For the best experience, open
https://m.samyuktakarnataka.in
on your mobile browser.

ಡ್ರಗ್ಗಾಸುರ

03:30 AM Oct 23, 2024 IST | Samyukta Karnataka
ಡ್ರಗ್ಗಾಸುರ

ದಿನ ಪತ್ರಿಕೆಯನ್ನು ನೋಡುತ್ತಿದ್ದ ವಿಶಾಲುಗೆ ಕೋಟಿ ಕೋಟಿ ವಿಷ ಮಾರಾಟವಾಗುತ್ತಿರುವ ಬಗ್ಗೆ ಗಾಬರಿ ಆಯ್ತು.
“ಡ್ರಗ್ಸ್ ಮತ್ತೆ ಸೀಜ್ ಆಗಿದೆ. ೧೮೪೧ ಕೋಟಿ ರೂಪಾಯಿ ಡ್ರಗ್ಸ್‌ನ ಹಿಡಿದ್ಹಾಕಿದ್ದರ‍್ರೀ” ಎಂದಳು.
“ಹೌದು ಹಿಡಿತಾನೇ ಇರ‍್ತಾರೆ, ಪೆಡ್ಲರ್ಸ್‌ ಅರೆಸ್ಟ್ ಮಾಡ್ತನೇ ಇರ‍್ತಾರೆ. ಪ್ರತೀ ತಿಂಗಳು ಅದು ಪೇಪರ್‌ನಲ್ಲಿ ಕಂಪಲ್ಸರಿ ನ್ಯೂಸು” ಎಂದ ವಿಶ್ವ.
“ಹಿಡಿದರ‍್ನ ಬಲಿ ಹಾಕೋಕೆ ಆಗೊಲ್ವಾ? ನವರಾತ್ರಿಯಲ್ಲಿ ಚಾಮುಂಡಿ ದೇವಿಯು ರಕ್ತಬೀಜಾಸುರ, ನಿಟಿಲಾಸುರರನ್ನ ಕೊಂದಂತೆ ಕೊಲ್ಲಬೇಕು ಈ ಡ್ರಗ್ಗಾಸುರರನ್ನ” ಎಂದಳು ವಿಶಾಲು.
“ವಿಶಾಲು, ಡ್ರಗ್ಸ್ ಜಾಲವನ್ನು ಭೇದಿಸಿದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗ್ತಾ ಇಲ್ಲ, ಮತ್ತೆ ಮತ್ತೆ ಅದೇ ಸಮಸ್ಯೆ ಇರೋದು ನಿಜ” ಎಂದು ವಿಶ್ವ ಹೇಳಿದ.
ಡ್ರಗ್ಸ್ ಸೀಜ್ ಬಗ್ಗೆ ನಾನು ಮಾಹಿತಿ ನೀಡಿದೆ.
“೧೮೪೧ ಕೋಟಿ ಡ್ರಗ್ಸ್ ಅಹಮದಾಬಾದ್‌ನಲ್ಲಿ ಸಿಕ್ಕಿರೋದು ನಿಜ, ಆ ಡ್ರಗ್ ಹೆಸರು ‘ಮೆಫೇಡ್ರೋನ್’ ಅಂತ. ಕಾರ್ಕೋಟಕ ವಿಷ. ಕ್ಯಾಪ್ಸುಲ್ ಮಾಡಿ ನುಂಗಿಸ್ತಾರೆ, ಅಥವಾ ಇಂಜೆಕ್ಷನ್ ಮೂಲಕ ಕೊಡ್ತಾರೆ” ಎಂದೆ.
“ಇವತ್ತು ಡ್ರಗ್ಸ್ ತಯಾರಿಕೆ ಕೋಟಿ ಕೋಟಿ ವ್ಯವಹಾರ ನಡೆಸೋ ದೊಡ್ಡ ಸಂಸ್ಥೆ ಆಗಿದೆಯಲ್ಲ?” ಎಂದು ವಿಶಾಲು ಆಶ್ಚರ್ಯ ಪಟ್ಟಳು.
“ಹೌದು, ಕಳೆದ ವರ್ಷ ೧೫ ಸಾವಿರ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸೀಜ್ ಆಗಿತ್ತು, ತಪ್ಪಿತಸ್ಥರು ಬೇಲ್ ಮೇಲೆ ಆಚೆ ಬಂದು ಮತ್ತೆ ಡ್ರಗ್ ವ್ಯಾಪಾರ ಶುರು ಮಾಡಿಕೊಂಡರು. ನಿರಂತರವಾಗಿ ಈ ಪ್ರಕ್ರಿಯೆ ನಡೀತಾ ಇರುತ್ತೆ, ಜೈಲ್‌ಗೆ ಹೋಗ್ತಾರೆ, ಆಚೆ ರ‍್ತಾರೆ ಮತ್ತೆ ಶುರು ಮಾಡ್ತಾರೆ, ಬಿಸಿನೆಸ್ ಅಂತೂ ಸ್ಟಾಪ್ ಆಗೊಲ್ಲ” ಎಂದೆ.
“ಡ್ರಗ್ಸ್‌ನ ಯಾರು ಕೊಂಡುಕೊಳ್ತಾರೆ?”.
“ಕೆಲವು ಹೈಸ್ಕೂಲ್ ಮಕ್ಕಳು, ಕಾಲೇಜ್ ಹುಡುಗರು, ಒಂದಷ್ಟು ಯುವತಿಯರು ಕೂಡ ಈ ಡ್ರಗ್ ವ್ಯಸನಿಗಳಾಗ್ತಿದ್ದಾರೆ” ಎಂದೆ.
“ಡ್ರಗ್‌ಗೂ ಡ್ರಿಂಕ್ಸೂಗೂ ಏನ್ ಇದೆ ವ್ಯತ್ಯಾಸ?” ಎಂದು ವಿಶಾಲು ಕೇಳಿದಳು.
“ಡ್ರಿಂಕ್ಸ್ ಕುಡಿದರೆ ಪೊಲೀಸರು ಹಿಡಿತಾರೆ, ತಕ್ಷಣ ಫೈನ್ ಹಾಕಿ ಬಿಟ್ಟು ಬಿಡ್ತಾರೆ, ಆದರೆ ಈ ಡ್ರಗ್ ಕೇಸ್‌ನಲ್ಲಿ ಹಿಡಿದರೆ ಜೈಲು” ಎಂದ ವಿಶ್ವ.
“ಡ್ರಗ್ಸು ಲೀಲಾಜಾಲವಾಗಿ ಎಲ್ಲಾ ಕಡೆ ಮರ‍್ತಾರಲ್ಲ ಹೇಗೆ?” ಎಂದು ಕೇಳಿದಳು ವಿಶಾಲು.
“ಪೆಡ್ಲರ್ಸ್‌ಗೆ ಅವರದೇ ಆದ ಡ್ರಗ್ ಸೇಲ್ಸ್ ನೆಟ್‌ವರ್ಕ್ ಇರುತ್ತೆ. ಭೋಪಾಲ್ ನಗರದ ಔಟ್‌ಸ್ಕರ್ಟ್‌ನಲ್ಲಿ ಒಂದು ಡ್ರಗ್ ತಯಾರಿಕಾ ಫ್ಯಾಕ್ಟ್ರಿನೇ ಇದೆ, ಅದಕ್ಕೆ ಕರೆಂಟು, ನೀರು ಎಲ್ಲಾ ಸಿಕ್ಕಿದೆ. ಪ್ರತೀ ನಿತ್ಯ ಕೋಟ್ಯಂತರ ರೂಪಾಯಿ ಡ್ರಗ್ಸ್ನ ತಯಾರಿ ಮಾಡ್ತಾನೇ ರ‍್ತಾರೆ, ಕಳೆದ ತಿಂಗಳು ಸಿಕ್ಕಿ ಬಿದ್ರು, ಇದು ತಾತ್ಕಾಲಿಕ ತಡೆ ಅಷ್ಟೆ” ಎಂದೆ.
