ತಂದೆಯ ಪಾಲು ನನಗೆ ಕೊಡಿ
ಸವಾದಿ ಗಂಭೀರವಾಗಿ ಸ್ಲೋ ಮೋಷನ್ ಶೈಲಿಯಲ್ಲಿ ಕೋರ್ಟ್ ರೂಮ್ ಪ್ರವೇಶಿಸಿ, ವಿಟ್‌ನೆಸ್ಸ್ ಬಾಕ್ಸ್ ಏರಿದಳು."….. ಸತ್ಯವಲ್ಲದೆ ಬೇರೆ ಏನೂ ಹೇಳುವುದಿಲ್ಲ. ಹೇಳುವುದೆಲ್ಲ ಸತ್ಯ' ಎಂದು ಪ್ರಮಾಣ ಮಾಡಿ ಮುಖ್ಯ ವಿಚಾರಣೆ ಪ್ರಮಾಣ ಪತ್ರ ಸಲ್ಲಿಸಿ, ತಾನು ಹಾಜರುಪಡಿಸಿದ ದಾಖಲೆಗಳನ್ನು ಗಮನಿಸಿ, ಗುರುತಿಸಲು ವಿನಂತಿಸಿದಳು. ಪ್ರತಿವಾದಿ ಪರವಾಗಿ ಕ್ರಾಸ್ ಎಕ್ಸಾಮಿನೇಷನ್ ಮಾಡುತ್ತೀರಾ ಎನ್ನುವಂತೆ ನ್ಯಾಯಾಧೀಶರು ಪ್ರಶ್ನೆ ನೋಟ ಬೀರಿದರು. ಸಮಯ ಕೇಳಿ ಹದಿನೈದು ದಿನ ಕಾಲಾವಕಾಶ ನೀಡಿ ಪ್ರಕರಣವನ್ನು ಮುಂದೂಡಿದರು.
ವಾದಿಯ ಮುಖ್ಯ ವಿಚಾರಣೆ ಪ್ರಮಾಣಪತ್ರ ಓದಲಾರಂಭಿಸಿದೆ ``ಇದರಲ್ಲಿ, ನಾನು ಶ್ರೀಮತಿ ಸುಮತಿ ಗಂಡ…ವಯಸ್ಸು ೫೫, ಉದ್ಯೋಗ ಮನೆಗೆ ಕೆಲಸ… ನಿವಾಸಿ, ಸತ್ಯ ಪ್ರತಿಜ್ಞೆಯ ಮೇಲೆ ಮಾಡುವ ಪ್ರಮಾಣ ಪತ್ರ ಏನೆಂದರೆ ನಾನು ಈ ಕೇಸಿನಲ್ಲಿ ವಾದಿ ಇರುತ್ತೇನೆ. ಪ್ರತಿವಾದಿಗಳು ನನ್ನ ಚಿಕ್ಕಪ್ಪ ಇರುತ್ತಾರೆ. ನಮ್ಮ ಮನೆತನದ ಮೂಲ ಪುರುಷ ಮುರುಗೇಂದ್ರ ೧೯೯೩ರಲ್ಲಿ ಮೃತನಾಗಿರುತ್ತಾರೆ. ಮೃತನಿಗೆ ನನ್ನ ತಂದೆ ಕಾಶಿನಾಥ ಮತ್ತು ಶಿವಪ್ರಸಾದ, ನಾಗೇಂದ್ರ ಗಂಡು ಮಕ್ಕಳು. ಹೆಣ್ಣು ಮಕ್ಕಳು ಇಲ್ಲ. ಮುರುಗೇಂದ್ರನ ಹೆಂಡತಿ, ಗಂಡನಿಗಿಂತ ಮುಂಚೆ ಮೃತಳಾಗಿದ್ದಾಳೆ. ನನ್ನ ತಂದೆ ಕಾಶಿನಾಥ ೧೯೬೬ರಲ್ಲಿ ಮೃತರಾದರು. ಆ ವೇಳೆಯಲ್ಲಿ ನನ್ನ ತಾಯಿ ಶಶಿಕಲಾ (ಎಲ್ಲ ಹೆಸರು ಬದಲಿಸಿದೆ) ತುಂಬು ಗರ್ಭಿಣಿ. ನನ್ನ ತಂದೆ ಮೃತನಾದ ಒಂದು ತಿಂಗಳ ಬಳಿಕ ನಾನು ಜನಿಸಿದೆ. ನನ್ನ ತಾಯಿ ಸುಮಾರು ಎರಡು ವರ್ಷ ತನ್ನ ತವರುಮನೆಯಲ್ಲಿ ಇದ್ದಳು. ನಂತರ ತನ್ನ ಮಾವನ ಮನೆಗೆ ಬಂದಳು. ಹೀಗೆ ದಿನಗಳು ಕಳೆದವು. ನಾನು ಐದು ವರ್ಷದವಳು ಇರುವಾಗ, ನನ್ನ ಅಜ್ಜ, ನನ್ನ ತಾಯಿಯ ತವರುಮನೆಯವರೊಂದಿಗೆ ಸಮಾಲೋಚಿಸಿ, ನನ್ನ ತಾಯಿ ಇನ್ನೂ ಹದಿಹರೆಯದವಳು ಇರುವುದರಿಂದ, ವಿಧವಾ ವಿವಾಹ ಮಾಡಿ, ನನ್ನನ್ನು ತಮ್ಮ ಜೊತೆ ಇಟ್ಟುಕೊಂಡು, ತಾಯಿಯನ್ನು ಗಂಡನ ಮನೆಗೆ ಕಳುಹಿಸಿದರು. ನಾನು ನನ್ನ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮರ ಮಡಿಲಲ್ಲಿ ಬೆಳೆದೆ. ನನ್ನ ಶಿಕ್ಷಣ ಮುಗಿದ ನಂತರ, ನನಗೆ ಅದೇ ಊರಿನ ವರನ ಜೊತೆ ಅಜ್ಜ ಲಗ್ನ ಮಾಡಿದರು.
ನಾನು ಗಂಡನ ಮನೆಯಲ್ಲಿ ಇರುವುದಕ್ಕಿಂತ ಹೆಚ್ಚಿಗೆ ನನ್ನ ತವರುಮನೆಯಲ್ಲಿ ಕಾಲ ಕಳೆಯುತ್ತಿದ್ದೆನು. ಅಜ್ಜಿ ಭಾಗೀರಥಿ ೧೯೯೦ರಲ್ಲಿ ಮೃತಳಾದಳು. ಅಜ್ಜ ಮುರುಗೇಂದ್ರ ೧೯೯೬ರಲ್ಲಿ ಮೃತರಾದರು. ಅಜ್ಜ, ಅಜ್ಜಿ ಮೃತರಾದ ನಂತರ ಚಿಕ್ಕಪ್ಪಂದಿರ ಹೆಂಡತಿ ಮಕ್ಕಳು ನನ್ನನ್ನು ನಿರ್ಲಕ್ಷಿಸಲಾರಂಭಿಸಿದರು. ಅಜ್ಜ, ಅಜ್ಜಿ, ತಂದೆ ತಾಯಿ ಇಲ್ಲದ ಮನೆ, ಏನಿಲ್ಲ ಸೊಗಸು. ಹೋಗುವುದನ್ನು ನಿಲ್ಲಿಸಿದೆ. ಅವರು ಕರೆಯಲಿಲ್ಲ. ಗಂಡನ ಮನೆಯಲ್ಲಿ ಸುಖವಾಗಿದ್ದೆನು. ಮಕ್ಕಳು ದೊಡ್ಡವರಾದರು. ಗಂಡ ಮೃತನಾದ. ಕುಟುಂಬದ ಜವಾಬ್ದಾರಿ ಹೆಗಲೇರಿತು. ಮಕ್ಕಳ ಶಿಕ್ಷಣ, ಮದುವೆ ನಿಭಾಯಿಸುವುದು ಕಷ್ಟವಾಯಿತು. ತವರು ಮನೆ ನೆನಪಾಯಿತು. ಎಂದೂ ತಂದೆಯ ಆಸ್ತಿ ಬಗ್ಗೆ ವಿಚಾರಿಸಿದವಳಲ್ಲ. ಚಿಕ್ಕಪ್ಪರಿಗೆ, ಇಷ್ಟು ದಿನ ನಿಮಗೆ ಏನು ಕೇಳಿಲ್ಲ ನಮ್ಮ ತಂದೆಗೆ ಬರುವ ನನ್ನ ಪಾಲು ಕೊಡಲು ಕೇಳಿದೆ. ಕೇಳಿದ್ದೇ ಅಪರಾಧವಾಗಿದೆ ಅನ್ನುವ ಹಾಗೆ ನಿನಗೆ ಶಿಕ್ಷಣ ಕೊಡಿಸಿದ್ದೇವೆ, ಮದುವೆ ಮಾಡಿದ್ದೇವೆ, ಮುಗಿಯಿತು. ನಿನಗೆ ಪಾಲು ಕೊಡುವುದಿಲ್ಲ. ಸ್ವತ್ತುಗಳು ನಮ್ಮ ಹೆಸರಿಗೆ ಇವೆ ಎಂದು ನಿರಾಕರಿಸಿದರು. ಮಧ್ಯಮ ಮೇಲ್ವರ್ಗದ ಜಂಟಿ ಕುಟುಂಬ ಸಾಕಷ್ಟು ಆಸ್ತಿಗಳನ್ನು ಹೊಂದಿದೆ, ಮನೆ ಜಮೀನುಗಳ ದಾಖಲಾತಿಗಳನ್ನು ಪರಿಶೀಲಿಸಿದೆ. ಆಘಾತವಾಯಿತು. ಅಜ್ಜ ಮುರುಗೇಂದ್ರ ಮೃತನಾದ ನಂತರ ಚಿಕ್ಕಪ್ಪಂದಿರು ಕೇವಲ ತಾವಷ್ಟೆ ವಾರಸುದಾರರೆಂದು ವರದಿ ಸಲ್ಲಿಸಿ ಮ್ಯೂಟೇಷನ್ ಮಾಡಿಕೊಂಡು, ಕಾನೂನುಬಾಹಿರವಾಗಿ ತಮ್ಮ ಹೆಸರು ದಾಖಲಿಸಿಕೊಂಡಿದ್ದರು. ತಂದೆಯ ಏಕೈಕ ಮಗಳು ನನ್ನ ಹೆಸರನ್ನು, ತಂದೆಯ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಇವೆಲ್ಲ ಕಾರಣಗಳಿಂದ ಪ್ರಶ್ನಿತ ಮ್ಯೂಟೇಷನ್ ನನ್ನ ಕಾನೂನುಬದ್ಧ ಹಕ್ಕಿಗೆ ಬಂಧನವಿಲ್ಲ. ಆದ್ದರಿಂದ ನನ್ನ ಪಾಲು ವಿಭಜಿಸಿ ಪ್ರತ್ಯೇಕ ಸ್ವಾಧೀನ ಕೊಡಲು ಪ್ರಾರ್ಥಿಸಿ ಈ ದಾವೆ ಮಾಡಿದ್ದೇನೆ.
ಪ್ರತಿವಾದಿಗಳು, ತಮ್ಮ ಕೈಫಿಯತ್/ತಕರಾರಿನಲ್ಲಿ, ದಾವೆ ಸ್ವತ್ತುಗಳು ಪಿತ್ರಾರ್ಜಿತ, ಜಂಟಿ ಕುಟುಂಬದ ಆಸ್ತಿಗಳೆಂದು, ನನ್ನ ಅವರ ಸಂಬಂಧ ಒಪ್ಪಿಕೊಂಡಿದ್ದಾರೆ. ನನ್ನ ತಾಯಿ ಗಂಡ ಮೃತಳಾದ ನಂತರ ನನ್ನ ಜೊತೆ ಶಾಶ್ವತವಾಗಿ ಜಂಟಿ ಕುಟುಂಬ ತೊರೆದು ತವರುಮನೆಯಲ್ಲಿ ಉಳಿದುಕೊಂಡಿದ್ದಾಳೆ. ೧೯೬೭ರಲ್ಲಿ ನನ್ನ ತಾಯಿ, ನನ್ನನ್ನು ಕರೆದುಕೊಂಡು ಮಾವನ ಮನೆಗೆ ಬಂದಾಗ ಮಾವ ಮುರುಗೇಂದ್ರ ಅತ್ತೆ ಭಾಗೀರಥಿ, ತಮ್ಮ ಸೊಸೆ ಮತ್ತು ಮೊಮ್ಮಗಳನ್ನು ಶಾಶ್ವತವಾಗಿ ಜಂಟಿ ಕುಟುಂಬದಿಂದ ಹೊರಗೆ ಅಟ್ಟಿದರು. ಅಂದಿನಿಂದ ನನ್ನ ತಾಯಿ ನನ್ನ ಜೊತೆ ಶಾಶ್ವತವಾಗಿ ಜಂಟಿ ಕುಟುಂಬದಿಂದ ಹೊರದಬ್ಬಲ್ಪಟ್ಟು ದಾವೆ ಹಕ್ಕು ಕಳೆದುಕೊಂಡಿದ್ದಾರೆ ಅನ್ನುವ ಸಂಗತಿ ಕಾಲ್ಪನಿಕ ಇದೆ. ನಮ್ಮನ್ನು ೧೯೬೭ರಲ್ಲಿ ಜಂಟಿ ಕುಟುಂಬದಿಂದ ಶಾಶ್ವತವಾಗಿ ಹೊರಗೆ ಅಟ್ಟಿರುವುದರಿಂದ ನಾನು ಮಾಡಿದ ದಾವೆ ಕಾಲಮಿತಿ ಅಧಿನಿಯಮದ ಅಡಿ ಕಾನೂನುಬಾಹಿರವಾಗಿದೆ ಅನ್ನುವುದು ಸುಳ್ಳು ಇದೆ. ಆದ್ದರಿಂದ ಜಂಟಿ ಕುಟುಂಬದಲ್ಲಿ ಕಾನೂನು ರೀತಿಯ ಹಿಸ್ಸೆ ಕೊಡಲು ವಿನಂತಿ". ಹೀಗೆ ವಾದಿಯ ಪ್ರಮಾಣ ಪತ್ರದಲ್ಲಿ, ವಾದಪತ್ರ, ಪ್ರತಿವಾದಿಯರ ಕೈಫಿಯತ್ತ/ತಕರಾರಿನ, ಪ್ರಕರಣದ ಅಂಶಗಳು ಅಡಕವಾಗಿದ್ದವು.
