For the best experience, open
https://m.samyuktakarnataka.in
on your mobile browser.

ತನು ಮನ ಧನಗಳ ಸದ್ಬಳಕೆ

05:00 AM Mar 15, 2024 IST | Samyukta Karnataka
ತನು ಮನ ಧನಗಳ ಸದ್ಬಳಕೆ

ಜಗತ್ತಿನ ಎಲ್ಲ ಧರ್ಮಗಳು ತನು ಮನ ಧನಗಳ ಪರಿಶುದ್ಧತೆಗಾಗಿ ಒಂದಿಲ್ಲ ಒಂದು ರೀತಿಯ ಬೋಧನೆ, ಕಡ್ಡಾಯ ನೀತಿ ಸಂಹಿತೆ ಪ್ರಸ್ತಾಪಿಸಿವೆ. ಇದರಂತೆ ಇಸ್ಲಾಮಿನಲ್ಲಿ ತನು ಮಡಿಯಾಗಲು, ಮನ ವಶವಾಗಲು, ಧನ ದಾನವಾಗಲು ಮಾನವನಿಗೆ ದೈವಿಕ ತರಬೇತಿ ನೀಡಲು ರಂಜಾನ್ ಪ್ರತಿವರ್ಷ ಬಂದು, ನಿರಂತರವಾಗಿ ಒಂದು ತಿಂಗಳು ಇಡಿ, ಒಂದು ರೀತಿಯ ಪಾಠಶಾಲೆಯನ್ನೇ ಪ್ರಾರಂಭಿಸುತ್ತದೆ.
ತನು, ಮನ, ಧನಗಳ ಪರಿಶುದ್ಧತೆಯ ಮುಖ್ಯ ಪ್ರಕ್ರಿಯೆಗಳಾದ ತನು ಮಡಿಯಾಗಲು ಉಪವಾಸ ವೃತ (ರೋಜಾ) ಮನ ವಶವಾಗಲು ಪ್ರಾರ್ಥನೆ (ನಮಾಜ್) ಹಾಗೂ ಧನ ದಾನದ ರೂಪದಲ್ಲಿ ಪಡೆಯಲು ಕಡ್ಡಾಯ ದಾನ (ಝಕಾತ್) ಇವುಗಳನ್ನು ಕಾಯಾ, ವಾಚಾ, ಮನಸಾ ಆಚರಣೆಯಲ್ಲಿ ತರಲು ರಂಜಾನ್ ತಿಂಗಳಲ್ಲಿ ಕಠಿಣ ತರಬೇತಿ ಇದೆ.
ದೇಹವನ್ನು ಶುಚಿಯಾಗಿ, ಮಡಿಯಾಗಿಡಲು ಎಲ್ಲ ಧರ್ಮಗಳು ನೈರ್ಮಲ್ಯವನ್ನು ಆಧ್ಯಾತ್ಮಿಕವಾಗಿ, ವೈಯಕ್ತಿಕವಾಗಿ ಪಾಲಿಸಲು ಕಡ್ಡಾಯದ ನೀತಿ ಸಂಹಿತೆ ಹೇಳಿವೆ. ಇಸ್ಲಾಂ ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ವಜು (ಅಂಗ ಸ್ನಾನ) ಮತ್ತು ಗುಸಲ್ (ಸ್ನಾನ) ಇವುಗಳಿಂದ ದೈನಂದಿನ ಪ್ರಾರ್ಥನೆ ನೆರವೇರಿಸಬೇಕು. ಆಹಾರ, ದೈಹಿಕ ವ್ಯಾಯಾಮ, ವೈಯಕ್ತಿಕ, ಸಾಮಾಜಿಕ, ಆರೋಗ್ಯ ಮುಂತಾದವುಗಳನ್ನು ಪಾಲಿಸಲೇಬೇಕು.
