮೆಕ್ರಾನ್, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕೀ, ನ್ಯಾಟೋ ಸೆಕ್ರೆಟರಿ ಜನರಲ್ ಮಾರ್ಕ್ ರುಟ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಸೇರಿದಂತೆ ವಿಶ್ವದ ಹಲವು ನಾಯಕರು ಟ್ರಂಪ್‌ಗೆ ಶುಭಾಶಯ ತಿಳಿಸಿದ್ದಾರೆ.