For the best experience, open
https://m.samyuktakarnataka.in
on your mobile browser.

ತನಿಖೆಗೂ ಮೊದಲೇ ಬಾಕಿ ಬಿಲ್ ಪಾವತಿಗೆ ಆದೇಶ!

04:30 AM Nov 18, 2024 IST | Samyukta Karnataka
ತನಿಖೆಗೂ ಮೊದಲೇ ಬಾಕಿ ಬಿಲ್ ಪಾವತಿಗೆ ಆದೇಶ

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು:
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂ.ಗಳ ಅವ್ಯವಹಾರದ ತನಿಖೆ ಬಾಕಿ ಇರುವಾಗಲೇ ಬಾಕಿ ಉಳಿಸಿಕೊಂಡಿದ್ದ ಶೇ. ೨೫ರಷ್ಟು ಬಿಲ್ ಪಾವತಿಸುವಂತೆ ಸರ್ಕಾರ ಕೊನೆಗೂ ಆದೇಶ ಹೊರಡಿಸಿದ್ದು, ಹಿಂದಿನ ಸರ್ಕಾರದ ವಿರುದ್ಧದ ಕಾಂಗ್ರೆಸ್ ಸರ್ಕಾರದ ಹೋರಾಟಕ್ಕೆ ಹಿನ್ನಡೆ ಉಂಟಾಗಿದೆ.
೨೦೧೯ರಿಂದ ೨೦೨೩ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಿಂದಿನ ಸರ್ಕಾರ ಕೈಗೊಂಡಿದ್ದ ಸಾವಿರಾರು ಕೋಟಿ ರೂ. ಮೌಲ್ಯದ ಕಾಮಗಾರಿಗಳ ಬಿಲ್ ಪಾವತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ೨೦೨೩ರ ಆಗಸ್ಟ್ ೫ರಂದು ಹಾಗೂ ಸೆಪ್ಟೆಂಬರ್ ೧೯ರಂದು ಪ್ರತ್ಯೇಕ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ಬಿಬಿಎಂಪಿ ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆ ದಾರರಿಗೆ ಈಗಾಗಲೇ ಪಾವತಿ ಮಾಡಿರುವ ಬಿಲ್‌ಗಳಲ್ಲಿ ಶೇ.೨೫ ರಷ್ಟು ಬಾಕಿ ಉಳಿಸಿಕೊಳ್ಳಲು ಹಾಗೂ ಪಾವತಿ ಆಗದೇ ಇರುವ ಬಿಲ್‌ಗಳಲ್ಲಿ ಶೇ. ೧೦೦ರಷ್ಟು ಬಾಕಿ ಉಳಿಸಿಕೊಳ್ಳಲು ಆದೇಶಿಸಿತ್ತು. ಆದರೆ ನವೆಂಬರ್ ೪ರಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿ, ಕ್ರಮವಾಗಿ ಶೇ.೨೫ ಹಾಗೂ ಶೇ. ೧೦೦ರಷ್ಟು ಬಾಕಿ ಉಳಿದಿರುವ ಎಲ್ಲ ಬಿಲ್‌ಗಳನ್ನು ಪಾವತಿಸುವಂತೆ ಸರ್ಕಾರ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಆದೇಶ ನೀಡಿದೆ. (ಆದೇಶದ ಪ್ರತಿ ಲಭ್ಯವಾಗಿದೆ).
ಸರ್ಕಾರದ ನಿಲುವು ಏನಾಗಿತ್ತು?: ಬಿ.ಎಸ್.ಯಡಿಯೂ ರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಿಬಿಎಂಪಿ ಕಾಮಗಾರಿಗಳಲ್ಲಿ ಸಾವಿರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಆರೋಪಿಸಿತ್ತು. ಸಿದ್ದ ರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ನಗರಾಭಿವೃದ್ಧಿ ಇಲಾಖೆಯ ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಐಎಎಸ್ ಅಧಿಕಾರಿಗಳ ತನಿಖಾ ತಂಡ ತನಿಖೆ ಆರಂಭಿಸಿದ ಬಳಿಕ ಹಣ ಪಾವತಿಯಾಗಿದ್ದ ಕಾಮಗಾರಿಗಳಲ್ಲಿ ಶೇ. ೨೫ರಷ್ಟು ಹಾಗೂ ಕಾಮಗಾರಿ ಪೂರ್ಣಗೊಳ್ಳದ ಪ್ರಕರಣಗಳಲ್ಲಿ ಶೇ.೧೦೦ರಷ್ಟು ಬಿಲ್ ಪಾವತಿ ಮಾಡದಂತೆ ಸರ್ಕಾರ ಆದೇಶಿಸಿತ್ತು. ಇದರಿಂದ ಗುತ್ತಿಗೆದಾರರು ಸಹಜವಾಗಿಯೇ ಆರ್ಥಿಕವಾಗಿ ಸಮಸ್ಯೆಗೆ ಸಿಲುಕಿದ್ದರು.
ಸರ್ಕಾರದ ನಿಲುವು ಏಕೆ ಬದಲಾಯಿತು?: ಆದರೆ ನಾಲ್ವರು ಐಎಎಸ್ ಅಧಿಕಾರಿಗಳ ವಿಶೇಷ ತಂಡ ನಡೆಸುತ್ತಿದ್ದ ತನಿಖೆಯನ್ನೇ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗ ಮೋಹನ್‌ದಾಸ್ ನೇತೃತ್ವದ ತನಿಖಾ ಆಯೋಗವೂ ನಡೆಸು ತ್ತಿತ್ತು. ಅಂದರೆ ಬಿಜೆಪಿ ಸರ್ಕಾರದ ಶೇ. ೪೦ರಷ್ಟು ಕಮಿಷನ್ ಹಗರಣದ ತನಿಖೆ ನಡೆಸುತ್ತಿದ್ದ ಆಯೋಗವೂ ಬಿಬಿಎಂಪಿ ಹಗರಣದ ತನಿಖೆ ನಡೆಸುತ್ತಿತ್ತು.
ಹೀಗಾಗಿ ಹೈಕೋರ್ಟ್ ಎದುರು ಐಎಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ ವಿಸರ್ಜನೆ ಮಾಡಿದ್ದಾಗಿ ಸರ್ಕಾರ ಹೇಳಿಕೆ ಕೊಟ್ಟಿತ್ತು. ಈ ಮಧ್ಯೆ ನ್ಯಾ.ದಾಸ್ ಆಯೋಗವು ತಾನು ಯಾವುದೇ ಬಿಲ್ ತಡೆ ಹಿಡಿಯುವಂತೆ ಆದೇಶಿಸಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದು (೩೦-೯-೨೦೨೪) ಸರ್ಕಾರಕ್ಕೆ ಸ್ಪಷ್ಟನೆ ಕೊಟ್ಟಿತ್ತು. ನ್ಯಾ.ದಾಸ್ ಆಯೋಗದ ಸ್ಪಷ್ಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿ ಗುತ್ತಿಗೆದಾರರಿಗೆ ತಡೆ ಹಿಡಿದಿದ್ದ ಬಾಕಿ ಬಿಲ್ ಪಾವತಿಸಲು ಸದ್ದಿಲ್ಲದೇ ಆದೇಶ ನೀಡಿದೆ. ಹೀಗಾಗಿ ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ವಿರುದ್ಧ ರಾಜ್ಯ ಸರ್ಕಾರ ಸಾರಿದ್ದ ಕಾನೂನು ಹೋರಾಟಕ್ಕೆ ಮತ್ತೊಂದು ಸುತ್ತಿನ ಹಿನ್ನಡೆ ಉಂಟಾಗಿದೆ.