“ಡ್ರಗ್ಸ್ ಬದಲು ಡ್ರಿಂಕ್ಸ್ ತಗೊಂಡು ಯಾಕೆ ಸಾಯೊಲ್ಲ” ಕೆರಳಿದಳು ವಿಶಾಲು.
“ಹಂಗಾಗೊಲ್ಲ ವಿಶಾಲು, ಡ್ರಿಂಕ್ಸ್ ಜಾಸ್ತಿ ತಗೊಂಡ್ರೆ ನಡೆಯೋದು ಸ್ವಲ್ಪ ಕಷ್ಟ ಆಗುತ್ತೆ, ಆದರೆ ಡ್ರಗ್ಸ್ ತಗೊಂಡ್ರೆ ಕಾಲುಗಳ್ನ ಆಕಾಶದಲ್ಲಿ ತೇಲಿಸುತ್ತೆ, ಗಾಳಿನಲ್ಲಿ ಹಾರಿಕೊಂಡ್ ಹೋದ ಅನುಭವ. ಎಲ್ಲಿ ಏನ್ ಆಗ್ತಾ ಇದೆ ತಿಳಿಯೊಲ್ಲ, ಆನಂದದಿಂದ ನಗ್ತರ‍್ತೀವಿ, ನಮಗೆ ಯಾರು ಏನು ಮಾಡ್ತಾರೆ ಅಂತ ಗೊತ್ತಾಗಲ್ಲ” ಎಂದು ಹೇಳಿದೆ.
“ಯುವತಿಯರಿಗೆ ತುಂಬಾ ಕಷ್ಟ ಆಗುತ್ತೆ ಅಲ್ವಾ?” ಎಂದು ಗಾಬರಿಯಿಂದ ಕೇಳಿದಳು ವಿಶಾಲು.
“ಹೌದು ಈ ಡ್ರಗ್ಸ್ ಪಾರ್ಟಿಗೆ ಹೋಗೋವರು ಎಲ್ಲಕ್ಕೂ ತಯಾರಾಗೇ ಹೋಗರ‍್ತಾರೆ. ಯುವಕ ಯುವತಿಯರಿಗೆ, ಅಲ್ಲಿ ಏನ್ ನಡೀತಾ ಇದೆ ಅಂತ ತತ್‌ಕ್ಷಣಕ್ಕೆ ಗೊತ್ತಾಗೊಲ್ಲ, ಮರುದಿನ ಎದ್ದಾಗಲೇ ತಿಳಿಯೋದು, ಓಹೋ ರಾತ್ರಿ ಏನೋ ಎಡವಟ್ ಆಗಿದೆ ಅಂತ ಬಟ್ಟೆಗಳನ್ನ ಸರಿ ಮಾಡ್ಕೋತಾರೆ”.
“ಇದಕ್ಕೆ ಶಿಕ್ಷೆನೇ ಇಲ್ವಾ?” ಕೇಳಿದಳು ವಿಶಾಲು.
“ಶಿಕ್ಷೆ ಇದೆ, ಸಿಂಗಪೂರ್‌ನಲ್ಲಿ ಡ್ರಗ್ಸ್ ಮಾರಾಟ ಮಾಡೊಲ್ಲ, ಯಾಕೆ? ಅಲ್ಲಿ ಸಿಕ್ಕಿಬಿದ್ರೆ ಮರಣದಂಡನೆ, ಡೈರೆಕ್ಟ್ ನೇಣುಗಂಬ, ಮೂರು ತಿಂಗಳಲ್ಲಿ ತಿಥಿ ಕೂಡಾ ಸರ್ಕಾರ ಮಾಡುತ್ತೆ, ಚೀನಾದಲ್ಲೂ ಮರಣದಂಡನೆ ಇದೆ, ಮಲೇಷಿಯಾದಲ್ಲೂ ತಲೆ ದಂಡ, ಬೇಗ ಕೇಸ್ ಮುಗಿಯುತ್ತೆ, ನಮ್ಮಲ್ಲಿ ೧೦ ವರ್ಷ ಆದ್ರೂ ಕೇಸ್ ಮುಗಿಯೊಲ್ಲ, ಸಿಂಗಪೂರ್ ತುಂಬಾ ಫಾಸ್ಟ್” ಎಂದೆ.
