For the best experience, open
https://m.samyuktakarnataka.in
on your mobile browser.

ಡ್ರಗ್ಸ್ ಜಾಲ ಕಡಿವಾಣಕ್ಕೆ ಟಾಸ್ಕ್‌ಫೋರ್ಸ್‌ ರಚನೆ

10:18 PM Sep 18, 2024 IST | Samyukta Karnataka
ಡ್ರಗ್ಸ್ ಜಾಲ ಕಡಿವಾಣಕ್ಕೆ ಟಾಸ್ಕ್‌ಫೋರ್ಸ್‌ ರಚನೆ

ಬೆಂಗಳೂರು: ರಾಜ್ಯದಲ್ಲಿ ಡ್ರಗ್ ಜಾಲವನ್ನು ಬೇರು ಸಮೇತ ಕಿತ್ತುಹಾಕಲು ಸಂಕಲ್ಪ ಮಾಡಿರುವ ಸರ್ಕಾರ ಇದಕ್ಕಾಗಿ ಗೃಹಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್‌ ರಚಿಸಿದೆ.
ಗೃಹಕಚೇರಿ ಕೃಷ್ಣಾದಲ್ಲಿ ಮಾದಕ ವಸ್ತುಗಳ ಹಾವಳಿ ಮತ್ತು ನಿಯಂತ್ರಣ ಕುರಿತು ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮೇಲಿಂದ ಮೇಲೆ ಸಭೆಗಳನ್ನು ನಡೆಸಿ, ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಲಾಗಿದೆ. ಟಾಸ್ಕ್ ಫೋರ್ಸ್ನಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇರುತ್ತಾರೆ. ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ಡ್ರಗ್ ದಂಧೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ, ಠಾಣಾಧಿಕಾರಿ, ಡಿವೈಎಸ್‌ಪಿ, ಎಸಿಪಿ ಮತ್ತು ಎಸ್‌ಪಿಗಳನ್ನು ಹೊಣೆ ಮಾಡಲು ತೀರ್ಮಾನಿಸಿದ್ದೇವೆ. ಇವರ ವಿರುದ್ಧ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.
ಅಗತ್ಯಬಿದ್ದರೆ ಹೊಸ ಕಾನೂನು ಮಾಡುತ್ತೇವೆ. ಇರುವ ಕಾನೂನನ್ನು ಇನ್ನಷ್ಟು ಗಟ್ಟಿ ಮಾಡುತ್ತೇವೆ. ಪೆಡ್ಲರ್‌ಗಳಿಗೆ ಜೀವಾವಧಿ ಶಿಕ್ಷೆಯವರೆಗೂ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿಗೆ ಕ್ರಮ ವಹಿಸಲಾಗುತ್ತದೆ. ಎನ್‌ಸಿಸಿ, ಎನ್‌ಜಿಒಗಳನ್ನು ಬಲಗೊಳಿಸುವುದನ್ನು ಗುರಿಯಾಗಿಸಿಕೊಂಡಿದ್ದೇವೆ. ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಲು, ಸಮರ್ಪಕಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಡ್ರಗ್ ಹಾವಳಿ ತೊಡೆದುಹಾಕಲು ಕ್ಷಿಪ್ರ ಮತ್ತು ತೀಕ್ಷ್ಣ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳು, ಯುವ ಜನರು ಹಾಗೂ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ತಡೆಯಲು ಕ್ರಮ ವಹಿಸುತ್ತೇವೆ ಎಂದರು.
ಡ್ರಗ್ಸ್ ದಂಧೆ ತಡೆಗಟ್ಟಲು ಪೊಲೀಸರಿಗೆ ಮುಕ್ತವಾಗಿ ಅವಕಾಶ ನೀಡಲಾಗುವುದು ಘಟನೆ ತಡೆಗಟ್ಟದಿದ್ದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು. ಗೃಹ ಇಲಾಖೆ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿ ಹಲವು ಕ್ಷಿಪ್ರ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ವಿದ್ಯಾರ್ಥಿ-ಯುವ ಜನರ, ಪೋಷಕರ ಸಹಭಾಗಿತ್ವದಲ್ಲಿ ಮಾಹಿತಿ ಸಂಗ್ರಹಿಸಿ ಡ್ರಗ್ ಹಾವಳಿಗೆ ಬ್ರೇಕ್ ಹಾಕುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ'' ಎಂದು ಸಿಎಂ ತಿಳಿಸಿದರು.