ತಂಬಾಕು ಕಂಪನಿಗಳಿಗೆ ಸರ್ಕಾರದ ಕಂಪನಿ ನಿಲ್ಲಲಿ
ವಿಶ್ವದಲ್ಲಿ ಜನರ ಆರೋಗ್ಯದ ಮೇಲೆ ಮಾರಣಾಂತಿಕ ತಂಬಾಕು ಪದಾರ್ಥಗಳ ಸೇವನೆಯಿಂದಾಗುವ ಆಘಾತಕಾರಿ ಅಂಶಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅದರ ನಿಯಂತ್ರಣಕ್ಕೆ ಮುಂಜಾಗರೂಕತಾ ಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮೇ ೩೧ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಿಸಲಾಗುತ್ತಿದೆ. ೧೯೮೭ರಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಸಂತಕುಮಾರ್ ಮೈಸೂರುಮಠ
ಮಕ್ಕಳ ಮೇಲೆ ತಂಬಾಕು ಕೈಗಾರಿಕೆಯ ಹಸ್ತಕ್ಷೇಪವನ್ನು ತಡೆಯುವುದು ಎನ್ನುವುದರ ಬಗ್ಗೆ ಈ ವರ್ಷ ತಂಬಾಕುರಹಿತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇದೇ ತರಹ ಹಿಂದೆಯೂ "ತಂಬಾಕು ಇಲ್ಲದೆ ಬಾಲ್ಯ ಮತ್ತು ಯುವಕರು" ಎಂಬ ವಿಷಯ ಸೂಚಿ ಒಂದನ್ನು ಉಲ್ಲೇಖಿಸಲಾಗಿತ್ತು. ಆದರೆ ಇಂದಿಗೂ ವಿಶ್ವದಲ್ಲಿ ತಂಬಾಕು ರಾರಾಜಿಸುತ್ತಿರುವುದು, ಜೊತೆಗೆ ನೂತನ, ಆಕರ್ಷಕವಾದ ಉತ್ಪನ್ನಗಳಾದ ಇ-ಸಿಗರೇಟ್, ವೇಪಿಂಗ್, ಜುಲ್ಲಿಂಗ್, ಮಾದಕ ವಸ್ತುಗಳನ್ನು ಬೆರೆಸಿರುವ ಗುಟ್ಕಾ, ಪಾನ್ ಮುಂತಾದವು ಮಕ್ಕಳನ್ನೂ ಮತ್ತು ಯುವ ಜನತೆಯನ್ನೂ ತಮ್ಮ ಪದಾರ್ಥಗಳ ವ್ಯಸನಿಗಳನ್ನಾಗಿಸಿಕೊಳ್ಳುತ್ತಿರುವುದು ದುರಂತವೇ ಹೌದು. ವಿಶ್ವದ ಒಂದು ಸಮೀಕ್ಷೆ ಪ್ರಕಾರ ಪ್ರತಿದಿನ ಸುಮಾರು ೩,೫೦೦ ಹದಿಹರೆಯದ ಮಕ್ಕಳು ತಂಬಾಕು ಪದಾರ್ಥಗಳ ಗುಲಾಮರಾಗುತ್ತಿರುವ ವರದಿ ದುರದೃಷ್ಟಕರ.
ತಂಬಾಕು ಉದ್ಯಮವು ತನ್ನ ಲಾಭವನ್ನು ಬಹಳ ನಿಷ್ಠೆಯಿಂದ ಕಾಯ್ದುಕೊಳ್ಳುತ್ತಿದೆ. ತಂಬಾಕು ನಿಯಂತ್ರಣ ವ್ಯವಸ್ಥೆಯು ಯಾವುದೇ ತರಹದ ನಿಯಂತ್ರಣವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದಾಗಲೂ, ತಕ್ಷಣ ಅದು ಅದನ್ನು ತನ್ನ ಧನ ಬಲ/ತೋಳ ಬಲದಿಂದ ಹಸ್ತಕ್ಷೇಪ ಮಾಡಿ ನ್ಯಾಯಾಲಯಕ್ಕೆ ಕೊಂಡೊಯ್ಯುತ್ತದೆ ಮತ್ತು ಅದರ ಅನುಷ್ಠಾನವನ್ನು ಆದಷ್ಟೂ ನಿಧಾನಿಸುತ್ತದೆ. ಒಂದಲ್ಲ ಒಂದು ದಿನ ಆ ಕಾನೂನು ಅನುಷ್ಠಾನವಾಗುವುದು. ಆದರೆ ಆ ನಿಧಾನಿಕೆಯಿಂದ ಉದ್ಯಮಕ್ಕೆ ಲಾಭವೇ ಆಗುವುದು. ಅಲ್ಲದೆ, ಇತ್ತೀಚೆಗೆ ಮುಂದುವರಿದ ರಾಷ್ಟçಗಳ ಧೂಮಪಾನಿಗಳಿಗೆ ತಂಬಾಕಿನ ಪದಾರ್ಥಗಳ ಸೇವನೆಯಿಂದಾಗುವ ಹಾನಿಗಳ ಅರಿವು ಉಂಟಾಗಿ ಅವನ್ನು ಉಪಯೋಗಿಸುವ ಸಂಖ್ಯೆ ಕಡಿಮೆಯಾಗಿರುವುದು ತಂಬಾಕು ಉದ್ಯಮಕ್ಕೆ ಅವುಗಳ ಮಾರಾಟ ಕಡಿಮೆಯಾಗಿರುವುದು ಅರಿವಾಗಿ ತನ್ನ ಗಮನವನ್ನು ಬಡ ರಾಷ್ಟ್ರಗಳ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಯುವ ಪೀಳಿಗೆಯ ಮೇಲೆ ತೀವ್ರ ಗಮನವನ್ನು ಹರಿಸಿ ಹೇಗಾದರೂ ಅದರ ಉದ್ಯಮವು ಲಾಭ ಗಳಿಸುವ ನಿಟ್ಟಿನಲ್ಲಿ ಮುಂದುವರಿಸಲು ಶ್ರಮಿಸುತ್ತಿದೆ.
ಮಕ್ಕಳನ್ನು ಕೊಲೆಗಡುಕ ತಂಬಾಕಿನಿಂದ ಮತ್ತು ತಂಬಾಕು ಉದ್ಯಮಿಗಳ ಹಸ್ತಕ್ಷೇಪದಿಂದ ಹೇಗೆ ರಕ್ಷಿಸುವುದು? ಪ್ರತಿವರ್ಷವೂ ೮ ಮಿಲಿಯ ವ್ಯಸನಿಗಳ ಸಾವುಗಳಿಗೆ ತಂಬಾಕು ಜವಾಬ್ದಾರಿಯಾಗಿರುವ ಬಗ್ಗೆ ಮತ್ತು ಅದರ ಸೇವನೆಯಿಂದ ಉಂಟಾಗುವ ಆಘಾತಕಾರಿ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಆದ್ಯ ಕರ್ತವ್ಯವನ್ನು ವ್ಯಾಪಕವಾಗಿ ಎಲ್ಲ ಶಾಲಾ ಕಾಲೇಜುಗಳ ಮಕ್ಕಳ ಮತ್ತು ಯುವ ಜನತೆಗೆ ಹಮ್ಮಿಕೊಳ್ಳಬೇಕು.
ಇಲ್ಲಿಯವರೆಗೂ ನಡೆದು ಬಂದಿರುವ ವಿಶ್ವ ತಂಬಾಕುರಹಿತ ದಿನಾಚರಣೆಗಳ ವಿಷಯ ಸೂಚಿಗಳನ್ನು ಪರಾಮರ್ಶಿಸಿ ನೋಡಿದಾಗ, ನಮಗೆ ಕಾಣಬರುವುದು ತಂಬಾಕು ನಿಯಂತ್ರಣ ಕಾರ್ಯಕ್ರಮವು ವಿಶ್ವದಲ್ಲಿ ಸಾಕಷ್ಟು ಯಶಸ್ಸು ಕಂಡಿಲ್ಲ ಅನಿಸುತ್ತದೆ. ತಂಬಾಕು ಪದಾರ್ಥಗಳನ್ನು ತಯಾರು ಮಾಡುವ ಮತ್ತು ಉಪಯೋಗಿಸುವಿಕೆಯನ್ನು ನಿಯಂತ್ರಿಸುವ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳನ್ನು ವಿಷಯ ಸೂಚಿಗಳ ಮೂಲಕ ಹಮ್ಮಿಕೊಳ್ಳಲಾಗಿದೆ. ಆದರೆ ನಮ್ಮ ರೈತ ಬಾಂಧವರು ತಂಬಾಕು ಬೆಳೆ ಬೆಳೆಯುವುದನ್ನು ನಿಯಂತ್ರಿಸುವ ಬಗ್ಗೆ ವಿಶ್ವಸಂಸ್ಥೆಯ ಎಫ್.ಸಿ.ಟಿ.ಸಿ. ೧೭ನೇ ವಿಧಿ ಪ್ರಕಾರ ಅಗತ್ಯವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಅದರಲ್ಲೂ ತಂಬಾಕು ಬೆಳೆ ಬೆಳೆಯುತ್ತಿರುವ ಕೆಲವು ರಾಷ್ಟ್ರಗಳು ವಿಫಲವಾಗಿವೆ.