“ಸಿಂಗಪೂರ್‌ನಲ್ಲಿ ಗಲ್‌ಗೆ ಹಾಕ್ತಾರಾ?”
“ಹೌದು ವಿಶಾಲು, ೨೦೨೨ನೇ ಇಸವಿಯಲ್ಲಿ ೧೧ ಜನಕ್ಕೆ ಡ್ರಗ್ಸ್ ಕೇಸ್‌ನಲ್ಲಿ ಮರಣ ದಂಡನೆ ಆಯ್ತು, ಈಗ ಇನ್ನೂ ೪೦ ಜನ ನೇಣುಗಂಬ ಏರೋಕೆ ವೇಟಿಂಗ್ ಲಿಸ್ಟ್‌ನಲ್ಲಿ ಇದ್ದಾರೆ” ಎಂದೆ.
“ಮತ್ತೆ ಭಾರತದಲ್ಲಿ ಯಾಕೆ ಲೀಲಾಜಾಲವಾಗಿ ಈ ಡ್ರಗ್ಸ್ ಮಾರಾಟ?” ಎಂದು ಕೇಳಿದಳು ವಿಶಾಲು.
“ಯಾಕೆಂದ್ರೆ ನಾವು ಹಿಡೀತೀವಿ, ಮಾಲು ವಶಪಡಿಸಿಕೊಳ್ತೀವಿ, ರಾಜಕಾರಣಿಗಳು ಮಧ್ಯೆ ಮೂಗು ತೂರಿಸ್ತಾರೆ, ಇನ್‌ಫ್ಲೂಯೆನ್ಸ್ ಮೇಲೆ ತಪ್ಪಿತಸ್ಥರನ್ನ ಬಿಟ್ಟು ಬಿಡ್ತೀವಿ, ಜಾಮೀನಿನ ಮೇಲೆ ಆಚೆ ಬಂದವರು ಮತ್ತೆ ಅದ್ನೇ ಶುರು ಮಾಡಿಕೊಳ್ತಾರೆ” ಎಂದೆ.
“ಬೇರೆ ದೇಶಗಳಲ್ಲಿ ಇರೋ ರೀತಿ ಕಟ್ಟುನಿಟ್ಟಾದ ಕಾನೂನು ತರಲಿಲ್ಲ ಅಂದ್ರೆ ಕಷ್ಟ” ಎಂದ ವಿಶ್ವ.
“ತುಂಬಾ ಸ್ಟ್ರಿಕ್ಟ್ ಕಾನೂನು ನಮ್ಮಲ್ಲಿ ತಂದ್ರೂ ಅದರ ದುರುಪಯೋಗ ಆಗುತ್ತೆ ವಿಶ್ವ” ಎಂದೆ.
“ಹ್ಯಾಗೆ?” ವಿಶ್ವ ಕೇಳಿದ.