ತನು ಮಡಿಯಾಗಿಡಲು ರಂಜಾನ್ ತಿಂಗಳಲ್ಲಿ ಆಧ್ಯಾತ್ಮಿಕ ಹಸಿವನ್ನು ಹೆಚ್ಚಿಸಿ ದೇಹದ ಬಯಕೆಗಳನ್ನು ನಿಯಂತ್ರಿಸಲು ಉಪವಾಸ ವ್ರತ (ರೋಜಾ) ಅತ್ಯಂತ ಮಹತ್ವದ ವಿಧಾನವಾಗಿದೆ. ಉಪವಾಸ ವ್ರತವು ಮನುಷ್ಯನಿಗೆ ದೇಹವನ್ನು ಹಗುರಾಗಿಸಿ ಅಂಗಾಂಗಗಳಿಗೆ ವಿಶ್ರಾಂತಿ ನೀಡಿ ಅವುಗಳನ್ನು ಆರೋಗ್ಯವಾಗಿಡಲು ಸಹಕಾರಿಯಾಗುತ್ತದೆ. ತನುವನ್ನು ಶುಚಿಗೊಳಿಸದೆ ಯಾವ ಪ್ರಾರ್ಥನೆಯೂ ಸ್ವೀಕಾರಾರ್ಹ ಆಗುವುದಿಲ್ಲ. ಉಪವಾಸ ವೃತವು ಮನುಷ್ಯನ ಪ್ರತಿಯೊಂದು ವಿಷಯವನ್ನು ನಿಯಮ ಬದ್ಧಗೊಳಿಸುತ್ತದೆ.
ಪ್ರವಾದಿವರ್ಯ ಮೊಹಮ್ಮದ್ ಅವರು ಉಪವಾಸ ವ್ರತವನ್ನು ಕುರಿತು ಪ್ರತಿಯೊಂದು ಆದಾಯವನ್ನು ಗಳಿಕೆಯನ್ನು ಪರಿಶುದ್ಧಗೊಳಿಸಲು ಜಕಾತ್ ಇದೆ, ಅದರಂತೆ ಮಾನಸಿಕ ಶಾರೀರಿಕ ರೋಗದಿಂದ ಮುಕ್ತರಾಗಲು ಶರೀರದ ಉಪವಾಸ ವ್ರತ (ರೋಜಾ) ವಾಗಿದೆ ಎಂದು ಹೇಳಿದ್ದಾರೆ. (ಇಬ್ನುಮಾಜ) ಮನವಶವಾಗಲು ಪ್ರಾರ್ಥನೆ (ನಮಾಜ್) ಉತ್ತಮ ಸಾಧನೆ. ವಿಶೇಷವಾಗಿ ರಂಜಾನ್ ತಿಂಗಳಲ್ಲಿ ಅದರಲ್ಲೂ ಮುಸ್ಸಂಜೆಯ ಅಸರ್ ಪ್ರಾರ್ಥನೆ ಮುಖ್ಯವಾಗಿದೆ. ಪ್ರಾರ್ಥನೆ ಮಾನವನ್ನು ಕೆಟ್ಟ, ದುಷ್ಟ ಕೆಲಸಗಳಿಂದ ದೂರವಿರಿಸಿ ಹೃನ್ಮನಗಳನ್ನು ವಿಕಸಿತಗೊಳಿಸುತ್ತದೆ. ತಾಳ್ಮೆ, ಧೈರ್ಯ, ವಿನಮ್ರತೆ ಮುಂತಾದ ಅನೇಕ ಗುಣಗಳಿಂದ ಮನಸ್ಸು ತುಂಬಿ ಹೋಗಿರುತ್ತದೆ. ಮನುಷ್ಯನು ಬಯಕೆಗಳಿಗೆ ದಾಸನಾಗದೆ ಬಯಕೆಗಳೇ ಅವನ ದಾಸರಾಗುತ್ತವೆ. ದಿನದಲ್ಲಿ ಐದು ಬಾರಿ ಮಾಡುವ (ನಮಾಜ್) ಪ್ರಾರ್ಥನೆಗಳು ಮನುಷ್ಯನನ್ನು ದೇವ ಸಾನಿಧ್ಯಕ್ಕೆ ತರುತ್ತವೆ. ಮನ ವಶವಾಗಲು ಹಾಗೂ ಅದರ ಚಂಚಲತೆಯನ್ನು, ಪ್ರಾರ್ಥನೆಗಳಿಂದ ನಿಯಂತ್ರಿಸಲು ಸಾಧ್ಯವಿದೆ. ನಿಷಿದ್ಧವಾದವುಗಳೆಲ್ಲ ಪ್ರಾರ್ಥನೆಯ ಬಲದಿಂದ ದೂರವಾಗಿ ಬಿಡುತ್ತವೆ.