ನಾನು ಪ್ರತಿವಾದಿ ಪರ ಹಾಜರಾಗಿ, ಕೈಫಿಯತ್ ಸಲ್ಲಿಸಿದ್ದೆನು. ಮೊದಲ ಹಂತದಲ್ಲಿ ಪ್ರತಿವಾದಿಯರಿಗೆ, ವಾದಿ ಸುಮತಿಯ ತಂದೆ ಕಾಶಿನಾಥ, ಮುರುಗೇಂದ್ರನ ಮಗನು, ವಾದಿಯು ಕಾಶಿನಾಥನ ಮಗಳು ಅನ್ನುವ ಸಂಬಂಧ ಒಪ್ಪಿಕೊಳ್ಳಬೇಕೊ ಬೇಡವೊ ಅನ್ನುವ ದ್ವಂದ್ವವಿತ್ತು. ಸಂಬಂಧ ಒಪ್ಪಿಕೊಳ್ಳಲು ನಿರ್ಣಯಿಸಿದರು. ಆದರೆ ಹಿಸ್ಸೆ ಹೋಗಬಾರದು ಎನ್ನುವ ನಿಲುವಿಗೆ ಬಂದರು. ಅವರ ಪರ ನ್ಯಾಯವಾದಿಯಾಗಿ ಕಕ್ಷಿದಾರರ ನಿಲುವಿಗೆ ಬದ್ಧನಾಗಿ, ವಾದಿ ಹಾಗೂ ಅವಳ ತಾಯಿಯನ್ನು ಮೂಲ ಪುರುಷ ಸುಮಾರು ಮೂವತ್ತು ವರ್ಷಗಳ ಹಿಂದೆ ಜಂಟಿ ಕುಟುಂಬದಿಂದ ಹೊರಗೆ ಅಟ್ಟಿದ್ದಾರೆ. ವಾದಿಯ ದಾವೆ ಕಾಲಮಿತಿಯಲ್ಲಿ ಇಲ್ಲ, ವಾದಿ ಹಾಗೂ ಅವಳ ತಾಯಿಯನ್ನು ಜಂಟಿ ಕುಟುಂಬದಿಂದ ಹಲವು ವರ್ಷಗಳ ಹಿಂದೆ ಹೊರಹಾಕಲಾಗಿದೆ ಎಂದು ರಕ್ಷಣೆ ಪಡೆದು ಕೈಫಿಯತ್ ರಿಟನ್ ಸ್ಟೇಟ್‌ಮೆಂಟ್ ದಾಖಲಿಸಿದೆ.