“ನಿಮ್ ಮನೇನಲ್ಲಿ ಯಾರಾದ್ರು ಡ್ರಗ್ಸ್ ಬೇಗಾಗಿ ತಂದು ಇಟ್ಟು ಪೊಲೀಸ್‌ಗೆ ಹೇಳಿದರೆ ಏನು ಗತಿ! ನಿನಗೆ ಮರಣ ದಂಡನೆ! ಈ ಥರ ಕಾನೂನನ್ನೇ ದುರುಪಯೋಗ ಮಾಡಬಹುದು, ವರದಕ್ಷಿಣೆ ಕೇಸ್‌ಗಳು, ಅಟ್ರಾಸಿಟಿ ಕೇಸ್‌ಗಳು ಎಲ್ಲಾ ನಿಜಾನಾ? ಅದಕ್ಕೆ ಅಮಾಯಕರು ಬಲಿ ಆಗ್ತಾ ಇಲ್ವಾ? ಕಾನೂನು ದುರುಪಯೋಗ ಆಗ್ತಾ ಇದೆ, ಡ್ರಗ್ಸ್‌ನಲ್ಲಿ ಸಿಕ್ಕಿಬಿದ್ದಾಗ ಸಪೋರ್ಟ್ ಮಾಡೋ ನಾಯಕರು ನಮ್ಮಲ್ಲಿ ಇದ್ದಾರೆ, ಶಾರುಖ್ ಖಾನ್ ಮಗನ ಕೇಸ್ ಏನ್ ಆಯ್ತು? ಕಳೆದ ವರ್ಷ ನಮ್ಮ ಚಿತ್ರ ನಟಿಯರು ಜೈಲಿಂದ ಆರಾಮಾಗಿ ಆಚೆಗೆ ಹೇಗೆ ಬಂದ್ರು? ಸಿಂಗಾಪುರ ಆಗಿದ್ರೆ ಮರಣದಂಡನೆ ಆಗ್ತಿತ್ತು”
“ಅದೇನೋ ಕೊತ್ತಂಬರಿ ಸೊಪ್ಪು ಮರ‍್ತಾರಂತೆ?”
“ಕೊತ್ತಂಬರಿ ಅಲ್ಲ, ಗಾಂಜ ಸೊಪ್ಪು, ನಮ್ಮಲ್ಲಿ ಬಹಳ ಕಡೆ ಬೆಳೀತಾರೆ. ಧಂ ಮಾರೋ ಧಂ ಅಂತ, ಸಾಧು ಸನ್ಯಾಸಿಗಳು ಕೆಲವರು ಸೇದ್ತಾರೆ, ಸಸ್ಯಜನ್ಯವಾದ ಕಿಕ್ಕು ಅದು, ಆದರೆ ಇತ್ತೀಚೆಗೆ ಕೆಮಿಕಲ್ಸ್ ಹಾಕಿ ಡ್ರಗ್ಸ್ ತಯಾರಿಸ್ತಾ ಇದ್ದಾರೆ, ಅದು ಮಾರಣಾಂತಿಕ, ಅದರಿಂದ ಬ್ರೆöÊನ್ ಕೆಲ್ಸ ಮಾಡೋದು ನಿಲ್ಲುತ್ತೆ, ಪ್ಯಾರಲಿಸಿಸ್ ಅಟ್ಯಾಕ್ ಆಗುತ್ತೆ, ಮನುಷ್ಯ ಡ್ರಗ್ಸ್ ತಗೊಳೋಕೆ ಶುರು ಮಾಡಿದ ಮೇಲೆ ಕೆಲವೇ ವರ್ಷದಲ್ಲಿ ತಿಥಿ ಗ್ಯಾರಂಟಿ”. ಎಂದೆ.
“ಇದರ ಬಗ್ಗೆ ನಮ್ಮ ಮಹಿಳಾ ಸಂಘದಲ್ಲಿ ಚರ್ಚೆ ಮಾಡ್ತೀನಿ” ಎಂದಳು ವಿಶಾಲು.
“ನಿಮ್ಮ ಮಹಿಳಾ ಸಂಘದ ಪ್ರೆಸಿಡೆಂಟ್ ಮಗಳು ಕಾಲೇಜಲ್ಲಿ ಡ್ರಗ್ಸ್ ಮಾಫಿಯಾ ಕೈಗೆ ಸಿಕ್ಕಿ ಬಿದ್ದಿದ್ಲು, ಗೊತ್ತಾ?” ಎಂದಾಗ ವಿಶಾಲುಗೆ ಶಾಖ್ ಆಯ್ತು.