ಭಾರತವು ವಿಶ್ವದ ೨ನೇ ಅತಿ ಹೆಚ್ಚು ತಂಬಾಕು ಬೆಳೆಯುವ ಮತ್ತು ವಿದೇಶಕ್ಕೆ ರಫ್ತು ಮಾಡುವ ದೇಶವಾಗಿದೆ ಮತ್ತು ವಿಶ್ವದ ಅತಿ ಹೆಚ್ಚು ತಂಬಾಕು ಉಪಯೋಗಿಸುವ ರಾಷ್ಟ್ರವಾಗಿದೆ. ಭಾರತದ ಒಟ್ಟಾರೆ ಜನಸಂಖ್ಯೆಯ ಸುಮಾರು ೨೮%ರಷ್ಟು ಜನರು ಹೊಗೆ ಬಿಡುವ ಮತ್ತು ಜಗಿಯುವ ತಂಬಾಕನ್ನು ಉಪಯೋಗಿಸುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಆಯೋಜಿಸಿರುವ ಎಫ್.ಸಿ.ಟಿ.ಸಿ. ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಅದಕ್ಕೆ ೨೦೨೫ರ ವೇಳೆಗೆ ಶೇ. ೮೦ರಷ್ಟು ತಂಬಾಕು ನಿಯಂತ್ರಿಸುವುದಕ್ಕೆ ಬದ್ಧವಾಗಿದೆ.
ಅಲ್ಲದೆ ತಂಬಾಕು ಬೆಳೆಗಾರರಿಗೆ ಸಾಕಷ್ಟು ಸವಲತ್ತುಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸರ್ಕಾರವೇ ನೀಡುತ್ತಿದೆ, ಉದಾಹರಣೆಗೆ: ಸಹಾಯ ಧನ, ರಿಯಾಯತಿ ದರದಲ್ಲಿ ಸರ್ಕಾರಿ ಬ್ಯಾಂಕುಗಳಿಂದ ಸಾಲಗಳು, ಗೊಬ್ಬರ, ಸಲಕರಣೆಗಳು ಇತ್ಯಾದಿ. ಇವೆಲ್ಲವೂ ತಂಬಾಕು ನಿಯಂತ್ರಣ ಕಾಯ್ದೆಗಳಿಗೆ ವಿರುದ್ಧವಾದ ಸವಲತ್ತುಗಳು.
ಸರ್ಕಾರಿ ಸಾಮ್ಯದ ತಂಬಾಕು ಮಂಡಳಿಯು ಪರವಾನಗಿ ಇರುವ/ಪರವಾನಗಿ ಇಲ್ಲದ ರೈತರು ಅಕ್ರಮವಾಗಿ ಬೆಳೆದಿರುವ ಹೊಗೆಸೊಪ್ಪನ್ನು ಹರಾಜು ಹಾಕಲು ಅನುಮತಿ ಕೊಡುತ್ತಿರುವುದು ತಂಬಾಕು ನಿಯಂತ್ರಣ ಕಾಯ್ದೆಗಳಿಗೆ ವಿರುದ್ಧವಾಗಿವೆ.
ಭಾರತದಲ್ಲಿ ಇರುವ ತಂಬಾಕು ಕಂಪನಿಗಳಿಂದ ಭಾರತದ ರಾಜಕೀಯ ಪಕ್ಷಗಳಿಗೆ ಸಾಕಷ್ಟು ದೇಣಿಗೆಗಳನ್ನು ನೀಡುತ್ತಿರುವುದು ತಂಬಾಕು ನಿಯಂತ್ರಣ ಕಾನೂನುಗಳಿಗೆ ವಿರುದ್ಧವಾಗಿದೆ.
ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ) ೫.೩ ಪ್ರಕಾರ ಸರ್ಕಾರಿ ಸಾಮ್ಯದ ಯಾವುದೇ ಕಚೇರಿ/ ಶಾಲಾ ಕಾಲೇಜುಗಳೂ ತಂಬಾಕು ಕಂಪನಿಯ ವತಿಯಿಂದ ಯಾವುದೇ ತರಹದ ಸವಲತ್ತುಗಳನ್ನೂ ಪಡೆದುಕೊಳ್ಳಬಾರದು ಎಂಬುವ ಕಾನೂನು ಇದ್ದರೂ ಹಲವಾರು ಶಾಲಾ ಕಾಲೇಜುಗಳು ವಿವಿಧ ರೀತಿಯ ಸಹಾಯಗಳನ್ನು ಪಡೆದುಕೊಳ್ಳುತ್ತಿರುವುದು ಒಂದು ದುರಂತ.
ಇವೆಲ್ಲವೂ ತಂಬಾಕು ನಿಯಂತ್ರಣದ ಬಗ್ಗೆ ಭಾರತ ಸರ್ಕಾರವು ತಳೆದಿರುವ ದ್ವಂದ್ವ ನೀತಿಗಳು ಎಂದರೆ ತಪ್ಪಾಗಲಾರದು ಮತ್ತು ಒಪ್ಪತಕ್ಕದ್ದಲ್ಲ. ವೈದ್ಯಕೀಯವಾಗಿ ತಂಬಾಕು ಪದಾರ್ಥಗಳು ಮಾನವರ ದೇಹಸ್ಥಿತಿಗೆ ವಿಷಕಾರಿ ಮತ್ತು ಅವುಗಳ ಸೇವನೆಯಿಂದ ಅತೀವ ವೇದನೆಗಳ ರೋಗಗಳಿಂದ ಆಯಸ್ಸು ಮುಗಿಯುವ ಮುನ್ನವೇ ವ್ಯಸನಿಗಳ ಸಾವು ಉಂಟು ಮಾಡುತ್ತವೆ ಎನ್ನುವ ಆಘಾತಕಾರಿ ಅಂಶಗಳನ್ನು ಮಕ್ಕಳು ಮತ್ತು ಯುವ ಜನತೆಗೆ ಅರಿವು ಮೂಡಿಸುವುದಲ್ಲದೆ ತಂಬಾಕು ಬೆಳೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಫ್.ಸಿ.ಟಿ.ಸಿ. ೧೭ರ ಪ್ರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಮತ್ತು ತಂಬಾಕು ಬೆಳೆಯುವ ರೈತ ಬಾಂಧವರಿಗೆ ಪರ್ಯಾಯ ಬೆಳೆ ಬೆಳೆಯಲು ಮತ್ತು ಬೆಳೆದ ಬೆಳೆಗಳಿಗೆ ತಕ್ಕ ಬೆಲೆ ನಿಗದಿಪಡಿಸುವ ಮತ್ತು ಸಹಾಯಧನ, ಬೆಳೆಗಳನ್ನು ಕಾಪಾಡುವ ಸೌಕರ್ಯಗಳು ಇತ್ಯಾದಿ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ತಂಬಾಕು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ನೌಕರ ವರ್ಗದವರ ಕಷ್ಟ ಕಾರ್ಪಣ್ಯಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು.
ಸಮಾಜದಲ್ಲಿ ಜನರ ಆರೋಗ್ಯ ಸ್ಥಿತಿಯನ್ನು ಬಾಧಿಸುವ ಯಾವುದಾದರೂ ವಸ್ತು ಕಂಡುಬಂದರೆ ಅದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಎಲ್ಲಾ ತರಹದ ಕ್ರಮಗಳನ್ನೂ ನಿಷ್ಠೆಯಿಂದ ಆರೋಗ್ಯ ಅಧಿಕಾರವರ್ಗವು ಮತ್ತು ಆ ಪದಾರ್ಥಗಳನ್ನು ಮಾರಾಟ ಮಾಡಲು ಪರವಾನಗಿ ಕೊಟ್ಟಿರುವ ಸರ್ಕಾರಿ ಇಲಾಖೆಗಳು ದ್ವಂದ್ವ ನೀತಿ ಅನುಸರಿಸದೆ ಅನುಷ್ಠಾನಕ್ಕೆ ತಂದು ನಿಯಂತ್ರಿಸಬೇಕು. ಕಟ್ಟಳೆ ಕಾನೂನುಗಳು ಬರೀ ಕಾಗದದ ತುಂಡುಗಳಾಗಿರಬಾರದು.