ನ್ಯಾಯಾಲಯವು, ವಾದಿ ದಾವೆ ಸ್ವತ್ತುಗಳು ಪಿತ್ರಾರ್ಜಿತ, ಜಂಟಿ ಕುಟುಂಬದ ಸ್ವತ್ತುಗಳೆ? ವಾದಿ ಜಂಟಿ ಕುಟುಂಬದ ಸದಸ್ಯಳೆ? ಇವೆಲ್ಲ ಅಂಶಗಳಲ್ಲದೆ, ವಾದಿ ತನಗೆ ಸ್ವತ್ತಿನಲ್ಲಿ ಹಿಸ್ಸೆ ಇದೆ ಎನ್ನುವುದು ರುಜುವಾತುಪಡಿಸುವಳೆ?. ಪ್ರತಿವಾದಿರು, ವಾದಿಯನ್ನು ಹಲವಾರು ವರ್ಷಗಳಿಂದ ಜಂಟಿ ಕುಟುಂಬದಿಂದ ಹೊರಹಾಕಿದ್ದಾರೆ, ವಾದಿಯ ದಾವೆ ಕಾಲಮಿತಿಯಲ್ಲಿ ಇಲ್ಲವೆ?. ಇವೆಲ್ಲ ಅಂಶಗಳನ್ನು ಪ್ರತಿವಾದಿಯರು ರುಜುವಾತುಪಡಿಸುವರೆ?. ಹೀಗೆ ವಾದಿ ಪ್ರತಿವಾದಿಯರು ಜುವಾತುಪಡಿಸುವ ವಿವಾದಂಶಗಳನ್ನು ರಚಿಸಿತು.
ವಾದಿ ಸುಮತಿಯನ್ನು, ಅವಳ ಪರ ಸಾಕ್ಷಿ ಮರು ಮದುವೆಯಾದ ತಾಯಿಯನ್ನು ದೀರ್ಘವಾಗಿ ಕ್ರಾಸ್ ಎಕ್ಸಾಮಿನೇಷನ್ ಮಾಡಿದೆ. ನಮ್ಮ ಪರವಾದ ಅಂಶಗಳು ಹೊರಬರಲಿಲ್ಲ. ಪ್ರತಿವಾದಿ ಪರ ಸಾಕ್ಷಿ ಹಾಜರುಪಡಿಸಿದೆ. ವಾದಿ ಪರ ಪಾಟಿ ಸವಾಲಿಗೆ ಒಳಗಾದರು. ಅಂತಿಮ ಹಂತದಲ್ಲಿ ನ್ಯಾಯಾಧೀಶರು, ವಾದಿ ಪ್ರತಿವಾದಿ ಪರ ವಕೀಲರ ವಾದವನ್ನು ಆಲಿಸಿದರು.
ಜಡ್ಜ್ಮೆಂಟ್: ನ್ಯಾಯಾಲಯವು, ವಾದಿ ಪ್ರತಿವಾದಿಯರು ಹಾಜರುಪಡಿಸಿದ, ಸಾಕ್ಷಿ ಪುರಾವೆ, ವಾದ ವಿವಾದವನ್ನು ಪರಿಗಣಿಸಿತು. ಪ್ರತಿವಾದಿಯರು ವಾದಿಯರ ಸಂಬಂಧ, ಜಂಟಿ ಕುಟುಂಬ, ಪಿತ್ರಾರ್ಜಿತ ಆಸ್ತಿಯನ್ನು ಒಪ್ಪಿಕೊಂಡಿದ್ದನ್ನು ಪರಿಗಣಿಸಿತು. ಪ್ರತಿವಾದಿಯರು ವಾದಿಯನ್ನು ಜಂಟಿ ಕುಟುಂಬದಿಂದ ಹೊರಗೆ ಹಾಕಿದ್ದು, ದಾವೆ ಕಾಲಮಿತಿಯಲ್ಲಿ ಇಲ್ಲ ಅನ್ನುವುದನ್ನು ರುಜುವಾತುಪಡಿಸಲು ವಿಫಲರಾಗಿದ್ದಾರೆ, ವಾದಿಯನ್ನು ಹೊರತುಪಡಿಸಿ ಮಾಡಿಕೊಂಡ ಮ್ಯೂಟೇಷನ್ ವಾದಿಯ ಹಿಸ್ಸೆಗೆ ಬಂಧನ ಇಲ್ಲ ಎಂದು ಅಭಿಪ್ರಾಯಪಟ್ಟು, ವಾದಿಗೆ ಕಾನೂನುಬದ್ಧ ಹಿಸ್ಸೆಗೆ ಆದೇಶಿಸಿ ತೀರ್ಪು ನೀಡಿತು.
ವೃತ್ತಿ ನಿರೀಕ್ಷೆಯಲ್ಲಿ ಪ್ರಕರಣ ಸೋತಿರಬಹುದು, ಆದರೆ ಗೆಲುವು ಮಾತ್ರ ಕಾನೂನು ನಿಯಮಗಳಿಗೆ. ಈ ದೇಶವನ್ನು ಕಾನೂನು, ನಿಯಮಗಳು ಆಳುತ್ತಿವೆ.