ತನು ಮಡಿಯಾದಾಗ ಕಾಯಕ ಶುದ್ದಿ
ಜಗತ್ತಿನ ಎಲ್ಲಾ ಧರ್ಮಗಳು ಪ್ರಕೃತಿ ಜನ್ಯವಾದವುಗಳು. ಧರ್ಮ ಪ್ರಕೃತಿ ಒಂದಕ್ಕೊಂದು ಪೂರಕ. ಅನೇಕ ಸಾಧು ಸಂತರು ಪ್ರಕೃತಿ ಪ್ರಿಯರು. ಅದು ಪರಿಶುದ್ಧವಾದುದು. ಶುಚಿಯಾದುದು. ಅಂತೆಯೇ ಆ ಎಲ್ಲ ಮಹಾತ್ಮರು ಚಿನ್ಮಯ ಸ್ವರೂಪರಾದರು. ಮಾನವ ಪ್ರಕೃತಿಯ ಒಂದು ಭಾಗ. ಅದಕ್ಕಾಗಿ ಅವನು ಯಾವಾಗಲೂ ಪರಿಶುದ್ಧನಾಗಿ ಶುಚಿಯಾಗಿ ಇರಬೇಕು. ಮನವಶವಾಗುವುದರ ಜೊತೆಗೆ ತನು ಮಡಿಯಾಗಬೇಕು. ಅವನ ಇರುವಿಕೆ ಅವನ ಶುಚಿತ್ವದಲ್ಲಿದೆ ಎಂದು ಆದೇಶ ಉಪದೇಶ ಮಾಡಿದ್ದಾರೆ.
ಇಸ್ಲಾಮಿನ ನಂಬಿಕೆಯಲ್ಲಿ ಯಂತೂ ಶುಚಿತ್ವ ಒಂದು ಸಿದ್ಧಾಂತವಾಗಿದೆ. ಕುರಾನಿನ ಸಂದೇಶಗಳ ಪ್ರಾರಂಭದಲ್ಲಿಯೇ ಶುಚಿತ್ವದ ಎಚ್ಚರಿಕೆಯನ್ನು ಕೊಡಲಾಗಿತ್ತು. ಕುರಾನಿನ ಮುದಸ್ಸಿರ ಅಧ್ಯಾಯ (೭೪:೪)ದಲ್ಲಿ ನಿಮ್ಮ ಉಡುಪನ್ನು ಶುಚಿಯಾಗಿರಿಸಿ ಮಾಲಿನ್ಯದಿಂದ ದೂರವಿರಿ' ಎಂದು. ಶರೀರ ಮತ್ತು ಉಡುಪಿನ ಶುದ್ದಿ ಮತ್ತು ಆತ್ಮ ಶುದ್ಧಿ ಇವು ಪರಸ್ಪರ ಪೂರಕವಾದವುಗಳು. ಶುಚಿಯಾಗಿರುವ ಆತ್ಮವು ಕೊಳಕಾದ ಶರೀರ ಹೊಲಸು ಬಟ್ಟೆಗಳಲ್ಲಿ ಇರಲು ಸಾಧ್ಯವಿಲ್ಲ. ವಾಸ್ತವದಲ್ಲಿ ಮನುಷ್ಯನು ಪ್ರಕೃತಿಯ ಅಂಗವಾಗಿರುವುದರಿಂದ ಅವನು ಮೂಲವಾಗಿ ಮಾಲಿನ್ಯವನ್ನು ಇಚ್ಛಿಸುವುದಿಲ್ಲ. ದೇವ ಮಾರ್ಗದಲ್ಲಿದ್ದವನಂತೂ ಶುಚಿಯಾಗಿರಲೇಬೇಕು. ಪ್ರವಾದಿವರ್ಯ ಮುಹಮ್ಮದ್(ಸ) ಅವರು ಒಬ್ಬನು ಶುಚಿಯಾಗಿರುವುದೆಂದರೆ ಅರ್ಧ ಶೃದ್ಧೆಯಲ್ಲಿ ಇದ್ದಂತೆ ಎಂದು ಹೇಳಿದ್ದಾರೆ. ಶುಚಿತ್ವದ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂಬುದೇ ಈ ವಚನದ ತಾತ್ಪರ್ಯ. ಇಸ್ಲಾಮಿನ ತತ್ವ ಸಿದ್ಧಾಂತಗಳ ಮೂಲವೇ ಶುಚಿತ್ವ. ನಮಾಜ್ ಬಹು ಮುಖ್ಯವಾದ ಪ್ರಾರ್ಥನೆ. ಶರೀರ ಶುಚಿಯಾಗಿರದಿದ್ದರೆ ಅಲ್ಲಾಹನು ಪ್ರಾರ್ಥನೆಯನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಪ್ರತಿಯೊಂದು ನಮಾಜಿನ ಮೊದಲು ವಜು ಅಂದರೆ ಅಂಗ ಸ್ನಾನ ಕಡ್ಡಾಯಗೊಳಿಸಲಾಗಿದೆ. ಪ್ರವಾದಿವರ್ಯರು ಹಾಗೂ ಅವರ ಸಹಪಾಠಿಗಳು ಬೆಳಗಿನ ಪ್ರಾರ್ಥನೆಯ ಮೊದಲು ಸ್ನಾನ ಮಾಡುತ್ತಿದ್ದರು. ಆಗಿನ ಪ್ರಮುಖ ಧಾರ್ಮಿಕ ಮುಖಂಡರು ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ ನಮಾಜ್ ನಿರ್ವಹಿಸುತ್ತಿದ್ದರು ಎಂದು ‘ಮುಸನಾದ’ಎಂಬ ಹದೀಸದಲ್ಲಿ ನಮೂದಿಸಲಾಗಿದೆ. ಕುರಾನಿನ ಇನ್ನೊಂದು ಅಧ್ಯಾಯ ಅಲ್ ಬಕರದ ೨೨೨ನೇ ವಚನದಲ್ಲಿ ಅಲ್ಲಾಹನು ಶುಚಿಯಾಗಿರುವವರನ್ನು ಪಶ್ಚಾತ್ತಾಪ ಪಡುವವರನ್ನು ಮೆಚ್ಚುತ್ತಾನೆ ಎಂದು ಹೇಳಲಾಗಿದೆ. ಶರೀರ ಶುಚಿಗೊಳಿಸುವಾಗ ಪ್ರಾರ್ಥನೆ ಒಂದಿದೆ.
ದೇವರೆ ನನ್ನ ಶರೀರವನ್ನು ಶುಚಿಗೊಳಿಸುವುದರೊಂದಿಗೆ ನನ್ನ ವಾಚಾ, ಮನಸಾ, ಶುಚಿಗೊಳಿಸು' ಎಂದು. ಮಸಜಿದ ಇಸ್ಲಾಮಿನ ಪ್ರಮುಖ ಕೇಂದ್ರ. ಇಲ್ಲಿ ಬರುವವರು ಶುಚಿಯಾಗಿ ಇರಬೇಕೆಂದು ಕುರಾನಿನ ಇನ್ನೊಂದು ಅಧ್ಯಾಯ ಅತ್ತೊಬ್ ೧೦೯ನೇಯ ವಚನದಲ್ಲಿ ನನ್ನ ಪ್ರಾರ್ಥಿಸುವವರು ಶುಚಿಯಾಗಿರಬೇಕೆಂದು ಹಾಗೂ ಪ್ರಾರ್ಥನಾ ಸ್ಥಳವನ್ನು ಸಹ ಶುಚಿಯಾಗಿ ಇಡಬೇಕೆಂದು ಆಜ್ಞಾಪಿಸಲಾಗಿದೆ (ಅಧ್ಯಾಯ ೨:೧೨೫).
ಆಗ ಮಾತ್ರ ಪ್ರಾರ್ಥನೆ ಕಾಯಕ ಶುದ್ಧಗೊಳ್ಳುತ್ತವೆ. ಶುಚಿತ್ವ ಕೇವಲ ಮನೆ ಹಾಗೂ ಶರೀರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ತನ್ನ ಮನೆ, ನೆರೆಹೊರೆ ಇಷ್ಟೇ ಅಲ್ಲ ತನ್ನ ಸುತ್ತಲಿನ ಪರಿಸರವನ್ನು ಶುದ್ಧಿಯಾಗಿ ಇಟ್ಟುಕೊಳ್ಳಬೇಕೆಂಬ ಸಂದೇಶಗಳನ್ನು ಕುರಾನ್ ಹಾಗೂ ಹದೀಸ್‌ನ ಅನೇಕ ವಚನಗಳಲ್ಲಿ ಉಲ್ಲೇಖಿಸಲಾಗಿದೆ.