ನ್ಯಾ.ದಾಸ್ ಆಯೋಗದ ನಿಲುವೇನು?
ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ, ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ನಡೆದಿದೆ ಎನ್ನಲಾದ ಶೇ.೪೦ರಷ್ಟು ಕಮಿಷನ್ ಹಗರಣವನ್ನು ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗ ತನಿಖೆ ನಡೆಸುತ್ತಿದೆ. ಇದರ ವ್ಯಾಪ್ತಿಗೆ ಬಿಬಿಎಂಪಿ ಹಗರಣವನ್ನೂ ಸೇರ್ಪಡೆ ಮಾಡಲಾಗಿದೆ. ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಹಗರಣದ ತನಿಖೆಯು ಜಾರಿಯಲ್ಲಿ ಇರುವಾಗಲೇ ಎಲ್ಲ ಇಲಾಖೆಗಳ ಶೇ.೧೦೦ರಷ್ಟು ಬಿಲ್ ಪಾವತಿ ಮಾಡಲಾಗಿದೆ. ಬಿಲ್ ಪಾವತಿ ವಿಚಾರ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಆಯೋಗ ತನ್ನ ಪತ್ರದಲ್ಲಿ (೩೦-೯-೩೦೩೪) ಸ್ಪಷ್ಟಪಡಿಸಿದೆ. ಹೀಗಾಗಿ ಬಿಬಿಎಂಪಿ ಕಾಮಗಾರಿ ಬಿಲ್ ವಿಚಾರದಲ್ಲೂ ತನ್ನ ಆಕ್ಷೇಪ ಇಲ್ಲ ಎಂದಿದೆ. ಇದರಿಂದ ರಾಜ್ಯ ಸರ್ಕಾರ ಅನಿವಾರ್ಯವಾಗಿ ಬಿಬಿಎಂಪಿ ಬಾಕಿ ಬಿಲ್ ಪಾವತಿಗೆ ಮುಂದಾಗಿದೆ.

ಅವಧಿ ಹಾಗೂ ಕಾಮಗಾರಿ ಯಾವವು?
೨೦೧೯ರಿಂದ ೨೦೨೩ರ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ, ಓಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿಗಳು, ಕೇಂದ್ರ/ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿಗಳು, ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು, ವಾರ್ಡ್ಮಟ್ಟದ ಕಾಮಗಾರಿಗಳು.