ಧನದ ಸದ್ಬಳಕೆಗಾಗಿ ರಂಜಾನಿನಲ್ಲಿ ಕಡ್ಡಾಯ ದಾನ (ಝಕಾತ್) ವಿಧಿಸಲಾಗಿದೆ. ಸದಾ ಕಾಲ ಕೂಡಿಡುವ ಧನವು ದಿನಕಳೆದಂತೆ ಅದು ರೋಗ ಗ್ರಸ್ತವಾದಂತಾಗಿ ಕೊಳೆಯ ತೊಡಗುತ್ತದೆ. ಅಷ್ಟೇ ಅಲ್ಲದೆ ಅದು ಅಪಾಯವನ್ನು ತರಬಲ್ಲದು. ಆದ್ದರಿಂದ ಧನವನ್ನು ಕೂಡಿಡುವುದನ್ನು ತಡೆಯಲು ಈ ಕಡ್ಡಾಯ ದಾನವನ್ನು ಅಜ್ಞಾಪಿಸಲಾಗಿದೆ. ಇದರಿಂದ ಧನ ಶುದ್ದಿಯಾಗಿ ಅದು ಸತ್ಪಾತ್ರರಿಗೆ ಮುಟ್ಟುವಂತಾಗುತ್ತದೆ. ಅಕ್ರಮ ಸಂಪತ್ತನ್ನು ಗಳಿಸಿದವನ ಪ್ರಾರ್ಥನೆ ಸ್ವೀಕರಿಸಲ್ಪಡುವುದಿಲ್ಲ. ದೇವನ ಕರುಣೆಯಲ್ಲಿ ಆತನಿಗೆ ಏನು ದೊರೆಯುವುದಿಲ್ಲ, ಈ ಕಡ್ಡಾಯ ದಾನವನ್ನು ಯಾರಿಗೆ ಹೇಗೆ ಕೊಡಬೇಕೆಂಬುದರ ವಿವರಗಳನ್ನು ಕುರಾನಿನ ಸುಮಾರು ಮೂವತ್ತಕ್ಕೂ ಹೆಚ್ಚು ಶ್ಲೋಕಗಳಲ್ಲಿ ವಿವರಿಸಲಾಗಿದೆ.
ಝಕಾತ್ ಬಡ್ಡಿ ವ್ಯವಹಾರವನ್ನು ನಿಷೇಧಿಸುತ್ತದೆ. ಬಡ್ಡಿ ವ್ಯವಹಾರ ಶೋಷಣೆ ಹಾಗೂ ಸಂಪತ್ತಿನ ಸಂಗ್ರಹಣೆ ಆಗಿದ್ದು ಝಕಾತಿಗೆ ವಿರುದ್ಧವಾಗಿವೆ. ಕುರಾನಿನ ಅಧ್ಯಾಯ ೯: ೬೦ರ ಶ್ಲೋಕದಲ್ಲಿ ಈ ಕಡ್ಡಾಯ ದಾನಗಳು ಬಡವರಿಗೆ ನೀಡಬೇಕಾಗಿದೆ. ಅಲ್ಲಾಹನ ಕಡೆಯಿಂದ ಇದು ಕಡ್ಡಾಯದ ಆಜ್ಞೆಯಾಗಿದೆ.
ತನು ಮಡಿಯಾಗಿಸಿ, ಮನ ವಶವಾಗಿಸಿ ನಾವು ಗಳಿಸಿದ ಧನವು ದಾನದ ರೂಪವಾಗಿಸುವ ಪರಿಶುದ್ಧತೆಯ ಜೀವನ ಪಾಠವನ್ನು ರಂಜಾನ್ ಎಂಬ ದೈವಿ ಶಿಕ್ಷಕ ನಮಗೆ ನೀಡುತ್ತಾನೆ. ಒಂದು ತಿಂಗಳಲ್ಲಿ ಪಡೆದ ತರಬೇತಿ ಮುಂಬರುವ ವರ್ಷಗಳಲ್ಲಿ ಮಾನವ ಶಾಂತಿ, ಸಮಾಧಾನ, ತಾಳ್ಮೆ, ಪರಧರ್ಮ ಸಹಿಷ್ಣುತೆಯ ಸಮಾಜ ಜೀವಿಯಾಗಿ ಬಾಳಿ ಆದರ್ಶ ವ್ಯಕ್ತಿಯಾಗುತ್ತಾನೆ.